ಚಿಟ್ಟೆಗಳು ಎಷ್ಟು ವೇಗವಾಗಿ ತಮ್ಮ ರೆಕ್ಕೆಗಳ ಬಣ್ಣ ಬದಲಾಯಿಸಬಲ್ಲವು? ಕೇವಲ ಒಂದೇ ವರುಷದೊಳಗೆ ಎನ್ನುತ್ತದೆ ಇತ್ತೀಚೆಗಿನ ಒಂದು ಅಧ್ಯಯನ. ಆಫ್ರಿಕಾದ ಕಂದುಬಣ್ಣದ ಒಂದು ಪ್ರಭೇದದ ಚಿಟ್ಟೆಗಳನ್ನು ಪ್ರಯೋಗಾಲಯದಲ್ಲಿ ಬೆಳೆಸಿದ ವಿಜ್ನಾನಿಗಳ ತಂಡ ಅವು ಕೇವಲ ಆರು ತಲೆಮಾರುಗಳಲ್ಲಿ (ಅಂದರೆ ಒಂದು ವರುಷದ ಅವಧಿಯಲ್ಲಿ) ರೆಕ್ಕೆಗಳ ಬಣ್ಣ ಬದಲಾಯಿಸಿದ್ದನ್ನು ದಾಖಲಿಸಿದೆ.
ಚಿಟ್ಟೆಗಳು ಪರಿಸರದ ಬದಲಾವಣೆಗಳಿಗೆ ಸ್ಪಂದಿಸುತ್ತವೆ ಮತ್ತು ತಮಗೆ ಅನುಕೂಲವೆನಿಸಿದರೆ ರೆಕ್ಕೆಗಳ ಬಣ್ಣ ಬದಲಾಯಿಸುತ್ತವೆ ಎಂಬುದು ವಿಜ್ನಾನಿಗಳಿಗೆ ಗೊತ್ತಿದೆ. ಆದರೆ ಅವು ಹೇಗೆ ಬಣ್ಣ ಬದಲಾಯಿಸುತ್ತವೆ ಎಂಬುದು ಇಲ್ಲಿಯ ವರೆಗೆ ತಿಳಿದಿರಲಿಲ್ಲ.
ಈ ಅಧ್ಯಯನ ತಂಡದ ಸದಸ್ಯರೂ, ಯೇಲ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪರಿಣತೆಯೂ ಆಗಿರುವ ಎಚ್. ಕಾವೊ “ಕೇವಲ ಒಂದು ವರುಷದಲ್ಲಿ ಚಿಟ್ಟೆಗಳ ರೆಕ್ಕೆಗಳ ಬಣ್ಣ ಕಂದು ಇದ್ದದ್ದು ನೇರಳೆಯಾಗಿ ಬದಲಾಯಿತು. ಇಷ್ಟು ವೇಗವಾಗಿ ಅವು ಬಣ್ಣ ಬದಲಾಯಿಸಬಲ್ಲವು ಎಂಬುದನ್ನು ನಂಬಲಾಗದು” ಎನ್ನುತ್ತಾರೆ.
ಬೈಸಿಕ್ಲಸ್ ಅನಿನಾನಾ ಎಂಬ ಪ್ರಾಣಿಶಾಸ್ತ್ರೀಯ ಹೆಸರಿನ ಚಿಟ್ಟೆಗಳ ಬಗ್ಗೆ ವಿಜ್ನಾನಿಗಳ ತಂಡ ಪ್ರಯೋಗ ನಡೆಸಿತ್ತು. ಈ ಚಿಟ್ಟೆಗಳ ಜೀವಿತಾವಧಿ ಸುಮಾರು ಎರಡು ತಿಂಗಳು. ನೇರಳೆ ಬಣ್ಣದ ಬೆಳಕನ್ನು ಚೆನ್ನಾಗಿ ಪ್ರತಿಫಲಿಸುವ ಆ ಪ್ರಭೇದದ ಕೆಲವು ಚಿಟ್ಟೆಗಳನ್ನು ಸೂಕ್ಷ್ಮದರ್ಶಕದ ಮೂಲಕ ಈ ಸಂಶೋಧಕರು ಗುರುತಿಸಿದರು.
