ಶಾಂತ ಸಾಗರದಲ್ಲಿ ಜ್ವಾಲಾಮುಖಿ ಮಹಾಸ್ಫೋಟ

ಸುದ್ದಿ ಲೋಕದಲ್ಲಿ ಟೊಂಗಾ ರಾಜ್ಯ ಸುದ್ದಿಯಾಗುವುದೇ ಇಲ್ಲ. ಆದರೆ ೧೪ ಜನವರಿ ೨೦೨೨ರಂದು ಅಲ್ಲಿಯ ಜ್ವಾಲಾಮುಖಿಯ ಮಹಾಸ್ಫೋಟ ಜಗತ್ತಿನಲ್ಲೆಲ್ಲ ಸುದ್ದಿಯ ಅಲೆಗಳನ್ನೆಬ್ಬಿಸಿದೆ!

ಹುಂಗಾ-ಟೊಂಗಾ-ಹುಂಗಾ-ಹಾಪೈ ಎಂಬ ಹೆಸರಿನ ಜ್ವಾಲಾಮುಖಿ ಇದೆಯೆಂಬುದೇ ಹಲವರಿಗೆ ತಿಳಿದಿಲ್ಲ. ಅದು ಟೊಂಗಾದ ರಾಜಧಾನಿ ನುಕುಅಲೊಫಾದಿಂದ ೬೫ ಕಿಮೀ ಉತ್ತರದಲ್ಲಿ ಸಮುದ್ರಮಟ್ಟದಿಂದ ಸುಮಾರು ೧೦೦ ಮೀಟರ್ ಮೇಲಕ್ಕೆ ಎದ್ದು ನಿಂತಿರುವ ದ್ವೀಪದಂತೆ ಕಾಣಿಸುತ್ತದೆ. ಆದರೆ ಸಾಗರದ ಅಲೆಗಳ ಕೆಳಗೆ ಅದೊಂದು ಬೃಹತ್ ಬೆಟ್ಟದಂತಿದೆ - ೧,೮೦೦ ಮೀ ಎತ್ತರ ಮತ್ತು ೨೦ ಕಿಮೀ ಅಗಲದ ಬೆಟ್ಟ.

ಕಳೆದ ಕೆಲವು ದಶಕಗಳಲ್ಲಿ ಈ ಜ್ವಾಲಾಮುಖಿ ಕೆಲವು ಸಲ ಸ್ಫೋಟಿಸಿದೆ. ೨೦೦೯ ಮತ್ತು ೨೦೧೪/೧೫ರಲ್ಲಿ ಅದು ಸ್ಫೋಟಿಸಿದಾಗ ಶಿಲಾಪಾಕ (ಮಾಗ್ಮಾ) ಮತ್ತು ಹಬೆಯ ಕಾರಂಜಿಗಳು ಸಾಗರದ ಅಲೆಗಳನ್ನು ಸೀಳಿಕೊಂಡು ಆಕಾಶದತ್ತ ಚಿಮ್ಮಿದ್ದವು. ಆದರೆ, ಜನವರಿ ೨೦೨೨ರ ಸ್ಫೋಟಕ್ಕೆ ಹೋಲಿಸಿದಾಗ, ಆ ಸ್ಫೋಟಗಳು ತೀರಾ ಸಣ್ಣವು.

ಜ್ವಾಲಾಮುಖಿ ಸಾಗರದ ಅಲೆಗಳೊಳಗೆ ಅಡಗಿದ್ದರೂ ಜನವರಿ ೨೦೨೨ರ ಸ್ಫೋಟವು ಅಗ್ನಿಪ್ರಳಯದಂತಿದ್ದುದು ಯಾಕೆ?    ಭೂಮಿಯೊಳಗಿನಿಂದ ಶಿಲಾಪಾಕ ನಿಧಾನವಾಗಿ ಸಾಗರದ ನೀರಿಗೆ ಏರಿದರೆ (ಉಷ್ಣತೆ ೧,೨೦೦ ಸೆಲ್ಸಿಯಸ್ ಇದ್ದಾಗಲೂ) ಶಿಲಾಪಾಕ ಮತ್ತು ನೀರಿನ ನಡುವೆ ತೆಳುವಾದ ಹಬೆಯ ಪದರ ಮೂಡುತ್ತದೆ. ಈ ಪದರವು ಉಷ್ಣನಿರೋಧಕದಂತೆ ವರ್ತಿಸಿ, ಶಿಲಾಪದರದ ಹೊರಭಾಗ ತಣಿಯಲು ಕಾರಣವಾಗುತ್ತದೆ.

