ಬಸ್ ಪ್ರಯಾಣ ಪ್ರಸಂಗ

ಆ ದಿನ ಮಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸೇರಿದ್ದೆ - ಚಿಕ್ಕಮಗಳೂರಿಗೆ ಪ್ರಯಾಣಿಸಲಿಕ್ಕಾಗಿ. ನಮ್ಮ ಬಸ್ ಉಜಿರೆ ತಲಪಿದಾಗ ಇಬ್ಬರು ಬಸ್ಸೇರಿ ನನ್ನ ಹಿಂದಿನ ಸೀಟಿನಲ್ಲಿ ಕುಳಿತರು. ಅವರ ಪಕ್ಕದಲ್ಲಿ ಕುಳ್ಳ ವ್ಯಕ್ತಿಯೊಬ್ಬ ಆಸೀನನಾದ.

ಬಸ್ ಉಜಿರೆಯಿಂದ ಹೊರಟಾಗ ಆ ಇಬ್ಬರು ಮಾತಿಗೆ ಶುರುವಿಟ್ಟರು. ಚಾರ್ಮಾಡಿ ಘಾಟಿ ಏರಲು ಬಸ್ ಏದುಸಿರು ಬಿಡುತ್ತಿದ್ದಂತೆ, ಇವರಿಬ್ಬರ ಮಾತು ಜೋರುಜೋರಾಯಿತು. ಅದರಿಂದಾಗಿ ಎಲ್ಲ ಸಹಪ್ರಯಾಣಿಕರಿಗೆ ಕಿರಿಕಿರಿ. ಘಾಟಿ ಏರಿದ ಬಸ್ ಕೊಟ್ಟಿಗೆಹಾರ ಹಾದು, ಬಣಕಲ್ ತಲಪಿತು. ಅಲ್ಲಿಂದ ಬಸ್ ಹೊರಟಾಗಲೂ ತಡೆಬಡೆಯಿಲ್ಲದೆ ಸಾಗಿತ್ತು ಅವರು ಮಾತು. ಆ ತನಕ ಅವರಿಬ್ಬರ ಅಬ್ಬರದ ಮಾತುಕತೆ ಸಹಿಸಿಕೊಂಡಿದ್ದ ಕುಳ್ಳ ಕೊನೆಗೂ ಹೇಳಿಯೇ ಬಿಟ್ಟ. “ಎಷ್ಟು ಮಾತಾಡ್ತೀರಿ ಮಾರಾಯರೇ! ಸ್ವಲ್ಪ ಸುಮ್ಮನಿರಲಿಕ್ಕೆ ಆಗೋದಿಲ್ವಾ? ನನ್ನ ಕಿವಿ ತೂತು ಬಿದ್ದು ಹೋಯಿತು!”

ಈ ಅನಿರೀಕ್ಷಿತ ಪ್ರತಿಕ್ರಿಯೆಯಿಂದಾಗಿ ಅವರಿಬ್ಬರು ಪೆಚ್ಚಾದರು. ತಕ್ಷಣ ಏನು ಹೇಳಬೇಕೆಂದು ತಿಳಿಯದೆ ಮಿಕಿಮಿಕಿ ಕಣ್ ಬಿಟ್ಟರು. ಅಕ್ಕಪಕ್ಕದ ಸೀಟಿನವರೆಲ್ಲ ಅವರಿಬ್ಬರನ್ನೂ ಕುಳ್ಳನನ್ನೂ ನೋಡುತ್ತಿದ್ದರು. ಎಲ್ಲರ ಮುಖದಲ್ಲಿಯೂ ಕುಳ್ಳನ ನೇರ ಮಾತಿಗೆ ಮೆಚ್ಚುಗೆ. ಮುಜುಗರ ತಡೆಯಲಾಗದೆ, ಅವರಲ್ಲೊಬ್ಬ ಕುಳ್ಳನತ್ತ ಮಾತಿನ ಬಾಣವನ್ನೆಸೆದ, "ನಮ್ಮ ಮಾತಿನಿಂದ ನಿಮಗೇನೂ ತೊಂದರೆ ಆಗಿಲ್ಲವಲ್ಲ. ನೀವು ಗಡದ್ದು ನಿದ್ದೆ ಮಾಡಿದ್ದೀರಲ್ಲಾ!"

