ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 1)

ಬದುಕಬೇಕು, ಚೆನ್ನಾಗಿ ಬದುಕಬೇಕು ಎಂಬುದು ನಮ್ಮೆಲ್ಲರ ಬಯಕೆ. ಅದಕ್ಕಾಗಿ ದಿನಕ್ಕೆ ಮೂರು ಸಲವಾದರೂ ತಿನ್ನುತ್ತೇವೆ – ಹಣ್ಣು, ತರಕಾರಿ, ಧಾನ್ಯಗಳನ್ನು. ಒಂದು ಕ್ಷಣ ಯೋಚಿಸಿ: ನಾವು ತಿನ್ನುವ ಆಹಾರವೇ ವಿಷವಾದರೆ?
ನಾವು ತಿನ್ನುವ ಎಲ್ಲ ಆಹಾರವಸ್ತುಗಳಲ್ಲಿಯೂ ವಿಪರೀತ ವಿಷವಿದೆ! ಅಂದರೆ ಅಕ್ಕಿ, ಗೋಧಿ, ರಾಗಿ, ಜೋಳ ಏಕದಳ ಧಾನ್ಯಗಳು ಹಾಗೂ ದ್ವಿದಳಧಾನ್ಯಗಳು, ತರಕಾರಿಗಳು, ಹಣ್ಣುಗಳು, ಹಾಲು ಹಾಗೂ ಹಾಲಿನ ಉತ್ಪನ್ನಗಳು, ಮಾಂಸ, ಎಣ್ಣೆಗಳು, ಬೇಕರಿ ತಿಂಡಿಗಳು ಮತ್ತು ಸಂಸ್ಕರಿತ ತಿನಿಸುಗಳು -ಇವೆಲ್ಲವೂ ವಿಷಭರಿತವಾಗಿವೆ. ಇದನ್ನು ಹಲವಾರು ವೈಜ್ನಾನಿಕ ಅಧ್ಯಯನಗಳು ಖಚಿತಪಡಿಸಿವೆ. ಅದರಿಂದಾಗಿ ಕೋಟಿಗಟ್ಟಲೆ ಜನರು ಅನಾರೋಗ್ಯದಿಂದ ನರಳುತ್ತಿದ್ದಾರೆ ಹಾಗೂ ಕ್ಯಾನ್ಸರಿನಂತಹ ಭೀಕರ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ಅವು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ.
ನಮ್ಮ ಆಹಾರದಲ್ಲಿ ವಿಷ ಹೇಗೆ ಸೇರುತ್ತಿದೆ ಎಂದು ಕೇಳುತ್ತೀರಾ? ಕಲಬೆರಕೆಯಿಂದಾಗಿ ವಿಷ ಸೇರುತ್ತಿದೆ ಎಂಬುದು ನಿಜವಾದರೂ ಅದರ ಹೊರತಾಗಿ ನಮಗೆ ಗೊತ್ತಿಲ್ಲದಂತೆ ನಮ್ಮ ಆಹಾರದಲ್ಲಿ ವಿಷ ಸೇರಿಕೊಳ್ಳುತ್ತಿದೆ! ಐದು ದಶಕಗಳ ಮುಂಚೆ ಪ್ರಕಟವಾದ ಒಂದು ಪುಸ್ತಕದಲ್ಲಿ ಈ ಪ್ರಶ್ನೆಗೆ ಉತ್ತರವಿದೆ. ಆ ಜಗತ್ಪ್ರಸಿದ್ಧ ಪುಸ್ತಕದ ಹೆಸರು “ಸೈಲೆಂಟ್ ಸ್ಪ್ರಿಂಗ್” (ಕನ್ನಡದಲ್ಲಿ “ಮೌನ ವಸಂತ”). ಅದರ ಲೇಖಕಿ ರಷೇಲ್ ಕಾರ್ಸನ್.
