ಭೋಪಾಲ್ ವಿಷಾನಿಲ ದುರಂತ: ನ್ಯಾಯಕ್ಕಾಗಿ ಕಾಯುತ್ತಿರುವ ಸಂತ್ರಸ್ತರು

ಡಿಸೆಂಬರ್ ೩, ೧೯೮೪ರ ಮಧ್ಯರಾತ್ರಿಯ ನಂತರ ಭೋಪಾಲ ಸ್ಮಶಾನವಾಯಿತು - ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಕಾರ್ಖಾನೆಯಿಂದ ಸೋರಿದ ವಿಷಾನಿಲಕ್ಕೆ ಸಾವಿರಾರು ಜನ ಬಲಿಯಾದರು. ಅದಾಗಿ ಮೂವತ್ತೇಳು ವರುಷಗಳು ದಾಟಿದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ!

ಆ ಕರಾಳ ರಾತ್ರಿ ಅಲ್ಲಿ ಆದದ್ದೇನು? ಆ ರಾತ್ರಿಯ ಭಯಾನಕ ಮೃತ್ಯುಸರಣಿಯನ್ನು ವಿವರಿಸಲು ಶಬ್ದಗಳೇ ಇಲ್ಲ. ಅವತ್ತು ಅಮೇರಿಕದ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಒಡೆತನದ ಕೀಟನಾಶಕ ಉತ್ಪಾದನಾ ಕಾರ್ಖಾನೆಯಿಂದ ೪೦ ಟನ್ ಮಿಥೈಲ್ ಐಸೊಸಯನೇಟ್ (ಎಂಐಸಿ) ಎಂಬ ಮಾರಕ ಅನಿಲ ಸೋರಿಕೆ. ವರದಿಗಳ ಅನುಸಾರ, ಆ ಕಾರ್ಖಾನೆಯ “ಸಿ" ಘಟಕದಲ್ಲಿ ೪೨ ಟನ್ ಎಂಐಸಿ ತುಂಬಿದ್ದ ಟ್ಯಾಂಕ್ ಸಂಖ್ಯೆ ೬೧೦ಕ್ಕೆ ನೀರು ಪ್ರವೇಶಿಸಿದ್ದು ಅನಿಲ ಸೋರಿಕೆಗೆ ಕಾರಣ.

ಇದರ ಪರಿಣಾಮವಾಗಿ ಆ ಟ್ಯಾಂಕಿನಲ್ಲಿ ರಾಸಾಯನಿಕ ಕ್ರಿಯೆಗಳ ಸರಣಿ ಜರಗಿ, ವಿಷಾನಿಲ ಎಂಐಸಿ ವಾತಾವರಣಕ್ಕೆ ನುಗ್ಗಿತು. ಅಲ್ಲಿಂದ ಹೊರ ನುಗ್ಗಿದ ಅನಿಲದ ಮೋಡದಲ್ಲಿ ಎಂಐಸಿ ಮಾತ್ರವಲ್ಲದೆ, ಮನುಷ್ಯರನ್ನೂ ಪ್ರಾಣಿಗಳನ್ನೂ ಕೊಲ್ಲುವ ಇಂಗಾಲದ ಮೊನೋಕ್ಸೈಡ್, ಜಲಜನಕ ಸಯನೈಡ್ ಇತ್ಯಾದಿ ಅನಿಲಗಳೂ ಇದ್ದವು. ಮುಂಜಾನೆಯ ತಣ್ಣಗಿನ ಗಾಳಿ ವೇಗವಾಗಿ ಬೀಸುತ್ತಿದ್ದಂತೆ, ಕಾರ್ಖಾನೆಯ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಲ್ಲಿ ಪ್ರಾಣಾಂತಿಕ ಅನಿಲಗಳು ಹರಡಿದವು. ಬೆಳಗಾಗುವಷ್ಟರಲ್ಲಿ ೫,೦೦,೦೦೦ಕ್ಕಿಂತ ಅಧಿಕ ಜನರು ಈ ವಿಷಾನಿಲಗಳನ್ನು ಉಸಿರಾಡಿ ತೊಳಲಾಡಿದರು.

