ಮ್ಯಾಗ್ಗಿ ನೂಡಲ್ ಮಣ್ಣು ಮುಕ್ಕಿತು; ತಿಂಗಳಿಗೆ ೩೫೦ ಕೋಟಿ ರೂಪಾಯಿ ವ್ಯವಹಾರ ಕಳೆದುಕೊಂಡಿತು- ಇದು ೨೦೧೫ನೇ ವರುಷದ ದೊಡ್ಡ ಸುದ್ದಿ.
ಆದರೆ, ಕಳೆದ ೨೦ ವರುಷಗಳಲ್ಲಿ ಅದರ ಉತ್ಪಾದಕ ಕಂಪೆನಿ ನೆಸ್ಲೆ ಮಾಡಿದ ಮೋಸಕ್ಕೆ, ಅನೈತಿಕ ಮಾರಾಟ ತಂತ್ರಗಳಿಗೆ, ಕೋಟಿಗಟ್ಟಲೆ ಅಮಾಯಕ ಜನರಿಗೆ ವಿಷ ಉಣಿಸಿದ್ದಕ್ಕೆ ಯಾವ ಶಿಕ್ಷೆಯೂ ಆಗಿಲ್ಲ – ಇದು ಸುದ್ದಿಯಾಗಲಿಲ್ಲ!
ಮ್ಯಾಗ್ಗಿ ನೂಡಲ್ ಪ್ಯಾಕೆಟುಗಳಲ್ಲಿ “ನೋ ಏಡೆಡ್ ಎಂ.ಎಸ್.ಜಿ.” ಎಂದು ಜಬರದಸ್ತಿನಿಂದ ಮುದ್ರಿಸುತ್ತಿದ್ದರು. ಆದರೆ, ಮ್ಯಾಗ್ಗಿ ನೂಡಲುಗಳಲ್ಲಿ ಎಂ.ಎಸ್.ಜಿ. ಇತ್ತು ಎಂಬ ಸತ್ಯ ಈಗ ಜಗಜ್ಜಾಹೀರಾಗಿದೆ. ಇದು ನೆಸ್ಲೆ ಕಂಪೆನಿ ಮಾಡಿದ ಮೋಸವಲ್ಲವೇ?
ಲಕ್ಷಗಟ್ಟಲೆ ತಾಯಂದಿರು ತಮ್ಮ ಮಕ್ಕಳನ್ನು ಜೋಪಾನದಿಂದ ಬೆಳೆಸುತ್ತಾರೆ. ಮನೆಯಲ್ಲಿ ಮಾಡಿದ ತಿಂಡಿತಿನಿಸು ಆಹಾರ ಮಾತ್ರ ತಿನಿಸಿ ಸಲಹುತ್ತಾರೆ. ಅಂತಹ ಮಕ್ಕಳು ಕಿಂಡರ್ ಗಾರ್ಟನಿಗೆ ಕಾಲಿಟ್ಟ ದಿನವೇ ಮ್ಯಾಗ್ಗಿ ನೂಡಲಿನ ಮಾರಾಟ ಪ್ರತಿನಿಧಿಗಳು ಅಲ್ಲಿಗೆ ವಕ್ಕರಿಸುತ್ತಾರೆ. ಮಕ್ಕಳಿಗೆ ಪುಕ್ಕಟೆ ಮ್ಯಾಗ್ಗಿ ನೂಡಲ್ ತಿನಿಸಿ ಚಟ ಹಿಡಿಸುತ್ತಾರೆ. ಅಂದು ಸಂಜೆ ಮನೆಗೆ ಮರಳಿದ ಮಗು “ನಂಗೆ ಮ್ಯಾಗ್ಗಿ ಕೊಡು” ಎಂದು ಹಟ ಮಾಡುತ್ತದೆ. ಇದು ನೆಸ್ಲೆ ಕಂಪೆನಿಯ ಅನೈತಿಕ ಮಾರಾಟ ತಂತ್ರ ಅಲ್ಲವೇ?
ಮ್ಯಾಗ್ಗಿ ನೂಡಲಿಗೆ ಸೀಸ ಹಾಕಬಾರದಿತ್ತು. ಸಹನೀಯ ಮಿತಿಗಿಂತ ಜಾಸ್ತಿ ಸೀಸ ಹಾಕಲೇ ಬಾರದಿತ್ತು. ಯಾಕೆಂದರೆ ಸೀಸ ವಿಷ. ಆದರೂ ಮ್ಯಾಗ್ಗಿ ನೂಡಲಿಗೆ ನೆಸ್ಲೆ ಕಂಪೆನಿ ಸೀಸ ಹಾಕಿದ್ದು ಯಾಕೆ? ಅದನ್ನು ತಿಂದವರ ಆರೋಗ್ಯ ಹದಗೆಟ್ಟರೂ ಚಿಂತಿಲ್ಲ, ತಮಗೆ ಲಾಭವಾದರೆ ಸಾಕು ಎಂಬುದೇ ಕಾರಣವಲ್ಲವೇ?