ಇದಕ್ಕೆ ಕುಳ್ಳನ ಪ್ರತಿಕ್ರಿಯೆ ಏನು ಎಂದು ಎಲ್ಲರಿಗೂ ಕುತೂಹಲ. ಕುಳ್ಳ ಕಣ್ಣು ಮಿಟುಕಿಸದೆ ಉತ್ತರಿಸಿದ, “ಕಣ್ಣು ಮುಚ್ಚಿಕೊಂಡಿದ್ರೆ ನಿದ್ದೆ ಮಾಡಿದ್ದೆ ಅಂತೀರಾ? ನನಗೆ ನಿದ್ದೆ ಮಾಡಬೇಕಿತ್ತು. ಆದರೆ ನಿಮ್ಮ ಮಾತಿನ ಗದ್ದಲದಿಂದಾಗಿ ಒಂದು ನಿಮಿಷಾನೂ ನಿದ್ದೆ ಮಾಡಲಿಕ್ಕೆ ಆಗಲಿಲ್ಲ." ಆಗ ಅವರಿಬ್ಬರ ಮುಖ ಇನ್ನೊಮ್ಮೆ ಹುಳಿತಿಂದ ಮಂಗನ ಮುಖದಂತಾದವು.

ಅನಂತರ, ಅವರಿಬ್ಬರೂ ಪೆಚ್ಚಾಗಿ ಮಾತನಾಡದೆ ಕುಳಿತರು. ಹತ್ತು ನಿಮಿಷಗಳು ಸರಿದಾಗ ಕುಳ್ಳ ಅವರತ್ತ ಇನ್ನೊಂದು ಚಟಾಕಿ ಹಾರಿಸಿದ, “ಮಾತಾಡಿ, ಪರವಾಗಿಲ್ಲ. ಇನ್ನೇನು, ಮೂಡಿಗೆರೆ ಬಂತು. ನಾನಲ್ಲಿ ಇಳಿದು ಬಿಡ್ತೇನೆ.” ಅಕ್ಕಪಕ್ಕದ ಸೀಟಿನವರೆಲ್ಲ ಗೊಳ್ಳೆಂದು ನಕ್ಕರು. ಅನಂತರ, ಬಸ್ಸಿನಿಂದ ಮೂಡಿಗೆರೆಯಲ್ಲಿ ಇಳಿಯುವ ತನಕ ಅವರಿಬ್ಬರು ತುಟಿ ಪಿಟಕ್ಕೆನ್ನಲಿಲ್ಲ.

ಕೈಯಿಂದ ಹಾರಿ ಹೋದದ್ದೇನು?
ಇನ್ನೊಂದು ದಿನವೂ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬಸ್ಸಿನಲ್ಲಿ ಹೊರಟಿದ್ದೆ. ನನ್ನಿಂದ ಎರಡು ಸಾಲು ಮುಂದಿನ ಸೀಟಿನಲ್ಲಿ, ಎಡಬದಿಯಲ್ಲಿ ಕುಳಿತಿದ್ದ ಒಬ್ಬ ಯುವಕ. ಅವನು ಬಿಡಿಸಿ ಓದುತ್ತಿದ್ದದ್ದು “ಉದ್ಯೋಗ ಮಾರ್ಗದರ್ಶಿ” ಪತ್ರಿಕೆ. ಓದುತ್ತಿದ್ದಂತೆ ಅವನ ಮುಖದಲ್ಲಿ ಆಗಾಗ ಮೂಡಿ ಮರೆಯಾಗುತ್ತಿದ್ದ ಮೆಲುನಗು. ಉದ್ಯೋಗದ ಹಗಲುಗನಸು ಕಾಣುತ್ತಿದ್ದಿರಬೇಕು. ಬಸ್ ಫರಂಗಿಪೇಟೆ ದಾಟಿದಾಗ ಅದೆಲ್ಲಿಂದ ಬೀಸಿ ಬಂತೋ ಗಾಳಿ! ಅದರ ರಭಸಕ್ಕೆ ಅವನ ಕೈಯಲ್ಲಿದ್ದ ಪತ್ರಿಕೆ ಹೊರಕ್ಕೆ ಹಾರಿಹೋಯಿತು. ರಸ್ತೆಯಂಚಿನ ಗದ್ದೆಯ ನೀರಿಗೆ ಬಿದ್ದು ಪತ್ರಿಕೆ ಒದ್ದೆ! ಆ ಪತ್ರಿಕೆ ಕಾಣುವಷ್ಟು ಹೊತ್ತು ಆತ ಅದನ್ನು ನೋಡುತ್ತಲೇ ಇದ್ದ. ಪತ್ರಿಕೆ ಕಣ್ಣ ನೋಟದಿಂದ ಮರೆಯಾದಾಗ ಕೇಳಿಸಿದ್ದು ಅವನ ನಿಟ್ಟುಸಿರು.

