ಪುಣೆಯಲ್ಲಿ ಕೆಲವು ದಿನಸಿ ಅಂಗಡಿಗಳ ಮಾಲೀಕರು ಕಲಬೆರಕೆಯ ಆಹಾರವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಪಡಿತರ ಚೀಟಿದಾರರು ಈ ಕಾನೂನುಬಾಹಿರ ವ್ಯವಹಾರವನ್ನು ಪ್ರತಿಭಟಿಸಿದರು. ಆದರೆ ಮಾಲೀಕರು ತಮ್ಮ ತಪ್ಪು ತಿದ್ದಿಕೊಳ್ಳಲಿಲ್ಲ.
ಅನಂತರ ಒಂದು ದಿನ ಆ ಅಂಗಡಿಗಳ ಎದುರು ರೆಡ್ ಬ್ರಿಗೇಡ್ (ಕೆಂಪು ಸೈನ್ಯ) ಸದಸ್ಯರು ಜಮಾಯಿಸಿದರು. ಕೆಂಪು ಸೀರೆಗಳನ್ನುಟ್ಟ ಸುಮಾರು ನೂರು ಮಹಿಳೆಯರನ್ನು ಕಂಡು ಅಂಗಡಿ ಮಾಲೀಕರು ಅಧೀರರಾದರು. ಅವರ ಪ್ರತಿಭಟನೆ ಕಂಡು ಬೆಚ್ಚಿಬಿದ್ದರು. ಕೊನೆಗೆ ಆ ಮಾಲೀಕರು ಮಾತುಕತೆಗೆ ತಯಾರಾದರು. ಇನ್ನು ಮುಂದೆ ಕಲಬೆರಕೆ ಮಾಡಬಾರದೆಂದು ರೆಡ್ ಬ್ರಿಗೇಡ್ ಮುಂದಾಳುಗಳು ತಾಕೀತು ಮಾಡಿದರು. ಒಂದು ವೇಳೆ ಕಲಬೆರಕೆ ಮಾಡಿದರೆ, ಪುನಃ ರೆಡ್ ಬ್ರಿಗೇಡಿನ ಪ್ರತಿಭಟನೆ ಎದುರಿಸ ಬೇಕಾಗುತ್ತದೆಂದು ಎಚ್ಚರಿಸಿದರು.
ಪುಣೆಯ ರೆಡ್ ಬ್ರಿಗೇಡಿನ ಮುಖ್ಯಸ್ಥೆ ಅಪರ್ಣಾ ದರಾಡೆಗೆ ಈ ಅನುಭವ ಹೊಸತಲ್ಲ. ಔರಂಗಾಬಾದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಾಲ್ಯ ಕಳೆದ ಅಪರ್ಣಾ ಎಂ.ಎ. (ಚರಿತ್ರೆ) ಸ್ನಾತಕೋತ್ತರ ಪದವೀಧರೆ. ೩೫ ವರುಷ ವಯಸ್ಸಿನ ಅಪರ್ಣಾ ಎರಡು ಮಕ್ಕಳ ತಾಯಿ. ಇವರ ಪತಿ ಕಮ್ಯುನಿಸ್ಟ್ ಧೋರಣೆಗಳ ಬೆಂಬಲಿಗರು. ಇದರಿಂದ ಪ್ರಭಾವಿತರಾದ ಅಪರ್ಣಾರಿಗೂ ಸಮಾಜಕ್ಕಾಗಿ ತಾನೂ ಏನಾದರೂ ಮಾಡಬೇಕೆನಿಸಿತು. ಮಹಿಳೆಯರ ಮೇಲೆ ಎಲ್ಲ ರೀತಿಯ ದೌರ್ಜನ್ಯಗಳು ನಡೆಯುತ್ತಿದ್ದು, ಅವರನ್ನು ಬೆಂಬಲಿಸಲು ಯಾರೂ ಇಲ್ಲವೆಂಬುದನ್ನು ಅಪರ್ಣಾ ಗಮನಿಸಿದರು. “ಏಕಾಂಗಿ ಮಹಿಳೆ ತಾನೇ ಮುಂದಾಗಿ ಅನ್ಯಾಯಗಳನ್ನು ಪ್ರತಿಭಟಿಸುವುದು ಕಷ್ಟ. ಆದ್ದರಿಂದ ನಾವು ಸಂಘಟಿತರಾಗಿ ಹೋರಾಡಲು ನಿರ್ಧರಿಸಿದೆವು” ಎನ್ನುತ್ತಾರೆ ಅಪರ್ಣಾ.
