ಹಕ್ಕು ಹೋರಾಟ 12: ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪು

ದೋಷಪೂರ್ಣ ಎಸ್.ಟಿ.ಡಿ. ಉಪಕರಣಕ್ಕೆ ರೂ. 47,500 ಪರಿಹಾರ
ಕಳಪೆ ಗುಣಮಟ್ಟದ ಕಂಪ್ಯೂಟರ್ ಉಪಕರಣವೊಂದನ್ನು ಮಾರಿ, ಮಾರಾಟಾನಂತರ ಪರಿಪೂರ್ಣ ಸೇವೆಯನ್ನೂ ನೀಡದ ಕಂಪ್ಯೂಟರ್ ಸಂಸ್ಥೆಯೊಂದರ ವಿರುದ್ಧ ಕುಂದಾಪುರದ ಗ್ರಾಹಕರೊಬ್ಬರು ದ.ಕ. ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಬೇಕಾಯಿತು. ನ್ಯಾಯಾಲಯವು ಗ್ರಾಹಕರ ಪರವಾಗಿ ತೀರ್ಪು ನೀಡಿದ ಪ್ರಕರಣವೊಂದು ವರದಿಯಾಗಿದೆ.

ಪ್ರಕರಣದ ವಿವರ
ಎಸ್. ವಾಮನ ಸಾಧು ಎನ್ನುವವರು ಕುಂದಾಪುರದ ನಿವಾಸಿ. ತನ್ನ ಊರಿನಲ್ಲಿಯೇ ಎಸ್.ಟಿ.ಡಿ. ಬೂತ್ ಹೊಂದುವ ಇಚ್ಫೆಯಲ್ಲಿ ದೂರವಾಣಿ ಇಲಾಖೆಯಿಂದ ಅನುಮತಿ ಪಡೆದರು. ಬೂತ್‍ಗೆ ಬೇಕಾಗಿರುವ ಕಂಪ್ಯೂಟರ್, ಮಾನಿಟರ್‌ಗಾಗಿ “ಗುರು ಕಂಪ್ಯೂಟರ್” ಎನ್ನುವ ಸಂಸ್ಥೆಗೆ ತಾರೀಕು 2-9-92ರಂದು ಆರ್ಡರು ನೀಡಿದರು.

ವಾಮನ ಸಾಧು ಅವರ ಬೂತಿಗೆ ಗುರು ಕಂಪ್ಯೂಟರ್ ಸಂಸ್ಥೆಯು ತಾ. 9-9-92ರಂದು ಕಂಪ್ಯೂಟರನ್ನು ಸ್ಥಾಪಿಸಿತು. ತಾನು ಒದಗಿಸಿರುವ ಯಂತ್ರದ ಸೀರಿಯಲ್ ನಂಬ್ರ 16573 ಎಂದು ಸಂಸ್ಥೆಯು ತನ್ನ ಬಿಲ್‍ನಲ್ಲಿ ನಮೂದಿಸಿತ್ತು. ಆದರೆ ಒದಗಿಸಿದ್ದ
ಯಂತ್ರದಲ್ಲಿ ಸೀರಿಯಲ್ ನಂಬ್ರ 16472 ಎಂದಿತ್ತು! ಸಾಲದೆಂಬಂತೆ ಒಂದು ಸಾವಿರ ರೂಪಾಯಿಗಳನ್ನು ಪೂರೈಕೆದಾರ ಸಂಸ್ಥೆಯು ಸ್ಥಾಪನಾ ಶುಲ್ಕ ಎನ್ನುವ ಹೆಸರಿನಲ್ಲಿ ವಸೂಲು ಮಾಡಿತ್ತು.

ಬಿಲ್ ಪ್ರಕಾರ ತಾನು ಪಾವತಿಸಿರುವ ರೂ. 22,500ರಲ್ಲಿ ಎಲ್ಲ ಖರ್ಚುವೆಚ್ಚಗಳನ್ನು ಭರಿಸಿಯೂ ಸಾಧು ಅವರಿಗೆ ಬೂತ್ ನಿರಾಳವಾಗಿ ಉಸಿರಾಡಲು ಬಿಡಲಿಲ್ಲ. ಸ್ಥಾಪನೆಯಾದ ಎರಡೇ ದಿನದೊಳಗೆ ಯಂತ್ರ ಕೆಟ್ಟು ಹೋಯಿತು. ಈ ರೀತಿ ತೊಂದರೆ ನೀಡಲಾರಂಭಿಸಿದ ಉಪಕರಣಗಳು ಕೆಲಸ ಮಾಡಿರುವ ವೇಳೆಗಿಂತಲೂ ಹೆಚ್ಚು ಗಂಟೆಗಳಷ್ಟು ಕಾಲ ಕೆಟ್ಟಿರುತ್ತಿದ್ದವು. ಹೀಗಾಗಿ ಎಸ್.ಟಿ.ಡಿ ಬೂತ್ ನಷ್ಟಕ್ಕೆ ಒಳಗಾಯಿತು.

