ರೇಷ್ಮೆಯಿಂದ ಎಲುಬಿನಂಟು

ಮನಮೋಹಕ ಸೀರೆಗಳ ತಯಾರಿಗೆ ಬಳಕೆಯಾಗುವ ರೇಷ್ಮೆಯ ಹೊಸ ಉಪಯೋಗ : ಮುರಿದ ಎಲುಬುಗಳನ್ನು ಸರ್ಜರಿಯಿಂದ ಜೋಡಿಸಲಿಕ್ಕಾಗಿ!
ಗೌಹಾತಿಯ ಭಾರತೀಯ ತಂತ್ರಜ್ನಾನ ಸಂಸ್ಥೆಯ (ಐಐಟಿ) ಮತ್ತು ಯುಎಸ್ಎ ಹಾಗೂ ಮೆಕ್ಸಿಕೋ ದೇಶಗಳ ಸಂಶೋಧಕರು ಜಂಟಿಯಾಗಿ ಅಧಿಕ ಶಕ್ತಿಯ ಎಲುಬಿನಂಟನ್ನು ತಯಾರಿಸಿದ್ದಾರೆ – ಪ್ರೋಟೀನ್, ನಾರುಗಳು ಮತ್ತು ಪಾಲಿಮರುಗಳನ್ನು ಬಳಸಿ.
ಮುರಿದ ಎಲುಬುಗಳನ್ನು ಜೋಡಿಸಲಿಕ್ಕಾಗಿ ತಾತ್ಕಾಲಿಕವಾಗಿ ಈ ಅಂಟು ಸವರಬೇಕು.ಕ್ಯಾಲ್ಸಿಯಮ್ ಪೊರೆ ಮೂಡಿ ಬರುವ ತನಕ ಈ ಎಲುಬಿನಂಟು ಉಳಿದಿರಬೇಕು. ಇಲಿಗಳ ಮೇಲೆ ಮೂಳೆವೈದ್ಯರು ನಡೆಸಿದ ಪ್ರಯೋಗಗಳಲ್ಲಿ, ಈ ಎಲುಬಿನಂಟು ಉತ್ತಮ ಫಲಿತಾಂಶ (ಈಗ ಬಳಕೆಯಾಗುವ ಎಲುಬಿಬಂಟುಗಳಿಗಿಂತ) ನೀಡಿದೆ.
ಇದರ ಒಂದು ಅನುಕೂಲ ಗಮನಾರ್ಹ. ಈಗಿನ ವಿಧಾನದಲ್ಲಿ, ಮುರಿದ ಎಲುಬುಗಳು ಜೋಡಣೆಯಾದ ಬಳಿಕ ಅವಕ್ಕೆ ತಗಲಿಸಿದ ಇಂಪ್ಲಾಂಟುಗಳನ್ನು ತೆಗೆಯಲಿಕ್ಕಾಗಿ ಎರಡನೇ ಸರ್ಜರಿ ಮಾಡಬೇಕಾಗುತ್ತದೆ. ರೇಷ್ಮೆಯ ಎಲುಬಿನಂಟಿನಿಂದ ಎಲುಬುಗಳನ್ನು ಕೂಡಿಸಿದರೆ, ಎರಡನೇ ಸರ್ಜರಿ ಅಗತ್ಯವಿಲ್ಲ.
ಹಲವು ಸರ್ಜರಿಗಳಲ್ಲಿ ಟಿಟಾನಿಯಂ ಅಥವಾ ಸೆರಾಮಿಕಿನಿಂದ ರಚಿಸಿದ ಇಂಪ್ಲಾಂಟುಗಳನ್ನು ತುಂಡಾದ ಎಲುಬಿನ ಭಾಗಗಳನ್ನು ಬಿಗಿಯಾಗಿ ಜೋಡಿಸಿಡಲು ಮೂಳೆವೈದ್ಯರು ಬಳಸುತ್ತಾರೆ. ಎಲುಬುಭಾಗಗಳು ಕೂಡಿದ ಬಳಿದ ಪುನಃ ಸರ್ಜರಿ ಮಾಡಿ ಅವನ್ನು ತೆಗೆಯುತ್ತಾರೆ. ಯಾಕೆಂದರೆ, ದೀರ್ಘಾವಧಿಯಲ್ಲಿ ಈ ಇಂಪ್ಲಾಂಟುಗಳಿಂದ ತೊಂದರೆಯಾದೀತು.
“ರೇಷ್ಮೆಯ ಎಲುಬಿನಂಟು ತಾನಾಗಿಯೇ ದೇಹದಲ್ಲಿ ಕರಗಿ ಹೋಗುತ್ತದೆ. ಆದ್ದರಿಂದ ಇಂಪ್ಲಾಂಟ್ ಹೊರತೆಗೆಯಲಿಕ್ಕಾಗಿ ಎರಡನೇ ಸರ್ಜರಿ ಅಗತ್ಯವಿಲ್ಲ” ಎನ್ನುತ್ತಾರೆ ಸಂಶೋಧನಾ ತಂಡದ ಸದಸ್ಯರಾದ ಬಿಮನ ಮಂಡಲ್.
ರೇಷ್ಮೆಯನ್ನು ಬಳಸುವ ಕಾರಣ, ಈ ಹೊಸ ಎಲುಬಿನಂಟಿನ ಬಾಳ್ವಿಕೆ ನಿಗದಿ ಪಡಿಸಲು ಸಾಧ್ಯ – ಕೆಲವು ತಿಂಗಳುಗಳಿಂದ ಕೆಲವು ವರುಷಗಳ ವರೆಗೆ. ಹಾಗೆಯೇ, ಇದರ ಶಕ್ತಿಯನ್ನು ಹೆಚ್ಚುಕಡಿಮೆ ಮಾಡಲು ಸಾಧ್ಯ – ಬಳಸಿದ ರೇಷ್ಮೆ ಪ್ರೊಟೀನ್ ಮತ್ತು ನಾರಿನ ಪ್ರಮಾಣ ಬದಲಾಯಿಸುವ ಮೂಲಕ.
ರೇಷ್ಮೆಹುಳದ (ಬಾಂಬಿಕ್ಸ್ ಮೊರಿ) ಒಂದು ಪ್ರೊಟೀನನ್ನು ರೇಷ್ಮೆನಾರುಗಳು ಮತ್ತು ಇತರ ರಾಸಾಯನಿಕಗಳೊಂದಿಗೆ ಬೆರೆಸಿ, ಈ ಎಲುಬಿನಂಟನ್ನು ಸಂಶೋಧಕರು ತಯಾರಿಸಿದರು. ಇದರ ಶಕ್ತಿ ಮನುಷ್ಯರ ದೇಹದ ಮೆದುಎಲುಬುಗಳ ಶಕ್ತಿಗೆ ಸರಿಸಮಾನವಾಗಿದೆ.
ಅಮೇರಿಕಾದ ಟಫ್ಟ್ಸ್ ವಿಶ್ವವಿದ್ಯಾಲಯದ ಜೈವಿಕ – ವೈದ್ಯಕೀಯ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡೇವಿಡ್ ಕಪ್ಲಾನ್ ಈ ಸಂಶೋಧನಾ ತಂಡದ ಮುಂದಾಳು. ರೇಷ್ಮೆಯಿಂದ ತಯಾರಿಸಿದ ಹೊಸ ಎಲುಬಿನಂಟು ಈಗ ಬಳಕೆಯಾಗುತ್ತಿರುವ ಎಲುಬಿನಂಟುಗಳಿಗಿಂತ ಉತ್ತಮವೆಂಬುದು ಅವರ ಅಭಿಪ್ರಾಯ.