ಆದರೆ, ಜ್ವಾಲಾಮುಖಿಯ ಅನಿಲಗಳೊಂದಿಗೆ ಶಿಲಾಪಾಕವು ಭೂಮಿಯಾಳದಿಂದ ಹೊರಕ್ಕೆ ನುಗ್ಗಿದಾಗ, ಈ ಮೇಲೆ ತಿಳಿಸಿದ ಪ್ರಕ್ರಿಯೆ ಜರಗುವುದಿಲ್ಲ. ಶಿಲಾಪಾಕವು ಸಾಗರದ ನೀರಿಗೆ ವೇಗವಾಗಿ ನುಗ್ಗಿದಾಗ, ಹಬೆಯ ಪದರಗಳು ಛಿದ್ರವಾಗಿ, ಬಿಸಿ ಶಿಲಾಪಾಕವು ತಂಪು ನೀರಿನೊಂದಿಗೆ ನೇರ ಸಂಪರ್ಕಕ್ಕೆ ಬಂದು, ನೀರು ಬಿಸಿಯೇರುತ್ತದೆ.

ಜ್ವಾಲಾಮುಖಿ ಸಂಶೋಧಕರು ಇದನ್ನು “ಇಂಧನ-ಶೈತ್ಯಕಾರಿ ಅಂತರಕ್ರಿಯೆ" ಎಂದು ಕರೆಯುತ್ತಾರೆ. ಇದು ಯುದ್ಧದಲ್ಲಿ ಬಳಕೆಯಾಗುವ ರಾಸಾಯನಿಕ ಸ್ಫೋಟಕಗಳಂತೆ ವರ್ತಿಸುತ್ತದೆ. ಪ್ರಚಂಡ ಸ್ಫೋಟಗಳಿಂದಾಗಿ ಶಿಲಾಪಾಕ ಛಿದ್ರವಾಗುತ್ತದೆ. ಆಗ ಸರಣಿಕ್ರಿಯೆ ಶುರುವಾಗಿ, ಶಿಲಾಪಾಕದ ಹೊಸ ಚೂರುಗಳು ಭೂಮಿಯಾಳದ ಹೊಸ ಪದರಗಳನ್ನು ಸೀಳಿದಾಗ ಅವು ನೀರಿನ ಸಂಪರ್ಕಕ್ಕೆ ಬರುತ್ತವೆ. ಇದರಿಂದಾಗಿ ಮತ್ತೆಮತ್ತೆ ಸ್ಫೋಟಗಳುಂಟಾಗಿ, ಅಂತಿಮವಾಗಿ ಜ್ವಾಲಾಮುಖಿಯ ಚೂರುಗಳು ಗಗನಮುಖಿಯಾಗಿ ನುಗ್ಗುತ್ತವೆ. ಹಾಗಾಗಿ ಧ್ವನ್ಯತೀತ (ಸುಪರ್-ಸೋನಿಕ್) ವೇಗದಲ್ಲಿ ಸ್ಫೋಟಗಳು ಸಂಭವಿಸುತ್ತವೆ.