ಹಾಳಾದಷ್ಟು ಸಲವೂ ರಿಪೇರಿಗಾಗಿ ಬಂದ ಕಂಪ್ಯೂಟರ್ ಸಂಸ್ಥೆಯ ಸರ್ವೀಸ್ ಇಂಜಿನಿಯರ್ ಶುಲ್ಕವನ್ನು ವಸೂಲು ಮಾಡಲು ಹಿಂಜರಿಯಲಿಲ್ಲ. ಅವರು ಹತ್ತು ದಿನಗಳಲ್ಲಿ ಎರಡೆರಡು ಸಲ ಬೂತನ್ನು ಸಂದರ್ಶಿಸಿ ರಿಪೇರಿ ನಡೆಸಿದರು. ಸರ್ವೀಸ್ ಇಂಜಿನಿಯರ್ ತನ್ನ ಪ್ರತಿ ಸಂದರ್ಶನಕ್ಕೂ ಪ್ರತ್ಯೇಕ ಶುಲ್ಕವನ್ನು ತಪ್ಪದೇ ವಸೂಲು ಮಾಡುತ್ತಿದ್ದರು. ಈ ರೀತಿ ತನ್ನನ್ನು ಸುಲಿಯುತ್ತಿರುವುದನ್ನು ಪ್ರತಿಭಟಿಸುತ್ತ ಬಳಕೆದಾರ ವಾಮನ ಸಾಧು ತನಗೆ ನೀಡಿರುವ ದೋಷಪೂರಿತ ಕಂಪ್ಯೂಟರನ್ನು ಬದಲಿಸಿ ತನ್ನ ಬಿಲ್‍ನಲ್ಲಿ ನಮೂದಿಸಿರುವ ಸೀರಿಯಲ್ ನಂಬ್ರದ ಕಂಪ್ಯೂಟರನ್ನೇ ಒದಗಿಸಲು ಕೇಳಿಕೊಂಡರು. ಗ್ರಾಹಕರ ಈ ಕೋರಿಕೆಯನ್ನು ಕಂಪ್ಯೂಟರ್ ಪೂರೈಕೆದಾರರು ಕೇಳಿಸಿಕೊಳ್ಳಲಿಲ್ಲ. ವಾರದಲ್ಲಿ ಐದು ದಿನ ಕೆಟ್ಟಿರುತ್ತಿದ್ದ ಈ ಕಂಪ್ಯೂಟರ್ ತಪ್ಪು ಗಣಾಂಕವನ್ನು ತೋರಿಸುತ್ತಿದ್ದುದರಿಂದ ಇನ್ನಷ್ಟು ಹೆಚ್ಚಿನ ನಷ್ಟವನ್ನು ಬೂತ್ ಮಾಲಕರು ಅನುಭವಿಸಬೇಕಾಯಿತು.

ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ ಬಳಕೆದಾರರು ಕಡೆಗೂ ದ.ಕ. ಜಿಲ್ಲಾ ಗ್ರಾಹಕರ ದೂರುಪರಿಹಾರ ವೇದಿಕೆಗೆ ದೂರು ಸಲ್ಲಿಸಿದರು. ದೋಷಪೂರಿತ ಯಂತ್ರದಿಂದ ತನಗೆ ಆಗಿರುವ ನಷ್ಟವನ್ನು ವಿವರಿಸಿದರು. ಈ ಯಂತ್ರಕ್ಕಾಗಿ ತಾನು ಪಾವತಿಸಿರುವ ಮೊತ್ತ ತನಗೆ ಬಡ್ಡಿ ಸಹಿತ ಸಿಗಬೇಕು. ತನಗಾಗಿರುವ ನಷ್ಟದ ಬಾಬ್ತನ್ನು ಪೂರೈಕೆದಾರ ಸಂಸ್ಥೆಯು ಭರಿಸಬೇಕು ಎನ್ನುವ ಬೇಡಿಕೆಯನ್ನು ಮುಂದಿರಿಸಿದರು. ತನ್ನಿಂದ ಅನ್ಯಾಯವಾಗಿ ವಸೂಲು ಮಾಡಿರುವ ಸರ್ವೀಸ್ ಚಾರ್ಜ್ ತನಗೆ
ಮರಳಿಸಬೇಕೆನ್ನುವ ಆಗ್ರಹವನ್ನು ಮಾಡಿದರು.

