"ಜೈ ಹಿಂದ್” ಅಥವಾ "ವಂದೇ ಮಾತರಂ” ಎಂದು ಜನಸಂದಣಿಯಲ್ಲಿ ಯಾರು ಕೂಗಿದರೂ ಉಳಿದವರೆಲ್ಲರೂ ಈಗಲೂ ಉತ್ಸಾಹದಿಂದ ದನಿಗೂಡಿಸುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರಭಕ್ತಿಯ ಕಿಚ್ಚು ಹಚ್ಚಿದ ಇಂತಹ ಘೋಷಣೆಗಳನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲಿ ನೆನೆಯೋಣ.
1)ನೇತಾಜಿ ಸುಭಾಷ್ ಚಂದ್ರ ಬೋಸರ "ಜೈ ಹಿಂದ್”
ನೇತಾಜಿ ಸುಭಾಷ್ ಚಂದ್ರ ಬೋಸರು ಭಾರತಕ್ಕೆ ಸ್ವಾತಂತ್ರ್ಯ ಗಳಿಸಲಿಕ್ಕಾಗಿ “ಭಾರತೀಯ ರಾಷ್ಟ್ರೀಯ ಸೈನ್ಯ" (ಐ.ಎನ್.ಎ.) ಸಂಘಟಿಸಿದ್ದು ಚಾರಿತ್ರಿಕ ಬೆಳವಣಿಗೆ. ಎರಡನೇ ಮಹಾಯುದ್ಧದಲ್ಲಿ, ಜಪಾನ್ ಸೈನ್ಯದ ಜೊತೆ ಸೇರಿ ಈ ಸೈನ್ಯವು ಭಾರತವನ್ನು ಲೂಟಿ ಮಾಡುತ್ತಿದ್ದ ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ್ದು ಬ್ರಿಟಿಷರಲ್ಲಿ ನಡುಕ ಹುಟ್ಟಿಸಿತ್ತು. ಐಎನ್‌ಎ ಸೈನಿಕರಿಗೆ ಗೌರವ ಸೂಚಿಸಲಿಕ್ಕಾಗಿ ಸುಭಾಷ್ ಚಂದ್ರ ಬೋಸರು ಈ ಘೋಷಣೆಯನ್ನು ಜನಪ್ರಿಯಗೊಳಿಸಿದರು.
ಇದರ ಮೂಲ ಅದಾಗಲೇ ಭಾರತೀಯರಲ್ಲಿ ಜನಪ್ರಿಯವಾಗಿದ್ದ "ಜೈ ರಾಮ್‌ಜಿ” ಎಂಬ ಘೋಷಣೆ ಎನ್ನುವುದಕ್ಕೆ ಆಧಾರಗಳಿವೆ. ಆದರೆ, ಐಎನ್‌ಎಯಲ್ಲಿ ಭಾರತದ ಎಲ್ಲೆಡೆಯ ಸೈನಿಕರಿದ್ದ ಕಾರಣ, ಸೈನ್ಯದ ಘೋಷಣೆಯನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು ಎಂಬುದು ನೇತಾಜಿಯವರ ಇರಾದೆಯಾಗಿತ್ತು.
2)ಬಂಕಿಂ ಚಂದ್ರ ಚಟರ್ಜಿ ಅವರ "ವಂದೇ ಮಾತರಂ”
ಇದು ಭಾರತ ಮಾತೆಗೆ ನಮಿಸುತ್ತಾ ಗೌರವಾರ್ಪಣೆ ಮಾಡುವ ಘೋಷಣೆ. 1870ರಲ್ಲಿ ಬಂಗಾಲಿ ಕಾದಂಬರಿಕಾರ ಬಂಕಿಂ ಚಂದ್ರ ಚಟರ್ಜಿ ಬರೆದ ಗೀತೆಯ ಶೀರ್ಷಿಕೆ ಇದು. ರಾಷ್ಟ್ರದ ಉದ್ದಗಲದಲ್ಲಿ ರಾಷ್ಟ್ರಭಕ್ತಿಯ ಅಲೆಗಳನ್ನೆಬ್ಬಿಸಿದ ಶ್ರೇಯಸ್ಸು ಈ ಕವನಕ್ಕೆ ಮತ್ತು ಘೋಷಣೆಗೆ ಸಲ್ಲುತ್ತದೆ.
