ಭೂಮಿಯ ಬಿಸಿಯೇರಿಕೆಯಿಂದ ಸಾಗರಜೀವಿಗಳ ಮೇಲೆ ಅಗಾಧ ಪರಿಣಾಮಗಳಾಗುತ್ತಿವೆ ಎಂದು ಬಹುದೇಶಗಳ ವಿಜ್ನಾನಿಗಳ ತಂಡ ಪತ್ತೆ ಮಾಡಿದೆ. ಆಸ್ಟ್ರೇಲಿಯಾ, ಬ್ರಿಟನ್, ಯುಎಸ್ಎ, ಡೆನ್ಮಾರ್ಕ್, ಸ್ಪೇಯ್ನ್ ಮತ್ತು ಕೆನಡಾ ದೇಶಗಳ ವಿಜ್ನಾನಿಗಳು ಇದರ ಸದಸ್ಯರು.
ಈ ತಂಡವು ಭೂಮಿಯ ಎಲ್ಲ ಸಾಗರಗಳಲ್ಲಿ ಸಂಶೋಧನೆ ನಡೆಸಿತು; ಆಸ್ಟ್ರೇಲಿಯಾದ ಪೂರ್ವ ಮತ್ತು ದಕ್ಷಿಣದ ಸಾಗರ ತೀರಗಳು, ಯುಎಸ್ಎ ದೇಶದ ಪೂರ್ವ ಮತ್ತು ಪಶ್ಚಿಮ ಸಾಗರ ತೀರಗಳು, ಯುರೋಪಿನ ಪಶ್ಚಿಮದ ಅಟ್ಲಾಂಟಿಕ್ ಸಾಗರ ಮತ್ತು ಮೆಡಿಟರೇನಿಯನ್ ಸಮುದ್ರಗಳಲ್ಲಿ ವಿಶೇಷ ಅಧ್ಯಯನ ಕೈಗೊಂಡಿತು.
ಈ ಸಾಗರಗಳಲ್ಲಿರುವ ಎಲ್ಲ ಜೀವಿಗಳಿಗೆ ಆಹಾರ ಒದಗಿಸುವುದು ಫೈಟೋಪ್ಲಾಂಕ್ಟನ್ ಎಂಬ ಸಸ್ಯಗಳು. ಭೂಮಿಯ ಮೇಲಣ ಸಸ್ಯಗಳಿಗೆ ಹೋಲಿಸಿದಾಗ, ಇವು ಈಗ ಸರಾಸರಿಯಾಗಿ ಆರು ದಿನ ಮುಂಚೆ ಅರಳುತ್ತಿವೆ. ಹಾಗೆಯೇ, ಹಂಗಾಮಿನಲ್ಲಿ ಮೀನಿನ ಮರಿಗಳು ಹನ್ನೊಂದು ದಿನ ಮುಂಚೆ ಮೊಟ್ಟೆಯೊಡೆದು ಹೊರಬರುತ್ತಿವೆ.
ಮೀನುಗಳು, ಷೆಲ್ ಮೀನುಗಳು, ಪ್ಲಾಂಕ್ಟನ್, ಕ್ರಸ್ಟೇಷಿಯನುಗಳು, ಮ್ಯಾನ್-ಗ್ರೂವುಗಳು, ಸಮುದ್ರಹುಲ್ಲುಗಳು ಇತ್ಯಾದಿ ಸಾಗರಜೀವಿಗಳು ತಮ್ಮ ನೆಲೆಯನ್ನು ಬದಲಾಯಿಸುತ್ತಿವೆ – ಭೂಮಿಯ ಪ್ರತಿಯೊಂದು ಡಿಗ್ರಿ ಸೆಲ್ಷಿಯಸ್ ಬಿಸಿಯೇರುವಿಕೆಗೆ ಪ್ರತಿಕ್ರಿಯೆಯಾಗಿ ಪ್ರತಿಯೊಂದು ದಶಕದಲ್ಲಿ ಸರಾಸರಿ ೭೨ ಕಿಮೀ ದೂರಕ್ಕೆ ತಮ್ಮ ನೆಲೆ ಬದಲಾಯಿಸುತ್ತಿವೆ.
ಕೆಲವು ಸಾಗರಜೀವಿಗಳಂತೂ ಒಂದು ದಶಕದಲ್ಲಿ ೪೭೦ ಕಿಮೀ ತನಕ ಸ್ಥಳಾಂತರ ಮಾಡಿವೆ! ಇದು “ಭೂಮಿಯ ಹವಾಮಾನ ಬದಲಾವಣೆ” ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ವಿಜ್ನಾನಿಗಳ ತಂಡದ ವರದಿಯಲ್ಲಿದೆ.
ಭೂಮಿಯ ಬಿಸಿಯೇರಿಕೆಯಿಂದಾಗಿ ನೆಲದ ಮೇಲಣ ಜೀವಿಗಳೂ ಸ್ಥಳಾಂತರಗೊಳ್ಳುತ್ತಿವೆ – ಆದರೆ, ಪ್ರತಿಯೊಂದು ದಶಕದಲ್ಲಿ ಸರಾಸರಿ ೬ ಕಿಮೀ ದೂರಕ್ಕೆ. ಸಾಗರಜೀವಿಗಳ ಸ್ಥಳಾಂತರ ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳ ದಿಕ್ಕಿಗೆ ಸಂಭವಿಸಿದೆ; ಯಾಕೆಂದರೆ ಸಾಗರಜೀವಿಗಳು ಇನ್ನಷ್ಟು ತಂಪಾದ ನೀರನ್ನು ಬಯಸುತ್ತವೆ.
