ಮುಂಬೈ ಜಿಪಿಓ - ಮಹಾನಗರದ ಮಹಾ ಅಂಚೆ ಕಚೇರಿ

ಮುಂಬೈಯ ವಿಟಿ (ವಿಕ್ಟೋರಿಯಾ ಟರ್ಮಿನಸ್) ರೈಲು ನಿಲ್ದಾಣ ಜಗತ್ ಪ್ರಸಿದ್ಧ. ಅಲ್ಲಿ “ಪೋಸ್ಟ್ ಆಫೀಸ್ ಎಲ್ಲಿದೆ?” ಎಂದು ನೀವು ಯಾರನ್ನಾದರೂ ಕೇಳಿದರೆ ಅವರು ನಿಮ್ಮನ್ನು ಕಣ್ಣರಳಿಸಿ ನೋಡಿಯಾರು. ಆದರೆ “ಜಿಪಿಓ ಎಲ್ಲಿದೆ?” ಎಂದು ಕೇಳಿದರೆ, ಖಂಡಿತವಾಗಿ ನಿಮಗೆ ದಾರಿ ತೋರಿಸುತ್ತಾರೆ.

ಆ ಮಹಾನಗರದ ಮಹಾ ಅಂಚೆ ಕಚೇರಿಯೇ ಜಿಪಿಓ ಅಂದರೆ ಜನರಲ್ ಪೋಸ್ಟ್ ಆಫೀಸ್. ಹಲವು ಬಾರಿ ಅಲ್ಲೇ ಹತ್ತಿರದ ಹೋಟೆಲೊಂದರಲ್ಲಿ ಉಳಿದಿದ್ದೆ - ವಿಟಿ ರೈಲು ನಿಲ್ದಾಣ ಅಲ್ಲಿಗೆ ಹತ್ತಿರ, (ರೈಲುಗಳ ಪ್ರಯಾಣ ಆರಂಭ ಮತ್ತು ಮುಕ್ತಾಯವಾಗುವ ಬೃಹತ್ ನಿಲ್ದಾಣ ಅದು.) ದೂರದೂರ ಹೋಗಬೇಕಾದಾಗ ರೈಲು ಹಿಡಿಯಲು ಸುಲಭ ಎಂಬ ಕಾರಣಕ್ಕಾಗಿ. ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಮುಂಬೈಗೆ ಹೋದಾಗ ಒಂದು ಅಥವಾ ಎರಡು ವಾರ ಹೋಟೆಲಿನಲ್ಲಿ ವಾಸ್ತವ್ಯ. ಆಗ ಅಂಚೆಡಬ್ಬಿಗೆ ಪತ್ರ ಹಾಕಲಿಕ್ಕಾಗಿ ಹಲವು ಬಾರಿ ಜಿಪಿಓಗೆ ಭೇಟಿ ನೀಡಿದ್ದಿದೆ.

ಜಿಪಿಓದ ಪಕ್ಕದಲ್ಲೇ ದೊಡ್ಡ ಬಸ್ ನಿಲ್ದಾಣ. ಆ ಮಹಾ ಗದ್ದಲದ ಹಾಗೂ ಬಿರುಸಿನ ಚಟುವಟಿಕೆಯ ಪ್ರದೇಶದಲ್ಲಿ, ಜಿಪಿಓ ಎಂಬ ಜಗತ್ತು ನಮ್ಮ ಗಮನಕ್ಕೆ ಬಾರದಿರುವ ಸಂಭವ ಜಾಸ್ತಿ.  ಅದನ್ನು ಕಣ್ತುಂಬಿಸಿಕೊಳ್ಳಬೇಕಾದರೆ ಜಿಪಿಓದ ಒಳಗೆ ಹೋಗಬೇಕು.

