ಮದ್ಯ, ತಂಬಾಕು ಉತ್ಪನ್ನ ಮತ್ತು ಸಿಹಿಪೇಯಗಳಿಗೆ ಚಟತಡೆ ತೆರಿಗೆ

ವಸ್ತು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್ಟಿ – ಗೂಡ್ಸ್ ಆಂಡ್ ಸರ್ವಿಸಸ್ ಟಾಕ್ಸ್) ಬಗ್ಗೆ ಸಂಸತ್ತಿನಲ್ಲಿ ಭಾರೀ ಗದ್ದಲ ನಡೆಯಿತು. ಇದು ಅಂಗೀಕರಿಸಲ್ಪಟ್ಟರೆ ನಮ್ಮ ದೇಶಕ್ಕೇನು ಲಾಭ?
ಇದು ಮದ್ಯ, ತಂಬಾಕು ಉತ್ಪನ್ನ ಮತ್ತು ಸಿಹಿಪೇಯಗಳ ಮೇಲೆ ಶೇಕಡಾ ೪೦ ತೆರಿಗೆ ವಿಧಿಸಲಿದೆ. ಜನರು ಇವುಗಳ ಸೇವನೆಯ ಚಟಕ್ಕೆ ದಾಸರಾಗುವುದನ್ನು ತಡೆಯುವುದೇ ಇದರ ಉದ್ದೇಶ. ಜೊತೆಗೆ, ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಎಕ್ಸೈಸ್ ತೆರಿಗೆ ವಿಧಿಸಲು ಕೇಂದ್ರ ಸರಕಾರಕ್ಕೆ ಈ ಮಸೂದೆ ಅಧಿಕಾರ ನೀಡುತ್ತದೆ.
ಈ ಮಸೂದೆ ೧೨೨ನೇ ಸಂವಿಧಾನ ತಿದ್ದುಪಡೆ ಮಸೂದೆ. ಇದನ್ನು ರೂಪಿಸಿದ್ದು, ಜೂನ್ ೨೦೧೫ರಲ್ಲಿ ನೇಮಿಸಲ್ಪಟ್ಟ ಸಮಿತಿ. ಪ್ರಧಾನ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ಮುಖ್ಯಸ್ಥರಾಗಿದ್ದ ಈ ಸಮಿತಿ ವರದಿ ನೀಡಿದ್ದು ಡಿಸೆಂಬರ್ ೨೦೧೫ರಲ್ಲಿ.
ಇಂತಹ ’ಚಟತಡೆ ತೆರಿಗೆ”ಯನ್ನು ವಿವಿಧ ದೇಶಗಳಲ್ಲಿ ವಿಧಿಸಲಾಗುತ್ತಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ. ಯಾವುದೇ ವಸ್ತುವಿನ ಬಳಕೆ ಕಡಿಮೆ ಮಾಡಲು, ಅದಕ್ಕೆ ತೆರಿಗೆ ವಿಧಿಸುವುದು ಪರಿಣಾಮಕಾರಿ ಕ್ರಮ. ಉದಾಹರಣೆಗೆ, ಯುಕೆ (ಬ್ರಿಟನ್) ದೇಶವು ೨೦೧೫ರಲ್ಲಿ ಸಿಗರೇಟಿನ ಚಿಲ್ಲರೆ ಮಾರಾಟ ದರದ ಮೇಲೆ ಶೇ.೧೬.೫ ತೆರಿಗೆ ವಿಧಿಸಿದೆ; ಇದರ ಜೊತೆಗೆ ೨೦ ಸಿಗರೇಟುಗಳ ಪ್ಯಾಕಿನ ಮೇಲೆ ೫.೩೭ ಡಾಲರ್ (ಸುಮಾರು ರೂ.೩೨೨) ತೆರಿಗೆ ಹೇರಿದೆ. ಇದಲ್ಲದೆ, ಶೇ.೨೦ ವ್ಯಾಟನ್ನೂ ವಿಧಿಸಿದೆ. ಇದರಿಂದಾಗಿ, ೨೦೧೪-೧೫ನೇ ವರುಷದಲ್ಲಿ, ಇವುಗಳ ಬಳಕೆ (೨೦೧೩-೧೪ನೇ ವರುಷಕ್ಕೆ ಹೋಲಿಸಿದಾಗ) ಶೇ.೮ ಕಡಿಮೆಯಾಗಿದೆ.