ಮ್ಯಾಗ್ಗಿ ನೂಡಲ್ಸ್ ಒಂದೇ ಅಲ್ಲ. ಲಾಭದ ಕೊಳ್ಳೆ ಹೊಡೆಯಲಿಕ್ಕಾಗಿ ನೆಸ್ಲೆಯಂತಹ ಕಂಪೆನಿಗಳು ಉತ್ಪಾದಿಸುವ ನೂರಾರು ವಿಷ ಆಹಾರಗಳು ಮಾರುಕಟ್ಟೆಯಲ್ಲಿವೆ. ಉದಾಹರಣೆಗೆ ಶಕ್ತಿಪೇಯ (ಎನರ್ಜಿ ಡ್ರಿಂಕ್ಸ್)ಗಳಾದ ಮೋನ್ಸ್-ಟರ್ ಮತ್ತು ರೆಸ್ಟ್-ಲೆಸ್. ೨೦೧೫ರ ಆರಂಭದಲ್ಲಿ ಇವನ್ನು ಭಾರತದ ಮಾರುಕಟ್ಟೆಯಿಂದ ಹಿಂದೆಗೆಯುವ ಆದೇಶ ಹೊರಡಿಸಿದ್ದೂ ಸುದ್ದಿಯಾಗಲೇ ಇಲ್ಲ!
ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ, ಒಂದೇ ವರುಷದಲ್ಲಿ (೨೦೧೫ರಲ್ಲಿ) ಬಹುರಾಷ್ಟ್ರೀಯ ಕಂಪೆನಿಗಳ ಐದು ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂದೆಗೆದದ್ದು ನಮ್ಮ ಕಣ್ಣು ತೆರೆಸಬೇಕಾಗಿದೆ:
೧) ಯುಎಸ್ಎ ದೇಶದಲ್ಲಿ ಕೆಲ್ಲೊಗ್ಸ್ ಕಂಪೆನಿಯ ಸ್ಪೆಷಲ್-ಕೆ, ರೆಡ್-ಬೆರಿಗಳನ್ನು ಮಾರುಕಟ್ಟೆಯಿಂದ ಕಿತ್ತೆಸೆಯ ಬೇಕಾಯಿತು. ಯಾಕೆಂದರೆ ಅದರಲ್ಲಿ ಗಾಜಿನ ತುಣುಕುಗಳು ಇರುವ ಸಾಧ್ಯತೆ.
೨) ಯುಎಸ್ಎ ದೇಶದಲ್ಲಿ ಫ್ರಿತೋ-ಲೇ ಕಂಪೆನಿಯ ಸನ್ ಚಿಪ್ಸ್ ಸಿಕ್ಸ್ ಗ್ರೆಯಿನ್ ಮೆಡ್ಲೇ ಕ್ರೀಮಿ ರೋಸ್ಟೆಡ್ ಗಾರ್ಲಿಕ್ ಇದನ್ನು ಮಾರುಕಟ್ಟೆಯಿಂದ ತಿಪ್ಪೆಗೆಸೆಯ ಬೇಕಾಯಿತು. ಯಾಕೆಂದರೆ ಅದನ್ನು ತಯಾರಿಸಲು ಬಳಸಿದ ಹಿಟ್ಟಿನಲ್ಲಿ ಲೋಹದ ತುಣುಕುಗಳು ಇರುವ ಸಾಧ್ಯತೆ.
೩) ಕೆನಡಾದಲ್ಲಿ ಮೊನ್ಡೆಲೆಜ್ ಕಂಪೆನಿಯ ಕ್ರಿಸ್ಟೀ ಬ್ರಾಂಡ್ ಗೋಲ್ಡನ್ ಒರಿಯೊ ಕುಕಿಗಳನ್ನು ಮಾರುಕಟ್ಟೆಯಿಂದ ಕಿತ್ತೆಸೆಯ ಬೇಕಾಯಿತು. ಯಾಕೆಂದರೆ ಅದರ ಪೊಟ್ಟಣದಲ್ಲಿ ಮುದ್ರಿಸಿದ ಪೋಷಕಾಂಶಗಳ ಸತ್ಯಾಂಶದ ಪಟ್ಟಿಯಲ್ಲಿ ಕಾರ್ಬೊಹೈಡ್ರೇಟಿನ (ಶರ್ಕರಪಿಷ್ಟ) ವಿವರ ತಪ್ಪಾಗಿತ್ತು.