ಈಗಲೂ ಹಲವು ಹಳೆಯ ಮರಗಳು ಉಳಿದಿರುವ ಆ ಪ್ರದೇಶಕ್ಕೆ ಶತಮಾನಗಳ ಇತಿಹಾಸವಿದೆ! ಮುಖ್ಯ ಪ್ರವೇಶದ ಪಕ್ಕದಲ್ಲೊಂದು ಹಳೆಯ ಫಲಕವಿದೆ. ಅದರ ಒಕ್ಕಣೆ (ಇಂಗ್ಲಿಷಿನಲ್ಲಿ) ಹೀಗಿದೆ: “ರೀಚ್ ಔಟ್ ಥ್ರೂಔಟ್. ಇಂಡಿಯನ್ ಪೋಸ್ಟ್ - ಎ ರಿಲಯಬಲ್ ಪಾರ್ಟ್ನರ್”. (ಎಲ್ಲೆಡೆಯ ಜಾಲ. ಭಾರತೀಯ ಅಂಚೆ - ವಿಶ್ವಾಸಾರ್ಹ ಜೊತೆಗಾರ) ಅಂದ ಹಾಗೆ, ಇದು ಭಾರತೀಯ ಅಂಚೆ ಸೇವೆಯ "ಧ್ಯೇಯ ವಾಕ್ಯ" (ಮಿಷನ್ ಸ್ಟೇಟ್-ಮೆಂಟ್)

ಒಳಕ್ಕೆ ಸಾಗಿದಾಗ ನಿಮಗೆ ಕೆಂಪು ಬಣ್ಣದ ಅಂಚೆ ಪೆಟ್ಟಿಗೆಗಳು ಕಾಣಿಸುವುದಿಲ್ಲ. ಬದಲಾಗಿ, ಸಾಲಾಗಿ ಜೋಡಿಸಿರುವ ಡ್ರಾಪ್ ಬಾಕ್ಸುಗಳು ಕಾಣಿಸುತ್ತವೆ - ಭಾರತದ ಮಾತ್ರವಲ್ಲ ಜಗತ್ತಿನ ಮೂಲೆಮೂಲೆಗೂ ಅಂಚೆಪತ್ರಗಳನ್ನು ತಲಪಿಸುವ ಭರವಸೆಯೊಂದಿಗೆ.

ಕೆಲವು ಹೆಜ್ಜೆ ಮುಂದೆ ಸಾಗಿದಾಗ ನಿಮಗೆ ಎದುರಾಗುತ್ತದೆ, ಹಾಲುಗಲ್ಲಿನ ಒಂದು ಫಲಕ. ಅದರಲ್ಲಿ ಹೀಗೆಂದು ದಾಖಲಿಸಲಾಗಿದೆ: ಜಿಪಿಓದ ವಿನ್ಯಾಸಗಾರ ಜಾನ್ ಬೆಗ್ಗ್, ಎಫ್.ಆರ್.ಐ.ಬಿ.ಎ. (ಫೆಲೋ ಆಫ್ ದ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್) ಜಿಪಿಓದ ನಿರ್ಮಾಣ ೧ ಸಪ್ಟಂಬರ್ ೧೯೦೪ರಂದು ಶುರುವಾಗಿ ೩೧ ಮಾರ್ಚ್ ೧೯೧೩ರಂದು ಮುಕ್ತಾಯವಾಯಿತು. ನಿರ್ಮಾಣ ವೆಚ್ಚ ರೂ.೧೮,೦೯,೦೦೦.

ಬ್ರಿಟಿಷರ ಕಾಲದ ಹೆಸರುವಾಸಿ ವಿನ್ಯಾಸಗಾರ ಜಾನ್ ಬೆಗ್ಗ್ ಅವರ ಪ್ರಸಿದ್ಧ ವಿನ್ಯಾಸ ಜಿಪಿಓ. ಇದನ್ನು ನೋಡಿದಾಗ ಕರ್ನಾಟಕದ ವಿಜಯಪುರದ ಗೋಲಗುಮ್ಮಟ ನೆನಪಾಗಿಯೇ ಆಗುತ್ತದೆ. ಯಾಕೆಂದರೆ, ಜಿಪಿಓದ ಪ್ರಧಾನ ಗುಮ್ಮಟ ಅದೇ ವಿನ್ಯಾಸ ಹೊಂದಿದೆ. ಸ್ಥಳೀಯ ಕಂದು ಬಣ್ಣದ ಅಗ್ನಿಶಿಲೆ, ಕುರ್ಲಾದ ಹಳದಿ ಶಿಲೆ ಮತ್ತು ಗುಜರಾತಿನ ಧ್ರನ್-ಗಧ್ರದ ಬಿಳಿ ಶಿಲೆ - ಇವನ್ನು ಬಳಸಿ ಈ ಬೃಹತ್ ಕಟ್ಟಡವನ್ನು ನಿರ್ಮಿಸಲಾಗಿದೆ.