ಅನಂತರ, ಈ ಚಿಟ್ಟೆಗಳನ್ನು ಪ್ರಯೋಗಾಲಯದಲ್ಲಿ ಮತ್ತೆಮತ್ತೆ ಜೋಡಿ ಮಾಡಿದರು. ಒಂದು ವರುಷವಾಗುತ್ತಿದ್ದಂತೆ, ಆರನೇ ತಲೆಮಾರಿನಲ್ಲಿ ಹುಟ್ಟಿದ ಚಿಟ್ಟೆಗಳ ರೆಕ್ಕೆಗಳ ಬಣ್ಣ ನೇರಳೆಯಾಗಿ ಬದಲಾಯಿತು. ಈ ಅಧ್ಯಯನದ ವಿವರಗಳು “ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್” ಎಂಬ ವಿಜ್ನಾನ ನಿಯತಕಾಲಿಕದ ಲೇಖನದಲ್ಲಿವೆ.
ಈ ಸಂಶೋಧಕರು ಚಿಟ್ಟೆಗಳ ಬದಲಾದ ಬಣ್ಣದ ರೆಕ್ಕೆಗಳನ್ನು ಸೂಕ್ಷ್ಮದರ್ಶಕದಲ್ಲಿ ಪರಿಶೀಲಿಸಿದಾಗ ಅವರಿಗೆ ಅಚ್ಚರಿ ಕಾದಿತ್ತು. ಆ ರೆಕ್ಕೆಗಳ ಹೊಟ್ಟುಗಳ ದಪ್ಪ ಬದಲಾಗಿತ್ತು – ನೇರಳೆ ಬಣ್ಣದ ಬೆಳಕನ್ನು ಪ್ರತಿಫಲಿಸಲು ಅಗತ್ಯವಾದಷ್ಟು ಪ್ರಮಾಣದಲ್ಲಿ. ಅಂದರೆ, ಈಗ ರೆಕ್ಕೆಗಳ ಹೊಟ್ಟು ನೇರಳೆ ಬಣ್ಣ ಪ್ರತಿಫಲಿಸಲು ಅತ್ಯಂತ ಸಮರ್ಥವಾಗಿತ್ತು.
ಪ್ರಯೋಗಾಲಯದಲ್ಲಿ ತಾವು ಬೆಳೆಸಿದ ಚಿಟ್ಟೆಗಳನ್ನು ಅದೇ ವರ್ಗದ ಇನ್ನೆರಡು ಪ್ರಭೇದದ ಚಿಟ್ಟೆಗಳೊಂದಿಗೆ (ಪ್ರಾಕೃತಿಕವಾಗಿ ನೇರಳೆ ಬಣದ ರೆಕ್ಕೆಗಳನ್ನು ಹೊಂದಿದ್ದ) ಸಂಶೋಧಕರು ಹೋಲಿಸಿದರು. ಅವುಗಳೂ ತಮ್ಮ ರೆಕ್ಕೆಗಳ ರಚನೆ ಬದಲಾಯಿಸಿದ್ದನ್ನು ಗಮನಿಸಿದರು. ಅಂದರೆ, ಈಗ ಈ ಮೂರೂ ಪ್ರಭೇದಗಳ ಚಿಟ್ಟೆಗಳ ರೆಕ್ಕೆಗಳ ಹೊಟ್ಟುಗಳ ದಪ್ಪ ಒಂದೇ ಆಗಿತ್ತು.
ಒಂದು ಪ್ರಾಣಿ ತನ್ನ ಮೈಬಣ್ಣ ಬದಲಾಯಿಸ ಬೇಕಾದರೆ, ಅದಕ್ಕೆ ಎರಡು ವಿಧಾನಗಳಿವೆ: ಮೈಬಣ್ಣದ ಮೂಲಧಾತು ಬದಲಾಯಿಸುವುದು (ಇದಕ್ಕೆ ದೇಹದಲ್ಲಿ ಪ್ರಧಾನ ಮಾರ್ಪಾಡುಗಳು ಅಗತ್ಯ) ಒಂದು ವಿಧಾನ. ಇನ್ನೊಂದು ವಿಧಾನ, ಬೆಳಕನ್ನು ಪ್ರತಿಫಲಿಸುವ ರೆಕ್ಕೆ ಅಥವಾ ಇತರ ಅಂಗದ ರಚನೆಯನ್ನು ಮಾರ್ಪಡಿಸುವುದು.