ಸಾಗರಗಳ ನೀರಿನ ಉಷ್ಣತೆ ಏರಿಕೆಗೆ ಪ್ರತಿಕ್ರಿಯೆಯಾಗಿ ಸಮುದ್ರಜೀವಿಗಳು ಪ್ರತಿ ವರುಷ ಪುನರುತ್ಪಾದನಾ ಚಟುವಟಿಕೆಯನ್ನು ಸರಾಸರಿ ೪.೪ ದಿನ ಮುಂಚಿತವಾಗಿ ಆರಂಭಿಸುತ್ತಿವೆ ಎಂಬುದೂ ಈ ಸಂಶೋಧನೆಯಿಂದ ತಿಳಿದು ಬಂದಿದೆ.
“ಈ ಫಲಿತಾಂಶಗಳು ನಮಗೆ ಆಘಾತ ನೀಡಿವೆ” ಎನ್ನುತ್ತಾರೆ ಕ್ವೀನ್ಸ್-ಲ್ಯಾಂಡ್ ವಿಶ್ವವಿದ್ಯಾಲಯದ ಪ್ರೊ. ಜಾನ್ ಪಾಂಡೊಲ್ಫಿ. ಅವರು ಎಆರ್ಸಿ ಸೆಂಟರ್ ಫಾರ್ ಎಕ್ಸಲೆನ್ಸ್ ಫಾರ್ ಕೋರಲ್ ರೀಫ್ ಸ್ಟಡೀಸಿನ ಮುಖ್ಯಸ್ಠರು. ಈ ಸಂಶೋಧನೆಯಲ್ಲಿ ಅವರ ತಂಡ ೮೫೭ ವಿವಿಧ ಸಾಗರಜೀವಿಗಳಿಗೆ ಸಂಬಂಧಿಸಿದ (ಮೀನುಗಳ ಸಹಿತ) ೨೦೮ ವರದಿಗಳನ್ನು ವಿಶ್ಲೇಷಿಸಿತು; ಈ ವರದಿಗಳ ವಿಷಯ: ಸಾಗರಜೀವಿಗಳ ವಾಸಸ್ಥಾನಗಳ ವ್ಯಾಪ್ತಿ, ಸಂಖ್ಯೆ, ಪುನರುತ್ಪಾದನೆ, ಸಮುದಾಯ ಬದುಕು, ಷೆಲ್ ರಚನೆ ಮತ್ತು ವಯಸ್ಸು.
ಪುರಾತನ ಇಂಧನ (ಪೆಟ್ರೋಲ್, ಡೀಸಿಲ್, ಕಲ್ಲಿದ್ದಲು ಇತ್ಯಾದಿ)ಗಳನ್ನು ಬಳಸಿ, ಮನುಷ್ಯವರ್ಗವು ಭೂಮಿಯ ಜಾಲಕ್ಕೆ ಸೇರಿಸುವ ಉಷ್ಣದ ಶೇಕಡಾ ೮೦ನ್ನು ಸಾಗರಗಳು ಹೀರಿಕೊಳ್ಳುತ್ತಿವೆ; ಆದರೂ, ತಮ್ಮ ಅಗಾಧತೆಯಿಂದಾಗಿ (ನೆಲಭಾಗಕ್ಕೆ ಹೋಲಿಸಿದಾಗ) ಸಾಗರಗಳು ಬಿಸಿಯಾಗುವುದು ನಿಧಾನ. ಹಾಗಿದ್ದರೂ, ಸಾಗರಜೀವಿಗಳಲ್ಲಿ ಹೆಚ್ಚಿನ ಪ್ರಮಾಣದ ಬದುಕಿನ ಬದಲಾವಣೆಗಳು ಆಗಿರುವುದು ಅಚ್ಚರಿದಾಯಕ ಎಂದು ಪಾಂಡೊಲ್ಫಿ ವಿವರಿಸುತ್ತಾರೆ.
ತಮ್ಮ ಸಂಶೋಧನೆಯ ಫಲಿತಾಂಶಗಳ ಆಧಾರದಿಂದ ಈ ಸಂಶೋಧಕರು ನೀಡಿರುವ ಎಚ್ಚರಿಕೆ: ಸಾಗರಜೀವಿಗಳ ಬದುಕಿನ ಪ್ರಧಾನ ಘಟನಾವಳಿಗಳ ಕಾಲಮಾನದಲ್ಲಿ ಆಗಿರುವ ಈ ದೊಡ್ಡ ಬದಲಾವಣೆಗಳು, ಸಾಗರಗಳ ಆಹಾರ ಜಾಲದಲ್ಲಿ ತೊಂದರೆಗಳನ್ನು ಹುಟ್ಟು ಹಾಕಬಹುದು. ಇದರಿಂದಾಗಿ, ಎಲ್ಲ ಸಾಗರಜೀವಿಗಳ ಮತ್ತು ಮನುಷ್ಯರ ಬದುಕಿನ ಮೇಲೆ ಪರಿಣಾಮಗಳು ಆಗಬಹುದು. ಯಾಕೆಂದರೆ, ಮನುಷ್ಯರ ಹಲವಾರು ಸಮುದಾಯಗಳು ತಮ್ಮ ಆಹಾರಕ್ಕಾಗಿ ಸಾಗರಗಳನ್ನು ಅವಲಂಬಿಸಿವೆ.