ಮುಖ್ಯ ದ್ವಾರದ ಬಲಭಾಗದ ಗೋಡೆಯಲ್ಲಿದೆ: “ರೋಲ್ ಆಫ್ ಹೋನರ್”. ಮೊದಲ ಮಹಾಯುದ್ಧದಲ್ಲಿ ಪ್ರಾಣ ತೆತ್ತ “ಭಾರತೀಯ ಅಂಚೆ ಕಚೇರಿ”ಯ ಸಿಬ್ಬಂದಿಯ ನೆನಪಿಗಾಗಿ ಇದನ್ನು ಅರ್ಪಿಸಲಾಗಿದೆ. ಸೂರ್ಯನ ಬೆಳಕು ಒಳಗೆ ತೂರಿ ಬಾರದಿದ್ದರೆ, ಈ ಚಾರಿತ್ರಿಕ ದಾಖಲೆ ನಿಮಗೆ ಕಾಣಿಸಲಿಕ್ಕಿಲ್ಲ.

ಆಗ, ತಲೆಯೆತ್ತಿ ನೋಡಿದರೆ ಕಾಣಿಸುವ ಜಿಪಿಓದ ಗುಮ್ಮಟದ ಅಗಾಧತೆ ನಿಮ್ಮನ್ನು ಬೆರಗಾಗಿಸುತ್ತದೆ. ಮುಖ್ಯ ಭವನಕ್ಕೆ ಕಾಲಿಟ್ಟಾಗಲೇ ನಿಮಗೆ ತಿಳಿಯುತ್ತದೆ - ಭಾರತದ ಅತಿ ದೊಡ್ದ ಅಂಚೆ ಕಚೇರಿಯ ವ್ಯವಹಾರವೂ ಅತಿ ದೊಡ್ಡದು ಎಂಬ ಸಂಗತಿ. ಜೇನುಗೂಡಿನ ನೂರಾರು ಜೇನ್ನೊಣಗಳಂತೆ ಅಲ್ಲಿನ ಸಿಬ್ಬಂದಿ ವಿವಿಧ ಕೆಲಸಗಳಲ್ಲಿ ತೊಡಗಿರುತ್ತಾರೆ.
ಮುಖ್ಯ ಭವನಕ್ಕೆ ಕಾಲಿಡುವ ಮುಂಚೆ, ಕಟ್ಟಡದ ಬಲಭಾಗದಲ್ಲಿ ನಿಮಗೆ ಕಾಣಿಸುತ್ತದೆ “ಮೆಯಿಲ್ ಬಿಸಿನೆಸ್ ಸೆಂಟರ್”. ಪೂರ್ವಾಹ್ನ ೧೦ ಗಂಟೆಯಿಂದ ರಾತ್ರಿ ೧೧ ಗಂಟೆಯ ವರೆಗೆ ಅದರ ಕೆಲಸದ ವೇಳೆ. ಸಾವಿರಾರು ಕಂಪೆನಿಗಳ ವಾಣಿಜ್ಯ ಅಂಚೆ ವ್ಯವಹಾರದ ರಂಗಸ್ಥಳ ಇದು. “ಫ್ರಾಂಕಿಂಗ್" ಮತ್ತು “ಬಂಡ್ಲಿಂಗ್" ಎಂಬ ಪದಗಳನ್ನು ನೀವು ಕೇಳಿರಬಹುದು. ಅದೇನೆಂದು ಸರಿಯಾಗಿ ಅರ್ಥವಾಗಬೇಕಾದರೆ ಇಲ್ಲಿ ನಡೆಯುವ ಆ ಎರಡು ಕೆಲಸಗಳನ್ನು ಗಮನಿಸಬೇಕು.

