ನಿರಂತರ ಬೆಳೆಯುವ ಉಡುಗೊರೆ: ಕುಂಡಗಿಡಗಳು

ಹೂವಿನ ಬದಲಾಗಿ ಸಸಿಯನ್ನೇ ಉಡುಗೊರೆಯಾಗಿ ಕೊಟ್ಟರೆ ಹೇಗೆ? ಇದೊಳ್ಳೇ ಐಡಿಯಾ. ಯಾಕೆಂದರೆ, ಸಂಜೆಯ ಹೊತ್ತಿಗೆ ಬಾಡುವ ಹೂ ಕಸವಾಗಿ ಕಳೆದು ಹೋಗುತ್ತದೆ. ಆದರೆ ನೀವು ಕೊಟ್ಟ ಸಸಿ ಬೆಳೆದು ಗಿಡವಾಗಿ, ಹಸುರು ಹಬ್ಬಿಸಿ, ಪಡೆದಾತನ ಬದುಕಿನುದ್ದಕ್ಕೂ ಹೂ ಅರಳಿಸಬಹುದು, ಅಲ್ಲವೇ?
ಈ ಐಡಿಯಾ ಈಗ ಹಲವರನ್ನು ಸೆಳೆದಿದೆ. ಇತ್ತೀಚೆಗೆ ಮುಂಬೈಯ ವಾಹನ ಉತ್ಪಾದಕ ಕಂಪೆನಿಯೊಂದು ೫,೦೦೦ ಹೂ ಬಿಡುವ ಕುಂಡಸಸಿಗಳನ್ನು ಖರೀದಿಸಿತು – ತನ್ನ ವಾಣಿಜ್ಯ ಉತ್ಸವಕ್ಕೆ ಭೇಟಿ ನೀಡುವ ಅತಿಥಿಗಳಿಗೆ ಉಡುಗೊರೆ ನೀಡಲಿಕ್ಕಾಗಿ. ಹಾಗೆಯೇ, ಬೆಂಗಳೂರಿನ ಕಂಪೆನಿಯೊಂದು ತನ್ನ ೩೦೦ ಗ್ರಾಹಕರಿಗೆ ಮತ್ತು ಚೆನ್ನೈಯ ಕುಟುಂಬವೊಂದು ಮದುವೆಗೆ ಆಗಮಿಸಿದ್ದ ಸುಮಾರು ೧೦೦ ಕುಟುಂಬಗಳಿಗೆ ಉಡುಗೊರೆಯಾಗಿ ಹಂಚಿದ್ದು ಕುಂಡಸಿಸಿಗಳನ್ನು.
ಇಂಟರ್ನೆಟ್ ಮೂಲಕ ಕುಂಡಸಸಿಗಳನ್ನು ಮಾರಾಟ ಮಾಡಿ ಮನೆಬಾಗಿಲಿಗೆ ತಲಪಿಸುವ ಕಂಪೆನಿಗಳು, ಉಡುಗೊರೆ ಸಸಿಗಳ ವಹಿವಾಟಿನಲ್ಲಿ ವಾರ್ಷಿಕ ಶೇಕಡಾ ೨೦ -೪೦ ಹೆಚ್ಚಳ ಸಾಧಿಸಿವೆ. “ಲಿವಿಂಗ್ ಗಿಫ್ಟ್ಸ್” ಎಂಬ ಕುಂಡಸಸಿ ಮಾರಾಟ ಮಳಿಗೆಯನ್ನು ೨೦೧೧ರಲ್ಲಿ ಆರಂಭಿಸಿದ ಪ್ರಭ್ ಜ್ಯೋತ್ ಸಿಂಗ್ (೩೨) ಹೀಗೆನ್ನುತ್ತಾರೆ,”ಕುಂಡಸಸಿಗಳನ್ನು ಉಡುಗೊರೆಯಾಗಿ ಕೊಡಲು ಮತ್ತು ತಗೊಳ್ಳಲು ಈಗ ಜನರು ಖುಷಿ ಪಡುತ್ತಾರೆ”. ಪ್ರತಿ ತಿಂಗಳೂ ಈ ಮಳಿಗೆಯಿಂದ ಬಿಕರಿಯಾಗುವ ೬,೦೦೦ ಕುಂಡಸಸಿಗಳಲ್ಲಿ ಉಡುಗೊರೆಗಳಾಗಿ ಮಾರಾಟ ಆಗುತ್ತಿರುವುದು ಶೇ.