ಸೊಳ್ಳೆ ನಿಯಂತ್ರಣಕ್ಕೆ ಅಂಟುವಾಳ

ಪಾರಂಪರಿಕ ಔಷಧಿಗಳಲ್ಲಿ ಹಾಗೂ ಪಾತ್ರೆ ತೊಳೆಯಲು ಅಂಟುವಾಳದ ಬಳಕೆ ನಮಗೆಲ್ಲ ತಿಳಿದಿದೆ. ಈಗ ಅದರ ಹೊಸತೊಂದು ಉಪಯೋಗ ಪತ್ತೆಯಾಗಿದೆ: ಏಡಿಸ್ ಈಜಿಪ್ಟಿ ಸೊಳ್ಳೆಯ ನಿಯಂತ್ರಣಕ್ಕೆ ಅಂಟುವಾಳದ ಸಾರ ಪರಿಣಾಮಕಾರಿ. ಇದರಿಂದಾಗಿ, ಸೊಳ್ಳೆಗಳ ನಿಯಂತ್ರಣಕ್ಕಾಗಿ ವಿಷಭರಿತ ಪೀಡೆನಾಶಕಗಳ ಬಳಕೆ ಕಡಿಮೆಯಾಗಬಹುದು.

ಏಡಿಸ್ ಈಜಿಪ್ತಿ ಸೊಳ್ಳೆಯಿಂದಾಗಿ ಹರಡುವ ವೈರಸ್ ರೋಗಗಳು ಹಳದಿ ಜ್ವರ, ಡೆಂಗು ಮತ್ತು ಚಿಕುನ್‍ಗುನ್ಯ. ಈ ರೋಗಗಳಿಂದ ಜಗತ್ತಿನಲ್ಲಿ ಪ್ರತಿ ವರುಷ ಬಾಧಿತರಾಗುವವರ ಸಂಖ್ಯೆ ೩೦ ಮಿಲಿಯ.

ಈ ಸೊಳ್ಳೆಯ ಲಾರ್ವಾ ಮತ್ತು ಕೋಶದ ಎನ್‍ಜೈಮುಗಳ ಚಟುವಟಿಕೆಗೆ ಅಡ್ಡಿಯಾಗಿ, ಬೆಳವಣಿಗೆ ಕುಗ್ಗಿಸುವ ಗುಣ ಅಂಟುವಾಳದ ಕಾಯಿಗಳ ಸಾರದಲ್ಲಿದೆ. ಅಕ್ಟಾ ಟ್ರೊಪಿಕಾ ಪತ್ರಿಕೆಯ ಆನ್-ಲೈನ್ ಆವೃತ್ತಿಯಲ್ಲಿ ಇದು ವರದಿಯಾಗಿದೆ.

ಈ ಮುಂಚೆ ನಡೆಸಿದ ಒಂದು ಅಧ್ಯಯನದ ಫಲಿತಾಂಶ ಹೀಗಿದೆ: ಏಡಿಸ್ ಈಜಿಪ್ಟಿಯ ಲಾರ್ವಾಗಳ ಮೇಲೆ ೪ ಮಿಗ್ರಾ ಅಂಟುವಾಳ ಸಾರಕ್ಕೆ ಒಂದು ಮಿಲೀ ನೀರು ಬೆರೆಸಿದ ಮಿಶ್ರಣ ಪ್ರಯೋಗಿಸಿದಾಗ, ೧೮ ಗಂಟೆಗಳಲ್ಲಿ ಅವು ಸತ್ತವು. ಅದರ ಕೋಶಗಳ ಮೇಲೆ ೫ ಮಿಗ್ರಾ ಅಂಟುವಾಳ ಸಾರಕ್ಕೆ ಒಂದು ಮಿಲೀ ನೀರು ಬೆರೆಸಿದ ಮಿಶ್ರಣ ಪ್ರಯೋಗಿಸಿದಾಗ ಅವೆಲ್ಲವೂ ೧೮ ಗಂಟೆಗಳಲ್ಲಿ ನಾಶವಾದವು.

ಮದ್ರಾಸ್ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಸಂಶೊಧಕರ ತಂಡವು ಸೊಳ್ಳೆಯ ಎನ್‍ಜೈಮು ಚಟುವಟಿಕೆ ಮೇಲೆ ಅಂಟುವಾಳ ಸಾರದ ಪರಿಣಾಮ ಅಧ್ಯಯನ ಮಾಡಿತು. ಸೊಳ್ಳೆಯ ಲಾರ್ವಾ ಮತ್ತು ಕೋಶಗಳಲ್ಲಿ ಆ ಚಟುವಟಿಕೆಯನ್ನು ಅಂಟುವಾಳದ ಸಾರ ಕಡಿಮೆ ಮಾಡುತ್ತದೆಂದು ತಂಡದ ಮುಖ್ಯಸ್ಥರಾದ ಪೆರಿಯಸಾಮಿ ಮುಳ್ಳೈನಾದನ್ ತಿಳಿಸಿದ್ದಾರೆ.