ಅಜ್ಜಿಯ ಆತಂಕ
ಆ ದಿನ ಕೊಡ್ಲಿಪೇಟೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸೇರಿದೆ. ಅಜ್ಜಿಯೊಬ್ಬರ ಪಕ್ಕದಲ್ಲಿ ಕುಳಿತೆ. “ನೀವೆಲ್ಲಿಗೆ?" ಎಂದು ಅಜ್ಜಿ ಕೇಳಿದಾಗ ನನ್ನ ಉತ್ತರ “ಚಿಕ್ಕಮಗಳೂರಿಗೆ." ತಕ್ಷಣ ಅಜ್ಜಿಯ ವಿನಂತಿ, “ನನಗೆ ಸಕಲೇಶಪುರದಲ್ಲಿ ಇಳೀಬೇಕು. ಬಂದಾಗ ಹೇಳಿ”. ಆಗಬಹುದೆಂಬಂತೆ ತಲೆಯಾಡಿಸಿದೆ. ಹತ್ತು ನಿಮಿಷಗಳ ತರುವಾಯ ಅಜ್ಜಿ ಪುನಃ ನನ್ನತ್ತ ತಿರುಗಿ ಹೇಳಿದರು, “ಸ್ವಲ್ಪ ಮುಂಚೇನೇ ಹೇಳಿ. ನನಗೆ ಗೊತ್ತಾಗೋಲ್ಲ.” "ಸರಿ, ಸರಿ, ಹೇಳ್ತೀನಿ” ಎಂದೆ. ಹದಿನೈದು ನಿಮಿಷಗಳ ನಂತರ ಅಜ್ಜಿ ಪುನಃ ನನ್ನತ್ತಲೇ ನೋಡ ತೊಡಗಿದರು. ಆತಂಕದ ಸ್ವರದಲ್ಲಿ ಅಜ್ಜಿಯ ಮರುವಿನಂತಿ: "ನಾನು ಇದೇ ಮೊದಲ ಸಲ ಹೋಗ್ತಿರೋದು, ಹೇಳ್ತೀರಲ್ಲಾ?” ಅಜ್ಜಿಯ ಆತಂಕ ನಿವಾರಣೆ ಮಾಡಲೇ ಬೇಕಾಗಿತ್ತು. ಅಜ್ಜಿಯತ್ತ ತಿರುಗಿ ನಿಧಾನವಾಗಿ ಹೇಳಿದೆ, “ನೀವೇನೂ ಚಿಂತೆ ಮಾಡಬೇಡಿ. ನೀವು ನಿದ್ದೆ ಮಾಡಿದರೂ ಪರವಾಗಿಲ್ಲ. ಸಕಲೇಶಪುರ ಬಂದಾಗ ಎಬ್ಬಿಸಿ, ನಿಮ್ಮನ್ನು ಇಳಿಸ್ತೇನೆ.”
ಒಂದು ರೂಪಾಯಿ ಚಿಲ್ಲರೆ ಬಾಕಿ ವಸೂಲಿ
ಇದು ೨೦೦೩ರ ಪ್ರಸಂಗ: ಪತ್ನಿ ಮತ್ತು ಮಗಳೊಂದಿಗೆ ಚಿಕ್ಕಮಗಳೂರಿನಲ್ಲಿ ಬಸ್ಸೇರಿದೆ. ಕಂಡಕ್ಟರಿಗೆ ೧೦೦ ರೂಪಾಯಿ ನೋಟು ಕೊಟ್ಟು ಉಜಿರೆಗೆ ಮೂರು ಟಿಕೆಟ್ ಕೇಳಿದೆ. ರೂಪಾಯಿ ೩೩ರ ಮೂರು ಟಿಕೆಟ್ ಹರಿದಿತ್ತ ಕಂಡಕ್ಟರ್ ಹೇಳಿದ, “ಒಂದು ರೂಪಾಯಿ ಚಿಲ್ಲರೆ ಇಲ್ಲ. ಆ ಮೇಲೆ ಕೊಡ್ತೀನಿ.” ಅನಂತರ, ಆಲ್ದೂರು, ಮೂಡಿಗೆರೆ ಮತ್ತು ಬಣಕಲ್ - ಇಲ್ಲೆಲ್ಲ ಪ್ರಯಾಣಿಕರು ಹತ್ತಿ ಇಳಿದರು. ಕಂಡಕ್ಟರ್ ಕೈಗೆ ಸಾಕಷ್ಟು ಚಿಲ್ಲರೆ ನಾಣ್ಯ ಬಂದಿತ್ತು. ಆತ ಕೊಡಬೇಕಾಗಿದ್ದ ಒಂದು ರೂಪಾಯಿ ಕೇಳಿದರೂ ಆತ ಉತ್ತರಿಸಲಿಲ್ಲ. ಮುಂದಿನ ನಿಲ್ದಾಣ ಕೊಟ್ಟಿಗೆಹಾರ. ಅಲ್ಲಿಂದ ಬಸ್ ಹೊರಟಾಗ, ನಾನೇ ಕಂಡಕ್ಟರ್ ಕೈಗೆ ಒಂಭತ್ತು ರೂಪಾಯಿ ನಾಣ್ಯಗಳನ್ನು ಕೊಟ್ಟು “ಹತ್ತು ರೂಪಾಯಿ ಕೊಡಿ” ಎಂದು ಕೇಳಿದೆ. ಕಂಡಕ್ಟರ್ ನನ್ನನ್ನು ಒಂಥರಾ ನೋಡಿ, ಆ ಚಿಲ್ಲರೆ ತಗೊಂಡು, ಹತ್ತು ರೂಪಾಯಿ ನೋಟನ್ನು ಬ್ಯಾಗಿನಿಂದ ತೆಗೆದು ನನಗಿತ್ತ.