ಬ್ರೆಜಿಲ್ ಮತ್ತು ಈಜಿಪ್ಟಿನಲ್ಲಿಯೂ ಸಿಗರೇಟಿನ ಮೇಲೆ ವಿಧಿಸಿದ ಅಧಿಕ ತೆರಿಗೆಯಿಂದಾಗಿ ಇಂತಹದೇ ಪರಿಣಾಮ ದಾಖಲಾಗಿದೆ. ಬ್ರೆಜಿಲಿನಲ್ಲಿ ೨೦೦೬ರಿಂದ ೨೦೧೩ರ ವರೆಗೆ, ಸಿಗರೇಟಿನ ಸರಾಸರಿ ಮಾರಾಟ ಬೆಲೆಯ ಮೇಲಣ ತೆರಿಗೆಯನ್ನು ಶೇ.೭೪ ಹೆಚ್ಚಿಸಲಾಗಿದೆ. ಇದರಿಂದಾಗಿ, ಅದೇ ಅವಧಿಯಲ್ಲಿ ಸಿಗರೇಟಿನ ಮಾರಾಟ ಶೇ.೩೨ ಕಡಿಮೆಯಾಗಿದೆ. ಈಜಿಪ್ಟಿನಲ್ಲಿ, ಅತ್ಯಂತ ಜನಪ್ರಿಯ ಬ್ರಾಂಡಿನ ಸಿಗರೇಟುಗಳ ಮೇಲಿನ ತೆರಿಗೆಯನ್ನು ೨೦೧೦ರಲ್ಲಿ ಸರಕಾರ ಶೇ.೪೬ ಹೆಚ್ಚಿಸಿತು. ಈ ಕ್ರಮದಿಂದಾಗಿ, ಮುಂದಿನ ಎರಡು ವರುಷಗಳಲ್ಲಿ ಸಿಗರೇಟಿನ ಮಾರಟದಲ್ಲಿ ಶೇ.೧೪ ಇಳಿಕೆ. ಮೆಕ್ಸಿಕೋದಲ್ಲಿ ಸಕ್ಕರೆಯಿಂದ ಸಿಹಿ ಮಾಡಿದ ಸಿಹಿಪೇಯಗಳ ಮೇಲಿನ ತೆರಿಗೆಯನ್ನು ೨೦೧೪ರಲ್ಲಿ ಶೇ.೧೦ ಹೆಚ್ಚಿಸಲಾಯಿತು. ಇದರ ಪರಿಣಾಮ: ಒಂದೇ ವರುಷದಲ್ಲಿ ಸಿಹಿಪೇಯಗಳ ಮಾರಾಟದಲ್ಲಿ ಶೇ.೧೨ ಕುಸಿತ.
ನಮ್ಮ ದೇಶ ಇವೆಲ್ಲ ಬೆಳವಣಿಗೆಗಳಿಂದ ದೊಡ್ಡ ಪಾಠ ಕಲಿಯಬೇಕಾಗಿದೆ. ಯಾಕೆಂದರೆ ನಮ್ಮಲ್ಲಿ ತಂಬಾಕು ಉತ್ಪನ್ನಗಳು, ಮದ್ಯ ಮತ್ತು ಸಕ್ಕರೆಯಿಂದ ಸಿಹಿ ಮಾಡಿದ ಸಿಹಿಪೇಯಗಳ ಬಳಕೆ ಆತಂಕ ಪಡಬೇಕಾದ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಈ ಬೆಳವಣಿಗೆ ಹಾಗೂ ಪೋಷಕಾಂಶಗಳ ಮತ್ತು ವ್ಯಾಯಾಮದ ಕೊರತೆಯು ಸಕ್ಕರೆಕಾಯಿಲೆ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಶ್ವಾಸಕೋಶಗಳ ಕಾಯಿಲೆಗಳಿಗೆ ಕಾರಣವಾಗಿವೆ. ಈ ನಾಲ್ಕು ಕಾಯಿಲೆಗಳು ನಮ್ಮ ದೇಶದ ಶೇ.೬೬ ಸಾವುಗಳಿಗೆ ಕಾರಣ.
ಮುಖ್ಯವಾಗಿ, ಚಟತಡೆ ತೆರಿಗೆಯು ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ಆರೋಗ್ಯ ಸಂಬಂಧಿ ದುಷ್ಪರಿಣಾಮಗಳನ್ನು ಭಾರತದಲ್ಲಿ ಕಡಿಮೆ ಮಾಡಲಿದೆ. “ಭಾರತದಲ್ಲಿ ಆ (ನಾಲ್ಕು) ಕಾಯಿಲೆಗಳ ಪ್ರಧಾನ ಕಾರಣ ತಂಬಾಕು ಬಳಕೆ. ಆದ್ದರಿಂದ ಎಲ್ಲ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಅತ್ಯಧಿಕವಾಗಿರಬೇಕು” ಎನ್ನುತ್ತಾರೆ ಪಂಕಜ್ ಚತುರ್ವೇದಿ, ಕ್ಯಾನ್ಸರ್ ಪರಿಣತ ಮತ್ತು ಅಸೋಸಿಯೇಟ್ ಪ್ರೊಫೆಸರ್, ಟಾಟಾ ಸ್ಮಾರಕ ಕೇಂದ್ರ, ಮುಂಬೈ. ಜಾಗತಿಕ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್.ಓ.)ಯ ಅಧ್ಯಯನಗಳ ಪ್ರಕಾರ, ಎಲ್ಲ ದೇಶಗಳು ಸಿಗರೇಟು ಪ್ಯಾಕುಗಳ ಮೇಲಿನ ತೆರಿಗೆಯನ್ನು ಶೇ.೫೦ ಹೆಚ್ಚಿಸಿದರೆ ಜಗತ್ತಿನಲ್ಲಿ ಸಿಗರೇಟಿನಿಂದಾಗುವ ೧೧ ದಶಲಕ್ಷ ಸಾವುಗಳನ್ನು ತಡೆಯಬಹುದು.
