ಪಿನ್ ಕೋಡ್ (PIN Code): 50 ವರುಷದ ಸಂಭ್ರಮ

ಆಗಸ್ಟ್ 15, 2022ರಂದು ಭಾರತ ದೇಶದ ಉದ್ದಗಲದಲ್ಲಿ  “ಮನೆಮನೆಯಲ್ಲಿ ರಾಷ್ಟ್ರಧ್ವಜಾರೋಹಣ” ಮೂಲಕ ಸ್ವಾತಂತ್ರ್ಯ ಗಳಿಸಿ 75 ವರುಷ ಪೂರೈಸಿದ್ದನ್ನು ಸಂಭ್ರಮಿಸಲಾಯಿತು.

ಇದು ಅಂಚೆ ವಿತರಣೆಗಾಗಿ ರೂಪಿಸಿದ “ಪಿನ್ ಕೋಡ್”ಗೆ 50 ವರುಷ ತುಂಬಿದ ಸಂದರ್ಭವೂ ಹೌದು. ಯಾಕೆಂದರೆ, ಪಿನ್ ಕೋಡ್ (ಪೋಸ್ಟಲ್ ಇಂಡೆಕ್ಸ್ ನಂಬರ್) ಜ್ಯಾರಿಗೊಳಿಸಿದ್ದು 15 ಆಗಸ್ಟ್ 1972ರಂದು.

ಭಾರತ ದೇಶ 15 ಆಗಸ್ಟ್ 1947ರಂದು ಸ್ವಾತಂತ್ರ್ಯ ಗಳಿಸಿದಾಗ, ಇಲ್ಲಿ ಇದ್ದ ಅಂಚೆ ಕಚೇರಿಗಳ ಸಂಖ್ಯೆ 23,344. ಅನಂತರ ವಿವಿಧ ರಂಗಗಳಲ್ಲಿ ನಮ್ಮ ದೇಶ ಸಾಧಿಸಿದ ಅಭಿವೃದ್ಧಿ ಅಭೂತಪೂರ್ವ. ಕೋಟಿಗಟ್ಟಲೆ ಜನರಿರುವ ಇಂತಹ ವಿಶಾಲ ದೇಶದಲ್ಲಿ ಅಂಚೆಯನ್ನು ಸುಲಭವಾಗಿ ವಿಂಗಡಿಸಲು ಮತ್ತು ತಲಪಿಸಲಿಕ್ಕಾಗಿ “ಪಿನ್ ಕೋಡ್” ರೂಪಿಸಲಾಯಿತು. ಯಾಕೆಂದರೆ, ನಮ್ಮ ದೇಶದಲ್ಲಿ ಒಂದೇ ಹೆಸರು ಹೊಂದಿರುವ ಹಲವಾರು ಸ್ಥಳಗಳಿವೆ. ಉದಾಹರಣೆಗೆ, ಕರ್ನಾಟಕದ ಮಂಗಳೂರು ತಾಲೂಕಿನಲ್ಲಿ ಗುರುಪುರವಿದೆ (ಪಿನ್ ಕೋಡ್ 574145); ಹಾಗೆಯೇ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿಯೂ ಗುರುಪುರವಿದೆ (ಪಿನ್ ಕೋಡ್ 571105). ಅದಲ್ಲದೆ, ಒಂದೇ ಊರಿನ ಹೆಸರನ್ನು ಬೇರೆಬೇರೆ ಅಕ್ಷರಘಟಿತದಲ್ಲಿ (Spelling) ಬರೆಯಲಾಗುತ್ತದೆ. ಉದಾಹರಣೆಗೆ, ಕನ್ನಡದ ಮುತ್ತೂರು ಮತ್ತು ಅಡ್ಡೂರು. ಇದರಿಂದಾಗಿ, ಅಂಚೆ ವಿತರಣೆ ಮತ್ತು ಬಟವಾಡೆಯಲ್ಲಿ ಬಹಳ ಸಮಸ್ಯೆಗಳು ಉಂಟಾಗುತ್ತಿದ್ದವು.

