ನಿನ್ನೆ, 19 ಮೇ 2022ರಂದು ಕರ್ನಾಟಕದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟ. ಇವತ್ತಿನ ದಿನ ಪತ್ರಿಕೆಗಳಲ್ಲಿ ಅದುವೇ ಮುಖಪುಟ ಸುದ್ದಿ. ಈ ಸಲದ ಫಲಿತಾಂಶದ ಕೆಲವು ವಿಶೇಷತೆಗಳು:
-ಪರೀಕ್ಷೆಗೆ ಹಾಜರಾದ ಸುಮಾರು 8.53 ಲಕ್ಷ ವಿದ್ಯಾರ್ಥಿಗಳಲ್ಲಿ ಪಾಸಾದವರು ಶೇಕಡಾ 85.63. ಇದು ದಶಕದ ದಾಖಲೆ. ಕೊರೋನಾ ವೈರಸಿನ ಎರಡನೇ ಸುತ್ತಿನ ದಾಳಿಯಿಂದಾಗಿ, 2021-22 ಶೈಕ್ಷಣಿಕ ವರುಷದಲ್ಲಿ ಜೂನ್‌ನಿಂದ ಮಾರ್ಚ್ ಅವಧಿಯಲ್ಲಿ ದೀರ್ಘಾವಧಿ ಶಾಲೆಗಳು ಮುಚ್ಚಿದ್ದವು. ಅಂದರೆ, ವಿದ್ಯಾರ್ಥಿಗಳು ಹಿಂದಿನ ವರುಷಗಳಷ್ಟು ಅವಧಿ ಶಾಲೆಗೆ ಹಾಜರಾಗದಿದ್ದ ವರುಷದಲ್ಲಿ ದಾಖಲೆ ಸಂಖ್ಯೆಯಲ್ಲಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ!
-ಶೇಕಡಾ 100 (ಒಟ್ಟು ಅಂಕ 625) ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ 145. ಇದೂ ಒಂದು ದಾಖಲೆ. ಅಂದರೆ, ವಿದ್ಯಾರ್ಥಿಗಳು ಬಹುಪಾಲು ತಮ್ಮ ಪಾಡಿಗೆ ತಾವು ಕಲಿತಾಗ, ಶೇ.100 ಅಂಕ ಗಳಿಸಿದವರ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ!
-ಶೇಕಡಾ 100 ಅಂಕಕ್ಕೆ ತೀರಾ ಹತ್ತಿರದ ಅಂಕ ಗಳಿಸಿದವರ ಸಂಖ್ಯೆ 3,000 ದಾಟಿರುವುದೂ ದಾಖಲೆ:
ಅಂಕ 624 ಗಳಿಸಿದವರು 309; ಅಂಕ 623 ಗಳಿಸಿದವರು 472; ಅಂಕ 622 ಗಳಿಸಿದವರು 615;
ಅಂಕ 621 ಗಳಿಸಿದವರು 706 ಮತ್ತು ಅಂಕ 620 ಗಳಿಸಿದವರು 773.
ಅಂದರೆ, ಶಾಲಾ ಪಾಠಗಳು ಸರಿಯಾಗಿ ನಡೆಯದಿದ್ದರೂ ಇಂತಹ ಸಾಧನೆ ಸಾಧ್ಯ.
-ಅಂದ ಹಾಗೆ ಶೇಕಡಾ 100 ಅಂಕ ಗಳಿಸಿದ ಎಲ್ಲ ವಿದ್ಯಾರ್ಥಿಗಳ ಹೆತ್ತವರು ತಮ್ಮ ಮಕ್ಕಳ ಕಲಿಕೆಗೆ ಶೈಕ್ಷಣಿಕವಾಗಿ ಸಹಾಯ ಮಾಡಿದ್ದರೇ? ಇಲ್ಲ. ಅವರೆಲ್ಲರೂ ಶ್ರೀಮಂತ ಮತ್ತು ಉತ್ತಮ ವಿದ್ಯಾಭ್ಯಾಸ ಪಡೆದಿದ್ದ ಹೆತ್ತವರ ಮಕ್ಕಳೇ? ಅಲ್ಲ. ಅವರೆಲ್ಲರೂ ಖಾಸಗಿ ಶಾಲೆಗಳಲ್ಲಿ ಕಲಿತವರೇ? ಅಲ್ಲ.
-ನಿಜ ಸಂಗತಿ ಏನೆಂದರೆ, ಶೇಕಡಾ 100 ಅಂಕ ಗಳಿಸಿದವರಲ್ಲಿ ಕೆಲವರು ಕೂಲಿ ಕಾರ್ಮಿಕರ ಮಕ್ಕಳು. (ಅ) ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗಾಯತ್ರಿಯ ತಂದೆ ಮೇಸ್ತ್ರಿ, ತಾಯಿ ಬೀಡಿ ಕಟ್ಟುವಾಕೆ.
(ಆ) ವಿಜಯಪುರ ಜಿಲ್ಲೆಯ ಜುಮನಾಳ ಗ್ರಾವದ ಪ್ರೌಡಶಾಲೆಯ ವಿದ್ಯಾರ್ಥಿ ಅಮಿತ ಕಲಿತದ್ದು ಕನ್ನಡ ಮಾಧ್ಯಮದಲ್ಲಿ. ಅಮಿತನ ತಾಯಿ ಮಾದೇವಿ ಮಾದರ ಕೂಲಿ ಕೆಲಸ ಮಾಡುವಾಕೆ. ಈತ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡವನು.