೨೭ ಸಪ್ಟಂಬರ್ ೧೯೬೨ರಲ್ಲಿ ಪ್ರಕಟವಾದ ಆ ಪುಸ್ತಕ ರಾಸಾಯನಿಕ ಪೀಡೆನಾಶಕಗಳ (ಕೆಮಿಕಲ್ ಪೆಸ್ಟಿಸೈಡ್ಸ್) ಬಗ್ಗೆ ಜನರ ಪ್ರಜ್ನೆಯನ್ನೇ ಬಡಿದೆಬ್ಬಿಸಿತು. ಅದರಲ್ಲಿದ್ದ ಸತ್ಯಗಳು ಅಧಿಕಾರಸೂತ್ರ ಹಿಡಿದವರನ್ನು ಅಲುಗಾಡಿಸಿ, ಅದರಿಂದಾಗಿ ಅವರು ಆಗಿನ ಬಹುಬಳಕೆಯ ಆರ್ಗನೋಕ್ಲೋರಿನ್ ಪೀಡೆನಾಶಕ ಡಿಡಿಟಿಯ ಬಳಕೆಯನ್ನೇ ನಿಷೇಧಿಸಬೇಕಾಯಿತು. ಗಮನಿಸಿ: ಡಿಡಿಟಿಯನ್ನು ಮೊದಲನೇ ಮಹಾಯುದ್ಧದ ಮುಂಚೆ ಆವಿಷ್ಕರಿಸಿದ್ದು; ಅದಕ್ಕಾಗಿ ಸ್ವಿಸ್ ರಾಸಾಯನಿಕ ವಿಜ್ನಾನಿ ಪಾವುಲ್ ಮುಲ್ಲೆರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು. ಆಗಿನಕಾಲದಲ್ಲಿ, ಇತರ ಪೀಡೆನಾಶಕಗಳು ಒಂದು ಅಥವಾ ಎರಡು ವಿಧದ ಕೀಟಗಳನ್ನು ಕೊಲ್ಲುತ್ತಿದ್ದವು. ಆದರೆ ಡಿಡಿಟಿ ಒಂದೇಟಿಗೆ ಹಲವು ಜಾತಿಯ ಕೀಟಗಳನ್ನು ಕೊಂದು ಹಾಕುತ್ತಿತ್ತು. ಟೈಫಸ್ ರೋಗಕ್ಕೆ ಕಾರಣವಾದ ಹೇನುಗಳನ್ನು, ಮಲೇರಿಯಾಕ್ಕೆ ಕಾರಣವಾದ ಸೊಳ್ಳೆಗಳನ್ನು ಕೊಲ್ಲಲಿಕ್ಕಾಗಿ ಆಗ ಡಿಡಿಟಿಯ ಬಳಕೆ ವ್ಯಾಪಕ. ಎರಡನೇ ಮಹಾಯುದ್ಧದಲ್ಲಿ ಸಾವಿರಾರು ಅಮೆರಿಕನ್ ಸೈನಿಕರನ್ನು ಈ ರೋಗಗಳಿಂದ ಬಚಾವ್ ಮಾಡಲಿಕ್ಕಾಗಿ, ಅವರ ದೇಹಗಳ ಮೇಲೆಯೇ ಡಿಡಿಟಿ ಹುಡಿ ಚಿಮುಕಿಸಬೇಕೆಂದು ಅಮೆರಿಕನ್ ಸರಕಾರ ಆದೇಶಿಸಿತ್ತು. ವಿಮಾನಗಳ ಮೂಲಕ ಹಲವಾರು ನಗರಗಳ ಮೇಲೆ ಡಿಡಿಟಿ ಸಿಂಪಡಿಸಲಾಗಿತ್ತು. ಅಂತೂ ಡಿಡಿಟಿ ಒಂದು ಮ್ಯಾಜಿಕ್ ರಾಸಾಯನಿಕವೆಂದು ಹೆಸರಾಯಿತು.