ಪಿನ್ ಕೋಡ್‌ನಲ್ಲಿರುವ ಅಂಕೆಗಳ ವಿವರಣೆ
ಪಿನ್ ಕೋಡ್‌ನಲ್ಲಿ ಆರು ಅಂಕೆಗಳಿರುತ್ತವೆ. ಮೊದಲನೆಯ ಅಂಕೆ ಅಂಚೆಯ ಪ್ರಾದೇಶಿಕ ವಲಯವನ್ನು ಸೂಚಿಸುತ್ತದೆ: ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಇತ್ಯಾದಿ ಎಂಟು ಪ್ರಾದೇಶಿಕ ವಲಯಗಳು. ಹಾಗೂ ಮೊದಲ ಅಂಕೆ 9 ಆರ್ಮಿ ಪೋಸ್ಟಲ್ ಸರ್ವಿಸನ್ನು ಸೂಚಿಸುತ್ತದೆ. (ನಕ್ಷೆ ನೋಡಿ). ಎರಡನೆಯ ಅಂಕೆ ಉಪ ಪ್ರಾದೇಶಿಕ ವಲಯದ ಸೂಚಕ (ಇದು ಸಾಮಾನ್ಯವಾಗಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ). ಮೂರನೆಯ ಅಂಕೆಯು ಅಂಚೆ ವಿಂಗಡಣೆಯ (ಸಾರ್ಟಿಂಗ್) ಜಿಲ್ಲೆಯನ್ನೂ ಸೂಚಿಸುತ್ತದೆ. ಇದರ ಹೆಡ್-ಕ್ವಾರ್ಟರ್ಸ್ ಅಲ್ಲಿನ ಅತ್ಯಂತ ದೊಡ್ಡ ನಗರದ ಪ್ರಧಾನ ಅಂಚೆ ಕಚೇರಿ ಆಗಿರುತ್ತದೆ (ಇದನ್ನು ಸಾರ್ಟಿಂಗ್ ಆಫೀಸ್ ಎಂದು ಕರೆಯಲಾಗುತ್ತದೆ.) ನಾಲ್ಕನೆಯ ಅಂಕೆ “ಸರ್ವಿಸ್ ರೂಟ್” ಅನ್ನು ಸೂಚಿಸಿದರೆ, ಕೊನೆಯ ಎರಡು ಅಂಕೆಗಳು ಅಂಚೆ ಬಟವಾಡೆ ಮಾಡುವ ಅಂಚೆ ಕಚೇರಿಯನ್ನು ಸೂಚಿಸುತ್ತವೆ.

ಪಿನ್ ಕೋಡ್ ರೂಪಿಸಿದವರು ಶ್ರೀರಾಮ್ ಭಿಕಾಜಿ ವೆಲಂಕರ್
ಭಾರತ ಸರಕಾರದ ಸಂವಹನ ಮಂತ್ರಾಲಯದ ಅಡಿಷನಲ್ ಸೆಕ್ರೆಟರಿಯೂ ಪೋಸ್ಟ್ ಹಾಗೂ ಟೆಲಿಗ್ರಾಫ್ ಬೋರ್ಡಿನ ಸದಸ್ಯರೂ ಆಗಿದ್ದ ಶ್ರೀರಾಮ್ ಭಿಕಾಜಿ ವೆಲಂಕರ್ ಅವರಿಗೆ ಪಿನ್ ಕೋಡ್ ರೂಪಿಸಿದ ಶ್ರೇಯಸ್ಸು ಸಲ್ಲುತ್ತದೆ. 31 ಡಿಸೆಂಬರ್ 1973ರಲ್ಲಿ ಸೇವೆಯಿಂದ ನಿವೃತ್ತರಾದ ವೆಲಂಕರ್ 1996ರಲ್ಲಿ ನಮ್ಮನ್ನು ಮುಂಬೈಯಲ್ಲಿ ಅಗಲಿದರು.

ಪ್ರಸಿದ್ಧ ಸಂಸ್ಕೃತ ಕವಿಯಾಗಿದ್ದ ಶ್ರೀರಾಮ್ ವೆಲಂಕರ್ ಅವರಿಗೆ ರಾಷ್ಟ್ರಪತಿಗಳ ಪದಕ ನೀಡಿ ಗೌರವಿಸಲಾಗಿತ್ತು. ಅವರು ಬರೆದ ಪುಸ್ತಕಗಳ ಸಂಖ್ಯೆ 105. ಅವುಗಳಲ್ಲಿ "ವಿಲೋಮ ಕಾವ್ಯ" ಅಪೂರ್ವ ಸಾಹಿತ್ಯ ಕೃತಿ. ಯಾಕೆಂದರೆ, ಅದರ ಸಾಲುಗಳನ್ನು ಒಂದು ದಿಕ್ಕಿನಲ್ಲಿ ಓದಿದಾಗ ಅದು ಶ್ರೀರಾಮನ ಸ್ತುತಿ; ಅದನ್ನೇ ವಿರುದ್ಧ ದಿಕ್ಕಿನಲ್ಲಿ ಓದಿದಾಗ, ಅದು ಶ್ರೀಕೃಷ್ಣನ ಸ್ತುತಿಯಾಗಿ ಮಾರ್ಪಡುತ್ತದೆ!