ಅವಧಿ ಮುಗಿದ ಉಳಿತಾಯ ಸರ್ಟಿಫಿಕೇಟುಗಳು
ಜೂನ್ ೨೦೦೩ರಲ್ಲೊಂದು ದಿನ ಗೋಣಿಕೊಪ್ಪಲದಲ್ಲಿ ಬೆಳಗ್ಗೆ ಆರೂವರೆ ಗಂಟೆಗೆ ಚಿಕ್ಕಮಗಳೂರಿನ ಬಸ್ಸೇರಿದೆ. ಅರಕಲಗೂಡಿನಲ್ಲಿ ನನ್ನ ಪಕ್ಕದಲ್ಲಿ ಕುಳಿತವರು ಸುಮಾರು ೫೦ ವರುಷ ವಯಸ್ಸಿನ ಮಹಿಳೆ. ಅವಳ ಕಡುನೀಲಿ ಸೀರೆಯಲ್ಲಿ ದೊಡ್ಡ ಕೆಂಪು ಹೂಗಳ ಚಿತ್ತಾರ. ಹಣೆಯ ನೆರಿಗೆಗಳ ಮಧ್ಯೆ ದೊಡ್ಡ ಕೆಂಪು ಬಿಂದಿ. ಕೈಗಳಲ್ಲಿ ಸುಕ್ಕುಗಳನ್ನು ಮರೆಮಾಡಿದ್ದ ಹತ್ತಾರು ಬಳೆಗಳು.