ಪ್ರಧಾನ ಪೆವಿಲಿಯನಿನಲ್ಲೊಂದು ನಕ್ಷೆಯಿದೆ. ಜಿಪಿಓದ ನೆಲ ಅಂತಸ್ತಿನ ಕೆಳಗಿನ ಮತ್ತು ಮೇಲಿನ ಹಂತಗಳಲ್ಲಿ ಇರುವ ಬಹುಪಾಲು ಕೌಂಟರುಗಳು ಯಾವ್ಯಾವುದು ಎಂಬುದನ್ನು ಇದರಿಂದ ತಿಳಿಯಬಹುದು. ಅಲ್ಲಿರುವ ೧೦೦ ಕೌಂಟರುಗಳು, ಪ್ರತಿ ದಿನವೂ ಭಾರತದ ಮತ್ತು ಜಗತ್ತಿನ ಸುಮಾರು ೨೫,೦೦೦ ಜನರಿಗೆ ವಿವಿಧ ಅಂಚೆಸೇವೆಗಳನ್ನು ಒದಗಿಸುತ್ತವೆ.

ರಿಟೇಯ್ಲ್ ಪೋಸ್ಟ್ ಕೌಂಟರಿನಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆ ಸೇವೆ ಅಥವಾ ಚಿತ್ರ-ಅಂಚೆಕಾರ್ಡುಗಳು ಲಭ್ಯ. ಮೇಲಿನ ಹಂತದಲ್ಲಿರುವ ಅಂಚೆ ಉಳಿತಾಯ ಖಾತೆ ವಿಭಾಗದ ಸೇವೆ ಪಡೆಯುವವರು ನೂರಾರು ಗ್ರಾಹಕರು. ಅಂಚೆ ಜೀವವಿಮೆ, ಇಲೆಕ್ಟ್ರಾನಿಕ್ ಪೋಸ್ಟ್, ಇನ್‌ಸ್ಟೆಂಟ್ ಮನಿ-ಆರ್ಡರ್ - ಹೀಗೆ ಅಂಚೆ ಇಲಾಖೆಯ ವಿವಿಧ ಸೇವೆಗಳು ಅಲ್ಲಿ ಲಭ್ಯ. ಸೆಂಟ್ರಲ್ ಭವನದಲ್ಲಿರುವ ದೊಡ್ಡ ಫಲಕದಲ್ಲಿ ದೇಶೀಯ ಅಂಚೆ ಸೇವೆಗಳ ದರಗಳನ್ನು ಪ್ರದರ್ಶಿಸಲಾಗಿದೆ.

ಇದೊಂದು ಶತಮಾನ ದಾಟಿದ ಕಟ್ಟಡ ಎಂಬುದನ್ನು ನಿಮಗೆ ನೆನಪು ಮಾಡುತ್ತದೆ ಅಲ್ಲಿರುವ ಪುರಾತನ ಕಾಲದ ಒಂದು ಲಿಫ್ಟ್. ಅದರಲ್ಲಿ ಒಮ್ಮೆಗೆ ನಾಲ್ಕು ಜನರು ಮಾತ್ರ ಸಾಗಬಹುದು. ಜಿಪಿಓದ ಚರಿತ್ರೆ ತಿಳಿಯಲಿಕ್ಕಾಗಿ ನೀವು ಅದರ ವೆಬ್-ಸೈಟ್ ಪರಿಶೀಲಿಸಬಹುದು. ಅಲ್ಲಿರುವ ಮಾಹಿತಿ: ೧೯ನೆಯ ಶತಮಾನದಲ್ಲಿ ಮುಂಬೈಯ ಅಪೊಲ್ಲೋ ಪೈರ್ ಎಂಬಲ್ಲಿ ಕೆಲವು ಕಟ್ಟಡಗಳಲ್ಲಿ ಜಿಪಿಓ ಕಾರ್ಯ ನಿರ್ವಹಿಸುತ್ತಿತ್ತು. ಆಗೊಮ್ಮೆ ಬೆಂಕಿ ಅವಘಡದಲ್ಲಿ ಆ ಕಟ್ಟಡಗಳು ನಾಶವಾದವು. ಅನಂತರ ಜಿಪಿಓ ಈಗಿನ ಸ್ಥಳಕ್ಕೆ ಸ್ಥಳಾಂತರವಾಯಿತು. ಆದರೆ, ಇಲ್ಲಿದ್ದ ಕಟ್ಟಡದ ಸ್ಥಳಾವಕಾಶ ಸಾಲದಾಯಿತು. ಆದ್ದರಿಂದ ಹೊಸ ಕಟ್ಟಡವನ್ನು ೧೯೦೪ - ೧೯೧೩ ಅವಧಿಯಲ್ಲಿ ನಿರ್ಮಿಸಲಾಯಿತು.

ಜಿಪಿಓದ “ಫಿಲಟೆಲಿ ಬ್ಯೂರೋ”ವನ್ನು ನೀವು ಗಮನಿಸಲೇ ಬೇಕು. ಕಟ್ಟಡದ ಎಡಭಾಗದ ಕೊನೆಯಲ್ಲಿದೆ ಇದು. ಅಲ್ಲಿಗೆ ಸಾಗುವಾಗ, ಕಾರಿಡಾರಿನ ಅಕ್ಕಪಕ್ಕದಲ್ಲಿ ಹಲವಾರು ಅಂಚೆಚೀಟಿಗಳ ಫಲಕಗಳನ್ನು ನೀವು ಕಾಣಬಹುದು. ಅಲ್ಲಿರುವ ಒಂದು ಭಿತ್ತಿಪತ್ರ “ಹವ್ಯಾಸಗಳ ರಾಜನಾದ ಫಿಲಟೆಲಿಯಲ್ಲಿ ಭಾಗಿಯಾಗಿ” ಎಂದು ನಿಮ್ಮನ್ನು ಆಹ್ವಾನಿಸುತ್ತದೆ.

ಒಂದಾನೊಂದು ಕಾಲದಲ್ಲಿ “ಟೆಲಿಗ್ರಾಮ್" ಎಂಬುದು ಪ್ರಧಾನ ಅಂಚೆ ಸೇವೆಗಳಲ್ಲಿ ಒಂದಾಗಿತ್ತು. ೨೧ನೆಯ ಶತಮಾನದಲ್ಲಿ ಅದು ಕೇವಲ ನೆನಪು. ಯಾಕೆಂದರೆ, ಅದನ್ನು ನಿಲ್ಲಿಸಲಾಗಿದೆ. ದಶಕಗಳು ದಾಟಿದಂತೆ ಇನ್ನೂ ಕೆಲವು ಅಂಚೆ ಸೇವೆಗಳು ಚರಿತ್ರೆಯ ಪುಟಗಳಲ್ಲಿ ಮಾತ್ರ ಉಳಿಯಬಹುದು.

ಅದೇನಿದ್ದರೂ, ಮುಂಬೈಯ ಜಿಪಿಓಗೆ ನಿಮ್ಮ ಭೇಟಿ ನಿಮ್ಮನ್ನು ಗತಕಾಲಕ್ಕೆ ಒಯ್ಯುತ್ತದೆ. ಅಲ್ಲೊಂದು ಸುತ್ತು ಹಾಕಿ, ನೀವು ಹೊರಕ್ಕೆ ಬಂದಾಗ, ಸಂವಹನ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ನಾನದ ಬಲದಿಂದ ಆಗಿರುವ ಬದಲಾವಣೆಗಳು ಧುತ್ತೆಂದು ನಿಮಗೆ ಎದುರಾಗುತ್ತವೆ. ಶತಮಾನ ಹಿಂದಿನ ಜಗತ್ತಿನ ಕೆಲವು ತುಣುಕುಗಳನ್ನು ಕಂಡು ಬಂದ ನೆನಪು ಬಹು ಕಾಲ ನೆನಪಿನಲ್ಲಿ ಉಳಿಯುತ್ತದೆ.
ಫೋಟೋ: ಮುಂಬೈ ಜಿಪಿಓ - ವಿಹಂಗಮ ನೋಟ