ಬೊಜ್ಜು ಕರಗಿಸುವ ಮಾತ್ರೆಗಳ ಅಪಾಯ

ತಾವು ಸುಂದರವಾಗಿ ಕಾಣಬೇಕೆಂಬುದು ಬಹುಪಾಲು ಜನರ ಬಯಕೆ. ಕೆಲವರಿಗಂತೂ ತಳಕುಬಳುಕಿನ ಶರೀರ ತಮ್ಮದಾಗಬೇಕೆಂಬ ಮಹದಾಸೆ. ತಮ್ಮ ಜೈತೂಕ ಇಳಿಸಲು ಮ್ಯಾಜಿಕ್ ಮಾತ್ರೆ ಬೇಕೆಂಬ ಹೆಬ್ಬಯಕೆ ಇನ್ನು ಕೆಲವರದು.
ಇಂಥವರ ಆಸೆ ತೀರಿಸುವ ಸೋಗಿನಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ ಕೆಲವು ವಂಚಕ ಉತ್ಪಾದಕರು. ಟಿವಿ ಮಾಧ್ಯಮದ “ಮನೆಯಲ್ಲೇ ಖರೀದಿ ಮಾಡುವ” ಜಾಲದಲ್ಲಿ ಮತ್ತು ಇಂಟರ್ನೆಟ್ನ ಜಾಹೀರಾತುಗಳಲ್ಲಿ ಈ ಉತ್ಪಾದಕರು ನಡೆಸಿದ್ದಾರೆ ತಮ್ಮ ದಂಧೆ.
ಮೈತೂಕ ಇಳಿಸುವ ಮಾತ್ರೆಗಳನ್ನು ಪಥ್ಯದ ಮಾತ್ರೆಗಳು ಅಥಾ ಬೊಜ್ಜು ನಿರೋಧಿ ಔಷಧಿಗಳೆಂದೂ ಕರೆಯಲಾಗುತ್ತದೆ. ಇವು ಏನು? ಇವು ಹಸಿವನ್ನು ನಿಗ್ರಹಿಸುವ ಅಥವಾ ಶರೀರದಲ್ಲಿ ಕ್ಯಾಲೋರಿಗಳ ಹೀರುವಿಕೆ ಬದಲಾಯಿಸುವ ಮೂಲಕ ಬೊಜ್ಜು ಕರಗಿಸುವ ಪ್ರಾಕೃತಿಕ ಅಥವಾ ರಾಸಾಯನಿಕ ವಸ್ತುಗಳು. ಆದರೆ ಈ ಮಾತ್ರೆಗಳ ಬಗ್ಗೆ ನಮಗೆ ತಿಳಿದಿರುವುದು ಅತ್ಯಲ್ಪ. ಬೊಜ್ಜು ಕರಗಿಸಲಿಕ್ಕಾಗಿ ವೈದ್ಯರು ಇವನ್ನು ಶಿಫಾರಸ್ ಮಾಡಬಹುದು; ಆದರೆ ಇವು ಮೈತೂಕ ಇಳಿಸುತ್ತವೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ. ಈ ಮಾತ್ರೆಗಳನ್ನು ಸೇವಿಸುವವರು ಅಡ್ಡಪರಿಣಾಮಗಳಿಂದ ಸಂಕಟ ಪಡುವುದು ಸಾಮಾನ್ಯ.
ವಿಜ್ನಾನಿಗಳೂ ಇಂತಹ ಮ್ಯಾಜಿಕ್ ಮಾತ್ರೆಗಳ ಹುಡುಕಾಟದಲ್ಲಿದ್ದಾರೆ. ಕಳೆದೊಂದು ದಶಕದಲ್ಲಿ “ವ್ಯಾಯಾಮ ಮಾತ್ರೆ”ಗಳೆಂಬ ಹೆಸರಿನಲ್ಲಿ ಇಂತಹ ಹಲವಾರು ಮ್ಯಾಜಿಕ್ ಮಾತ್ರೆಗಳು ಮಾರುಕಟ್ಟೆಗ ಬಂದಿವೆ. ವ್ಯಾಯಾಮದ ಒಳ್ಳೆಯ ಪರಿಣಾಮಗಳನ್ನು ಈ ಮಾತ್ರೆಗಳು ನಕಲಿ ಮಾಡುತ್ತವೆ ಎನ್ನಲಾಗಿದೆ. ಕೆಲವು ಮಾಧ್ಯಮ ವರದಿಗಳಂತೂ ಇವು ಬೇಗನೇ ವ್ಯಾಯಮಕ್ಕೇ ಬದಲಿ ಆಗಲಿವೆ ಎಂದು ಸುದ್ದಿ ಮಾಡಿವೆ. ಅಂದರೆ, ವ್ಯಾಯಾಮ ಬೇಕಾಗಿಲ್ಲ, ಈ ಮಾತ್ರೆ ನುಂಗಿದರೆ ಸಾಕು ಎಂಬಂತೆ! ಇಂತಹ ಕೆಲವು ಮಾತ್ರೆಗಳ ಹೆಸರು: ಎಐಸಿಎಆರ್, ಜಿಡಬ್ಲ್ಯು ೫೦೧೫೧೬, ಜಿಎಸ್ಕೆ ೪೭೧೬, ಎಸ್ಆರ್ ೯೦೦೯, ಐರಿಸಿನ್ ಮತ್ತು ರೆಸ್ವೆರಾಟೊಲ್.