ಮಧ್ಯಪ್ರದೇಶ ಸರಕಾರದ ಅಂದಾಜಿನಂತೆ, ಈ ಭಯಂಕರ ಅವಘಡದಲ್ಲಿ ೩,೭೮೭ ಜನರ ಸಾವು. ಆದರೆ, ಮಾಧ್ಯಮಗಳ ವರದಿಗಳ ಅನುಸಾರ ೧೬,೦೦೦ದಿಂದ ೩೦,೦೦೦ ಜನರು ಪ್ರಾಣ ಕಳೆದುಕೊಂಡರು ಮತ್ತು ಸುಮಾರು ೫,೦೦,೦೦೦ ಜನರು ಆರೋಗ್ಯಹಾನಿಗೆ ಒಳಗಾದರು.

ಮುಂದೇನಾಯಿತು?
ಅಲ್ಲಿ ಅನಂತರ ನಡೆದದ್ದೆಲ್ಲ ನಾಗರಿಕ ಸಮಾಜಕ್ಕೆ ಕಳಂಕ ತಂದ ಸಂಗತಿಗಳು. ವಿಷಾನಿಲ ಸೋರಿಕೆಯ ನಂತರ, ಭೋಪಾಲದ ಜನರು ಬೆಚ್ಚಿ ಬೀಳಿಸುವ ಸಾವಿನ ಸಂಖ್ಯೆ ಮತ್ತು ವಿಷಾನಿಲಗಳ ಘೋರ ಪರಿಣಾಮಗಳಿಂದಾಗಿ ನಲುಗಿ ಹೋದರು. ನಗರದ ಶೇಕಡಾ ೫೦ಕ್ಕಿಂತ ಜಾಸ್ತಿ ಜನರು ಕೆಮ್ಮು, ಕಣ್ಣುಗಳಲ್ಲಿ ತುರಿಕೆ, ಚರ್ಮದಲ್ಲಿ ತುರಿಕೆ ಮತ್ತು ಉಸಿರಾಟದ ತೊಂದರೆಗಳಿಂದ ಸಂಕಟಪಟ್ಟರು. ಸಾವಿರಾರು ಜನರು ಕಣ್ಣು ಕುರುಡಾಗಿ, ಮೈಯಲ್ಲಿ ಹುಣ್ಣುಗಳಾಗಿ ತತ್ತರಿಸಿದರು!

೧೯೮೪ರಲ್ಲಿ ಭೋಪಾಲದಲ್ಲಿ ಕೆಲವೇ ಆಸ್ಪತ್ರೆಗಳಿದ್ದವು. ಅಲ್ಲಿದ್ದ ಎರಡು ಸರಕಾರಿ ಆಸ್ಪತ್ರೆಗಳು ನಗರದ ಅರೆವಾಸಿ ನಾಗರಿಕರಿಗೆ ಚಿಕಿತ್ಸೆ ನೀಡಲು ಸಾಧ್ಯವೇ ಇಲ್ಲದ ಪರಿಸ್ಥಿತಿ. ಸಾವಿರಾರು ಜನರು ಜೀವಭಯದಿಂದ ಕಂಗಾಲಾಗಿದ್ದರು; ಯಾಕೆಂದರೆ ಅವರಿಗೆ ಉಸಿರಾಡಲಿಕ್ಕೂ ಆಗದಂತಹ ಅವಸ್ಥೆ. ವೈದ್ಯರೂ ಗೊಂದಲದಲ್ಲಿದ್ದರು - ಆಸ್ಪತ್ರೆಗಳಿಗೆ ನುಗ್ಗುತ್ತಿದ್ದ ಸಾವಿರಾರು ಜನರು ದಾರುಣ ಸ್ಥಿತಿಗೆ ಕಾರಣವೇನೆಂದು ಅವರಿಗೂ ತಿಳಿದಿರಲಿಲ್ಲ.