ಆದರೆ, ಬಂಕಿಂ ಚಂದ್ರ ಚಟರ್ಜಿಯವರ “ಆನಂದಮಠ" ಕಾದಂಬರಿ 1882ರಲ್ಲಿ ಪ್ರಕಟವಾಗುವ ತನಕ ಈ ಕವನವು ಜನಸಮುದಾಯದಲ್ಲಿ ಪ್ರಚಾರಕ್ಕೆ ಬಂದಿರಲಿಲ್ಲ. ಈ ಬಂಗಾಲಿ ಕವನ ಆ ಕಾದಂಬರಿಯ ಭಾಗವಾಗಿತ್ತು.
ಸ್ವಾತಂತ್ರ್ಯಾ ನಂತರ, "ವಂದೇ ಮಾತರಂ” ರಾಷ್ಟ್ರಗೀತೆ ಆಗಬೇಕಾಗಿತ್ತು. ಆದರೆ, ಕೆಲವರು ಭಾರತಮಾತೆಗೆ ಭಕ್ತಿಪೂರ್ವಕವಾಗಿ ನಮಿಸುವ ಈ ಗೀತೆಯ ಬಗ್ಗೆ ನಕಾರಾತ್ಮಕ ಟೀಕೆ ಮಾಡಿದ್ದರಿಂದಾಗಿ ಇದು ರಾಷ್ಟ್ರಗೀತೆಯಾಗಿ ಆಯ್ಕೆಯಾಗಲಿಲ್ಲ.
3)ಮೌಲಾನಾ ಹಸ್ರತ್ ಮೊಹಾನಿ ಅವರ “ಇಂಕ್ವಿಲಾಬ್ ಜಿಂದಾಬಾದ್”
ಇದರ ಅರ್ಥ “ಕ್ರಾಂತಿ ಚಿರಾಯುವಾಗಲಿ”. ಇದನ್ನು ಮೌಲಾನಾ ಹಸ್ರತ್ ಮೊಹಾನಿ (1875 - 1951) ಮೊದಲ ಬಾರಿ ಘೋಷಿಸಿದ್ದು 1921ರಲ್ಲಿ. ಮೌಲಾನಾ ಮೊಹಾನಿ ಉತ್ತರಪ್ರದೇಶದ ಉನ್ನವೋ ಜಿಲ್ಲೆಯ ಮೋಹನ್ ಎಂಬಲ್ಲಿ ಜನಿಸಿದವರು. ಕ್ರಾಂತಿಕಾರಿ ಉರ್ದು ಕವಿಯಾಗಿದ್ದ ಅವರ ಕಾವ್ಯನಾಮ ಹಸ್ರತ್. ಕಾರ್ಮಿಕ ಮುಖಂಡ ಹಾಗೂ ವಿದ್ವಾಂಸರಾಗಿದ್ದ ಮೌಲಾನಾ ಹಸ್ರತ್ ಮೊಹಾನಿ 1925ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಸ್ಥಾಪಿಸಿದವರಲ್ಲೊಬ್ಬರು.
ಇವರು 1921ರಲ್ಲಿ ಅಹ್ಮದಾಬಾದಿನಲ್ಲಿ ಜರಗಿದ ಕಾಂಗ್ರೆಸ್ ಪಕ್ಷದ ಮಹಾಧಿವೇಶನದಲ್ಲಿ “ಪೂರ್ಣ ಸ್ವರಾಜ್ಯ”ದ ಬೇಡಿಕೆ ಮಂಡಿಸಿದ್ದರು. ಸ್ವಾತಂತ್ರ್ಯಾ ನಂತರ, ಡಾ. ಬಿ.ಆರ್. ಅಂಬೇಡ್ಕರ್ ಮುಂದಾಳುತನದ ಭಾರತದ ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿ ಇವರು ಆಯ್ಕೆಯಾದರು.