೬೦ರಷ್ಟು. ಅವರ ಕುಂಡಸಸಿಗಳ ಮಾರಾಟ ಬೆಲೆ ರೂ.೨೯೯ರಿಂದ ಆರಂಭ. ಈ ಬೆಲೆಯ ಉಡುಗೊರೆ ದುಬಾರಿಯಲ್ಲ. ಹಾಗಾಗಿ, ಅವರ ಕುಂಡಸಸಿಗಳಿಗೆ ಎಲ್ಲ ಮಹಾನಗರಗಳಲ್ಲಿಯೂ ಬೇಡಿಕೆ. ಸ್ನೇಹದಿನವಾದ ೧೪ ಆಗಸ್ಟ್ ೨೦೧೬ರಂದು ಅವರು ರವಾನಿಸಿದ ಉಡುಗೊರೆ ಕುಂಡಸಿಸಿಗಳ ಸಂಖ್ಯೆ ೫೦೦.
ಪುಣೆಯ ನಂದು ಸಿಂಗ್ ಅವರ ಕತೆ ಕೇಳಿ. ಅವರ ಪತ್ನಿ ಮತ್ತು ತಾಯಿ ತಮ್ಮ ಮನೆಯ ಟೆರೇಸಿನಲ್ಲಿ ತೋಟ ಮಾಡಲು ನಿರ್ಧರಿಸಿದರು. ತಮ್ಮ ಚಾವಣಿ ತೋಟಕ್ಕೆ ಗಿಡಗಳನ್ನು ತರಲಿಕ್ಕಾಗಿ ಅವರು ಹಲವಾರು ನರ್ಸರಿಗಳಿಗೆ ಸುತ್ತಾಡ ಬೇಕಾಯಿತು. ಆಗ ಅವರಿಗೆ ಹೊಳೆದದ್ದು ಮನೆಬಾಗಿಲಿಗೆ ಗಿಡ ತಲಪಿಸುವ ವ್ಯವಹಾರದ ಐಡಿಯಾ. ಅದರಂತೆ ಈ ತಂತ್ರಾಂಶ ಇಂಜಿನಿಯರ್ ಶುರು ಮಾಡಿದ್ದು “ನರ್ಸರಿ ಲೈವ್” ಎಂಬ ಇಂಟರ್ ನೆಟ್ ಮಳಿಗೆಯನ್ನು. ಡಾರ್ಜಿಲಿಂಗ್ ಮತ್ತು ಹರಿದ್ವಾರದಿಂದ ತೊಡಗಿ, ಹೈದರಾಬಾದ್ ಮತ್ತು ಜಬಲ್ಪುರದ ವರೆಗಿನ ಹಲವಾರು ನರ್ಸರಿಗಳ ಜೊತೆ ಹರಡಿದೆ ನಂದು ಸಿಂಗರ ಸಂಪರ್ಕ ಜಾಲ. ಬಾರಮುಲ್ಲಾ ಮತ್ತು ಸಿಲ್ಚಾರ್ ಇಂತಹ ಅತಿ ದೂರದ ಸ್ಥಳಗಳಿಗೂ ಅವರು ಗಿಡಗಳನ್ನು ತಲಪಿಸಿದ್ದಾರೆ. “ಪ್ಯಾಕ್ ಮಾಡಿದ ಗಿಡಗಳು ಬಾಡಿ ಹೋಗದೆ ಇರಬೇಕಾದರೆ ಗಿಡ ರವಾನೆಗೆ ವಿಮಾನ ಸಂಪರ್ಕ ಇರಬೇಕು; ಹಾಗಿದ್ದರೆ ಎಲ್ಲಿಗೆ ಬೇಕಾದರೂ ಗಿಡ ತಲಪಿಸಬಲ್ಲೆ” ಎನ್ನುತ್ತಾರೆ ಸಿಂಗ್. ಈ ವ್ಯವಹಾರದಲ್ಲಿ ಮುಂದಿನ ನಾಲ್ಕು ವರುಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಳದ ನಿರೀಕ್ಷೆ ಅವರದು.