ಭೋಪಾಲದ ಜನರು ವಿಷಾನಿಲದಿಂದಾಗಿ ದೀರ್ಘಾವಧಿಯ ಕಾಯಿಲೆ ಹಾಗೂ ಸಂಕಟಗಳಿಗೆ ಗುರಿಯಾದರು. ವಿಷಾನಿಲ ಉಸಿರಾಡಿದ ಹಲವು ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಕಲಚೇತನ ಮಕ್ಕಳಿಗೆ ಜನ್ಮವಿತ್ತರು. ವಿಷಾನಿಲ ಹರಡಿದ್ದ ಪ್ರದೇಶಗಳಲ್ಲಿ ಹುಟ್ಟಿದ ಮಕ್ಕಳಲ್ಲಿ ಕಂಡುಬಂದ ನ್ಯೂನತೆಗಳು: ತಿರುಚಿಕೊಂಡ ಕೈಗಳು ಮತ್ತು ಕಾಲುಗಳು; ಹೆಚ್ಚಿನ ಸಂಖ್ಯೆಯ ಅವಯವಗಳು; ಮಾಂಸಖಂಡ ಹಾಗೂ ಎಲುಬುಗಳ ದೋಷಗಳು; ಕಡಿಮೆ ಮೈತೂಕ ಮತ್ತು ಮೆದುಳಿಗೆ ಹಾನಿ.

ಆ ಡಿಸೆಂಬರ್ ೩ನೇ ತಾರೀಖಿನ ನಂತರ ಭೋಪಾಲದಲ್ಲಿ “ಸತ್ತು ಹುಟ್ಟಿದ” ಮಕ್ಕಳ ಸಂಖ್ಯೆಯಲ್ಲಿ ಶೇಕಡಾ ೩೦೦ ಹೆಚ್ಚಳ ಮತ್ತು “ಹುಟ್ಟಿದ ನಂತರ ಬೇಗನೇ ಸತ್ತ" ಶಿಶುಗಳ ಸಂಖ್ಯೆಯಲ್ಲಿ ಶೇಕಡಾ ೨೦೦ ಹೆಚ್ಚಳ! ಅಲ್ಲಿ ಈಗಲೂ ಸಾವಿರಾರು ಜನರು ವಿಷಾನಿಲ ಉಸಿರಾಟದ ದಾರುಣ ದುಷ್ಪರಿಣಾಮಗಳಿಂದಾಗಿ ಬದುಕಿಯೂ ಸತ್ತವರಂತೆ ಇದ್ದಾರೆ!
ಭೋಪಾಲ ಅನಿಲ ದುರಂತದ ನಂತರ ಸರಕಾರ ಕೈಗೊಂಡ ಕ್ರಮಗಳು
ಜಗತ್ತಿನಾದ್ಯಂತ ಸುದ್ದಿಯಾದ ಭೋಪಾಲ ಅನಿಲ ದುರಂತದ ನಂತರ, ಭಾರತ ಸರಕಾರವು ಯೂನಿಯನ್ ಕಾರ್ಬೈಡ್ ಮತ್ತು ಯುಎಸ್‌ಎ ಸರಕಾರದೊಂದಿಗೆ ಕಾನೂನು ಸಮರ ಶುರು ಮಾಡಿತು. ಭೋಪಾಲ ಅನಿಲ ಸೋರಿಕೆ ಕಾಯಿದೆಯನ್ನು ಭಾರತ ಸರಕಾರ ೧೯೮೫ರಲ್ಲಿ ಜ್ಯಾರಿ ಮಾಡಿತು. ಇದರ ಅನುಸಾರ, ಭೋಪಾಲ ಅನಿಲ ಸಂತ್ರಸ್ತರ ಪ್ರತಿನಿಧಿಯಾಗಿ ಭಾರತ ಸರಕಾರವು ಕಾರ್ಯೋನ್ಮುಖವಾಗಲು ಸಾಧ್ಯವಾಯಿತು.

ಆರಂಭದಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಕೇವಲ ೫ ಮಿಲಿಯ ಡಾಲರ್ ಪರಿಹಾರ ನೀಡಲು ಮುಂದಾಯಿತು. ಭಾರತ ಸರಕಾರ ಇದನ್ನು ನಿರಾಕರಿಸಿ, ೩.೩ ಬಿಲಿಯನ್ ಡಾಲರ್ ಪರಿಹಾರ ಕೇಳಿತು. ಅಂತಿಮವಾಗಿ, ಫೆಬ್ರವರಿ ೧೯೮೯ರಲ್ಲಿ ರಾಜಿಸಂಧಾನಕ್ಕೆ ಸಹಿ ಹಾಕಲಾಯಿತು; ಇದರ ಅನುಸಾರ ತನ್ನಿಂದಾದ ಹಾನಿಗಾಗಿ ೪೭೦ ಮಿಲಿಯನ್ ಡಾಲರ್ ಪರಿಹಾರ ನೀಡಲು ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಒಪ್ಪಿಕೊಂಡಿತು.