ಆ ಜ್ವಾಲಾಮುಖಿ ೨೦೧೪/೧೫ರಲ್ಲಿ ಸ್ಫೋಟಿಸಿದಾಗ, ಭೂಮಿಯಾಳದಿಂದ ಹೊರನುಗ್ಗಿದ ಶಿಲಾಪಾಕವು ಅಲ್ಲಿದ್ದ ಎರಡು ದ್ವೀಪಗಳನ್ನು ಜೋಡಿಸಿ, ಐದು ಕಿಮೀ ಉದ್ದದ ದ್ವೀಪ ನಿರ್ಮಾಣವಾಯಿತು. ಜ್ವಾಲಾಮುಖಿ ಸಂಶೋಧಕರು, ಅನಂತರ ಅಲ್ಲಿಗೆ ಭೇಟಿಯಿತ್ತಾಗ, ಸಾಗರದ ತಳದಲ್ಲಿ (ಸಾಗರದ ಅಲೆಗಳ ಮಟ್ಟಕ್ಕಿಂತ ೧೫೦ ಮೀಟರ ಕೆಳಗೆ) "ಕಾಲ್ಡೆರಾ" ಕಾಣಿಸಿತು.

ಸುಮಾರು ಐದು ಕಿಮೀ ವ್ಯಾಸದ ಕುಳಿ(ಕ್ರೇಟರ್)ಯನ್ನು ಕಾಲ್ಡೆರಾ ಎಂದು ಕರೆಯುತ್ತಾರೆ. ಅಲ್ಲಿ ೨೦೦೯ ಮತ್ತು ೨೦೧೪/೧೫ರಲ್ಲಿ ಆದಂತಹ ಸಣ್ಣ ಸ್ಫೋಟಗಳು ಕಾಲ್ಡೆರಾದ ಅಂಚಿನಲ್ಲಿ ಘಟಿಸಿದ್ದರೆ, ಪ್ರಚಂಡ ಸ್ಫೋಟಗಳು ಕಾಲ್ಡೆರಾದ ಒಳಗಿನಿಂದಲೇ ಘಟಿಸುತ್ತವೆ. ಈ ಪ್ರಚಂಡ ಸ್ಫೋಟಗಳಿಂದಾಗಿ ಆಕಾಶಕ್ಕೆ ಚಿಮ್ಮುವ ಶಿಲಾಪಾಕವು ನಂತರ ಕುಳಿಯ ಒಳಗೆ ಕುಸಿದು, ಕಾಲ್ಡೆರಾದ ಆಳ ಹೆಚ್ಚಾಗುತ್ತದೆ.

ಟೋಂಗಾದ ಹಳೆಯ ದ್ವೀಪಗಳಲ್ಲಿ ಹಿಂದಿನ ಮಹಾಸ್ಫೋಟಗಳ ಪುರಾವೆಗಳು ಜ್ವಾಲಾಮುಖಿ ಸಂಶೋಧಕರಿಗೆ ಸಿಕ್ಕಿವೆ. ಇದನ್ನು ಟೊಂಗಟಾಪುವಿನ ಮನುಷ್ಯವಾಸದ ಅತಿ ದೊಡ್ಡ ದ್ವೀಪದಲ್ಲಿ (೬೫ ಕಿಮೀ ದೂರದಲ್ಲಿ) ಇರುವ ಜ್ವಾಲಾಮುಖಿ ಬೂದಿ ರಾಶಿಯೊಂದಿಗೆ  ರಾಸಾಯನಿಕವಾಗಿ ಹೋಲಿಸಲಾಯಿತು; ಜೊತೆಗೆ, ರೇಡಿಯೋ ಕಾರ್ಬನ್ ದಿನಾಂಕ ಪರೀಕ್ಷೆ ನಡೆಸಲಾಯಿತು. ಇದರಿಂದ ತಿಳಿದು ಬಂದ ಸಂಗತಿ: ೧,೦೦೦ ವರುಷಗಳಿಗೊಮ್ಮೆ ಹುಂಗಾ-ಟೊಂಗಾ ಜ್ವಾಲಾಮುಖಿಯಲ್ಲಿ ಮಹಾಸ್ಫೋಟ ಘಟಿಸುತ್ತದೆ; ಈ ಹಿಂದಿನ ಮಹಾಸ್ಫೋಟ ಜರಗಿದ್ದು ಕ್ರಿಶ ೧೧೦೦ರಲ್ಲಿ.