ಪರಿಣಾಮಕಾರಿ ವ್ಯಾಯಾಮ-ಮಾತ್ರೆಗಳ ತಯಾರಿ ಹೇಗೆ ಸಾಧ್ಯ? ಪರಿಣತರ ಪ್ರಕಾರ, ಇದಕ್ಕಾಗಿ ವ್ಯಾಯಾಮದ ಅಣು-ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಆಸ್ಟ್ರೇಲಿಯಾದ ಸಿಡ್ನಿಯ ಸಂಶೋಧಕರು ಇದನ್ನು ಸಾಧಿಸಿದ್ದೇವೆಂದು ಘೋಷಿಸಿದ್ದಾರೆ. “ಸೆಲ್ ಮೆಟಬಾಲಿಸಂ” ಪತ್ರಿಕೆಯ ಅಕ್ಟೋಬರ್ ೨೦೧೫ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಅವರ ಅಧ್ಯಯನದ ವರದಿಯಲ್ಲಿ ವ್ಯಾಯಾಮದ ಪ್ರಥಮ ನೀಲನಕ್ಷೆ ರೂಪಿಸಿದ್ದೇವೆಂದು ಆ ಸಂಶೋಧಕರ ಹೇಳಿಕೆ.
ಸಿಡ್ನಿ ವಿಶ್ವವಿದ್ಯಾಲಯದ ಚಾರ್ಲ್ಸ್ ಪರ್ಕಿನ್ಸ್ ಕೇಂದ್ರವು ಡೆನ್ಮಾರ್ಕಿನ ಕೊಪನ್ ಹೇಗನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಸಿದ ಆ ಸಂಶೋಧನೆಯ ಫಲಿತಾಂಶ ಹೀಗಿದೆ: ವ್ಯಾಯಾಮ ಮಾದುತ್ತಿರುವಾಗ ಸ್ನಾಯುಗಳಲ್ಲಿ ಜರಗುವ ಅಣು-ಪ್ರಕ್ರಿಯೆಗಳು ಸುಮಾರು ೧,೦೦೦. ಈಗ ಮಾರುಕಟ್ಟೆಯಲ್ಲಿರುವ ವ್ಯಾಯಾಮ-ಮಾತ್ರೆಗಳ ಪರಿಣಾಮಗಳನ್ನು ಅವರು ಪರೀಕ್ಷಿಸಿದಾಗ, ಅವುಗಳ ಗುರಿ ಸ್ನಾಯುಗಳ ಕೆಲವೇ ಅಣುಗಳೆಂದು ಕಂಡುಬಂತು.
ಆದರೆ, ಸಿಡ್ನಿ ವಿಶ್ವವಿದ್ಯಾಲಯದ ವ್ಯಾಯಾಮದ ನೀಲಿನಕ್ಷೆಯಿಂದಾಗಿ ಸ್ನಾಯುಗಳ ಹಲವು ಅಣುಗಳನ್ನು ಗುರಿಯಾಗಿಸಿಕೊಂಡ ಮಾತ್ರೆಗಳನ್ನು ಸೃಷ್ಟಿ ಮಾಡಲು, ಆ ಮೂಲಕ ವ್ಯಾಯಾಮದ ಹಲವು ಲಾಭಗಳನ್ನು ಗಳಿಸಲು ಸಹಾಯವಾದೀತು ಎಂಬ ನಿರೀಕ್ಷೆ ಉಂಟಾಗಿದೆ, ಅಷ್ಟೇ.