ಈ ಚಿಟ್ಟೆಗಳು, ತಮ್ಮ ರೆಕ್ಕೆಗಳ ರಚನೆ ಬದಲಾಯಿಸಿಕೊಳ್ಳುವ ಮೂಲಕ ಸುಲಭದ ವಿಧಾನ ಅಳವಡಿಸಿಕೊಂಡಿದ್ದವು. “ಆದ್ದರಿಂದ ಈ ಚಿಟ್ಟೆಗಳು ಅಷ್ಟು ಬೇಗನೇ, ಒಂದೇ ವರುಷದಲ್ಲಿ ತಮ್ಮ ರೆಕ್ಕೆಗಳ ಬಣ್ಣ ಬದಲಾಯಿಸಿಕೊಳ್ಳಲು ಸಾಧ್ಯವಾಯಿತು” ಎನ್ನುತ್ತಾರೆ ಕಾವೊ.
ಚಿಟ್ಟೆಗಳಿಗೆ ಬಣ್ಣಬಣ್ಣದ ರೆಕ್ಕೆಗಳಿರುವುದು ಯಾಕೆ? ಇತರ ಚಿಟ್ಟೆಗಳೊಂದಿಗೆ ಸಂವಹನಕ್ಕಾಗಿ ಅಥವಾ ನಿಸರ್ಗದ ವೈರಿಗಳಿಂದ ಪಾರಾಗಲಿಕ್ಕಾಗಿ. ನೂರಾರು ಕೀಟಗಳಿರುವ ಪರಿಸರದಲ್ಲಿ, ಒಂದು ಜಾತಿಯ ಗಂಡು ಮತ್ತು ಹೆಣ್ಣು ಪರಸ್ಪರರನ್ನು ಗುರುತಿಸಲು ರೆಕ್ಕೆಗಳ ನಿರ್ದಿಷ್ಟ ಬಣ್ಣದಿಂದ ಸಹಾಯವಾದೀತು ಎಂಬುದು ಪರಿಣತರ ಅನಿಸಿಕೆ.
ಕಂದು ರೆಕ್ಕೆಗಳ ಚಿಟ್ಟೆಗಳ ವಾಸ ದಟ್ಟ ಕಾಡುಗಳಲ್ಲಿ; ಯಾಕೆಂದರೆ ಸುತ್ತಲಿನ ಕಂದುಬಣ್ಣದ ಒಣಎಲೆ ಇತ್ಯಾದಿಗಳ ನಡುವೆ ಅವನ್ನು ಗುರುತಿಸಲು ಶತ್ರುಗಳಿಗೆ ಕಷ್ಟ. ನೇರಳೆ ರೆಕ್ಕೆಗಳ ಚಿಟ್ಟೆಗಳ ವಾಸ ಬಯಲುಗಳಲ್ಲಿ; ಯಾಕೆಂದರೆ ಫಳಫಳನೆ ಹೊಳೆಯುವ ನೇರಳೆ ಬಣ್ಣದ ರೆಕ್ಕೆಗಳು ಶತ್ರುಗಳನ್ನು ಚಕಿತಗೊಳಿಸುತ್ತವೆ. ಆಗ ಚಿಟ್ಟೆಗಳು ಪಾರಾಗಲು ಸಾಧ್ಯ.
ತಮ್ಮ ತಂಡದ ಈ ಸಂಶೋಧನೆಯಿಂದ ಆಗಬಹುದಾದ ಅನುಕೂಲದ ಬಗ್ಗೆ ಕಾವೊ ಅವರ ಅಭಿಪ್ರಾಯ: ವೇಗವಾಗಿ ಮತ್ತು ದಕ್ಷತೆಯಿಂದ ಬಣ್ಣ ಬದಲಾಯಿಸಬಲ್ಲ ಇಲೆಕ್ಟ್ರಾನಿಕ್-ರೀಡರುಗಳಗಳನ್ನು ತಯಾರಿಸಲು ಇದರಿಂದ ಇಂಜಿನಿಯರರಿಗೆ ಸಹಾಯವಾದಿತು.