ಮಾಹಿತಿ ಹಕ್ಕು ಕಾಯಿದೆ ೨೦೦೫ರಲ್ಲಿ ಜ್ಯಾರಿಯಾದಾಗ ಇದರಿಂದ ಏನಾದೀತೆಂದು ಮೂಗು ಮುರಿದವರು ಹಲವರು. ಅವರೆಲ್ಲರೂ ಇಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕಾಗಿದೆ.
ಇದಕ್ಕೆ ಕಾರಣ ಮಾಹಿತಿ ಹಕ್ಕು ಕಾರ್ಯಕರ್ತರ ಛಲ ಬಿಡದ ಕಾಯಕದಿಂದಾಗಿ ಒಂದಾದ ಮೇಲೊಂದರಂತೆ ಹಗರಣಗಳು ಬಯಲಾಗುತ್ತಿರುವುದು. ಆದರೆ ಮಾಹಿತಿ ಕಾರ್ಯಕರ್ತರು ತಮ್ಮ ನಿಸ್ವಾರ್ಥ ಜನಪರ ಕೆಲಸಕ್ಕಾಗಿ ಜೀವವನ್ನೇ ಪಣಕ್ಕಿಡಬೇಕಾಗಿದೆ.
ಅಂತಹ ನೂರಾರು ಕಾರ್ಯಕರ್ತರಲ್ಲಿ ಛತ್ತಿಸಗಡದ ರಾಯಘರ್ ಜಿಲ್ಲೆಯ ರಮೇಶ್ ಅಗರವಾಲ್ ಒಬ್ಬರು. ಖಾಸಗಿ ಗಣಿ ಕಂಪೆನಿ ಮತ್ತು ವಿದ್ಯುದುತ್ಪಾದನಾ ಕಂಪೆನಿಗಳಿಂದಾಗಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡ ಅಸಹಾಯಕರ ಹಕ್ಕುಗಳ ರಕ್ಷಣೆಗಾಗಿ ಅವರ ಹೋರಾಟ.
ಜನಪರ ಕಾಯಕಕ್ಕೆ ರಮೇಶ್ ಅಗರವಾಲರು ಧುಮುಕಿದ್ದು ೧೯೯೦ರಲ್ಲಿ - ಸಾಕ್ಷರತಾ ಆಂದೋಲನ ರಾಯಘರದಲ್ಲಿ ಶುರುವಾದಾಗ. ಅದು ೩೦,೦೦೦ ಸ್ವಯಂಸೇವಕರ ಮೂಲಕ ಜಿಲ್ಲೆಯ ಮೂರು ಲಕ್ಷ ಅನಕ್ಷರಸ್ಥರಿಗೆ ಅಕ್ಷರಜ್ನಾನ ನೀಡುವ ಆಂದೋಲನ. ಯುವ ಸ್ವಯಂಸೇವಕರ ಉತ್ಸಾಹದಿಂದಾಗಿ ಆಂದೋಲನ ಯಶಸ್ವಿಯಾಯಿತು. ಜೊತೆಗೆ, ಅದು ಕೆಲವರ ಬದುಕನ್ನೇ ಬದಲಾಯಿಸಿತು. ಅಂಥವರಲ್ಲಿ ಒಬ್ಬರು ರಮೇಶ್ ಅಗರವಾಲ್.
ಅನಂತರ, ಹಲವು ಉತ್ಸಾಹಿ ಯುವಜನರ ಜೊತೆ ಸೇರಿ ಅವರು ಸ್ಥಾಪಿಸಿದ ಸಂಸ್ಥೆ "ಲೋಕಶಕ್ತಿ." ಶೋಷಣೆಗೊಳಗಾದ ಬಡಜನರಿಗೆ ಗೌರವದ ಬದುಕು ಕಟ್ಟಿಕೊಡುವುದು ಅದರ ಆಶಯ. ಹೊಸದಾಗಿ ಪಸರಿಸಿದ ಸಾಕ್ಷರತೆಯ ಆಧಾರದಿಂದ ಜನಸಮುದಾಯಗಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅನ್ಯಾಯಗಳ ವಿರುದ್ಧ ಪ್ರಜಾಸತ್ತಾತ್ಮಕ ವಿಧಾನಗಳಿಂದ ಪ್ರತಿಭಟಿಸುವುದು ಆ ಸಂಸ್ಥೆಯ ಕಾರ್ಯಯೋಜನೆ.