ನವದೆಹಲಿ ಹತ್ತಿರದ ನೋಯ್ಡಾದ ಮೂವರು ಇಂಜಿನಿಯರರು ಜೊತೆಗೂಡಿ ೨೦೧೩ರಲ್ಲಿ ಸ್ಥಾಪಿಸಿದ ಘಟಕ “ಲಾನ್-ಕಾರ್ಟ್ ”. ಅವರ ಅಂದಾಜಿನಂತೆ, ಇಂಟರ್ ನೆಟ್ ಸಸಿ ನರ್ಸರಿ ವಹಿವಾಟಿನಲ್ಲಿ ಆಗ ಶೇ.೫ ಕುಂಡಸಸಿಗಳು ಉಡುಗೊರೆಯಾಗಿ ಬಟವಾಡೆ ಆಗುತ್ತಿದ್ದರೆ ಈಗ ಅದರ ಪ್ರಮಾಣ ಶೇ.೩೦. “ನಮ್ಮ ಬಹುಪಾಲು ಗ್ರಾಹಕರು ಗೃಹಿಣಿಯರು. ಆರೋಗ್ಯದ ವಿಷಯದಲ್ಲಿ ಕಾಳಜಿಯಿರುವ ಅವರು ಗಾಳಿ ಶುದ್ಧೀಕರಿಸುವ ಸಸಿಗಳನ್ನು ಮತ್ತು ವಿದೇಶೀ ಬೊನ್-ಸೈಗಳನ್ನು ತಮ್ಮ ಮನೆಗಳಿಗಾಗಿ ಖರೀದಿಸುವವರು. ಯಾಕೆಂದರೆ, ಈ ಸಸಿಗಳು ಚಂದ ಕಾಣುತ್ತವೆ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡುತ್ತವೆ” ಎನ್ನುತ್ತಾರೆ, ಲಾನ್ಕಾರ್ಟಿನ ಸ್ಥಾಪಕರಲ್ಲಿ ಒಬ್ಬರಾದ ವಿಕ್ರಮ್ ಧಿಲ್ಲೊನ್.
“ಕೆಲವು ಗಿಡಗಳು ರಾತ್ರಿಯ ಹೊತ್ತಿನಲ್ಲಿ ಇಂಗಾಲ ಡೈಆಕ್ಸೈಡ್ ಹೊರಸೂಸುವುದಿಲ್ಲ. ಮನಿ ಪ್ಲಾಂಟ್ ಮತ್ತು ಅಡಿಕೆ ಸಸಿಗಳು ಮನೆಯೊಳಗೆ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತವೆ” ಎನ್ನುತ್ತಾರೆ ಬೆಂಗಳೂರಿನ ವಿನ್ಯಾಸಕಾರ ಅನಿಲ್ ಭಾಸ್ಕರನ್. ಇತ್ತೀಚೆಗೆ ಉಡುಗೊರೆಯಾಗಿ ಪಡೆದ ಬಿದಿರಿನ ಗಿಡ, ಈಗ ಅವರ ಕಚೇರಿಯ ಮೇಜಿನಲ್ಲಿ ಬೆಳೆಯುತ್ತಿದೆ. ಹೆಚ್ಚಿನ ಆರೈಕೆಯಿಲ್ಲದೆ, ಸುಲಭವಾಗಿ ಸಲಹಬಹುದಾದ ಅತ್ತಿ ಮತ್ತು ಲೋಳೆಸರ – ಇಂತಹ ಸಸಿಗಳನ್ನು ಸುಂದರವಾದ ಸೆರಾಮಿಕ್ ಕುಂಡಗಳಲ್ಲಿ ಉಡುಗೊರೆ ನೀಡಲು ಅವರು ಇಷ್ಟ ಪಡುತ್ತಾರೆ.