ಅವರು ಮೊದಲ ಪ್ರತಿಭಟನೆ ಸಂಘಟಿಸಿದ್ದು ೨೦೧೨ರಲ್ಲಿ. ಅಪರ್ಣಾರ ಮುಂದಾಳುತನದಲ್ಲಿ ೨೫ ಮಹಿಳೆಯರು ಪುಣೆಯ ಹತ್ತಿರದ ಒಂದು ಹಳ್ಳಿಗೆ ಹೋದರು. ಅಲ್ಲೊಬ್ಬ ಕುಡುಕ ಗಂಡ ಹೆಂಡತಿಯನ್ನು ಪೀಡಿಸುತ್ತಿದ್ದ. ಅವಳನ್ನು ಮನೆಯಿಂದ ಹೊರಗೆ ಹಾಕುತ್ತೇನೆಂದು ಬೆದರಿಸುತ್ತಿದ್ದ. ಈ ಮಹಿಳೆಯರ ಗುಂಪು ಅವನು ಮಾಡುತ್ತಿರುವುದು ತಪ್ಪೆಂದು ತಿಳಿಸಿ, ಇನ್ನು ಮುಂದೆ ಹಾಗೆ ಮಾಡಬಾರದೆಂದು ಎಚ್ಚರಿಸಿತು. ಕೊನೆಗೆ ಅವಳ ಗಂಡ ಕುಡಿತ ಬಿಡಲು ಒಪ್ಪಿಕೊಂಡು, ಅದರಂತೆಯೇ ನಡೆದುಕೊಂಡ. ಈಗ ಇವರ ಕಾರ್ಯಕ್ರಮಗಳಿಗೆ ತನ್ನ ಪತ್ನಿಯನ್ನು ಅವನೇ ಕರೆದು ತರುತ್ತಾನೆ.
ಈ ಘಟನೆ, ಅಪರ್ಣಾ ದರಾಡೆ ಮತ್ತು ಅವಳ ಸಂಗಡಿಗರಿಗೆ ಧೈರ್ಯ ನೀಡಿತು. ಅನಂತರ ಆವರು ಪುಣೆಯ ಕಾಳೇವಾಡಿಯಲ್ಲಿ ಸಭೆ ಸೇರಿ, ತಮ್ಮ ಸಂಘಟನೆಗೆ ಅಹಲ್ಯಾಬಾಯಿ ರಂಗಣೇಕರ ಬ್ರಿಗೇಡ್ ಅಥವಾ ರೆಡ್ ಬ್ರಿಗೇಡ್ ಎಂದು ಹೆಸರಿಟ್ಟರು. (ಅಹಲ್ಯಾಬಾಯಿ ಕಮ್ಯುನಿಸ್ಟ್ ಮುಂದಾಳು ಆಗಿದ್ದರು.) ಈಗ ಪ್ರತಿ ಗುರುವಾಗ ರೆಡ್ ಬ್ರಿಗೇಡಿನ ಸದಸ್ಯರು ಸಭೆ ಸೇರಿ ಚರ್ಚಿಸುತ್ತಾರೆ. ಸಂತ್ರಸ್ತ ಮಹಿಳೆಯರ ಸಮಸ್ಯೆ ಪರಿಹರಿಸಲು ಅವರು ಮಧ್ಯಸ್ಥಿಕೆ ವಹಿಸುತ್ತಾರೆ. ಅದರಿಂದ ಸಮಸ್ಯೆ ನಿವಾರಣೆ ಆಗದಿದ್ದರೆ, ಕಾನೂನು ಕ್ರಮ ಕೈಗೊಳ್ಳುತ್ತಾರೆ.