ಅದನ್ನು ಕಾರ್ಯಗತಗೊಳಿಸುವಾಗ ಗಳಿಸಿದ ಅನುಭವವೇ ರಮೇಶ್ ಅಗರವಾಲ್ ಮತ್ತು ಸಾಕ್ಷರತಾ ಆಂದೋಲನದ ಸಂಗಾತಿ ರಾಜೇಸ್ ತ್ರಿಪಾಠಿಗೆ ೨೦೦೫ರಲ್ಲಿ "ಜನ ಚೇತನಾ ಮಂಚ್" ಸ್ಥಾಪಿಸಲು ಪ್ರೇರಣೆ. ಛತ್ತಿಸಗಡದಲ್ಲಿ ಅದಾಗಲೇ ಬೃಹತ್ ಕೈಗಾರಿಕಾ ಕಂಪೆನಿಗಳು ನೆಲೆಯೂರಿದ್ದವು. ಸಾವಿರಾರು ಎಕರೆ ಅರಣ್ಯ ಹಾಗೂ ಕೃಷಿ ಭೂಮಿ ಖರೀದಿಸಿದ್ದವು. ಅಲ್ಲೆಲ್ಲ ಕಲ್ಲಿದ್ದಲು ಗಣಿಗಳು, ಉಷ್ಣವಿದ್ಯುತ್ ಉತ್ಪಾದನಾ ಸ್ಥಾವರಗಳು ಹಾಗೂ ಪೂರಕ ಕೈಗಾರಿಕೆಗಳು ಬಿರುಸಿನಿಂದ ಕಾರ್ಯವೆಸಗುತ್ತಿದ್ದವು. ಇದರಿಂದಾಗಿ ಪ್ರಾಕೃತಿಕ ಸಂಪನ್ಮೂಲಗಳ ಲೂಟಿ, ರೈತರನ್ನು ಬಲ ಪ್ರಯೋಗಿಸಿ ಒಕ್ಕಲೆಬ್ಬಿಸುವುದು, ತಲೆತಲಾಂತರದಿಂದ ಬೆಟ್ಟಗಳಲ್ಲಿ ಕಾಡುಮೇಡುಗಳಲ್ಲಿದ್ದ ಅರಣ್ಯವಾಸಿಗಳ ಬದುಕಿನ ಆಸರೆಯಾದ ನೆಲೆಗಳ ಧ್ವಂಸ - ಇವೆಲ್ಲ ಕಾನೂನುಬಾಹಿರವಾಗಿ ಜರುಗುತ್ತಿದ್ದವು.
ಆದ್ದರಿಂದ ಜನ ಚೇತನಾ ಮಂಚದ ಮೂಲಕ ರಮೇಶ ಮತ್ತು ರಾಜೇಶ್ ಈ ಅನ್ಯಾಯಗಳ ವಿರುದ್ಧ ಕಾರ್ಯಪ್ರವೃತ್ತರಾದರು. ಅವರು ಬಳಸಿದ ಅಸ್ತ್ರ "ಮಾಹಿತಿ ಹಕ್ಕು ಕಾಯಿದೆ." ಧನಬಲದಿಂದ ಬೀಗುತ್ತಿದ್ದ ಪಟ್ಟಭದ್ರ ಹಿತಾಸಕ್ತಿಗಳನ್ನು ಇವರ ಅಹಿಂಸಾತ್ಮಕ ಮಾಹಿತಿ ಹಕ್ಕು ಅರ್ಜಿಗಳು ಅಲುಗಾಡಿಸಿದವು. ಸಾವಿರಾರು ಎಕರೆ ಅರಣ್ಯ ಹಾಗೂ ಕೃಷಿಭೂಮಿಯನ್ನು ಕಾನೂನು ಪ್ರಕಾರ ಪರಿವರ್ತನೆ ಮಾಡದೆ, ಅಲ್ಲಿ ಗಣಿಗಾರಿಕೆ ಮಾಡಲಾಗಿತ್ತು. ಗ್ರಾಮಪಂಚಾಯತುಗಳ ಜೊತೆ ಸಮಾಲೋಚನೆ ಕಡ್ಡಾಯ; ಆದರೆ ಅದನ್ನು ನಡೆಸಿರಲೇ ಇಲ್ಲ ಅಥವಾ ನಡೆಸಲಾಗಿದೆಯೆಂದು ಸುಳ್ಳು ದಾಖಲೆ ಸೃಷ್ಟಿಸಲಾಗಿತ್ತು. ಜಮೀನು ಮತ್ತು ಅಲ್ಲಿದ್ದ ಮರಗಳಿಗೆ ತೀರಾ ಕಡಿಮೆ ಬೆಲೆ ಕಟ್ಟಿ, ಮಾಲೀಕರಿಗೆ ನೀಡಬೇಕಾದ ಪರಿಹಾರ ತೀರಾ ಕಡಿಮೆ ಮಾಡಲಾಗಿತ್ತು. ಖಾಸಗಿ ಕಂಪೆನಿಗಳ ಲಾಭಕ್ಕಾಗಿ ಕಾನೂನಿನ ಹಾಗೂ ಸ್ವಾಧೀನಪಡಿಸುವ ಪ್ರಕ್ರಿಯೆಗಳನ್ನು ತಿರುಚಲಾಗಿತ್ತು. ಪರಿಶಿಷ್ಟ ಪಂಗಡಗಳ ಜನರಿಂದ ಜಮೀನು ಖರೀದಿಗೆ ನಿಷೇಧವಿದೆ; ಅದನ್ನು ಉಲ್ಲಂಘಿಸಿ ಅವರ ಜಮೀನುಗಳನ್ನೂ ಸ್ವಾಧೀನಪಡಿಸಿ ಕೊಳ್ಳಲಾಗಿತ್ತು. ಇವರಿಬ್ಬರು ಮಾಹಿತಿ ಹಕ್ಕು ಕಾಯಿದೆ ಮೂಲಕ ನಡೆಸಿದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದ್ದು ರಬು ಗ್ರಾಮದಲ್ಲಿ - ಕಿರು ಅಣೆಕಟ್ಟು ಯೋಜನೆಯ ನಿರ್ವಸಿತರಿಗೆ ಹೆಚ್ಚಿನ ಪರಿಹಾರ ಒದಗಿಸಿದಾಗ. ಈ ಪ್ರಕರಣದಲ್ಲಿ ಹೆಕ್ಟೇರಿಗೆ ಕೇವಲ ರೂ.೧೦,೦೦೦ ಎಂದು ನಿಗದಿಯಾಗಿದ್ದ ಪರಿಹಾರದ ಮೊತ್ತ ಹೆಕ್ಟೇರಿಗೆ ರೂ.೧೦ ಲಕ್ಷಕ್ಕೆ ಏರಿಸಲ್ಪಟ್ಟಿತು!
ಇದೆಲ್ಲದರಿಂದಾಗಿ ಖಾಸಗಿ ಕಂಪೆನಿಗಳು ಹಾಗೂ ಷಾಮೀಲಾದ ಸರಕಾರಿ ಅಧಿಕಾರಿಗಳ ಕಣ್ಣು ಕೆಂಪಾಯಿತು. ಈ ಹೋರಾಟ ನಿಲ್ಲಿಸುವ ಹುನ್ನಾರ ಸಿದ್ಧವಾಯಿತು. ಮೊದಲು ಇವರಿಗೆ ಆಮಿಷ ಒಡ್ಡಿದರು: ದೊಡ್ಡ ಸಾಗಾಣಿಕೆ ಕಂಟ್ರಾಕ್ಟುಗಳನ್ನು ಹಾಗೂ ದೊಡ್ಡ ಹುದ್ದೆಗಳನ್ನು ನೀಡುವ ಆಮಿಷ. ಇವರ ಕೆಲವು ಸಂಗಾತಿಗಳು ಇಂತಹ ಆಮಿಷಗಳಿಗೆ ಬಲಿಯಾದರು. ಆದರೆ ರಮೇಶ್ ಮತ್ತು ರಾಜೇಶ್ ತಮ್ಮ ಹೋರಾಟ ಮುಂದುವರಿಸಿದಾಗ ಅವರಿಗೆ ಒಂದರ ಮೇಲೊಂದು ಬೆದರಿಕೆಗಳು: ರಮೇಶ್ ತನ್ನ ಹೊಟ್ಟೆಪಾಡಿಗಾಗಿ ನಡೆಸುತ್ತಿದ್ದ ಸೈಬರ್ ಕೆಫೆಗೆ ನುಗ್ಗಿ ಹಾನಿ; ಇವರ ಮೇಲೆ ದೈಹಿಕ ಧಾಳಿ; ರಾಜೇಶರ ಮೋಟಾರುಸೈಕಲಿಗೆ ಟ್ರಕ್ಕುಗಳನ್ನು ಢಿಕ್ಕಿ ಹೊಡೆಸಿದ್ದು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ, ಅವನ್ನು ದಾಖಲಿಸಲಿಲ್ಲ. ಒಂದೆರಡು ಬಾರಿ ದಾಖಲಿಸಿದರೂ ಪರಿಣಾಮ ಶೂನ್ಯ. ಆದರೆ ಖಾಸಗಿ ಕಂಪೆನಿಯ ಉದ್ಯೋಗಿಯೊಬ್ಬ ಇವರ ವಿರುದ್ಧ "ಪ್ರಾಣ ಬೆದರಿಕೆ ಒಡ್ಡಿದರು" ಎಂಬ ಸುಳ್ಳು ದೂರು ನೀಡಿದಾಗ ಇವರಿಬ್ಬರನ್ನೂ ಬಂಧಿಸಿ (೨೦೧೧ರಲ್ಲಿ) ಮೂರು ತಿಂಗಳು ಜೈಲಿನಲ್ಲಿ ಇರಿಸಲಾಯಿತು. ಅಂತಿಮವಾಗಿ, ಇವರಿಬ್ಬರೂ ಸುಪ್ರೀಂ ಕೋರ್ಟಿನಿಂದ ಜಾಮೀನು ಪಡೆದು, ಜೈಲಿನಿಂದ ಹೊರಬಂದರು.
ಆದರೆ ರಮೇಶ್ ಅಗರವಾಲ್ ಮತ್ತು ರಾಜೇಶ್ ತ್ರಿಪಾಠಿ ಎದೆಗುಂದಿಲ್ಲ. "ಇವೆಲ್ಲ ಬಡ ಜನರಿಗಾದ ಅನ್ಯಾಯದ ವಿರುದ್ಧ ನಡೆಸುವ ಹೋರಾಟ. ಅವರ ಕೈಬಿಡಲಾಗದು. ಹೋರಾಟ ಮುನ್ನಡೆಯಲೇ ಬೇಕು. ಏನಾಗಲಿದೆಯೋ ಅದಾಗಲಿ" ಎನ್ನುತ್ತಾರೆ ಅವರು.
ಇಂಥವರ ರಕ್ಷಣೆಗಾಗಿ ನಮ್ಮ ದೇಶದಲ್ಲಿ ಯಾವುದೇ ಕಾಯಿದೆಗಳಿಲ್ಲ. ಪ್ರಬಲ ಜನಾಭಿಪ್ರಾಯವೇ ಅವರಿಗೆ ರಕ್ಷಣೆ. ಹೆಚ್ಚೆಚ್ಚು ಜನರು ಮಾಹಿತಿ ಹಕ್ಕು ಕಾಯಿದೆ ಬಳಸ ತೊಡಗಿದರೆ, ಪರಿಸ್ಥಿತಿ ಬದಲಾಗಲು ಸಾಧ್ಯ. ಅಂದರೆ ಪಟ್ಟಭದ್ರ ಶಕ್ತಿಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ಬಹಿರಂಗ ಪಡಿಸುವ ಮಾಹಿತಿಯನ್ನು ದೇಶದ ವಿವಿಧ ಭಾಗಗಳ ಸಾವಿರಾರು ಪ್ರಜೆಗಳು ಮಾಹಿತಿ ಹಕ್ಕು ಅರ್ಜಿ ಬರೆದು ಕೇಳುವ ಕಾರ್ಯತಂತ್ರದ ಬಳಕೆ.
ಚಿತ್ರ ಕೃಪೆ: ತಾರಿಖ್ ಅಜಿಜ್, ಸಿ.ಎಸ್.ಇ.