ಇವತ್ತು ವಿಶ್ವ ಪರಿಸರ ದಿನ. ಇದನ್ನು ವಿವಿಧ ರೀತಿಗಳಲ್ಲಿ ಆಚರಿಸುವವರು ಹಲವರು. ಅನೇಕ ಪತ್ರಿಕೆಗಳು ಪರಿಸರ ಉಳಿಸಬೇಕಾದ ಅಗತ್ಯದ ಬಗ್ಗೆ ಲೇಖನಗಳನ್ನು ಪ್ರಕಟಿಸಿವೆ. ಟಿವಿ ಚಾನೆಲುಗಳಲ್ಲಿ ಪರಿಸರದ ಪ್ರಾಮುಖ್ಯತೆಯ ಬಗ್ಗೆ, ಹಲವಾರು ವ್ಯಕ್ತಿಗಳು ಹಾಗೂ ಸಂಸ್ಥೆಗಳು ಜರಗಿಸಿದ ಕಾರ್ಯಕ್ರಮಗಳ ಬಗ್ಗೆ ಇವತ್ತು ಸುದ್ದಿಯೋ ಸುದ್ದಿ.
ಪರಿಸರದ ಸಮತೋಲನ ತಪ್ಪುತ್ತಿದೆ ಎಂಬುದಕ್ಕೆ ನಮಗೆ ಆಗಾಗ ಪುರಾವೆಗಳು ಸಿಗುತ್ತಿವೆ. ಇತ್ತೀಚೆಗೆ, ವಿಸ್ತೀರ್ಣದಲ್ಲಿ ಢೆಲ್ಲಿಗಿಂತ ದೊಡ್ಡದಾದ ಹಿಮದ ಬೃಹತ್ ರಾಶಿ ಉತ್ತರಧ್ರುವದ ಹಿಮರಾಶಿಯಿಂದ ಕಳಚಿಕೊಂಡಿದೆ. ಅದು ದಕ್ಷಿಣಕ್ಕೆ ಸಾಗಿ ಬರುತ್ತಲೇ ಕರಗುತ್ತಿದೆ. ಇದರಿಂದಾಗಿ ಭೂಮಿಯ ಸಾಗರಗಳ ಜಲಮಟ್ಟ ಕಿಂಚಿತ್ತಾದರೂ ಏರುತ್ತದೆ. ಇದು ಕಳೆದ ೫,೦೦೦ ವರುಷಗಳಲ್ಲಿ ಕಂಡುಕೇಳರಿಯದ ವಿದ್ಯಮಾನ.
ಎರಡನೆಯದಾಗಿ, ಪ್ರತಿ ವರುಷವೂ ಹಲವಾರು ಚಂಡಮಾರುತಗಳು ಸಾಗರಗಳಲ್ಲಿ ಹುಟ್ಟಿಕೊಂಡು, ಗಂಟೆಗೆ ೧೫೦ರಿಂದ ೨೦೦ ಕಿಮೀ ವೇಗದಲ್ಲಿ ಭೂಪ್ರದೇಶಕ್ಕೆ ಅಪ್ಪಳಿಸಿ, ಅಪಾರ ಜೀವಹಾನಿ ಮತ್ತು ಸೊತ್ತು ಹಾನಿಗೆ ಕಾರಣವಾಗುತ್ತಿವೆ. ಮೇ ೨೦೨೧ರ ಮೂರನೇ ವಾರದಲ್ಲಿ ಅರಬಿ ಸಮುದ್ರದಿಂದ ನುಗ್ಗಿ ಬಂದ ತೌಕ್ತೆ ಚಂಡಮಾರುತ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತಿನ ಕರಾವಳಿ ಜಿಲ್ಲೆಗಳಲ್ಲಿ ದಾಂಧಲೆ ಮಾಡಿ, ಸಾವಿರಾರು ಕೋಟಿ ರೂಪಾಯಿಗಳ ಸೊತ್ತು ನಾಶವಾಯಿತು. ಆಗ ಸಮುದ್ರದಲ್ಲಿ ಏಳುತ್ತಿದ್ದ ದೈತ್ಯ ಅಲೆಗಳನ್ನು ಕಂಡವರು ಅವು ೨೦೦೭ರ ಭೀಕರ ಸುನಾಮಿಯನ್ನು ನೆನಪಿಸಿದವು ಎಂದರು. ಅದಾಗಿ ಒಂದೇ ವಾರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಹುಟ್ಟಿದ ಯಾಸ್ ಚಂಡಮಾರುತ ೨೬ ಮೇ ೨೦೨೧ರಂದು ಒರಿಸ್ಸಾದ ಕರಾವಳಿಗೆ ಬಡಿಯಿತು. ಅನಂತರ ಅದು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿ, ಪ್ರಚಂಡ ವಿನಾಶಕ್ಕೆ ಕಾರಣವಾಯಿತು.