ಸ್ವಲ್ಪ ಸಮಯದ ನಂತರ, ಎಡಗೈಯಲ್ಲಿದ್ದ ಹಳೆಯ ಪ್ಲಾಸ್ಟಿಕ್ ಚೀಲದಿಂದ ಎಂಟು ಹಾಳೆಗಳನ್ನು ತೆಗೆದು ನನ್ನೆದುರು ಹಿಡಿದಳು. “ಇದ್ರದು ಟೈಮ್ ಆಗೇದೇನ್ರೀ?” ಎಂಬುದು ಅವಳ ಪ್ರಶ್ನೆ. ಅವು ಹುಚ್ಚಯ್ಯ ಎಂಬವರ ಹೆಸರಿನಲ್ಲಿದ್ದ ಎಂಟು ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟುಗಳು. ಅವುಗಳಲ್ಲಿ ಹಾಸನದ ಅಂಚೆಕಚೇರಿಯ ಮುದ್ರೆ. ನಾಲ್ಕು ಸರ್ಟಿಫಿಕೇಟುಗಳ ಅವಧಿ ಮುಗಿದು ಎರಡು ವರುಷಗಳಾಗಿದ್ದವು. ಉಳಿದ ನಾಲ್ಕರ ಅವಧಿ ಮುಗಿದು ಒಂದು ವರುಷ ಸರಿದಿತ್ತು. “ಎಲ್ಲದ್ರದ್ದೂ ಟೈಮ್ ಆಗಿದೆ. ಇದ್ಯಾಕೆ ಇಷ್ಟು ದಿನ ಹಾಗೇ ಇಟ್-ಕೊಂಡಿದ್ರಿ?” ಎಂದು ಕೇಳಿದೆ. ಅವಳ ಉತ್ತರ, “ನಮ್ ಮನೆಯವ್ರು ಹೇಳ್ತಿದ್ರು ಎಷ್ಟು ದಿನಾದ್ರೂ ಬಡ್ಡಿ ಸಿಗ್ತದೆಂತ." ಆಕೆಗೆ ವಿವರಿಸಿದೆ, “ಇಲ್ಲ. ಪೋಸ್ಟ್ ಆಫೀಸಿನ ಈ ಸರ್ಟಿಫಿಕೇಟಿಗೆ ಟೈಮ್ ಆದ ಮೇಲೆ ಬಡ್ದಿ ಸಿಗಲ್ಲ. ಹಾಗಾಗಿ ಬೇಗನೇ ಇದ್ರ ದುಡ್ದು ತಗೊಳ್ಳಿ.”

“ನಿಮ್ ಮನೆಯವ್ರು ಏನ್ ಮಾಡ್ತಾರೆ?’ ಎಂದು ಕೇಳಿದಾಗ, "ಈಗ ರಿಟೈರಾಗಿದಾರೆ. ಹಾಸನದ ಹತ್ರ ಸ್ಕೂಲಿನಲ್ಲಿ ಅಟೆಂಡರ್ ಆಗಿದ್ರು. ಆವಾಗ ಇದನ್ನ ಸ್ಕೂಲಿನೋರು ಕೊಟ್ಟಿದ್ರು. ನಮ್‌ಗೆ ಯಾರೂ ಸರಿಯಾಗಿ ಹೇಳ್ಳಿಲ್ಲ. ಈವಾಗ ದುಡ್ಡು ತಗೋಂಬರೋಣ ಅಂತ ಹೊಂಟಿದೀವಿ. ನಮ್ ಮನೆಯವ್ರು ಅಲ್ಲೇ ಕೂತಿದಾರೆ" ಎಂದು ಹುಚ್ಚಯ್ಯನವರನ್ನು ತೋರಿಸಿದಳು. ಇಂತಹ ಅಮಾಯಕರಿಂದ ಆ ಸರ್ಟಿಫಿಕೇಟ್ ಪಡಕೊಂಡು ಯಾರೂ ಮೋಸ ಮಾಡಲಿಲ್ಲವಲ್ಲಾ ಎಂದು ಯೋಚಿಸುತ್ತಿದ್ದಂತೆ ಹಾಸನ ಹತ್ತಿರವಾಗಿತ್ತು.