ವಿಕಿರಣ ಪರಿಣಾಮಕ್ಕೆ ತುಳಸಿ ಚಿಕಿತ್ಸೆ

ಶೀತ ಮತ್ತು ಕಫದ ಚಿಕಿತ್ಸೆಗೆ ಪರಿಣಾಮಕಾರಿಯಾದ ತುಳಸಿ, ಅಪಾಯಕಾರಿ ವಿಕಿರಣದ ಪರಿಣಾಮ ಶಮನಗೊಳಿಸುತ್ತದೆ ಎಂದು ಇತ್ತೀಚೆಗಗಿನ ಸಂಶೊಧನೆ ತೋರಿಸಿಕೊಟ್ಟಿದೆ.

ಡಿಆರ್-ಡಿಒ(ಡಿಫೆನ್ಸ್ ರೀಸರ್ಚ್ ಆಂಡ್ ಡೆವಲಪ್‍ಮೆಂಟ್ ಆರ್ಗನೈಸೇಷನ್)ದ ವಿಜ್ನಾನಿಗಳು ವಿಕಿರಣದ ಪರಿಣಾಮಗಳ ಚಿಕಿತ್ಸೆಗೆ ತುಳಸಿಯ ಔಷಧಿ ಸಿದ್ಧಪಡಿಸಿದ್ದಾರೆ. ವಿಜ್ನಾನಿಗಳ ಪ್ರಕಾರ, ತುಳಸಿಯ ಆಂಟಿ-ಆಕ್ಸಿಡೆಂಟ್ ಅಂಶವು ವಿಕಿರಣದಿಂದ ಹಾನಿಯಾದ ಜೀವಕೋಶಗಳನ್ನು ರಿಪೇರಿ ಮಾಡಬಲ್ಲುದು.

"ಈ ಬಗ್ಗೆ ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳ ಫಲಿತಾಂಶಗಳು ಪ್ರೋತ್ಸಾಹದಾಯಕ" ಎನ್ನುತ್ತಾರೆ ಡಿಆರ್-ಡಿಒದ ಚೀಫ್ ಕಂಟ್ರೋಲರ್ ಡಬ್ಲ್ಯು. ಸೆಲ್ವಮೂರ್ತಿ. ಪ್ರಾಣಿಗಳಿಗೆ ಬಳಸಿದ ಔಷಧಿಯನ್ನೇ ಮನುಷ್ಯರಿಗೂ ಬಳಸಬಹುದು.

ಈ ರೀತಿಯ ಚಿಕಿತ್ಸೆಗೆ ತುಳಸಿಯನ್ನು ಬಳಸಿದ್ದು ಇದೇ ಮೊದಲ ಬಾರಿ ಎಂದವರು ತಿಳಿಸಿದ್ದಾರೆ. ವಿಕಿರಣ ಸಂಬಂಧಿ ರೋಗಗಳ ಚಿಕಿತ್ಸೆಗೆ ಉಪಯೋಗಿಸುವ ರಾಸಾಯನಿಕಗಳು ಬಹಳ ವಿಷಕಾರಿ. ಈ ಸಸ್ಯಾಧಾರಿತ ಔಷಧಿಯು ವಿಕಿರಣ ಚಿಕಿತ್ಸೆಯ ವಿಧಾನವನ್ನೇ ಬದಲಾಯಿಸುತ್ತದೆ. ಯಾಕೆಂದರೆ, ಇವು ಸುರಕ್ಷಿತ ಎನ್ನುತ್ತಾರೆ ಸೆಲ್ವಮೂರ್ತಿ. ಈ ಸಂಶೊಧನೆಗೆ ತಗಲಿದ ವೆಚ್ಚ ರೂ.೭ ಕೋಟಿ

ಅಲ್ಲಿನ ವಿಜ್ನಾನಿಗಳು ಇನ್ನೂ ಅನೇಕ ಗಿಡಮೂಲಿಕಾ ಔಷಧಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಸೈನಿಕರಿಗಾಗಿ ೧೫ ಮೂಲಿಕೆಗಳ ಸಾರದುಂಬಿದ ವಿಶೇಷ ಮೂಲಿಕಾ ಪಾನೀಯ ಸಿದ್ಧಪಡಿಸಿದ್ದಾರೆ. ಭಾರತದ ಉತ್ತರದ ಗಡಿಯಲ್ಲಿರುವ ಸೈನಿಕರು ಅಲ್ಲಿನ ವಿಪರೀತ ಹವೆಗೆ ಬೇಗನೇ ಹೊಂದಿಕೊಳ್ಳಲು ಈ ಪಾನೀಯದಿಂದ ಸಹಾಯ.ಹಿಮಕಡಿತದಿಂದ ಸೈನಿಕರನ್ನು ರಕ್ಷಿಸಲು ಲೋಳೆಸರದಿಂದ ಅಲೊಕಾಲ್ ಎಂಬ ಕ್ರೀಂ ತಯಾರಿಸಿದೆ ಡಿಆರ್‍ಡಿಒ. ಇದನ್ನು ೫ ಲಕ್ಷ ಪೀಪಾಯಿಗಳಲ್ಲಿ ನಮ್ಮ ದೇಶದ ರಕ್ಷಣಾ ಪಡೆಗಳಿಗೆ ಒದಗಿಸಲಾಗಿದೆ.

ಈ ರೀತಿಯಲ್ಲಿ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ನಮ್ಮ ಪಾರಂಪರಿಕ ಜ್ನಾನ ಆಧಾರಿತ ಚಿಕಿತ್ಸಾ ವಿಧಾನಗಳು ಬಹಳ ಪರಿಣಾಮಕಾರಿ ಎಂಬುದನ್ನು ತೋರಿಸಿಕೊಟ್ಟಿದೆ ಡಿಆರ್-ಡಿಒ.