ಅಂದರೆ, ೧೪ ಜನವರಿ ೨೦೨೨ರಲ್ಲಿ ಘಟಿಸಿದ ಮಹಾಸ್ಫೋಟ “ಮಹಾಸ್ಫೋಟಗಳ ಕಾಲಮಾನಕ್ಕೆ ಸರಿಯಾಗಿ” ಘಟಿಸಿದೆ ಎನ್ನಬಹುದು. ಅದೇನಿದ್ದರೂ “ಮುಂದೇನು ಆಪತ್ತು ಕಾದಿದೆ?" ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಸುಲಭವಲ್ಲ.

ಯಾಕೆಂದರೆ, ೨೦ ಡಿಸೆಂಬರ್ ೨೦೨೧ ಮತ್ತು ೧೩ ಜನವರಿ ೨೦೨೨ರಂದು ಹುಂಗಾ-ಟೊಂಗಾ ಜ್ವಾಲಾಮುಖಿಯಲ್ಲಿ ಜರಗಿದ ಸ್ಫೋಟಗಳು ಮಧ್ಯಮ ಪ್ರಮಾಣದವು. ಅವುಗಳಿಂದಾಗಿ ಆಕಾಶಕ್ಕೆ ಚಿಮ್ಮಿದ ಬೂದಿಯ ಮೋಡಗಳ ಎತ್ತರ ೧೭ ಕಿಮೀ.

ಆದರೆ, ೧೫ ಜನವರಿ ೨೦೨೨ರ ಮಹಾಸ್ಫೋಟದಿಂದ ಗಗನಕ್ಕೆ ನುಗ್ಗಿದ ಬೂದಿಯ ಮೋಡದ ಎತ್ತರ ೨೦ ಕಿಮೀ. ಇದು ವೃತ್ತಾಕಾರವಾಗಿ ೧೩೦ ಕಿಮೀ ವ್ಯಾಪ್ತಿಗೆ ಹರಡಿತು; ಕ್ರಮೇಣ ೨೬೦ ಕಿಮೀ ವ್ಯಾಸದ ಟೊಪ್ಪಿಯಂತೆ (ಪ್ಲುಮ್) ಪಸರಿಸಿತು. ಅನಂತರ ಬೀಸುಗಾಳಿಯಿಂದಾಗಿ ಅದು ಚದರಿ ಹೋಯಿತು.

ಇದು ಜ್ವಾಲಾಮುಖಿಯ ಭಯಂಕರ ಸ್ಫೋಟಕ ಶಕ್ತಿಯನ್ನು ತೋರಿಸುತ್ತದೆ; ಇದನ್ನು ಕೇವಲ ಶಿಲಾಪಾಕ-ನೀರಿನ ಅಂತರಕ್ರಿಯೆಯಿಂದ ವಿವರಿಸಲು ಸಾಧ್ಯವಿಲ್ಲ. ಬದಲಾಗಿ, ಅಗಾಧ ಪ್ರಮಾಣದಲ್ಲಿ ಹೊಸ ಅನಿಲ-ಪ್ರಚೋದಿತ ಶಿಲಾಪಾಕವು ಜ್ವಾಲಾಮುಖಿಯ ಕಾಲ್ಡೆರಾದಿಂದ ಹೊರಕ್ಕೆ ಸ್ಫೋಟಿಸಿದೆ ಎಂಬುದನ್ನು ಇದು ತೋರಿಸುತ್ತದೆ.