ಭಾರತದ ಸುಪ್ರೀಮ್ ಕೋರ್ಟ್ ಈ ಪರಿಹಾರವನ್ನು ಸಂತ್ರಸ್ತರಿಗೆ ಪಾವತಿಸಲಿಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ, ಆದೇಶ ನೀಡಿತು: ಅನಿಲ ಸೋರಿಕೆಯಿಂದ ಮೃತರಾದವರ ವಾರೀಸುದಾರರಿಗೆ ರೂ. ಒಂದು ಲಕ್ಷದಿಂದ ರೂ. ಮೂರು ಲಕ್ಷ ವರೆಗೆ ಪರಿಹಾರ; ಪೂರ್ತಿಯಾಗಿ ಅಥವಾ ಭಾಗಶಃ ಅಂಗವಿಕಲರಾದವರಿಗೆ ರೂ.೫೦,೦೦೦ದಿಂದ ರೂ.೫ ಲಕ್ಷ ವರೆಗೆ ಪರಿಹಾರ; ತಾತ್ಕಾಲಿಕ ದೈಹಿಕ ಹಾನಿಗೆ ಒಳಗಾದವರಿಗೆ ರೂ.೨೫,೦೦೦ದಿಂದ ರೂ. ಒಂದು ಲಕ್ಷ ವರೆಗೆ ಪರಿಹಾರ.

ಜೂನ್ ೨೦೧೦ರಲ್ಲಿ, ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಏಳು ಮಾಜಿ ಉದ್ಯೋಗಿಗಳಿಗೆ (ಅವರೆಲ್ಲರೂ ಭಾರತೀಯರು) ಎರುಡು ವರುಷಗಳ ಜೈಲು ಶಿಕ್ಷೆ ವಿಧಿಸಲಾಯಿತು - ಅವರ ನಿರ್ಲಕ್ಷ್ಯದಿಂದಾಗಿ ಜನರು ಸತ್ತರು ಎಂಬ ಕಾರಣಕ್ಕಾಗಿ. ಅದೇನಿದ್ದರೂ, ಅವರನ್ನು ಅನಂತರ ಜಾಮೀನಿನಲ್ಲಿ ಬಿಡುಗಡೆ ಮಾಡಲಾಯಿತು.

ಸಂತ್ರಸ್ತರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ!
ಭೋಪಾಲದ ವಿಷಾನಿಲ ಸೋರಿಕೆ ಮಾನವ ಚರಿತ್ರೆಯ ಭಯಾನಕ ಕೈಗಾರಿಕಾ ದುರಂತ. ಆದರೆ ೩೭ ವರುಷಗಳ ನಂತರವೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ ಎಂಬುದು ನಾಗರಿಕ ಸಮಾಜ ನಾಚಿಕೆಯಿಂದ ತಲೆತಗ್ಗಿಸಬೇಕಾದ ಸಂಗತಿ!