ಇತರ ದೇಶಗಳ ಅಂಚೆ ವಿಂಗಡಣೆ ಮತ್ತು ವಿತರಣೆ ವ್ಯವಸ್ಥೆ
ಯು.ಎಸ್.ಎ. ದೇಶದಲ್ಲಿ ಅಂಚೆ ವಿತರಣೆಯ ವೇಗ ಹೆಚ್ಚಿಸಲಿಕ್ಕಾಗಿ 1 ಜುಲಾಯಿ 1963ರಿಂದ “ಜಿಪ್ ಸಿಸ್ಟಮ್” ಜ್ಯಾರಿ ಮಾಡಲಾಯಿತು. ಹಳೆಯ ವ್ಯವಸ್ಥೆಯಲ್ಲಿ ಪತ್ರ ಇತ್ಯಾದಿಗಳು ವಿಂಗಡಣೆಯ 17 ಹಂತಗಳನ್ನು ದಾಟಬೇಕಾಗಿದ್ದ ಕಾರಣ ಅಂಚೆ ವಿತರಣೆ ವಿಳಂಬವಾಗುತ್ತಿತ್ತು. ಯುನೈಟೆಡ್ ಕಿಂಗ್‌ಡಮ್‌ನಲ್ಲಿ 1960ನೇ ದಶಕದ ಮಧ್ಯಭಾಗದಲ್ಲಿ ಅಂಚೆ ವಿಂಗಡಣೆಗೆ ಹೊಸ ವ್ಯವಸ್ಥೆ ಜ್ಯಾರಿ. ಇದರಲ್ಲಿ ವಿಂಗಡಣಾ ಯಂತ್ರವು ಅಂಚೆ ಕೋಡನ್ನು “ಬಿಂದುಗಳ ವಿನ್ಯಾಸ”ವಾಗಿ ಮಾರ್ಪಡಿಸಿದ್ದರಿಂದ ಅಂಚೆ ವಿತರಣೆಯ ವೇಗ ಎಂಟು ಪಟ್ಟು ಹೆಚ್ಚಾಯಿತು. ಜಪಾನಿನಲ್ಲಿ ಜುಲಾಯಿ 1968ರಲ್ಲಿ ಹೊಸ ಅಂಚೆ ವಿಂಗಡಣೆ ವ್ಯವಸ್ಥೆ ಜ್ಯಾರಿ.

ಈಗ, ಅಂತರ್ಜಾಲ ಅತ್ಯಂತ ವೇಗವಾಗಿ ವ್ಯಾಪಿಸುತ್ತಿರುವಾಗ, ಜನರು ಪತ್ರ ಬರೆಯುವುದೇ ವಿರಳವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಿನ್ ಕೋಡ್ ಅಗತ್ಯವೇ ಎಂದು ಪ್ರಶ್ನಿಸುವವರೂ ಇದ್ದಾರೆ. “ಯಾವತ್ತಾದರೂ ಆಹಾರ, ತಿಂಡಿತಿನಿಸು ಅಥವಾ ವಸ್ತುವಿಗೆ ಆನ್-ಲೈನಿನಲ್ಲಿ ಬೇಡಿಕೆ ಸಲ್ಲಿಸಿದ್ದೀರಾ?” ಎಂಬ ಪ್ರಶ್ನೆಯೇ ಅಂಥವರಿಗೆ ಉತ್ತರ. ಯಾಕೆಂದರೆ, ಹಾಗೆ ಬೇಡಿಕೆ ಸಲ್ಲಿಸುವಾಗ ವೆಲಂಕಾರ್ ರೂಪಿಸಿದ ಆರು-ಅಂಕೆಗಳ ಪಿನ್ ಕೋಡ್‌ನ ಉಪಯುಕ್ತತೆ ನಮಗೆ ಸ್ಪಷ್ಟವಾಗುತ್ತದೆ. ಅದನ್ನು  ತಂದು ಕೊಡುವವರಿಗೆ ನಾವಿರುವ ಸ್ಥಳ ಪತ್ತೆ ಮಾಡಲು ಪಿನ್ ಕೋಡ್ ಮತ್ತು ಗೂಗಲ್ ನಕ್ಷೆ ದಾರಿ ತೋರಿಸುತ್ತವೆ.

ಫೋಟೋ: ಭಾರತದ ಅಂಚೆ ವಲಯಗಳು