ಆದರೆ ಬಳಕೆದಾರರ ಎಲ್ಲ ಬೇಡಿಕೆಗಳನ್ನು ಪೂರೈಕೆದಾರ ಸಂಸ್ಥೆಯು ಸಾರಾಸಗಟಾಗಿ ತಿರಸ್ಕರಿಸಿತು. ತನ್ನ ಮೇಲೆ ಆರೋಪಿಸಿರುವ ಪ್ರತಿಯೊಂದು ಅಂಶವನ್ನೂ ಕಂಪ್ಯೂಟರ್ಸಂಸ್ಥೆ ಅಲ್ಲಗಳೆಯುತ್ತ ವಾಮನ ಸಾಧು ವಾಣಿಜ್ಯ ಉದ್ದೇಶಕ್ಕಾಗಿ ತನ್ನಿಂದ ಕಂಪ್ಯೂಟರ್ ಉಪಕರಣವನ್ನು ಖರೀದಿಸಿರುವುದರಿಂದ ಅವರನ್ನು ಬಳಕೆದಾರ ಎಂದು ಪರಿಗಣಿಸುವಂತಿಲ್ಲ. ಆದ್ದರಿಂದ ಅವರ ದೂರನ್ನು ವಜಾಗೊಳಿಸಬೇಕೆಂದು ವಾದಿಸಿತು. ಗ್ರಾಹಕರ ದೂರು ಪರಿಹಾರ ವೇದಿಕೆಯು ದೂರುದಾರರ ಹಾಗೂ ಕಂಪ್ಯೂಟರ್ ಸಂಸ್ಥೆಯ ವಾದವನ್ನು ಆಲಿಸಿ ತಾರೀಕು 17-8-2000ರಂದು ತೀರ್ಪು ನೀಡಿ ಈ ಕೆಳಗಿನಂತೆ ಆದೇಶಿಸಿದೆ:


ವಾಮನ ಸಾಧು ವಾಣಿಜ್ಯ ಉದ್ದೇಶಕ್ಕಾಗಿ ಕಂಪ್ಯೂಟರ್ ಖರೀದಿಸಿದ್ದರೂ ಈ ಪ್ರಕರಣದಲ್ಲಿ ಈ ಪ್ರಕರಣದಲ್ಲಿ ಅವರು ಬಳಕೆದಾರರೇ ಆಗಿದ್ದಾರೆ. ಯಾವನು ತನ್ನ ಜೀವನ ನಿರ್ವಹಣೆಗಾಗಿ ಸ್ವಉದ್ಯೋಗದ ನೆಲೆಯಲ್ಲಿ ಖರೀದಿಸಿದ ವಸ್ತುವನ್ನು ಸ್ವತ: ಉಪಯೋಗಿಸುತ್ತಿದ್ದಲ್ಲಿ ಆತ ಬಳಕೆದಾರನೆಂದು ಕರೆಯಲ್ಪಡುತ್ತಾನೆ ಎಂದು ಬಳಕೆದಾರರ ರಕ್ಷಣಾ ಕಾಯಿದೆಯ ಸೆಕ್ಷನ್ 2(1) ರ ಕಲಂ (ಡಿ)ಯಲ್ಲಿ ವಿವರಿಸಿದೆ. ಆದ್ದರಿಂದ ದೂರುದಾರರು ಬಳಕೆದಾರರಲ್ಲ ಎನ್ನುವ ವಾದವನ್ನು ಒಪ್ಪಲಾಗುವುದಿಲ್ಲ. ದೋಷಪೂರಿತ ಯಂತ್ರವನ್ನು ಮಾರಾಟ ಮಾಡಿರುವುದಕ್ಕೆ ಮಾರಾಟಗಾರ ನೀಡಿರುವ ಸಮರ್ಥನೆಯನ್ನು ತಿರಸ್ಕರಿಸಿದ ವೇದಿಕೆಯು ಬಿಲ್‍ನಲ್ಲಿ ತಿಳಿಸಿರುವ ಯಂತ್ರದ ಬದಲಿಗೆ ಬೇರೆಯೇ ಯಂತ್ರವನ್ನು ನೀಡಿರುವುದು ಹಾಗೂ ಸ್ಥಾಪನಾ ಶುಲ್ಕ ರೂ. 1,000/- ವಸೂಲು ಮಾಡಿರುವುದು ಕಂಪ್ಯೂಟರ್ ಸಂಸ್ಥೆಯ ಅಪ್ರಾಮಾಣಿಕ ವಾಣಿಜ್ಯ ವ್ಯವಹಾರ (Unfair Trade Practice) ಎಂದು ವೇದಿಕೆಯು ತನ್ನ ತೀರ್ಪಿನಲ್ಲಿ ತಿಳಿಸಿದೆ. ಈ ಪ್ರಕರಣದಲ್ಲಿ ಬಳಕೆದಾರನಿಗೆ ಸೂಕ್ತ ಸೇವೆ ನೀಡುವಲ್ಲಿ ಪೂರೈಕೆದಾರರಿಂದ ಆಗಿರುವ ವಿಳಂಬ ಹಾಗೂ ಸೇವಾ ವೈಫಲ್ಯವೂ ಸಹ ಅಪ್ರಾಮಾಣಿಕ ವಾಣಿಜ್ಯ ವ್ಯವಹಾರವಾಗಿದೆ ಎಂದು ವೇದಿಕೆಯು ಸ್ವಷ್ಟಪಡಿಸಿದೆ.


