ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1970ರ ದಶಕದಲ್ಲಿ ಶುರುವಾದ “ಬಳಕೆದಾರರ ಆಂದೋಲನ” ಕೆಲವೇ ವರುಷಗಳಲ್ಲಿ ಜಿಲ್ಲೆಯ ಉದ್ದಗಲದಲ್ಲಿ ವ್ಯಾಪಿಸಿತು. ಆಂದೋಲನದ ಮುಂಚೂಣಿಯಲ್ಲಿದ್ದ ಬಸ್ರೂರು “ಬಳಕೆದಾರರ ವೇದಿಕೆ”ಯ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಹಲವು ಬಳಕೆದಾರರ ವೇದಿಕೆಗಳು ರಚನೆಯಾಗಿ ಕಾರ್ಯಾಚರಿಸ ತೊಡಗಿದವು.
ಕ್ರಮೇಣ ಈ ಆಂದೋಲನವು ಕರ್ನಾಟಕದ ಇತರ ಜಿಲ್ಲೆಗಳಿಗೂ ವ್ಯಾಪಿಸಿತು. ಹಲವು ಜಿಲ್ಲೆಗಳಲ್ಲಿ ಬಳಕೆದಾರರ ವೇದಿಕೆಗಳು ಸ್ಥಾಪನೆಯಾಗಲು ಬಸ್ರೂರು ಬಳಕೆದಾರರ ವೇದಿಕೆ ಪ್ರೇರಣೆಯಾಯಿತು. ಇತರ ರಾಜ್ಯಗಳ ಬಳಕೆದಾರರೂ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಈ ವೇದಿಕೆಯನ್ನು ಸಂಪರ್ಕಿಸತೊಡಗಿದರು. ಕೇಂದ್ರ ಸರಕಾರವು ಬಸ್ರೂರು ಬಳಕೆದಾರರ ವೇದಿಕೆ (ರಿ.)ಗೆ ಮಾನ್ಯತೆ ನೀಡಿದಾಗಿನಿಂದ ಈ ವೇದಿಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು.
ಮಂಗಳೂರಿನಲ್ಲಿಯೂ “ಬಳಕೆದಾರರ ವೇದಿಕೆ (ರಿ.)” ಸ್ಥಾಪಿಸಿ, ಅದನ್ನು ನಾಲ್ಕು ದಶಕಗಳ ಅವಧಿ ನಾನು ಸಂಚಾಲಕನಾಗಿ ಮುನ್ನಡೆಸಿದೆ. ಸುಮಾರು ಇಪ್ಪತ್ತು ವರುಷಗಳ ಅವಧಿ ನಮ್ಮ ಬಳಕೆದಾರರ ವೇದಿಕೆ ಪ್ರತೀ ಶನಿವಾರ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಬಳಕೆದಾರರ ಸಮಸ್ಯೆಗಳನ್ನು ಪರಿಶೀಲಿಸಿ ಮಾರ್ಗದರ್ಶನ ನೀಡುತ್ತಿತ್ತು. ಈ ದೀರ್ಘ ಅವಧಿಯಲ್ಲಿ ಸುಮಾರು 3,000 ಬಳಕೆದಾರರ ಸಮಸ್ಯೆಗಳನ್ನು ನ್ಯಾಯಬದ್ಧವಾಗಿ ಇತ್ಯರ್ಥಪಡಿಸಿದ ಸಾಧನೆ ನಮ್ಮ ವೇದಿಕೆಯದು.
ಅವುಗಳಲ್ಲಿ ಕೆಲವು ಸಮಸ್ಯೆಗಳನ್ನು ನನ್ನ ಈ ಎರಡು ಪುಸ್ತಕಗಳಲ್ಲಿ ದಾಖಲಿಸಿದ್ದೇನೆ: “ಬಳಕೆದಾರರ ಸಂಗಾತಿ” ಮತ್ತು “ಜನಜಾಗೃತಿಯ ಸಾಧನ: ಮಾಹಿತಿ ಮಂಥನ” (ಫೋಟೋ ನೋಡಿ). ಅದಲ್ಲದೆ, ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಲ್ಲಿ ಒಂದಾದ “ಉದಯವಾಣಿ"ಯಲ್ಲಿ ನಾಲ್ಕು ವರುಷಗಳ ಅವಧಿ “ಬಳಕೆದಾರ ಸಮಸ್ಯೆ-ಸಮಾಧಾನ” ಅಂಕಣ ಬರೆದೆ. ಜೊತೆಗೆ, ಕನ್ನಡದ ಮುಂಚೂಣಿ ಕೃಷಿ ಮಾಸಪತ್ರಿಕೆ “ಅಡಿಕೆ ಪತ್ರಿಕೆ”ಯಲ್ಲಿಯೂ ಕೆಲವು ವರುಷಗಳ ಅವಧಿ “ಬಳಕೆದಾರರ ಬೆಳಕಿಂಡಿ” ಅಂಕಣದಲ್ಲಿ ಬಳಕೆದಾರರ ಪ್ರಶ್ನೆಗಳನ್ನು ಉತ್ತರಿಸುತ್ತಿದ್ದೆ. “ಗ್ರಾಹಕ ಛಾಯಾ” ಎಂಬ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆಯ ಪ್ರತಿಯೊಂದು ಸಂಚಿಕೆಗೂ ಹಲವಾರು ವರುಷ ಮಾಹಿತಿಪೂರ್ಣ ಲೇಖನಗಳನ್ನು ಬರೆದಿದ್ದೆ.
