ಸೆಣಬಿನ ಬಗ್ಗೆ ನಮಗೆ ಅಸಡ್ಡೆ. “ಅದರಿಂದೇನಾದೀತು? ಗೋಣಿಚೀಲ ಮಾಡಬಹುದು, ಅಷ್ಟೇ” ಎಂಬ ತಾತ್ಸಾರ. ಆದರೆ ಈಗ ಸೆಣಬಿಗೆ ಕಾಲ ಬಂದಿದೆ. ಅದರಿಂದ ಮಾಡಿದ ಆಭರಣಗಳಿಗೆ ಈಗ ಭಾರೀ ಬೇಡಿಕೆ.
ಸೆಣಬಿನ ಇನ್ನೊಂದು ಉಪಯೋಗವನ್ನೀಗ ಸಂಶೋಧಕರು ಪತ್ತೆ ಹಚ್ಚಿದ್ದಾರೆ: ಸೆಣಬನ್ನು ಸಿಮೆಂಟಿಗೆ ಬೆರೆಸಿದರೆ, ಅದರ “ಸೆಟ್ಟಿಂಗ್” ನಿಧಾನಗೊಳಿಸುವ ಮೂಲಕ, ಸಿಮೆಂಟನ್ನು ಬಲಗೊಳಿಸುತ್ತದೆ.
“ಕಟ್ಟಡಗಳ ನಿರ್ಮಾಣ ಮಾಡುವಾಗ, ಚಾವಣಿಗಳಲ್ಲಿ ೨೮ ದಿನಗಳ ಅವಧಿ ನೀರು ನಿಲ್ಲಿಸುತ್ತಾರೆ – ಚಾವಣಿಯನ್ನು ಇನ್ನಷ್ಟು ಬಲಗೊಳಿಸಲಿಕ್ಕಾಗಿ. ಇದೇ ಉದ್ದೇಶಕ್ಕಾಗಿ ಗೋಡೆಗಳ ಮೇಲೆಯೂ ನೀರು ಚಿಮುಕಿಸುತ್ತಾರೆ. ಇದರ ಜೊತೆಗೆ, ಸಿಮೆಂಟಿನೊಂದಿಗೆ ಸೆಣಬು ಬೆರೆಸಿದರೆ, ಕಟ್ಟಡವನ್ನು ಇನ್ನಷ್ಟು ಬಲಗೊಳಿಸುತ್ತದೆ” ಎನ್ನುತ್ತಾರೆ, ಖರಗ್-ಪುರದ ಐಐಟಿಯ ಸುಭಾಷಿಸ್ ಬಿ. ಮಜುಂದಾರ್.
ಸಿಮೆಂಟಿಗೆ ಸೆಣಬನ್ನು ಸೇರಿಸಿದರೆ ಆಗುವ ಪರಿಣಾಮಗಳ ಬಗ್ಗೆ ಮಜುಂದಾರ್ ಮತ್ತು ಅವರ ತಂಡದ ಸದಸ್ಯರು ನಡೆಸಿದ ಅಧ್ಯಯನದ ಅನುಸಾರ ಸಿಮೆಂಟ್ ಬಿರುಸಾಗುವುದನ್ನು ಇದು ತಡ ಮಾಡುತ್ತದೆ.
ಇದರಿಂದಾಗಿ, ಸಿದ್ಧ ಮಾಡಿದ ಕಾಂಕ್ರೀಟ್ ಮಿಶ್ರಣವನ್ನು ದೂರದ ಸ್ಥಳಗಳಿಗೆ ಸಾಗಾಟ ಮಾಡಲು ಅನುಕೂಲ. ಮಿಶ್ರಣಕ್ಕೆ ಬೆರೆಸಿದ ಸೆಣಬಿನ ಪ್ರಮಾಣ ಅವಲಂಬಿಸಿ, ಮಿಶ್ರಣವು ಬಿರುಸಾಗುವುದನ್ನು ಎಂಟು ಗಂಟೆ ತನಕ ತಡ ಮಾಡಬಹುದೆಂದು ಆ ಅಧ್ಯಯನ ತೋರಿಸಿ ಕೊಟ್ಟಿದೆ. ಅಂದರೆ, ಕಾಂಕ್ರೀಟ್ ಮಿಶ್ರಣವನ್ನು ೨೦೦ ಕಿಮೀ ದೂರ ಒಯ್ಯಲು ಕಾಲಾವಕಾಶ ಲಭ್ಯ.
