ಇವೂ ನೆನಪಿರಲಿ
-ಭಾರತದ ಹಲವು ರಾಜ್ಯಗಳ ಮೇಲೆ ಧಾಳಿ ಮಾಡಿದ ಬ್ರಿಟಿಷ್ ಸೈನ್ಯ, ಆ ರಾಜ್ಯಗಳ ಲಕ್ಷಗಟ್ಟಲೆ ಸೈನಿಕರನ್ನು ಕೊಲೆ ಮಾಡಿತು.
-ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸಾವಿರಾರು ಭಾರತೀಯರನ್ನು ಬ್ರಿಟಿಷರು ಕೊಂದರು.
-ಸ್ವಾತಂತ್ರ್ಯ ಹೋರಾಟವನ್ನು ದಮನ ಮಾಡಲಿಕ್ಕಾಗಿ, ಸಾವಿರಾರು ಭಾರತೀಯರನ್ನು ಬ್ರಿಟಿಷರು ಗಲ್ಲಿಗೇರಿಸಿದರು.
-ಅದಲ್ಲದೆ, ಒಂದನೇ ಮಹಾಯುದ್ಧ ಮತ್ತು 2ನೇ ಮಹಾಯುದ್ಧದಲ್ಲಿ, ಭಾರತೀಯ ಸೈನ್ಯವು ಭಾಗವಹಿಸುವಂತೆ ಬ್ರಿಟಿಷರು ಕುಟಿಲ ತಂತ್ರ ಮಾಡಿದರು. ಜರ್ಮನಿಯ ವಿರುದ್ಧ ಯುದ್ಧಕ್ಕೆ ಬ್ರಿಟಿಷರಿಗೆ ಭಾರತೀಯ ಸೈನ್ಯ ಬೇಕಾಗಿತ್ತು. ಎರಡು ಮಹಾಯುದ್ಧಗಳಲ್ಲಿ ಬಲಿದಾನಗೈದ ಭಾರತೀಯ ಸೈನಿಕರ ಸಂಖ್ಯೆ 1,61,187ಕ್ಕಿಂತ ಅಧಿಕ.
ಇವರೆಲ್ಲರ ಜೀವಕ್ಕೆ ಬೆಲೆ ಕಟ್ಟಲಾದೀತೇ?
ಜಲಿಯಾನಾವಾಲಾ ಬಾಗ್‌ನಲ್ಲಿ ಬ್ರಿಟಿಷರ ಹತ್ಯಾಕಾಂಡದಿಂದ ಇಡೀ ಜಗತ್ತೇ ಆಕ್ರೋಶಗೊಂಡಿತ್ತು. ಯಾಕೆಂದರೆ ಅದು ಅಧಿಕಾರದ ಮದ ತುಂಬಿದ, ರಾಕ್ಷಸೀ ಪ್ರವೃತ್ತಿಯ ಬ್ರಿಟಿಷ್ ಅಧಿಕಾರಿಯೊಬ್ಬನ ಆದೇಶದಂತೆ ನಿರಪರಾಧಿ ಪ್ರಜೆಗಳ ಮೇಲೆ 13-4-1919ರಂದು ಗುಂಡಿನ ಮಳೆಗರೆದು ನಡೆಸಿದ 379 ಜನರ ಕಗ್ಗೊಲೆ. ಬ್ರಿಟಿಷ್ ಸರಕಾರದ ಹಾಗೂ ರಾಜ ಮನೆತನದ ಯಾರಾದರೂ ಈ “ಮಾನವಕುಲದ ಕಳಂಕವಾದ ಕಗ್ಗೊಲೆ” ಬಗ್ಗೆ ಕಿಂಚಿತ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದು ಇದೆಯೇ?