ಭೋಪಾಲ ಅನಿಲ ಪೀಡಿತರ ಸಂಘರ್ಷ ಸಹಯೋಗ ಸಮಿತಿಯ ಸಹ-ಸಂಚಾಲಕ ಎನ್.ಡಿ. ಜಯಪ್ರಕಾಶ್ ಇದರ ಬಗ್ಗೆ ಹೇಳುವುದಿಷ್ಟು: ೧೪-೧೫ ಫೆಬ್ರವರಿ ೧೯೮೯ರ ರೂ.೭೦೫ ಕೋಟಿ ಮೌಲ್ಯದ ಸುಪ್ರೀಮ್ ಕೋರ್ಟ್ ನಿರ್ದೇಶಿತ ರಾಜಿಸಂಧಾನಕ್ಕೆ ಆಧಾರ - ಮೃತರ ಸಂಖ್ಯೆ ಕೇವಲ ೩,೦೦೦ ಮತ್ತು ಸಂತ್ರಸ್ತರ ಸಂಖ್ಯೆ ೧,೦೨,೦೦೦ ಎಂಬ ಅಂದಾಜು.
“ಈ ಪರಿಹಾರ ಒಂದು ಕಣ್ಣೊರೆಸುವ ತಂತ್ರ. ಯಾಕೆಂದರೆ, ಪ್ರತಿಯೊಬ್ಬ ಸಂತ್ರಸ್ತನಿಗೆ ಪಾವತಿಸಿದ್ದು, ಆ ಅನ್ಯಾಯದ ರಾಜಿಸಂಧಾನದ ಅನುಸಾರ ಪಾವತಿಸಬೇಕಾಗಿದ್ದ ಪರಿಹಾರ ಹಣದ ಐದನೆಯ ಒಂದು ಭಾಗಕ್ಕಿಂತಲೂ ಕಡಿಮೆ ಹಣವನ್ನು”ಎನ್ನುತ್ತಾರೆ ಜಯಪ್ರಕಾಶ್.
ಅದು ಹೇಗೆಂದು ವಿವರಿಸಲು ವಿನಂತಿಸಿದಾಗ ಅವರಿತ್ತ ವಿವರಣೆ: ೧೯೮೯ರಲ್ಲಿ ಪರಿಹಾರದ ಮೊತ್ತ ೪೭೦ ಮಿಲಿಯ ಡಾಲರ್.  ೨೦೦೪ರಲ್ಲಿ ಪರಿಹಾರದ ಹಣ ಪಾವತಿಸಲು ಸರಕಾರ ಶುರು ಮಾಡಿದಾಗ ಆ ಮೊತ್ತ ರೂ.೩,೦೦೦ ಕೋಟಿ. "ಆ ಹೊತ್ತಿಗೆ, ಸಂತ್ರಸ್ತರ ಸಂಖ್ಯೆ ೫.೭೩ ಲಕ್ಷಕ್ಕೇರಿದ್ದು, ಆ ಮೊತ್ತವನ್ನು ಇವರೆಲ್ಲರಿಗೆ ಹಂಚಲಾಯಿತು. ಇದರಿಂದಾಗಿ, ಪ್ರತಿಯೊಬ್ಬ ಸಂತ್ರಸ್ತನಿಗೆ ಸಿಕ್ಕಿದ್ದು ಸುಪ್ರೀಮ್ ಕೋರ್ಟ್ ಆದೇಶಿಸಿದ ಪರಿಹಾರದ ಐದನೆಯ ಒಂದು ಭಾಗ ಮಾತ್ರ.”

ಭೋಪಾಲ ವಿಷಾನಿಲ ದುರಂತದಲ್ಲಿ ಬದುಕಿ ಉಳಿದವರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸರಕಾರೇತರ ಸಂಸ್ಥೆಗಳ ವಕ್ತಾರರು ಹೇಳುವ ಒಂದು ಮಾತು: ಜಗತ್ತಿನ ಅತ್ಯಂತ ದೊಡ್ಡ ಕೈಗಾರಿಕಾ ದುರಂತವಾಗಿ ೩೭ ವರುಷಗಳ ನಂತರವೂ ಅದಕ್ಕೆ ಹೊಣೆಗಾರರಾದವರಿಗೆ ಶಿಕ್ಷೆ ನೀಡಲು ಮಧ್ಯಪ್ರದೇಶ ಮತ್ತು ಕೇಂದ್ರ ಸರಕಾರಗಳಿಗೆ ಸಾಧ್ಯವಾಗಿಲ್ಲ.

೧೯೮೪ರ ಡಿಸೆಂಬರ ೩ರ ರಾತ್ರಿ ಕೆಲವೇ ಗಂಟೆಗಳಲ್ಲಿ ವಿಷಾನಿಲಕ್ಕೆ ಬಲಿಯಾದವರ, ಅನಂತರ ನರಳಿನರಳಿ ಸತ್ತವರ ಮತ್ತು ಈಗ ಬದುಕಿಯೂ ಸತ್ತಂತಿರುವ ಸಾವಿರಾರು ಜನರ ಶಾಪ ಯಾರ್ಯಾರಿಗೆ ತಟ್ಟಲಿದೆಯೋ…..
ಫೋಟೋ: ನ್ಯಾಯಕ್ಕಾಗಿ ಭೋಪಾಲ ವಿಷಾನಿಲ ಸಂತ್ರಸ್ತರ ಪ್ರತಿಭಟನೆ