ಭಾರತದ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನ (ಪಿಎಚ್ಎಫ್ಐ) ೨೦೧೪ರಲ್ಲಿ ಪ್ರಕಟಿಸಿದ “ಭಾರತದಲ್ಲಿ ತಂಬಾಕು ಸಂಬಂಧಿ ರೋಗಗಳ ಆರ್ಥಿಕ ಹೊರೆ” ಎಂಬ ವರದಿ ಬೆಚ್ಚಿ ಬೀಳಿಸುವ ವಿಷಯ ತಿಳಿಸಿದೆ: ಅದರ ಪ್ರಕಾರ, ೨೦೧೧ರಲ್ಲಿ ಈ ಆರ್ಥಿಕ ಹೊರೆ (೩೫ರಿಂದ ೬೯ ವರುಷ ವಯಸ್ಸಿನ ವ್ಯಕ್ತಿಗಳಿಗೆ ಸಂಬಂಧಿಸಿದಂತೆ) ರೂ.೧,೦೪೫ ಬಿಲಿಯನ್. ಇದು ೨೦೧೧-೧೨ರಲ್ಲಿ ಕೇಂದ್ರ ಸರಕಾರ ಮತ್ತು ಎಲ್ಲ ರಾಜ್ಯ ಸರಕಾರಗಳು ಆರೋಗ್ಯ ರಕ್ಷಣೆಗಾಗಿ ಮಾಡಿದ ಒಟ್ಟು ವೆಚ್ಚಕ್ಕಿಂತ ಶೇ.೧೨ ಜಾಸ್ತಿ! ಅಂದರೆ, ಸರಕಾರಗಳು ಆರೋಗ್ಯ ರಕ್ಷಣೆಗಾಗಿ ಮಾಡಿದ ಎಲ್ಲ ವೆಚ್ಚವನ್ನೂ ಕೇವಲ ತಂಬಾಕು ಸಂಬಂಧಿ ರೋಗಗಳ ಚಿಕಿತ್ಸೆಗಾಗಿ ಬಳಸಿದರೂ, ಅದು ಸಾಕಾಗುವುದಿಲ್ಲ! ಅದೇ ವರುಷ, ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಕೇಂದ್ರ ಸರಕಾರ ವಸೂಲಿ ಮಾಡಿದ ಕೇಂದ್ರೀಯ ಎಕ್ಸೈಸ್ ತೆರೆಗೆಯು, ತಂಬಾಕಿನ ಆರ್ಥಿಕ ಹೊರೆಯ ಕೇವಲ ಶೇ.೧೭ ಎಂಬುದನ್ನು ಗಮನಿಸಿ.
ಆದ್ದರಿಂದ, ವಸ್ತು ಮತ್ತು ಸೇವಾ ತೆರಿಗೆ ಮಸೂದೆಗೆ ಸಂಸತ್ ತುರ್ತಾಗಿ ಅಂಗೀಕಾರ ನೀಡಬೇಕಾಗಿದೆ. ಅನಂತರ, ಅದರ ಪ್ರಕಾರ ಮದ್ಯ, ತಂಬಾಕು ಉತ್ಪನ್ನಗಳು ಮತ್ತು ಸಕ್ಕರೆಯಿಂದ ಸಿಹಿ ಮಾಡಿದ ಸಿಹಿಪೇಯಗಳ ಮೇಲೆ ಜಬರದಸ್ತಾಗಿ ಜಾಸ್ತಿ ತೆರಿಗೆ ವಿಧಿಸಬೇಕಾಗಿದೆ. ಒಟ್ಟು ಜನಸಂಖ್ಯೆಯ ಶೇ.೪೦ ಯುವಜನರು ಇರುವ ನಮ್ಮ ದೇಶದಲ್ಲಿ ಹೆಚ್ಚೆಚ್ಚು ಯುವಜನರು ಇವುಗಳ ಚಟಗಳಿಗೆ ಬಲಿಯಾಗಿ, ರೋಗಪೀಡಿತರಾಗಿ ಬವಣೆ ಪಡುವುದನ್ನು ತಪ್ಪಿಸಲು ಇದೊಂದು ಪರಿಣಾಮಕಾರಿ ಕ್ರಮವಾಗಲಿ.
ಫೋಟೋ ಕೃಪೆ: ವೀಕ್ ವಾರಪತ್ರಿಕೆಯ ಹೆಲ್ತ್ ಪುರವಣಿ