1970ರಿಂದ 2010 ವರೆಗಿನ ನಾಲ್ಕು ದಶಕಗಳ ಅವಧಿಯಲ್ಲಿ, ಬಸ್ರೂರು ಬಳಕೆದಾರರ ವೇದಿಕೆ ಹಾಗೂ ಇತರ ಬಳಕೆದಾರರ ವೇದಿಕೆಗಳು ಸುಮಾರು 50,000 ಪ್ರಕರಣಗಳಲ್ಲಿ ಬಳಕೆದಾರರಿಗೆ ನ್ಯಾಯ ಒದಗಿಸಿವೆ. “ಬಳಕೆದಾರರ ರಕ್ಷಣಾ ಕಾಯಿದೆ, 1986” ಜ್ಯಾರಿಯಾಗುವ ಮುಂಚೆಯೇ ಬಳಕೆದಾರರ ವೇದಿಕೆಗಳು ಸಾವಿರಾರು ಬಳಕೆದಾರರ ಸಮಸ್ಯೆಗಳನ್ನು ಪರಿಹರಿಸಿದ್ದು ಗಮನಿಸಬೇಕಾದ ಸಂಗತಿ. ಇದು ಆ ವೇದಿಕೆಗಳ ಕಾರ್ಯವಿಧಾನ ಪರಿಣಾಮಕಾರಿ ಎಂಬುದರ ಪುರಾವೆ.
ಇಂತಹ ಕೆಲವು ಪ್ರಕರಣಗಳನ್ನು ಈ ಲೇಖನದ ನಂತರ ಸರಣಿಯಾಗಿ ವೆಬ್-ಸೈಟಿನಲ್ಲಿ ಪ್ರಕಟಿಸಿದ್ದೇನೆ. ಇವುಗಳಿಗೆ ಬಳಕೆದಾರರ ವೇದಿಕೆ, ಬಸ್ರೂರಿನ ಪಾಕ್ಷಿಕ ಪತ್ರಿಕೆ “ಬಳಕೆದಾರರ ಶಿಕ್ಷಣ”ದಲ್ಲಿ ಪ್ರಕಟವಾದ ಲೇಖನಗಳು ಆಧಾರ. (ಈಗ ಅದು ಪ್ರಕಟವಾಗುತ್ತಿಲ್ಲ.) ಇವು ಯಾವ ಕಾಲಕ್ಕೂ ಚಾರಿತ್ರಿಕ ದಾಖಲೆಗಳಾಗಿ ನಿಲ್ಲುವ ಪ್ರಕರಣಗಳು.
ಯಾಕೆಂದರೆ, ಪೂರೈಕೆದಾರರು ಬಳಕೆದಾರರ ಹಕ್ಕುಗಳನ್ನು ಮಾನ್ಯ ಮಾಡದಿದ್ದಾಗ, ಹಂತಹಂತವಾಗಿ ಪೂರೈಕೆದಾರರನ್ನು ಹಾಗೂ ಆಡಳಿತ ವ್ಯವಸ್ಥೆಯ ಇತರ ಅಧಿಕಾರಿಗಳನ್ನೂ ನ್ಯಾಯಕ್ಕಾಗಿ ಹೇಗೆ ಆಗ್ರಹಿಸಬೇಕು ಎಂಬುದನ್ನು ಈ ಪ್ರಕರಣಗಳು ತಿಳಿಸಿಕೊಡುತ್ತವೆ. ಅದಕ್ಕಾಗಿ ಶೋಷಣೆಗೆ ಒಳಗಾದ ಬಳಕೆದಾರರು ಮತ್ತು ಬಳಕೆದಾರರ ವೇದಿಕೆಗಳು ಬರೆದ ಕೆಲವು ಪತ್ರಗಳನ್ನು ಯಥಾವತ್ತಾಗಿ ಮುದ್ರಿಸಲಾಗಿದೆ.
ತಮ್ಮ ಹಕ್ಕುಗಳ ರಕ್ಷಣೆಗಾಗಿ ಕಾನೂನಿನ ಚೌಕಟ್ಟಿನೊಳಗೆ ನ್ಯಾಯಬದ್ಧವಾಗಿ ಹೋರಾಡುವ ಕೆಚ್ಚು ಬಳಕೆದಾರರಲ್ಲಿ ಯಾವತ್ತೂ ಜಾಗೃತವಾಗಿರಲಿ ಎಂಬ ಆಶಯದಿಂದ ಇವನ್ನು ನನ್ನ ವೆಬ್-ಸೈಟಿನಲ್ಲಿ ಪ್ರಕಟಿಸಿದ್ದೇನೆ.
ಸೂಚನೆ: “ಉತ್ತಮ ಆಳ್ವಿಕೆ: ಪ್ರೇರಕ/ ತರಬೇತಿದಾರರ ಕೈಪಿಡಿ”ಯ 15ನೇ ಅನುಬಂಧದಲ್ಲಿವೆ ಈ ಕೆಲವು ಪ್ರಕರಣಗಳು.
ಪ್ರಕಾಶಕರು: ಕರ್ನಾಟಕ ರೀಜಿನಲ್ ಆರ್ಗನೈಜೇಷನ್ ಫಾರ್ ಸೋಶಿಯಲ್ ಸರ್ವಿಸ್ (KROSS),
2ನೇ ಕ್ರಾಸ್, ದ ಕೋಸ್ತಾ ಲೇಔಟ್, ವೀಲರ್ ರೋಡ್ ಬಡಾವಣೆ, ಬೆಂಗಳೂರು 560084
ಪ್ರಕಟಣೆ: 2008, ಪುಟಗಳು: 263