೪) ಕೆನಡಾದಲ್ಲಿ ಹೀಂಜ್ ಕಂಪೆನಿಯ ಬ್ರೊತ್ ಸಹಿತ ಶಿಶು ಆಹಾರ ಚಿಕನ್ (ಕೋಳಿಮಾಂಸ) ಮತ್ತು ಸ್ವೀಟ್ ಪೊಟಾಟೊ (ಗೆಣಸು) ಮತ್ತು ದನದ ಮಾಂಸದ ಮೆಡ್ಲೇ – ಇವನ್ನು ಮಾರುಕಟ್ಟೆಯಿಂದ ತಿಪ್ಪೆಗೆಸೆಯ ಬೇಕಾಯಿತು. ಯಾಕೆಂದರೆ ಪೊಟ್ಟಣಗಳಿಗೆ ಮಾಡಿದ ಸೀಲ್ ಬಿರುಕು ಬಿಟ್ಟು ಆಹಾರ ಕೆಡುವ ಸಾಧ್ಯತೆ.
೫) ಜರ್ಮನಿ, ಸ್ಪೇಯಿನ್, ಸ್ವಿಟ್ಜರ್-ಲ್ಯಾಂಡ್, ಆಸ್ಟ್ರಿಯಾ ಮತ್ತು ಲಕ್ಸೆಂಬರ್ಗ್ ದೇಶಗಳಲ್ಲಿ ಚೊಕ್ಲೆಟ್ ಕಂಪೆನಿಯ ಚಾಕೊಲೇಟುಗಳನ್ನು ರದ್ದಿಗುಂಡಿಗೆ ಎಸೆಯ ಬೇಕಾಯಿತು. ಯಾಕೆಂದರೆ ಒಂದು ಚಾಕೊಲೇಟಿನಲ್ಲಿ ೧.೫ ಸೆಮೀ ಉದ್ದದ ವಯರ್ ಪತ್ತೆಯಾಗಿತ್ತು.
ಈ ಐದು ಪ್ರಕರಣಗಳನ್ನು ಗಮನಿಸಿದಾಗ, ಕೆಲವು ವಿದೇಶಗಳಲ್ಲಿ ಆಹಾರ ಮಾರಾಟದ ನಿಯಮಗಳು ಎಷ್ಟು ಕಟ್ಟುನಿಟ್ಟಾಗಿ ಜ್ಯಾರಿಯಾಗುತ್ತಿವೆ ಎಂಬುದು ಅರ್ಥವಾಗುತ್ತದೆ. ನಾವು ಪಾಠ ಕಲಿಯುವುದು ಯಾವಾಗ?
ಅಪಾಯಕಾರಿ ಹಾಗೂ ವಿಷಭರಿತ ಆಹಾರಗಳನ್ನು ಮಾರುಕಟ್ಟೆಯಿಂದ ಹಿಂದೆಗೆಯುವ ಬಗ್ಗೆ ನಮ್ಮ ದೇಶದಲ್ಲಿ ನಿಯಮಗಳೇ ಇರಲಿಲ್ಲವೆಂದರೆ ನಂಬುತ್ತೀರಾ? ಈ ನಿಯಮಗಳನ್ನು ಭಾರತದ ಆಹಾರ ಸುರಕ್ಷಣೆ ಮತ್ತು ಮಾನಕ ಪ್ರಾಧಿಕಾರ ೨೦೦೯ರಲ್ಲೇ ರೂಪಿಸಿತ್ತು. ಮತ್ತೇನಾಯಿತು ಅಂತಿರಾ? ಅದು “ಕಾಣದಂತೆ ಮಾಯವಾಯಿತು.”! ಏಳು ವರುಷಗಳ ನಂತರ ಆ ನಿಯಮಗಳು ಜ್ಯಾರಿಯಾದವು. ಆದರೆ ಈ ವರೆಗೆ ಯಾವುದೇ ಅಪಾಯಕಾರಿ ಹಾಗೂ ವಿಷಭರಿತ ಆಹಾರವನ್ನು ಮಾರುಕಟ್ಟೆಯಿಂದ ಹಿಂದೆಗೆಯಲಾಗಿಲ್ಲ!
ಆಹಾರದ ವಹಿವಾಟುದಾರರ (ಉತ್ಪಾದಕರು, ಚಿಲ್ಲರೆ ಮಾರಾಟಗಾರರು, ಆಮದುದಾರರು, ಪೂರೈಕೆದಾರರು) ಗುರಿ ಒಂದೇ – ಜಾಸ್ತಿ ಲಾಭ. ಅವರಿಗೆ ಹೊಣೆಗಾರಿಕೆಯ ಪಾಠ ಕಲಿಸುವುದರ ಜೊತೆಗೆ ಬಳಕೆದಾರರಾದ ನಾವೂ ಪಾಠ ಕಲಿಯಬೇಕಾಗಿದೆ. ಮಾರುಕಟ್ಟೆಯ ನೂಡಲುಗಳು, ಶ್ಯಾವಿಗೆಗಳು ನಮಗೆ ಬೇಕಾಗಿಲ್ಲ. ನಮ್ಮದೇ ಮನೆಗಳಲ್ಲಿ ಅಕ್ಕಿ ಶಾವಿಗೆ, ಹಲಸಿನ ಶಾವಿಗೆ ಮಾಡಿ ಸವಿಯೋಣ.