1920ನೇ ದಶಕದಲ್ಲಿ, ಭಗತ್ ಸಿಂಗ್ ಮತ್ತು ಅವರ ಸಂಗಡಿಗರು ಈ ಘೋಷಣೆಯನ್ನು ಸ್ವಾತಂತ್ರ್ಯ ಹೋರಾಟದ ರಣಕಹಳೆಯಾಗಿ ಬಳಸಿದರು. ಅವರ ನವ್ ಜವಾನ್ ಸಭಾ ಮತ್ತು ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನಿನ ಸಭೆಗಳಲ್ಲಿ ಈ ಘೋಷಣೆ ಮೊಳಗುತ್ತಿತ್ತು. 8 ಎಪ್ರಿಲ್ 1929ರಂದು ಭಗತ್ ಸಿಂಗ್ ಮತ್ತು ಬಿ.ಕೆ. ದತ್ತ ಅಸೆಂಬ್ಲಿಯಲ್ಲಿ ಬಾಂಬುಗಳನ್ನು ಎಸೆದು, “ಇಂಕ್ವಿಲಾಬ್ ಜಿಂದಾಬಾದ್" ಎಂದು ಕೂಗಿದ ನಂತರ ಈ ಘೋಷಣೆ ಭಾರತದಲ್ಲಿ ಮಿಂಚಿನಂತೆ ಪ್ರಚಾರವಾಯಿತು.
4) ಮಹಾತ್ಮಾ ಗಾಂಧಿ ಅವರ "ಮಾಡು ಇಲ್ಲವೇ ಮಡಿ” (ಡು ಓರ್ ಡೈ)
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ 1942ನೇ ಇಸವಿ ಸಂಧಿಕಾಲವಾಗಿತ್ತು. ಆಗಷ್ಟೇ ಎರಡನೇ ಮಹಾಯುದ್ಧ ಶುರುವಾಗಿತ್ತು. ಹಾಗೂ, ಸ್ಟಾಫೋರ್ಡ್ ಕ್ರಿಪ್ಸ್ ಮಿಷನ್ ಮುರಿದು ಬಿದ್ದಿತ್ತು. ಯಾಕೆಂದರೆ, ಆ ಮಿಷನ್ ವಾಗ್ದಾನ ಮಾಡಿದ್ದು ಪೂರ್ಣ ಸ್ವಾತಂತ್ರ್ಯವನ್ನಲ್ಲ; ಬದಲಾಗಿ, ಭಾರತವು ಬ್ರಿಟಿಷ್ ರಾಜನ್ ಅಧೀನ ದೇಶವಾಗಿಯೇ ಇರಬೇಕೆಂಬುದನ್ನು! ಇದರಿಂದಾಗಿ, ಎಲ್ಲ ರಾಷ್ಟ್ರ ನಾಯಕರಿಗೂ ಹೋರಾಟವನ್ನು ತೀವ್ರಗೊಳಿಸಲೇ ಬೇಕೆಂಬುದು ಸ್ಪಷ್ಟವಾಗಿತ್ತು.
8 ಆಗಸ್ಟ್ 1942ರಂದು, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮುಂಬೈಯ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಸಭೆ ಸೇರಿತ್ತು. ಸಭೆಯ ನಂತರ ಅಲ್ಲಿ ಜಮಾಯಿಸಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ ಮಹಾತ್ಮಾ ಗಾಂಧಿ ಹೀಗೆಂದರು, "ನಾನು ವೈಸರಾಯ್ ಅನ್ನು ಭೇಟಿಯಾಗಿ, ನಮಗೆ ಸಂಪೂರ್ಣ ಸ್ವಾತಂತ್ರವೇ ಬೇಕೆಂಬುದನ್ನು ಸ್ಪಷ್ಟಪಡಿಸುತ್ತೇನೆ”.
ಅನಂತರ ಅವರು ಜನರಿಗೆ ನೀಡಿದ ಆದೇಶ ಪ್ರತಿಭಟನೆಯ ಹೊಸ ಅಲೆಗೆ ನಾಂದಿಯಾಯಿತು: “ನಾನೀಗ ನಿಮಗೊಂದು ಮಂತ್ರ, ಚುಟುಕಾದ ಮಂತ್ರ, ನೀಡುತ್ತೇನೆ. ಇದನ್ನು ನಿಮ್ಮ ಹೃದಯಗಳಲ್ಲಿ ಮುದ್ರಿಸಿಕೊಳ್ಳಿರಿ - ನಿಮ್ಮ ಪ್ರತಿಯೊಂದು ಉಸಿರಿನಲ್ಲಿಯೂ ಅದಕ್ಕೆ ಪ್ರಾಣ ನೀಡಲಿಕ್ಕಾಗಿ. ಆ ಮಂತ್ರ ಯಾವುದೆಂದರೆ, "ಮಾಡು ಇಲ್ಲವೆ ಮಡಿ". ನಾವು ಭಾರತವನ್ನು ಸ್ವತಂತ್ರಗೊಳಿಸೋಣ ಅಥವಾ ಅದಕ್ಕಾಗಿ ಪ್ರಯತ್ನಿಸುತ್ತಾ ಪ್ರಾಣ ಬಿಡೋಣ. ಗುಲಾಮಿತನದಲ್ಲಿ ಮುಂದುವರಿಯುವ ಭಾರತವನ್ನು ನೋಡುತ್ತಾ ನಾವು ಬದುಕಿರುವುದು ಬೇಡ.”