ನವದೆಹಲಿಯ ಪೃಥ್ವಿರಾಜ್ ರಸ್ತೆಯಲ್ಲಿರುವ “ಸೋಂದಾ” ನರ್ಸರಿಯ ವಿನಿತಾ ನಾಥ್ ಅವರ ಅನುಭವದಲ್ಲಿ, ಅವರ ನರ್ಸರಿಗೆ ಭೇಟಿ ನೀಡುವವರು ಬಿಡಿಹೂಗಳ ಬದಲಾಗಿ ಕುಂಡಸಸಿಗಳನ್ನು ಬಯಸುತ್ತಾರೆ. ಒಂದು ಶಾಲೆಯಲ್ಲಿ ಸ್ವಾತಂತ್ರ್ಯ ದಿನದಂದು ಉಡುಗೊರೆ ನೀಡಲಿಕ್ಕಾಗಿ, ತ್ರಿವರ್ಣದ ಕುಂಡಗಳಲ್ಲಿ ಪುಟ್ಟ ಸಸಿಗಳನ್ನು ಸರಬರಾಜು ಮಾಡಬೇಕೆಂಬ ಬೇಡಿಕೆ ಪಡೆದವರು ಅವರು. “ಕುಂಡಸಸಿಗಳಿಗೆ ವೆಚ್ಚ ಕಡಿಮೆ ಮತ್ತು ಅವು ಹಲವಾರು ವರುಷ ಬೆಳೆಯುತ್ತವೆ. ಶೋಕಿಯ ಆಟದ ಗೊಂಬೆಗಳನ್ನು ಉಡುಗೊರೆ ಕೊಡುವ ಬದಲಾಗಿ ಯುವಜನರು ಕುಂಡಸಸಿಗಳನ್ನು ಉಡುಗೊರೆ ಕೊಡುವಾಗ ಖುಷಿಯಾಗುತ್ತದೆ” ಎನ್ನುತ್ತಾರೆ ವಿನಿತಾ ನಾಥ್.
ಮಕ್ಕಳಿಗೆ ಕುಂಡಸಸಿಗಳ ಉಡುಗೊರೆ ನೀಡುವುದು ಅವರಲ್ಲಿ ಪರಿಸರದ ಬಗ್ಗೆ ಜವಾಬ್ದಾರಿ ಮೂಡಿಸಲು ಸಹಕಾರಿ. ಇತ್ತೀಚೆಗೆ ತನ್ನ ಮಗುವಿಗೆ ಹುಟ್ಟುಹಬ್ಬದಂದು ಈ ಉಡುಗೊರೆ ಕೊಟ್ಟ ತಾಯಿಯೊಬ್ಬರ ಮಾತು, “ನಿಮ್ಮ ಮಗುವಿಗೊಂದು ಪುಟ್ಟ ಸಸಿಯನ್ನು ಉಡುಗೊರೆ ಕೊಡಿ. ಅದನ್ನು ನಿಮ್ಮ ಮಗು ಪ್ರೀತಿಯಿಂದ ಬೆಳೆಸುವ ಬಗೆ ನೋಡಿ.” ಶಾಲೆಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಕುಂಡಸಸಿಗಳನ್ನು ಬಹುಮಾನವಾಗಿ ಕೊಡುವುದು ಉತ್ತಮ. ವರುಷಗಳು ದಾಟಿದಂತೆ, ದೊಡ್ಡದೊಡ್ಡದಾಗಿ ಹಸುರುಹಸುರಾಗಿ ಬೆಳೆಯುವ ಈ ಉಡುಗೊರೆಗಿಂತ ಮಿಗಿಲಾದ ಉಡುಗೊರೆ ಇರಲಿಕ್ಕಿಲ್ಲ, ಅಲ್ಲವೇ?