ಹಕ್ಕು ಹೋರಾಟ 1. ಮಾಜಿ ಸೈನಿಕನಿಗೆ ನ್ಯಾಯ ದೊರೆಯಿತು

ದಕ್ಷಿಣ ಕನ್ನಡದ ನಿಡ್ಲೆಯ ರಾಜ ಆಚಾರಿ ದೇಶ ಸೇವೆ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯಲ್ಲಿ ಸೈನ್ಯವನ್ನು ಸೇರಿದರು. ಸುಮಾರು ಹತ್ತು ವರ್ಷಗಳ ಸೇವೆ ಸಲ್ಲಿಸಿದ ನಂತರ ಅವರಿಗೆ ಅನಾರೋಗ್ಯ ಬಾಧಿಸಿತು. ಸೈನ್ಯದಲ್ಲಿ ಸೇವೆ ಸಲ್ಲಿಸಲು ಅನರ್ಹರಾದರು. ಹೀಗಾಗಿ ಅನಿವಾರ್ಯವಾಗಿ ನಿವೃತ್ತರಾಗಿ ಊರಿಗೆ ಮರಳಿದರು.

ನಿವೃತ್ತ ಸೈನಿಕ ರಾಜ ಅಚಾರಿಯವರಿಗೆ ಪಿಂಚಣಿ ಹಾಗೂ ಶಾರೀರಿಕ ನ್ಯೂನತೆಗಾಗಿ ವೈದ್ಯಕೀಯ ಭತ್ತೆ ಬರುತ್ತಿತ್ತು. ಆದರೆ ಈ ಭತ್ತೆ 8-11-96ರ ನಂತರ ಮುಂದುವರಿಸುವ ಬಗ್ಗೆ ಆದೇಶ ಬಾರದಿರುವುದರಿಂದ ರಾಜ ಆಚಾರಿಯವರಿಗೆ ಪಾವತಿ ದೊರೆಯುವುದು ನಿಂತಿತು. ಹೀಗಾಗಿ ತಾ. 31-8-99ರಂದು ಭತ್ತೆ ಪಾವತಿಯನ್ನು ಬ್ಯಾಂಕ್ ನಿಲ್ಲಿಸಿತು. ಅದಲ್ಲದೆ, 1996-99 ಅವಧಿಯ ಪಾವತಿಯನ್ನು ರಾಜ ಆಚಾರಿಯವರಿಂದ ವಸೂಲು ಮಾಡಿತು.

ಈ ಬಗ್ಗೆ ರಾಜ ಆಚಾರಿಯವರು ಕೇಳಿದ ವಿವರಣೆಗೆ ಜಿಲ್ಲಾ ಖಜಾನಾಧಿಕಾರಿಯವರು ಪಾವತಿಗೆ ಮುಂದುವರಿಕೆಯ ಪತ್ರ ಬಾರದಿರುವುದರಿಂದ ಪಾವತಿ ನಿಂತಿದೆ ಎಂದು ವಿವರಣೆ ನೀಡಿದರು. ಅಲಹಾಬಾದಿನಲ್ಲಿರುವ ಸೈನಿಕ ಕೇಂದ್ರ ಕಚೇರಿಗೆ ಈ ಬಗ್ಗೆ ಪತ್ರವನ್ನು ಬರೆದಾಗ ಅವರು ಈಗಾಗಲೇ ಸೂಕ್ತ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. ಆದರೆ ಜಿಲ್ಲಾಖಜಾನಾಧಿಕಾರಿ ಅವರಿಂದ ಈ ಕುರಿತು ಸಮರ್ಪಕ ಉತ್ತರ ದೊರಕದೆ ಇರುವುದರಿಂದ ರಾಜ ಆಚಾರಿಯವರು ನಿಡ್ಲೆ ಬಳಕೆದಾರರ ವೇದಿಕೆಗೆ ತನ್ನ ತೊಂದರೆಗಳನ್ನು ತಿಳಿಸಿ ಸಮಸ್ಯಾ ಪರಿಹಾರಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಬೆಂಬಲ ನೀಡುವಂತೆ ಕೋರಿದರು.

235
ನಿಡ್ಲೆ ವೇದಿಕೆಯು ವಿಳಂಬಿಸದೆ ರಾಜ ಆಚಾರಿಯವರ ಪ್ರಕರಣದ ಬಗ್ಗೆ ತನ್ನ ಮೊದಲ ಪತ್ರವನ್ನು ಅಲಹಾಬಾದಿನ ಸೈನಿಕ ಕೇಂದ್ರ ಕಚೇರಿಗೆ ಬರೆಯಿತು. ವೈದ್ಯಕೀಯ ಭತ್ತೆಯ ಮುಂದುವರಿಕೆಯ ಆದೇಶವನ್ನು ತಕ್ಷಣವೇ ಕಳುಹಿಸುವಂತೆ ವೇದಿಕೆಯು ಕಛೇರಿಯನ್ನು ಆಗ್ರಹಿಸಿತು.

ಅದುವರೆಗೆ ಪರಿಹಾರಗೊಳ್ಳದ ಸಮಸ್ಯೆ ತಕ್ಷಣವೇ ಪರಿಹಾರಗೊಂಡಿತು. ಸೈನಿಕ ಕೇಂದ್ರ ಕಚೇರಿಯ ಅಧಿಕಾರಿಗಳು 20-2-2002 ರಂದು ಭತ್ತೆಯನ್ನು ರಾಜ ಆಚಾರಿಯವರ ಜೀವಿತದ ಪೂರ್ಣ ಅವಧಿಗೆ ಮಂಜೂರು ಮಾಡಿಆದೇಶವನ್ನು ತಕ್ಷಣವೇ ಕಳುಹಿಸಿದರು. ತನ್ನ ಹೋರಾಟಕ್ಕೆ ಬೆಂಬಲ - ಮಾರ್ಗದರ್ಶನಗಳನ್ನು ನೀಡಿರುವ ನಿಡ್ಲೆಬಳಕೆದಾರರ ವೇದಿಕೆಗೆ ಕೃತಜ್ಞತೆಗಳನ್ನು ಮಾಜಿ ಸೈನಿಕ ರಾಜ ಆಚಾರಿಯವರು ಸಲ್ಲಿಸಿದ್ದಾರೆ.

ಪ್ರಾತಿನಿಧಿಕ ಫೋಟೋ: ಭಾರತೀಯ ಸೈನ್ಯದ ವೀರ ಸೈನಿಕರು

ಸಂಗ್ರಹ: ಬಳಕೆದಾರರ ಶಿಕ್ಷಣ, 20-10-2002