5)ಯೂಸುಫ್ ಮೆಹರಾಲಿ ಅವರ “ಭಾರತ ಬಿಟ್ಟು ತೊಲಗಿ" (ಕ್ವಿಟ್ ಇಂಡಿಯಾ)
ಇದನ್ನು ರೂಪಿಸಿದ ಟ್ರೇಡ್ ಯೂನಿಯನ್ ಮುಖಂಡರಾದ ಯೂಸುಫ್ ಮೆಹರಾಲಿ ಮುಂಬೈಯ ಮೇಯರ್ ಆಗಿದ್ದವರು.
ಸ್ವಾತಂತ್ರ್ಯ ಹೋರಾಟದ ಅಂತಿಮ ಘಟ್ಟದಲ್ಲಿ ಮಹಾತ್ಮಾ ಗಾಂಧಿ ಈ ಘೋಷಣೆಯನ್ನು ಮೊಳಗಿಸಿದಾಗ ದೇಶದ ಉದ್ದಗಲದಲ್ಲಿ ವಿದ್ಯುತ್ ಸಂಚಾರವಾಯಿತು; ಹೋರಾಟದ ಬಿರುಸು ತಡೆಯಲಾಗದೆ ಬ್ರಿಟಿಷ್ ಆಡಳಿತ ತತ್ತರಿಸಿತು.
ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷದ ಸದಸ್ಯರಾಗಿದ್ದ ಯೂಸುಫ್ ಮೆಹರಾಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು. ಜನಪ್ರಿಯ ನಾಯಕರಾಗಿದ್ದ ಅವರಿಗೆ ಸೈಮನ್ ಕಮಿಷನಿನ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರಿಂದ ಬಲವಾದ ಹೊಡೆತ ಬಿದ್ದ ಕಾರಣ ಹಲವು ತಿಂಗಳುಗಳ ಕಾಲ ಅಸ್ವಸ್ಥರಾಗಿದ್ದರು.
ಇಂದಿಗೂ ಸ್ವಾತಂತ್ರ್ಯ ಹೋರಾಟದ ಈ ಘೋಷಣೆಗಳು ನಮ್ಮಲ್ಲಿ ಪ್ರತಿಭಟನೆ ಮತ್ತು ರಾಷ್ಟ್ರಪ್ರೇಮದ ಕಿಚ್ಚು ಹಚ್ಚಲು ಸಮರ್ಥವಾಗಿವೆ. ಭಾರತದ ಸ್ವಾತಂತ್ರ್ಯಾ ನಂತರದ ಎರಡು ತಲೆಮಾರಿನವರಲ್ಲಿ ಆ ಕಿಚ್ಚಿನ ಬಿಸಿ ಉಳಿದಿದೆ. ಅದನ್ನು ಮುಂದಿನ ತಲೆಮಾರಿನವರಿಗೆ ದಾಟಿಸಬೇಕಾದ ಜವಾಬ್ದಾರಿ ಅವರ ಹೆಗಲ ಮೇಲಿದೆ. ಅದನ್ನು ಸಮರ್ಥವಾಗಿ ನಿಭಾಯಿಸೋಣ. ಯಾಕೆಂದರೆ, ಚರಿತ್ರೆ ಎಂಬುದು ಓದಿ ಮರೆಯಲಿಕ್ಕಲ್ಲ; ಬದಲಾಗಿ, ಮುಂದಿನ ತಲೆಮಾರಿನವರ ಬದುಕಿನ ಸುರಕ್ಷಿತತೆಗಾಗಿ.