ಅದಲ್ಲದೆ, ೧೪ ಜನವರಿ ೨೦೨೨ರ ಮಹಾಸ್ಫೋಟದಿಂದಾಗಿ ಟೊಂಗಾ ಮತ್ತು ಹತ್ತಿರದ ಫಿಜಿ ಹಾಗೂ ಸಮೋದಲ್ಲಿ ಸುನಾಮಿ ಅಲೆಗಳು ಅಪ್ಪಳಿಸಿದವು. ಇದರಿಂದಾಗಿ ಅಲ್ಲೆಲ್ಲ ಸಾಕಷ್ಟು ನಷ್ಟವಾಗಿದೆ; ಬೋಟುಗಳಿಗೆ ಹಾನಿಯಾಗಿದೆ; ಮನೆಗಳು ನಾಶವಾಗಿವೆ. ಆ ಮಹಾಸ್ಫೋಟ ಸೃಷ್ಟಿಸಿದ ನೀರಿನ ಅಲೆಗಳು ಸಾವಿರಾರು ಕಿಮೀ ದೂರ ಪ್ರಯಾಣಿಸಿದವು. ೨,೦೦೦ ಕಿಮೀ ದೂರದ ನ್ಯೂಝಿಲ್ಯಾಂಡಿನಲ್ಲಿಯೂ ಈ ಅಲೆಗಳು ಕಾಣಿಸಿದವು!

ಇವೆಲ್ಲ ಘಟನಾವಳಿಗಳು ಹುಂಗಾ-ಟೊಂಗಾ ಜ್ವಾಲಾಮುಖಿ ಮತ್ತೊಮ್ಮೆ ಜಾಗೃತವಾಗಿದೆ ಎಂಬುದರ ಪುರಾವೆ. ಅದರ ಶಿಲಾಪಾಕದ ಭಾರೀ ಒತ್ತಡವು ಮಹಾಸ್ಫೋಟದಿಂದ ಬಿಡುಗಡೆಯಾಗಿದೆ ಎಂಬುದಂತೂ ಖಂಡಿತ. ಇನ್ನು ಒಂದು ಸಾವಿರ ವರುಷ ಜ್ವಾಲಾಮುಖಿ ತಣ್ಣಗೆ ಕುದಿಯುತ್ತಿರಬಹುದು ಅಥವಾ ಮುಂದಿನ ಕೆಲವು ವಾರಗಳಲ್ಲಿ ಪುನಃ ಸ್ಫೋಟಿಸಬಹುದು.    

ಈ ಭೂಮಿಯಲ್ಲಿ ನಮಗ್ಯಾರೂ ಎದುರಿಲ್ಲ ಎಂಬ ಭ್ರಮೆಯಲ್ಲಿ ಆಟಾಟೋಪ ಮಾಡುತ್ತಿರುವ ಎಲ್ಲರಿಗೂ ಜ್ವಾಲಾಮುಖಿಯ ಮಹಾಸ್ಫೋಟದ ಮೂಲಕ ಭೂಮಿ ಮಗುದೊಮ್ಮೆ ನೀಡಿರುವ ಎಚ್ಚರಿಕೆ: "ಕ್ಷಣಮಾತ್ರದಲ್ಲಿ ನಿಮ್ಮೆಲ್ಲ ಆಟಾಟೋಪಗಳನ್ನು ಹೊಸಕಿ ಹಾಕಬಲ್ಲೆ.”

ಈ ಎಚ್ಚರಿಕೆ ಅರ್ಥವಾಗದ ಎಲ್ಲರೂ “ಯೂಟ್ಯೂಬಿ”ನಲ್ಲಿ ಲಭ್ಯವಿರುವ “ಡೌನ್ ಟು ಅರ್ತ್” ಸಂಸ್ಥೆಯ "ಹುಂಗಾ-ಟೊಂಗಾ" ಜ್ವಾಲಾಮುಖಿಯ ಮಹಾಸ್ಫೋಟದ ವಿಡಿಯೋವನ್ನು ಒಮ್ಮೆ ಕಣ್ಣು ಬಿಟ್ಟು ನೋಡಿ.

ಫೋಟೋ: ಹುಂಗ-ಟೊಂಗಾ-ಹುಂಗ-ಹಾಪೈ ಜ್ವಾಲಾಮುಖಿ - ಉಪಗ್ರಹ ತೆಗೆದ ಫೋಟೋ (ಮಹಾಸ್ಫೋಟದ ಮುಂಚೆ)
ಕೃಪೆ: ಹಿಂದುಸ್ತಾನ್ ಟೈಮ್ಸ್ ವಾರ್ತಾಪತ್ರಿಕೆ, ೧೮-೦೧-೨೦೨೨