(ಇ) ಉಡುಪಿ ಜಿಲ್ಲೆಯ ಕಾಳಾವರದ ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿನಿ ನಿಶಾಳ ತಂದೆ ಶ್ರೀನಿವಾಸ ಜೋಗಿ ರಸ್ತೆ ಬದಿ ಬಟ್ಟೆ ವ್ಯಾಪಾರಿ. ತಾಯಿ ಆಶಾ ಗೃಹಿಣಿ. ನಿಶಾ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿರುವ ಮತ್ತು ಯಕ್ಷಗಾನ ಕಲಿಯುತ್ತಿರುವ ಸಾಧಕಿ.
(ಈ) ಉಡುಪಿ ಜಿಲ್ಲೆಯ ಮಲ್ಪೆ ಪದವಿಪೂರ್ವ ಕಾಲೇಜಿನ ಆಂಗ್ಲ ಮಾಧ್ಯಮ ವಿದ್ಯಾರ್ಥಿ ಪುನೀತ್ ನಾಯ್ಕ ಬಡಕುಟುಂಬದ ವಿದ್ಯಾರ್ಥಿ. ಉಡುಪಿಯ ಕಲ್ಮಾಡಿಯಲ್ಲಿ ತಾಯಿ ಜೊತೆ ವಾಸ. ಪ್ರತಿ ದಿನ ಮುಂಜಾನೆ 4 ಗಂಟೆಗೆದ್ದು, ಮಲ್ಪೆ ಬಂದರಿಗೆ ಹೋಗಿ, ಮೀನು ಹೆಕ್ಕಿ, ಟೆಂಪೋಗೆ ಲೋಡ್ ಮಾಡಿ, ಅನಂತರ 9 ಗಂಟೆಗೆ ಶಾಲೆಗೆ ಹೋಗುತ್ತಿದ್ದ. ಸ್ವಂತ ದುಡಿಮೆಯ ಹಣದಿಂದಲೇ ಶಾಲೆಯ ಶುಲ್ಕ ಪಾವತಿಸುತ್ತಿದ್ದ.
(ಉ) ದಕ್ಷಿಣ ಕನ್ನಡದ ಮೂಲ್ಕಿ ವ್ಯಾಸ ಮಹರ್ಷಿ ಆಂಗ್ಲ ಮಾಧ್ಯಮ ಶಾಲೆಯ ವೀಕ್ಷಾ ವಿ. ಶೆಟ್ಟಿಯ ತಂದೆ ವೇದಾನಂದ ಶೆಟ್ಟಿ ಟೂರಿಸ್ಟ್ ವಾಹನದ ಡ್ರೈವರ್, ತಾಯಿ ವೀಣಾ. ವೀಕ್ಷಾಳದು ಸ್ವಯಂ ಕಲಿಕೆ. ಆಕೆ ಟ್ಯೂಷನ್ ಕ್ಲಾಸಿಗೆ ಹೋಗಿ ಕಲಿತಿಲ್ಲ.
ಇದೆಲ್ಲವನ್ನು ಗಮನಿಸಿದಾಗ, ಒಂದು ಸಂಗತಿ ಸ್ಪಷ್ಟವಾಗುತ್ತದೆ. ಹೆತ್ತವರ ಹಿನ್ನೆಲೆ, ಕುಟುಂಬದ ಶ್ರೀಮಂತಿಕೆ, ಟ್ಯೂಷನ್, ಕೋಚಿಂಗ್, ಕೇವಲ ಶಾಲಾಪಾಠಗಳ ಓದು - ಚೆನ್ನಾಗಿ ಕಲಿಯಲು ಇದ್ಯಾವುದೂ ಮುಖ್ಯವಲ್ಲ.
ಅಷ್ಟೇಕೆ, ಚೆನ್ನಾಗಿ ಕಲಿಯಲು ಶಾಲೆಗೆ ಹೋಗಬೇಕೆಂದಿಲ್ಲ, ಮನೆಯಲ್ಲೇ ಕಲಿಯಬಹುದು! ಇದು, ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಮನೆಯಲ್ಲೇ ಕಲಿಕೆ (ಹೋಮ್ ಸ್ಕೂಲಿಂಗ್) ವಿಧಾನ ಅನುಸರಿಸುತ್ತಿರುವರುವ ಲಕ್ಷಗಟ್ಟಲೆ ಹೆತ್ತವರ ಅನುಭವದ ಮಾತು. ನನ್ನ ಮೊಮ್ಮಕ್ಕಳಿಬ್ಬರೂ ಇದೇ ವಿಧಾನದಲ್ಲಿ ಕಲಿಯುತ್ತಿದ್ದಾರೆ (ಅಂದರೆ, ಒಂದು ದಿನವೂ ಶಾಲೆಗೆ ಹೋಗಿಲ್ಲ.)
ಇದು ಹೇಗೆ ಸಾಧ್ಯ? ಎಂಬುದನ್ನು ಈ ಲೇಖನದ ಮುಂದಿನ ಭಾಗ ಓದಿ ತಿಳಿದುಕೊಳ್ಳಬಹುದು.
ಫೋಟೋ: ವಿಜಯವಾಣಿ 20-05-2022 ಮುಖಪುಟ