ಇದೇ ಸಂಶೋಧನಾ ತಂಡವು ಈ ಮುನ್ನ ಇದೇ ವಿಷಯದಲ್ಲಿ ಬೇರೊಂದು ಮಾಹಿತಿ ಪತ್ತೆ ಮಾಡಿತ್ತು: ಸೆಣಬನ್ನು ಸಿಮೆಂಟಿನೊಂದಿಗೆ ಸುಸ್ಥಿರ ಮರು-ಗಡುಸಾಗಿಸುವ ವಸ್ತುವಾಗಿ ಬಳಸಬಹುದು. ಕಟ್ಟಡ ನಿರ್ಮಾಣದಲ್ಲಿ ಸಿಮೆಂಟಿನೊಂದಿಗೆ ಸಾಂಪ್ರದಾಯಿಕವಾಗಿ ಬಳಸುವ ಸ್ಟೀಲ್ ಅಥವಾ ಕೃತಕ ನಾರು (ಫೈಬರ್) ಬದಲಾಗಿ ಸೆಣಬಿನ ನಾರನ್ನು ಬಳಸಲು ಸಾಧ್ಯ. ಸಿಮೆಂಟ್ ಒಡೆಯುವುದನ್ನು ಸೆಣಬಿನ ನಾರು ತಡೆಯುತ್ತದೆ. ಸೆಣಬಿನ ನಾರು ಸೇರಿಸದ ಸಿಮೆಂಟ್ ಮಿಶ್ರಣದೊಂದಿಗೆ ಹೋಲಿಸಿದಾಗ, ಸೆಣಬಿನ ನಾರು ಸೇರಿಸಿದ ಸಿಮೆಂಟ್ ಮಿಶ್ರಣದ ಕಂಪ್ರೆಸಿವ್ ಶಕ್ತಿ ಶೇಕಡಾ ೯ ಮತ್ತು ಫ್ಲೆಕ್ಸುರಲ್ ಶಕ್ತಿ ಶೇಕಡಾ ೧೬ ಜಾಸ್ತಿಯಾಯಿತೆಂದು ಅಧ್ಯಯನ ತಂಡ ತಿಳಿಸಿದೆ. ಹಾಗಾಗಿ, ಭೂಕಂಪಪೀಡಿತ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಸೆಣಬಿನ ನಾರು ಸೇರಿಸಿದ ಸಿಮೆಂಟ್ ಸೂಕ್ತ.
ಸೆಣಬಿನ ನಾರು ಸೇರಿಸಿದಾಗ ಸಿಮೆಂಟ್ ಮಿಶ್ರಣದ ಗುಣಗಳಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದನ್ನು ಪತ್ತೆ ಮಾಡುವುದು ಆ ಅಧ್ಯಯನದ ಉದ್ದೇಶವಾಗಿತ್ತು. ಕಟ್ಟಡ ನಿರ್ಮಾಣದಲ್ಲಿ ಈ ತಂತ್ರಜ್ನಾನವನ್ನು ವ್ಯಾಪಕವಾಗಿ ಬಳಸುವ ಮುನ್ನ ಇಂತಹ ಅಧ್ಯಯನ ಅಗತ್ಯ. ಸೆಣಬಿನ ನಾರು ಸೇರಿಸಿದರೆ ಸಿಮೆಂಟ್ ಮಿಶ್ರಣ ತಯಾರಿ ವೆಚ್ಚದಲ್ಲಿ ಕಾಂಕ್ರೀಟಿನ ಘನ ಮೀಟರೊಂದಕ್ಕೆ ರೂ.೪೦ ಹೆಚ್ಚಳ ಆಗುತ್ತದೆಂದು ಅಧ್ಯಯನ ತಂಡ ಅಂದಾಜಿಸಿದೆ.
“ವಿದ್ಯುತ್ ದೀಪದ ಕಂಬಗಳು, ರೈಲು ಹಳಿಯ ಸ್ಲೀಪರುಗಳು ಮತ್ತು ಒಳಚರಂಡಿ ಪೈಪುಗಳ ತಯಾರಿಯಲ್ಲಿ ನಾವು ಸೆಣಬಿನ ನಾರು ಬಳಸಿದ್ದರಿಂದ, ಕಾಂಕ್ರೀಟಿನ ಗುಣಲಕ್ಷಣಗಳಲ್ಲಿ ಗಣನೀಯ ಸುಧಾರಣೆ ಕಂಡು ಬಂತು” ಎನ್ನುತ್ತಾರೆ ಸಂಶೋಧನಾ ತಂಡದ ಸದಸ್ಯರಾದ ಬಸುದಾಮ್ ಅಧಿಕಾರಿ. ಅಂತೂ ಸೆಣಬಿಗೂ ಹೊಸ ಉಪಯೋಗಗಳಿವೆ ಎಂಬುದು ಸಾಬೀತಾಗಿದೆ.