ಅಮೆರಿಕದಲ್ಲಿ ಸಾರ್ವಜನಿಕ ಬಳಕೆಗೆ ಡಿಡಿಟಿ ಲಭ್ಯವಾದದ್ದು ೧೯೪೫ರಲ್ಲಿ. ರೈತರು ತಮ್ಮ ಹೊಲಗಳಲ್ಲಿ ಅದನ್ನು ಸಿಂಪಡಿಸಲು ಮುಗಿಬಿದ್ದರು. ಅಲ್ಲಿನ ಹೊಲಗಳ ವಿಸ್ತೀರ್ಣ ಸಾವಿರಾರು ಎಕ್ರೆಗಳಾದ್ದರಿಂದ ವಿಮಾನಗಳಿಂದಲೇ ಸಿಂಪಡಣೆ. ಆಗ ಹೊಲಗಳ ಪಕ್ಕ ಆಟವಾಡುತ್ತಿದ್ದ ಮಕ್ಕಳ ಮೇಲೂ ಡಿಡಿಟಿ ಸಿಂಪಡಣೆ ಆಗುತ್ತಿತ್ತು. ಆದರೆ ಯಾರೂ ಏನೂ ಪ್ರಶ್ನೆ ಕೇಳಲಿಲ್ಲ. ಇಡೀ ಜಗತ್ತಿನಲ್ಲಿ ಡಿಡಿಟಿ ಬಗ್ಗೆ ಪ್ರಶ್ನೆ ಕೇಳಿದ ಒಬ್ಬಳೇ ಒಬ್ಬ ವ್ಯಕ್ತಿ ರಷೇಲ್ ಕಾರ್ಸನ್.
ಇದಕ್ಕೆ ಕಾರಣವಿದೆ. ಆಕೆಯ ಸ್ನೇಹಿತೆ ಓಲ್ಗಾ ಒವೆನ್ಸ್ ಹಕಿನ್ಸಳಿಂದ ಬಂದ ಒಂದು ಪತ್ರ ರಷೇಲ್ ಕಾರ್ಸನಳನ್ನು ಚಿಂತೆಗೆ ತಳ್ಳಿತು. ಯಾಕೆಂದರೆ ಆ ಪತ್ರದಲ್ಲಿತ್ತು ಬೆಚ್ಚಿ ಬೀಳಿಸಿದ ಸುದ್ದಿ: ಅಲ್ಲಿನ ವನ್ಯಜೀವಿ ಅರಣ್ಯದಲ್ಲಿ ಡಿಡಿಟಿಯ ವೈಮಾನಿಕ ಸಿಂಪಡಣೆಯಿಂದಾಗಿ ನೂರಾರು ಹಕ್ಕಿಗಳು ಸತ್ತ ಸುದ್ದಿ. ಅಲ್ಲಿಂದ ಆರಂಭವಾಯಿತು ರಷೇಲ್ ಕಾರ್ಸನಳ ಆಳವಾದ ಅಧ್ಯಯನ. ಅದರ ಫಲವೇ “ಸೈಲೆಂಟ್ ಸ್ಪ್ರಿಂಗ್” ಎಂಬ ಕ್ರಾಂತಿಕಾರಕ ಪುಸ್ತಕ. ಹೊಲಗಳಿಂದ ಶುರುವಾಗಿ ನೀರಿನ ಆಸರೆಗಳು, ಅಲ್ಲಿನ ಪಾಚಿ, ಸಣ್ಣ ಮೀನುಗಳು, ದೊಡ್ಡ ಮೀನುಗಳು, ಸಣ್ಣ ಹಕ್ಕಿಗಳು, ದೊಡ್ಡ ಹಕ್ಕಿಗಳು – ಈ “ಆಹಾರ ಸರಪಳಿ”ಯಲ್ಲಿ ಹಂತದಿಂದ ಹಂತಕ್ಕೆ ಹೆಚ್ಚೆಚ್ಚು ಶೇಖರವಾಗುವ ಡಿಡಿಟಿ ಉಳಿಕೆ ಅಂತಿಮವಾಗಿ ಅಮೆರಿಕದ ರಾಷ್ಟ್ರಪಕ್ಷಿ “ರಾಜ ಗಿಡುಗ” ನಿರ್ವಂಶವಾಗಲು ಹೇಗೆ ಕಾರಣವಾಗುತ್ತಿದೆ ಎಂಬುದನ್ನು ರಷೇಲ್ ಕಾರ್ಸನ್ ಪುರಾವೆಗಳ ಸಹಿತ ಪುಸ್ತಕದಲ್ಲಿ ವಿವರಿಸಿದ್ದರು.