ಭಾರತದ "ಗುರುಕುಲ ಶಿಕ್ಷಣ ವ್ಯವಸ್ಥೆ"ಯನ್ನು ನಾಶ ಮಾಡಿದ ಬ್ರಿಟಿಷರು
ಭಾರತದ ಪಾರಂಪರಿಕ ಜ್ನಾನ ಜಗತ್ತಿನಲ್ಲೇ ಸಾಟಿಯಿಲ್ಲದ್ದು. ಎಲ್ಲದಕ್ಕಿಂತ ಮಿಗಿಲಾಗಿ ಅದು ಭಾರತೀಯರನ್ನು “ಸರ್ವೇ ಜನಃ ಸುಖಿನೋ ಭವಂತು” ಎಂಬಂತಹ ಉದಾತ್ತ ಚಿಂತನೆಗಳ ಆತ್ಮಸ್ಥೈರ್ಯದ ವ್ಯಕ್ತಿಗಳನ್ನಾಗಿ ಪರಿವರ್ತಿಸುತ್ತಿತ್ತು.
ಬ್ರಿಟಿಷರಿಗೆ ಇದು ಬೇಡವಾಗಿತ್ತು. ಯಾಕೆಂದರೆ ಅವರಿಗೆ ತಮ್ಮ ಚಾಕರಿ ಮಾಡುವ ಕೂಲಿಗಳು ಬೇಕಾಗಿತ್ತು. ಭಾರತೀಯರನ್ನು ಗುಲಾಮಿ ಮನಸ್ಥಿತಿಯವರನ್ನಾಗಿ ಮಾಡಲಿಕ್ಕಾಗಿ ನಮ್ಮ ಗುರುಕುಲ ಶಿಕ್ಷಣ ಪದ್ಧತಿಯನ್ನು ಅವರು ವ್ಯವಸ್ಥಿತವಾಗಿ ನಾಶ ಮಾಡಿದರು. ಬದಲಾಗಿ, ಮೆಕಾಲೆ ಶಿಕ್ಷಣ ಪದ್ಧತಿ ಎಂಬ ಬಹು ದೊಡ್ಡ ಹುನ್ನಾರವನ್ನು ಭಾರತದಲ್ಲಿ ಜ್ಯಾರಿ ಮಾಡಲಾಯಿತು. ಅದರ ದುಷ್ಪರಿಣಾಮಗಳನ್ನು ನಾವು ಈಗಲೂ ಅನುಭವಿಸುತ್ತಿದ್ದೇವೆ, ಅಲ್ಲವೇ? ಈ ಸಾಂಸ್ಕೃತಿಕ ನಷ್ಟಕ್ಕೆ ಎಣೆಯುಂಟೇ?
ನಿಜವಾದ ಸ್ವಾತಂತ್ರ್ಯ
ಬ್ರಿಟಿಷರ ಬಗ್ಗೆ ಸಹಾನುಭೂತಿ ಹೊಂದಿರುವ ಮತ್ತು ಬ್ರಿಟಿಷರ ಗುಣಗಾನ ಮಾಡುವ ಕೆಲವರು, ಈ ಎಲ್ಲ ಚಾರಿತ್ರಿಕ ಸತ್ಯಗಳನ್ನು ತಿಳಿಯಬೇಕಾಗಿದೆ. ಸ್ವಾತಂತ್ರ್ಯ ಗಳಿಸಿ, 75 ವರುಷಗಳ ನಂತರವಾದರೂ ದೆಹಲಿಯ “ರಾಜಪಥ”ವು “"ಕರ್ತವ್ಯಪಥ"ವಾಗಿ ಬದಲಾದಂತೆ, ತಮ್ಮ ಚಿಂತನಾಕ್ರಮವನ್ನೇ ಬದಲಾಯಿಸಿಕೊಳ್ಳಬೇಕಾಗಿದೆ. ಅದುವೇ ನಿಜವಾದ “ಸ್ವಾತಂತ್ರ್ಯ".
ಫೋಟೋ: ಜಲಿಯಾನಾವಾಲಾ ಬಾಗ್‌ನಲ್ಲಿ ಬ್ರಿಟಿಷರಿಂದಾದ 379 ಜನರ ಕಗ್ಗೊಲೆಯ ಇನ್ನೊಂದು ದಾಖಲೆ