ಅಂತೂ ಪ್ರತಿಯೊಬ್ಬರೂ ವೈಯುಕ್ತಿಕ ನೆಲೆಯಲ್ಲಿ ಪರಿಸರದ ಉಳಿವಿಗಾಗಿ ಕೆಲಸ ಮಾಡದಿದ್ದರೆ ಮಾನವ ಜನಾಂಗಕ್ಕೆ ಭೂಮಿಯಲ್ಲಿ ಉಳಿಗಾಲವಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ. ಜೊತೆಗೆ, ಜೀವವೈವಿಧ್ಯವನ್ನು ರಕ್ಷಿಸುವುದು ಹಿಂದೆಂದಿಗಿಂತಲೂ ಇಂದು ಮುಖ್ಯವಾಗಿದೆ. ಗಮನಿಸಿ: ಕೊರೋನಾ ವೈರಸ್ (ಕೋವಿಡ್ ೧೯) ಜಗತ್ತಿನಲ್ಲಿ ಈಗಾಗಲೇ ೩೭ ಲಕ್ಷಕ್ಕಿಂತ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ ಹಾಗೂ ೧೭.೩೪ ಕೋಟಿ ಜನರಿಗೆ ಇದರ ಸೋಂಕು ತಗಲಿದೆ. ಇಂತಹ ಭಯಾನಕ ವೈರಸಿಗೆ ಆಂಧ್ರಪ್ರದೇಶದ ಆನಂದಯ್ಯ ಕೊಡುತ್ತಿರುವ ನಾಟಿ ಔಷಧಿ ಪರಿಣಾಮಕಾರಿಯಾಗಿದೆ; ಸಾವಿರಾರು ಜನರು ಸೋಂಕಿನಿಂದ ಗುಣಮುಖರಾಗಿದ್ದು, ರಾಜ್ಯ ಸರಕಾರವೇ ಈ ಚಿಕಿತ್ಸೆ ನೀಡಲು ಅನುಮತಿ ನೀಡಿದೆ. ಅವರು ತನ್ನ ಔಷಧಿ ತಯಾರಿಗೆ ಬಳಸುತ್ತಿರುವ ಗಿಡಮೂಲಿಕೆಗಳು, ಸಸ್ಯಗಳು ಇತ್ಯಾದಿ ಪ್ರಕೃತಿಜನ್ಯ ವಸ್ತುಗಳನ್ನು ಜಗಜ್ಜಾಹೀರು ಮಾಡಿದ್ದಾರೆ. ಅದರಲ್ಲಿ ಬಿಳಿಎಕ್ಕ ಮತ್ತು ಕರಿಜೀರಿಗೆ ಇವೂ ಸೇರಿವೆ. ಒಂದು ಕ್ಷಣ ಯೋಚಿಸಿ: ಮನುಷ್ಯರ ಅಸಡ್ಡೆ ಮತ್ತು ದುರಾಸೆಯಿಂದಾಗಿ ಆ ಔಷಧಿಯ ಅಂಶಗಳು ಪ್ರಕೃತಿಯಲ್ಲಿ ನಿರ್ನಾಮವಾಗಿದ್ದರೆ ….. ಆದ್ದರಿಂದ ಜೀವವೈವಿಧ್ಯವನ್ನು ಉಳಿಸಲೇ ಬೇಕು.