ಆ ಪುಸ್ತಕವೇನೋ ಜಗತ್ತಿನಲ್ಲೆಲ್ಲ ಸುದ್ದಿಯಾಯಿತು. ಆದರೆ, ಅದುವೇ ರಷೇಲ್ ಕಾರ್ಸನಳಿಗೆ ನಿರಂತರ ಕಿರುಕುಳ ಮತ್ತು ಅವಮಾನಕ್ಕೆ ಕಾರಣವಾಯಿತು. ಯಾಕೆಂದರೆ ಡಿಡಿಟಿ ಉತ್ಪಾದಕ ಕಂಪೆನಿಗಳ ಕಣ್ಣು ಕೆಂಪಾಗಿತ್ತು. ಅವಳ ಶಿಕ್ಷಣಾರ್ಹತೆಗಳನ್ನೇ ಪ್ರಶ್ನಿಸಲಾಯಿತು. ಮೊನ್ಸಾಂಟೋ ಎಂಬ ದೈತ್ಯ ಕಂಪೆನಿ, ಆ ಪುಸ್ತಕವನ್ನು ಲೇವಡಿ ಮಾಡುವ “ದ ಡಿಸೊಲೇಟ್ ಇಯರ್” ಎಂಬ ಇನ್ನೊಂದು ಪುಸ್ತಕದ ೫,೦೦೦ ಪ್ರತಿ ಮುದ್ರಿಸಿ ಹಂಚಿತು!
ಅಂತಿಮವಾಗಿ, ಅಮೆರಿಕದ ಆಗಿನ ಅಧ್ಯಕ್ಷ ಜಾನ್ ಎಫ್. ಕೆನೆಡಿ ಅವರು ಡಿಡಿಟಿ ಬಳಕೆ ನಿಯಂತ್ರಿಸಲಿಕ್ಕಾಗಿ ೧೯೬೩ರಲ್ಲಿ ಒಂದು ವಿಚಾರಣೆಯ ವ್ಯವಸ್ಥೆ ಮಾಡಿದರು. ಆಗ ರಷೇಲ್ ಕಾರ್ಸನ್ ಡಿಡಿಟಿಯ ಅಪಾಯಗಳ ಬಗ್ಗೆ ಎಲ್ಲ ದಾಖಲೆಗಳನ್ನು ಮಂಡಿಸಿದರು. ಕೊನೆಗೆ ೧೯೭೨ರಲ್ಲಿ ಅಮೆರಿಕದಲ್ಲಿ ಕೃಷಿಯಲ್ಲಿ ಡಿಡಿಟಿ ಬಳಕೆ ನಿಷೇಧಿಸಲಾಯಿತು (ಅದಾಗಲೇ ೧೯೬೪ರಲ್ಲಿ ರಷೇಲ್ ಕಾರ್ಸನ್ ನಿಧನರಾಗಿದ್ದರು.) ಮಾನವಕುಲಕ್ಕೆ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಆಕೆಗೆ “ಅಧ್ಯಕ್ಷರ ಸ್ವಾತಂತ್ರ್ಯ ಪದಕ”ವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು. ನಮ್ಮ ದೇಶದ “ವಿಷಮುಕ್ತ ಆಹಾರ ಆಂದೋಲನ”ದ ಬೆಳವಣಿಗೆಗಳೂ ಹೀಗೆಯೇ ಇವೆ.
೬೦ ವರುಷಗಳ ನಂತರ
ಈಗ, ಸುಮಾರು ೬೦ ವರುಷಗಳ ನಂತರ “ಸೈಲೆಂಟ್ ಸ್ಪ್ರಿಂಗ್”ನಲ್ಲಿ ರಷೇಲ್ ಕಾರ್ಸನ್ “ಮಾನವಕುಲಕ್ಕೆ ಮಾರಕ”ವೆಂದು ದಾಖಲಿಸಿದ್ದ ರಾಸಾಯನಿಕ ವಿಷಗಳ ಸಂಗತಿಗಳು ಬದಲಾಗಿವೆಯೇ? ಇಲ್ಲ.
ಯಾಕೆಂದರೆ, ವಿಷ ಯಾವತ್ತಿಗೂ ವಿಷವೇ. ವಿಷಕ್ಕೆ ವಿನಾಯ್ತಿ ಇಲ್ಲ. ಕೀಟಗಳನ್ನು ಕೊಲ್ಲುವ ವಿಷ ಮನುಷ್ಯರನ್ನೂ ಕೊಂದೇ ಕೊಲ್ಲುತ್ತದೆ.