ಅಪರ್ಣಾ ದರಾಡೆ ನೆನಪು ಮಾಡಿಕೊಳ್ಳುವ ಪ್ರಕರಣವೊಂದು ಹೀಗಿದೆ: ಪುಣೆಯ ಅಕುರ್ಡಿಯ ಒಬ್ಬ ಕಾಲೇಜು ಪ್ರಿನ್ಸಿಪಾಲ್ ಕಾಲೇಜಿನ ಮಹಿಳಾ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ಪೀಡಿಸಿದ; ಅವರು ಇದನ್ನು ಯಾರಿಗೂ ತಿಳಿಸಬಾರದೆಂದು ಬೆದರಿಸಿದ. ಕೊನೆಗೆ ಇಬ್ಬರು ಪೀಡಿತ ಮಹಿಳಾ ವಿದ್ಯಾರ್ಥಿಗಳು ರೆಡ್ ಬ್ರಿಗೇಡನ್ನು ಸಂಪರ್ಕಿಸಿದರು. ಎಲ್ಲ ವಿವರಗಳನ್ನೂ ಪರಿಶೀಲಿಸಿದ ರೆಡ್ ಬ್ರಿಗೇಡ್ ಮುಂದಾಳುಗಳು ಪ್ರಿನ್ಸಿಪಾಲರ ವಿರುದ್ಧ ಕೇಸ್ ದಾಖಲಿಸಲಿಕ್ಕಾಗಿ ಪೊಲೀಸ್ ಠಾಣೆಗೆ ಹೋದರು. ಪೊಲೀಸರು ಆರಂಭದಲ್ಲಿ ನಿರಾಕರಿಸಿದರೂ, ೫೦-೬೦ ರೆಡ್ ಬ್ರಿಗೇಡ್ ಸದಸ್ಯೆಯರು ಒಟ್ಟಾಗಿ ಒತ್ತಾಯಿಸಿದಾಗ, ಎಫ್ಐಆರ್ ದಾಖಲಿಸಿದರು. ಅನಂತರ ಆ ಪ್ರಿನ್ಸಿಪಾಲರ ಅಮಾನತು ಮಾಡಿ, ಅಂತಿಮವಾಗಿ ಆತನಿಗೆ ಮೂರು ವರುಷ ಜೈಲು ಶಿಕ್ಷೆಯಾಗಿ, ಈಗ ಅದನ್ನು ಅನುಭವಿಸುತ್ತಿದ್ದಾನೆ.
ರೆಡ್ ಬ್ರಿಗೇಡ್ ಸದಸ್ಯೆಯರಿಗೆ ಬೆದರಿಕೆಗಳು ಬಂದಿಲ್ಲವೆಂದಲ್ಲ. ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಮನೆಯಿಂದ ಹೊರ ಹಾಕಿ, ತನ್ನ ಪ್ರೇಯಸಿಯನ್ನು ಮನೆಗೆ ಕರೆ ತರಲು ಸಂಚು ಹೂಡಿದ್ದ. ಅವನಿದ್ದ ಮನೆ ಅವನ ಪತ್ನಿಯ ಸೊತ್ತು. ಆದರೂ ಆತ ಪತ್ನಿಗೆ ಹಿಂಸೆ ನೀಡುತ್ತಿದ್ದ. ಅವನ ಪತ್ನಿಯಿಂದ ದೂರು ಸ್ವೀಕರಿಸಿದ ಅಪರ್ಣಾ, ರೆಡ್ ಬ್ರಿಗೇಡಿನ ಕಚೇರಿಗೆ ಬರಬೇಕೆಂದು ಅವನಿಗೆ ಪತ್ರ ಬರೆದಳು. ಆ ಆಸಾಮಿ ಅಪರ್ಣಾರನ್ನು ನಿಂದಿಸಿದ. ಮಾತ್ರವಲ್ಲ, ಇವರನ್ನು ಬೆದರಿಸಲು ಬಾಡಿಗೆ ಗೂಂಡಾಗಳನ್ನು ಕಳಿಸಿದ. ಆದರೆ, ಅವನ ಮನೆಯೆದುರು ರೆಡ್ ಬ್ರಿಗೇಡಿನ ನೂರು ಮಹಿಳೆಯರು ಜಮಾಯಿಸಿದಾಗ, ಆ ಬಾಡಿಗೆ ಗೂಂಡಾಗಳು ಓಟ ಕಿತ್ತರು. “ಅಂತಿಮವಾಗಿ ಆ ಮನೆಯನ್ನು ಅವನ ಪತ್ನಿಗೇ ಕೊಡಿಸಿದೆವು. ಈಗ ಅವನು ಮಗುವಿನ ಪೋಷಣೆಗಾಗಿ ಪ್ರತಿ ತಿಂಗಳೂ ೬,೦೦೦ ರೂಪಾಯಿ ಪಾವತಿಸುತ್ತಿದ್ದಾನೆ” ಎಂದು ಆ ಪ್ರಕರಣದ ಮುಕ್ತಾಯ ಹಂಚಿಕೊಳ್ಳುತ್ತಾರೆ ಅಪರ್ಣಾ.