ಇದೆಲ್ಲ ಸರಿ, ನಾನೇನು ಮಾಡಬಹುದು ಎಂದು ಕೇಳುತ್ತೀರಾ? ಪರಿಸರ ಮತ್ತು ಜೀವವೈವಿಧ್ಯ ಉಳಿಸಲು ದಾರಿಗಳು ನೂರಾರು. ನೀವು ಮಾಡಬಹುದಾದ ಒಂದು ಕೆಲಸ ಹೀಗಿದೆ: ಈ ಲೇಖನದೊಂದಿಗೆ ನಾಲ್ಕು ಪುಸ್ತಕಗಳ ಮುಖಪುಟಗಳ ಫೋಟೋ ಪ್ರಕಟಿಸಿದ್ದೇನೆ:
೧)ಮನೆಯಂಗಳದಲ್ಲಿ ಔಷಧಿ ವನ
ಲೇಖಕಿಯರು: ಡಾ. ಎಂ. ವಸುಂಧರ ಮತ್ತು ಡಾ. ವಸುಂಧರಾ ಭೂಪತಿ
ಪ್ರಕಾಶಕರು: ನವಕರ್ನಾಟಕ ಪ್ರಬ್ಲಿಕೇಷನ್ಸ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು - ೫೬೦೦೦೧
ಪುಟ: ೧೬೦ + ೪೦ (ಬಣ್ಣದ ಪುಟ); ೯ನೇ ಮುದ್ರಣ: ೨೦೧೭; ಬೆಲೆ: ರೂ.೨೦೦
ಇದು ೩೬ ಔಷಧೀಯ ಸಸ್ಯಗಳನ್ನು ಪರಿಚಯಿಸುತ್ತದೆ. ಅವುಗಳನ್ನು ಬೆಳೆಸುವ ಕ್ರಮ ಹಾಗೂ ಅವುಗಳ ಉಪಯೋಗ ಸಹಿತ ಉಪಯುಕ್ತ ಮಾಹಿತಿ ಇರುವುದರಿಂದಲೇ ಈ ಪುಸ್ತಕ ಜನಪ್ರಿಯವಾಗಿದೆ.
೨)ನಿಸರ್ಗದತ್ತ ಆಹಾರ
ಲೇಖಕಿ: ಸುಕನ್ಯಾ ಕೆ. ಎಸ್.
ಪ್ರಕಾಶಕರು: ಶ್ರೀನಿವಾಸ ಕೆದಿಲ, ಉಬರಡ್ಕ ಮಿತ್ತೂರು (ಗ್ರಾಮ ಮತ್ತು ಅಂಚೆ), ಸುಳ್ಯ, ದಕ್ಷಿಣ ಕನ್ನಡ ೫೭೪೨೪೮
ಪುಟ: ೭೨ + ೧೬ (ಬಣ್ಣದ ಪುಟ); ಮೊದಲ ಮುದ್ರಣ: ೨೦೧೯; ಬೆಲೆ: ರೂ.೧೮೦
ಇದು ಆಹಾರಕ್ಕೆ ಬಳಸಬಹುದಾದ ೧೫೭ ಸಸ್ಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತದೆ.
೩)ಔಷಧೀಯ ವೃಕ್ಷ ಸಂಪದ (ಸಂಪುಟ ೧)
ಲೇಖಕ: ಡಾ. ಸತ್ಯನಾರಾಯಣ ಭಟ್, ಪಿ.
ಪ್ರಕಾಶಕರು: ಪುಸ್ತಕ ನಿಧಿ, ಗಾವಳಿ ಶಾಲೆ ಹತ್ತಿರ, ಅಂಚೆ: ಹಳ್ಳಾಡಿ - ಹರ್ಕಾಡಿ, ಕುಂದಾಪುರ ೫೭೬೨೧೦
ಪುಟ: ೧೯೨ + ೮ (ಬಣ್ಣದ ಪುಟ); ಮೊದಲ ಮುದ್ರಣ: ೨೦೦೫; ಬೆಲೆ: ರೂ.೯೦
ಇದು ೫೦ ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ನೀಡುತ್ತದೆ.
೪)ಸಸ್ಯ ಸಿರಿ
ಪ್ರಕಾಶಕರು: ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಸಂಸ್ಥೆ (INCERT)
ನಂಬ್ರ ೧೦, ಸಿರೂರು ಪಾರ್ಕ್, “ಬಿ" ಸ್ಟ್ರೀಟ್, ಶೇಷಾದ್ರಿಪುರಂ, ಬೆಂಗಳೂರು ೫೬೦೦೨೦
ಪುಟ:೫೨; ಮೊದಲ ಮುದ್ರಣ: ೧೯೯೫; ಬೆಲೆ: ರೂ.೩೮.೫೦
ಇದು ೫೫ ಬಹೂಪಯೋಗಿ ಸಸ್ಯಗಳನ್ನು ಪರಿಚಯಿಸುತ್ತದೆ.
ಇವಲ್ಲದೆ, ಕನ್ನಡದಲ್ಲಿ ಸಸ್ಯಗಳ ಬಗ್ಗೆ ಇನ್ನೂ ಹತ್ತಾರು ಪುಸ್ತಕಗಳಿವೆ. ಇಂಗ್ಲಿಷಿನಲ್ಲಿ ನೂರಾರು ಪುಸ್ತಕಗಳಿವೆ. ಇಂತಹ ಯಾವುದಾದರೊಂದು ಪುಸ್ತಕವನ್ನು ಖರೀದಿಸಿ. ಅದನ್ನು ಓದಿ, ನಿಮ್ಮ ತೋಟ, ಕೈತೋಟ, ಟೆರೇಸ್ ಅಥವಾ ಮನೆಯ ಹತ್ತಿರದ ಜಾಗದಲ್ಲಿ ಬೆಳೆಸಬಹುದಾದ ಕನಿಷ್ಠ ಐದು ಬೇರೆಬೇರೆ ಸಸ್ಯಗಳನ್ನು ಗುರುತಿಸಿ. ಉದಾಹರಣೆಗೆ, ತುಳಸಿ, ದೊಡ್ಡಪತ್ರೆ, ಕಿರಾತಕಡ್ಡಿ, ಲೋಳೆಸರ, ಕರಿಮೆಣಸು, ಒಂದೆಲಗ, ನೆಲನೆಲ್ಲಿ, ನೆಲಬಸಳೆ, ನೆಲಹರಿವೆ, ಬಸಳೆ, ಕುದನೆ, ಅಮೃತಬಳ್ಳಿ. ಇವೆಲ್ಲದರ ಸಸಿಗಳು ನಿಮ್ಮ ಮನೆಯ ಅಕ್ಕಪಕ್ಕದಲ್ಲೇ ನಿಮಗೆ ಸಿಗಬಹುದು. ಇವನ್ನು ಬೆಳೆಸುವುದಂತೂ ಬಹಳ ಸುಲಭ.
ನಿಮಗೆ ಬೇಕಾದ ಸಸಿಗಳನ್ನು ತಂದು ನಿಮ್ಮ ಜಾಗದಲ್ಲಿ ಬೆಳೆಸಿ. ಸುಮಾರು ಆರು ತಿಂಗಳು ನೀವು ಮುತುವರ್ಜಿ ವಹಿಸಿದರೆ, ನೀವು ನೆಟ್ಟ ಸಸಿಗಳು ಬೇರು ಬಿಟ್ಟು, ನಿಮಗೇ ಅಚ್ಚರಿಯಾಗುವಂತೆ ಬೆಳೆಯುತ್ತವೆ. ಅವುಗಳ ಎಲೆ, ಕಾಂಡ ಹಾಗೂ ಫಲಗಳನ್ನು ನಿಮಗೆ ಬೇಕಾದಾಗೆಲ್ಲ ನೀವು ಬಳಸಬಹುದು. ಆಸಕ್ತರಿಗೆ ನೀವೇ ಇವುಗಳ ಸಸಿಗಳನ್ನು, ತುಂಡುಗಳನ್ನು ವಂಶಾಭಿವೃದ್ಧಿಗಾಗಿ ಹಂಚಬಹುದು. ಇಲ್ಲಿ ಹೆಸರಿಸಿದ ಎಲ್ಲ ಔಷಧೀಯ ಸಸ್ಯಗಳನ್ನು ನನ್ನ ಕೈತೋಟದಲ್ಲಿ ಬೆಳೆಸಿದ ಅನುಭವದ ಬಲದಿಂದ ಇದನ್ನೆಲ್ಲ ಬರೆದಿದ್ದೇನೆ.
ಪರಿಸರವನ್ನು ಉಳಿಸಲು ನೀವು ಇಷ್ಟಾದರೂ ಮಾಡಬಹುದು, ಅಲ್ಲವೇ? ನೀವು ಪರಿಸರದ ಬಗ್ಗೆ, ಗಿಡಮರಬಳ್ಳಿಗಳ ಬಗ್ಗೆ ಆಸಕ್ತಿ ವಹಿಸಿದರೆ, ಖಂಡಿತವಾಗಿ ನಿಮ್ಮ ಮಕ್ಕಳೂ ಅದನ್ನೇ ಅನುಸರಿಸುತ್ತಾರೆ. ಪ್ರತಿ ವರುಷವೂ, ನಿಮ್ಮ ಮತ್ತು ಮಕ್ಕಳ ಹುಟ್ಟುಹಬ್ಬದ ದಿನ ಒಂದಾದರೂ ಗಿಡ ನೆಟ್ಟು, ಅದನ್ನು ಪ್ರೀತಿಯಿಂದ ಬೆಳೆಸುವುದಂತೂ ನೀವು ಪರಿಸರದ ಉಳಿವಿಗಾಗಿ ಮಾಡಬಹುದಾದ ಅತ್ಯುತ್ತಮ ಮತ್ತು ಅತಿ ಸುಲಭವಾದ ಕಾಯಕ, ಅಲ್ಲವೇ?