ಅದಲ್ಲದೆ, ಕಳೆದ ೬೦ ವರುಷಗಳಲ್ಲಿ ವಿಷಗಳ ಘೋರ ಪರಿಣಾಮ ಹೆಚ್ಚಿಸುವ ಅನೇಕ ಬೆಳವಣಿಗೆಗಳಾಗಿವೆ. ಮೊದಲನೆಯದಾಗಿ, ಡಿಡಿಟಿಗಿಂತ ಹಲವು ಪಟ್ಟು ಭಯಂಕರ ವಿಷರಾಸಾಯನಿಕಗಳು ಕೃಷಿಯಲ್ಲಿ ಬಳಕೆಯಾಗುತ್ತಿವೆ. ಹಾಗೂ, ರೈತರು ವಿವಿಧ ವಿಷಗಳನ್ನು ಬೆರೆಸಿ ಸಿಂಪಡಿಸುವ ಮೂಲಕ ಮಾರಕ ಪರಿಣಾಮಗಳನ್ನು ಹೆಚ್ಚಿಸಿದ್ದಾರೆ.
ಇದು ಸಾಲದೆಂಬಂತೆ, ಹಲವಾರು ಕೀಟಗಳು ರಾಸಾಯನಿಕ ಪೀಡೆನಾಶಕಗಳಿಗೆ ಸಡ್ಡು ಹೊಡೆದಿವೆ. ಅಂದರೆ, ಅವುಗಳ ವಿರುದ್ಧ ಕೀಟಗಳು ಪ್ರತಿರೋಧ ಶಕ್ತಿ ಬೆಳೆಸಿಕೊಂಡಿವೆ. ಹಾಗಾಗಿ ರೈತರು ವಿವೇಚನಾರಹಿತವಾಗಿ ವಿಷಬಳಕೆ ಮಾಡುತ್ತಿದ್ದಾರೆ. ಅಂದರೆ, ಮತ್ತಷ್ಟು ತೀವ್ರ ವಿಷಕಾರಿ ಪೀಡೆನಾಶಕಗಳ ಸಿಂಪಡಣೆ; ಹೆಚ್ಚು ಬಾರಿ ಸಿಂಪಡಣೆ; ಹೆಚ್ಚು ಪರಿಮಾಣದಲ್ಲಿ ಸಿಂಪಡಣೆ – ಈ ವಿಷವರ್ತುಲದಲ್ಲಿ ರೈತರು ಸಿಲುಕಿದ್ದಾರೆ. ಉದಾಹರಣೆಗೆ, ಪಂಜಾಬಿನಲ್ಲಿ ರೈತರು ಸಿಂಪಡಿಸುವ ವಿಷದ ಪರಿಮಾಣ ಪ್ರತಿಯೊಂದು ಬೆಳೆಗೆ ಎಕ್ರೆಗೆ ಕನಿಷ್ಠ ಒಂದು ಲೀಟರ್!  (ಭಾಗ ೨ರಲ್ಲಿ ಮುಂದುವರಿದಿದೆ.)
(ದಕ್ಷಿಣ ಕನ್ನಡ ಜಿಲ್ಲೆಯ ಕಾಂತಾವರದ “ಅಲ್ಲಮಪ್ರಭು ಪೀಠ”ದ ಆಶ್ರಯದಲ್ಲಿ ನೀಡಿದ ಈ ಉಪನ್ಯಾಸ. ಅಲ್ಲಮಪ್ರಭು ಪೀಠದ ೨೦೨೦ರ ಪ್ರಕಟಣೆ “ಕರಣ ಕಾರಣ - ೭”ರಲ್ಲಿ ಪ್ರಕಟವಾಗಿದೆ.)

ಫೋಟೋ: ಎಂಡೋಸಲ್ಫಾನ್ ವಿಷಪೀಡಿತ ಮಗು; ಫೋಟೋ ಕೃಪೆ: ಎಂಡೋಸಲ್ಫಾನ್ ಡಾಟ್ ಇನ್