ಇನ್ನೊಂದು ಪ್ರಕರಣದಲ್ಲಿ, ರೆಡ್ ಬ್ರಿಗೇಡ್ ನೆರವಿನ ಹಸ್ತ ಚಾಚಿದ್ದು ಒಬ್ಬಳು ವಿಧವೆಗೆ. ಒಂದು ಸೆಲೂನಿನಲ್ಲಿ ದುಡಿಯುತ್ತಿದ್ದ ಅವಳು ಕೆಲಸ ಬಿಟ್ಟಾಗ, ಸೆಲೂನಿನ ಮಾಲೀಕ ಸಂಬಳ ಪಾವತಿಸಲಿಲ್ಲ. ಮಾತ್ರವಲ್ಲ, ಅವಳ ಮೇಲೆ ಕಳವಿನ ಆಪಾದನೆ ಹೊರಿಸಿದ. “ಅವಳು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದಾಗ, ಪೊಲೀಸರು ದೂರು ಸ್ವೀಕರಿಸಲಿಲ್ಲ. ಹಾಗಾಗಿ ಅವಳು ನಮ್ಮಲ್ಲಿಗೆ ಬಂದಳು. ಅನಂತರ, ನಮ್ಮೊಂದಿಗೆ ಪೊಲೀಸ್ ಠಾಣೆಗೆ ಹೋಗಿ ಎಫ್ಐಆರ್ ಫೈಲ್ ಮಾಡಿದಳು” ಎಂದು ನೆನಪು ಮಾಡಿಕೊಳ್ಳುತ್ತಾರೆ ಅಪರ್ಣಾ.
ರೆಡ್ ಬ್ರಿಗೇಡಿನ ಚಟುವಟಿಕೆಗಳಿಗೆ ಬೇಕಾದ ಹಣವನ್ನು ಸದಸ್ಯರಿಂದ ಸಂಗ್ರಹಿಸಲಾಗುತ್ತಿದೆ. ಈಗ ಪುಣೆಯಲ್ಲಿ ರೆಡ್ ಬ್ರಿಗೇಡಿನ ಆರು ಘಟಕಗಳಿವೆ. ಒಂದು ಘಟಕ ಸ್ಥಾಪಿಸಬೇಕಾದರೆ, ಕನಿಷ್ಠ ಐವತ್ತು ಸದಸ್ಯೆಯರು ಇರಬೇಕು ಮತ್ತು ಅವರಲ್ಲಿ ಎದೆಗಾರಿಕೆಯಿರಬೇಕು ಎನ್ನುತ್ತಾರೆ ಅಪರ್ಣಾ ದರಾಡೆ.
ಪುಣೆಯ ಸುತ್ತಲಿನ ಹಳ್ಳಿಗಳಿಗೂ ರೆಡ್ ಬ್ರಿಗೇಡ್ ಆಂದೋಲನ ವಿಸ್ತರಿಸಬೇಕೆಂಬುದು ಅವರ ಹಂಬಲ. ಈ ವರೆಗಿನ ಸಾಧನೆಗಳನ್ನು ಗಮನಿಸಿದರೆ, ಈ ಆಂದೋಲನದ ಇನ್ನಷ್ಟು ಘಟಕಗಳು ಸ್ಥಾಪನೆಯಾಗುವ ದಿನಗಳು ದೂರವಿಲ್ಲ.