ತನ್ನ ತೀರ್ಪಿನಲ್ಲಿ ಜಿಲ್ಲಾ ಗ್ರಾಹಕರ ದೂರು ಪರಿಹಾರ ವೇದಿಕೆಯು ದೂರುದಾರ ಗ್ರಾಹಕರಿಗೆ ತಾ. 2-9-92ರಿಂದ ಶೇಕಡಾ 10ರಂತೆ ಬಡ್ಡಿ ಸೇರಿಸಿ ರೂ. 22,500/-ನ್ನು ಮರುಪಾವತಿಸುವಂತೆ ಪೂರೈಕೆದಾರ ಸಂಸ್ಥೆಗೆ ಆದೇಶ ನೀಡಿದೆ. ಗ್ರಾಹಕರಿಗಾಗಿರುವ ನಷ್ಟ ಹಾಗೂ ಖರ್ಚಿನ ಬಾಬ್ತು ರೂಪಾಯಿ 25,000/-ನ್ನೂ ಹೆಚ್ಚುವರಿ ಪರಿಹಾರವಾಗಿ ಪಾವತಿಸಬೇಕು ಎಂದೂ ಆದೇಶಿಸಿದೆ. ಈ ಮೊಬಲಗನ್ನು ಮುಂದಿನ 30 ದಿನಗಳ ಒಳಗೆ ಪಾವತಿಸದಿದ್ದರೆ ಪರಿಹಾರ ಧನದ ಮೊತ್ತಕ್ಕೆ ಶೇಕಡಾ 15ರ ದರದಲ್ಲಿ ಬಡ್ಡಿಯನ್ನು ಪಾವತಿಸಬೇಕೆಂದು ವಿಧಿಸಿದೆ. ಶೋಷಣೆಗೊಳಗಾಗಿರುವ ಬಳಕೆದಾರನಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯವು ನ್ಯಾಯ ಒದಗಿಸಿದೆ. ದೂರುದಾರರ ಪರವಾಗಿ ಮಂಗಳೂರಿನ ನ್ಯಾಯವಾದಿ ಶ್ರೀ. ಎ.ಪಿ.
ಗೌರಿಶಂಕರ್ ಇವರು ವಾದಿಸಿರುತ್ತಾರೆ.
ಪ್ರಾತಿನಿಧಿಕ ಫೋಟೋ: ಎಸ್.ಟಿ.ಡಿ. ಬೂತ್‌ನ ಕಂಪ್ಯೂಟರ್ ಉಪಕರಣ

ಸಂಗ್ರಹ: ಬಳಕೆದಾರರ ಶಿಕ್ಷಣ, 20-12-2000