ಈ ಅಧ್ಯಯನಕ್ಕಾಗಿ ನಾಲ್ಕು ಆರೋಗ್ಯವಂತ ಗಂಡಸರನ್ನು ಆಯ್ಕೆ ಮಾಡಿದರು. ಅವರಿಂದ ಹತ್ತು ನಿಮಿಷ ತೀವ್ರ ವ್ಯಾಯಾಮ ಮಾಡಿಸಿದ ನಂತರ ಅವರ ಮಾಂಸಖಂಡಗಳ ಬಯಾಪ್ಸಿ ಮಾಡಿಸಿದರು. ಇವುಗಳ ಫಲಿತಾಂಶದಿಂದ, ತೀವ್ರ ವ್ಯಾಯಮವು ಶರೀರದಲ್ಲಿ ೧,೦೦೦ಕ್ಕಿಂತ ಜಾಸ್ತಿ ಅಣು-ಪ್ರಕ್ರಿಯೆಗಳ ಬದಲಾವಣೆ ಮಾಡುತ್ತದೆಂಬ ಅಂಶ ಖಚಿತವಾಯಿತು.
ಈ ವರೆಗಿನ ಇಂತಹ ಎಲ್ಲ ಅಧ್ಯಯನಗಳ ಪರಿಶೀಲನಾ ವರದಿಯನ್ನು ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯ ಪ್ರಕಟಿಸಿದೆ. ಅದು “ಟ್ರೆಂಡ್ಸ್ ಇನ್ ಫಾರ್ಮಕಲಜಿಕಲ್ ಸೈನ್ಸಸ್” ನಿಯತಕಾಲಿಕದ ೨ ಅಕ್ಟೋಬರ್ ೨೦೧೫ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಅದರ ಪ್ರಕಾರ “ವ್ಯಾಯಾಮ-ಮಾತ್ರೆ”ಗಳು ಯಾವತ್ತೂ ವ್ಯಾಯಾಮಕ್ಕೆ ಬದಲಿ ಆಗುವುದಿಲ್ಲ. (ಅಂದರೆ, ಈ ಮಾತ್ರೆ ನುಂಗಿ ವ್ಯಾಯಾಮದ ಲಾಭ ಪಡೆಯಲಾಗದು.)
ಈ ಮಾತ್ರೆಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಬಹುಪಾಲು ಸಂಶೋಧಕರೂ ಈ ತೀರ್ಮಾನವನ್ನು ಒಪ್ಪುತ್ತಾರೆ. ಹಾಗಾದರೆ, ಈ ಸಂಶೋಧಕರ ಉದ್ದೇಶವೇನು? ವ್ಯಾಯಾಮ ಮಾಡಲಿಕ್ಕಾಗದ ವ್ಯಕ್ತಿಗಳಿಗೆ ವ್ಯಾಯಾಮದ ಲಾಭಗಳನ್ನು ಒದಗಿಸುವ ವಿಧಾನವೊಂದನ್ನು ಪತ್ತೆ ಮಾಡುವುದೇ ಅವರ ಉದ್ದೇಶ. ಉದಾಹರಣೆಗೆ, ಪಾರ್ಶ್ವವಾಯು ಅಥವಾ ಮೆದುಳುಬಳ್ಳಿಯ ಮುರಿತದಿಂದಾಗಿ ವ್ಯಾಯಾಮ ಮಾಡಲಿಕ್ಕಾಗದವರು.
ಆದ್ದರಿಂದ “ವ್ಯಾಯಾಮ-ಮಾತ್ರೆ”ಗಳು ಅಥವಾ ಬೊಜ್ಜು ಕರಗಿಸುವ ಮಾತ್ರೆಗಳಿಂದ ಯಾವುದೇ ಲಾಭವಿಲ್ಲ. ಬದಲಾಗಿ, ಅವನ್ನು ಸೇವಿಸಿದರೆ ಆರೋಗ್ಯಕ್ಕೆ ಅಪಾಯವಾದೀತು. ಹಾಗಾಗಿ, ವ್ಯಾಯಾಮ ಮಾಡಲು ಸಾಧ್ಯವಿರುವ ಎಲ್ಲರೂ ವ್ಯಾಯಾಮ ಮಾಡುವುದೇ ಜಾಣತನ.
ಫೋಟೋ ಕೃಪೆ: ವೀಕ್ ವಾರಪತ್ರಿಕೆಯ ಹೆಲ್ತ್ ಪುರವಣಿ