೧೮. ವಿಶ್ವ ನಾಯಕ ಮಹಾತ್ಮಾ ಗಾಂಧಿ
ಮಹಾತ್ಮಾ ಗಾಂಧಿ ಭಾರತದ ಮಹಾನ್ ಮುಂದಾಳು. ಮಾತ್ರವಲ್ಲ, ಅವರು ವಿಶ್ವದ ಅಗ್ರಮಾನ್ಯ ನಾಯಕರಲ್ಲಿ ಒಬ್ಬರು.
ಸುಮಾರು ಎರಡು ಶತಮಾನಗಳ ದುರುಳ ವಿದೇಶಿಯರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಗಳಿಸಲು ಅವರು ಮುನ್ನಡೆಸಿದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟವೇ ಕಾರಣ. ಸತ್ಯ ಮತ್ತು ನ್ಯಾಯದ ಮೌಲ್ಯಗಳನ್ನು ಜೀವನವಿಡೀ ಎತ್ತಿ ಹಿಡಿದವರು.
ಗುಜರಾತಿನ ಪೋರ್-ಬಂದರಿನಲ್ಲಿ ೨ ಅಕ್ಟೋಬರ್ ೧೮೬೯ರಲ್ಲಿ ಜನಿಸಿದ ಮೋಹನದಾಸ ಕರಮಚಂದ ಗಾಂಧಿ, ಬ್ರಿಟನಿನಲ್ಲಿ ಶಿಕ್ಷಣ ಪಡೆದು ವಕೀಲರಾದರು. ಅನಂತರ, ದಕ್ಷಿಣ ಆಫ್ರಿಕಾ ದೇಶದಲ್ಲಿ ವಕೀಲರಾಗಿದ್ದಾಗ ವರ್ಣಭೇದದ ವಿರುದ್ಧ ಅಹಿಂಸಾತ್ಮಕ ಹೋರಾಟವನ್ನು ಸಂಘಟಿಸಿದರು. ಅಲ್ಲಿನ ಅನುಭವವನ್ನು ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಜನಾಂದೋಲನ ಸಂಘಟಿಸಲು ಪರಿಣಾಮಕಾರಿಯಾಗಿ ಬಳಸಿದರು.
ಮಹಾತ್ಮ ಗಾಂಧಿಯವರನ್ನು ಹಲವು ಸಲ ಸೆರೆಮನೆಗೆ ತಳ್ಳಿ ಶಿಕ್ಷೆ ನೀಡಲಾಯಿತು. ಆದರೆ ಅವರು ತಮ್ಮ ಹೋರಾಟದ ಪಥದಿಂದ ಹಿಂಜರಿಯಲಿಲ್ಲ; ತಮ್ಮ ಮೌಲ್ಯಗಳ ಪಾಲನೆಯಲ್ಲಿ ಕಿಂಚಿತ್ತೂ ತಪ್ಪಲಿಲ್ಲ. ಅಂತಿಮವಾಗಿ ಅವರ ಸಂಕಲ್ಪ ಬಲ ಮತ್ತು ಮುಂದಾಳುತನ ಭಾರತವು ಸ್ವಾತಂತ್ರ್ಯ ಹೋರಾಟದಲ್ಲಿ ಜಯ ಗಳಿಸಲು ಬಹು ದೊಡ್ಡ ಒತ್ತಾಸೆಯಾಯಿತು.
ಮಹಾತ್ಮಾ ಗಾಂಧಿಯವರ ಪ್ರಭಾವ ಭಾರತಕ್ಕೆ ಸೀಮಿತವಾಗಿಲ್ಲ. ಜಗತ್ತಿನ ಹಲವು ದೇಶಗಳ ಜನನಾಯಕರು ಅವರಿಂದ ಸ್ಫೂರ್ತಿ ಪಡೆದು, ಅವರ ಅಹಿಂಸಾತ್ಮಕ ಹೋರಾಟ ವಿಧಾನಗಳನ್ನೇ ಅನುಸರಿಸಿ, ತಮ್ಮತಮ್ಮ ದೇಶಗಳಲ್ಲಿ ಸ್ವಾತಂತ್ರ್ಯ ಹಾಗೂ ಸಮಾನತೆಗಾಗಿ ಆಂದೋಲನಗಳನ್ನು ಸಂಘಟಿಸಿದರು. ಯುಎಸ್ಎ ದೇಶದಲ್ಲಿ ಕಪ್ಪುಜನರ ಹಕ್ಕುಗಳಿಗಾಗಿ ಹೋರಾಡಿದ ಮಾರ್ಟಿನ್ ಲೂಥರ್ ಕಿಂಗ್ ಅವರಿಗೂ ಮಹಾತ್ಮಾ ಗಾಂಧಿಯವರೇ ಪ್ರೇರಣೆ.
ಅಹಿಂಸಾತ್ಮಕ ಹೋರಾಟದ ಮಹತ್ವವನ್ನೂ ಪರಿಣಾಮಗಳನ್ನೂ ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಮಹಾತ್ಮಾ ಗಾಂಧಿ. ಪ್ರತಿಯೊಬ್ಬ ಪುರುಷನಿಗೂ ಮಹಿಳೆಗೂ ಮಗುವಿಗೂ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ಹಕ್ಕು ಇದೆಯೆಂದು ಪ್ರತಿಪಾದಿಸಿದವರು. ಅದರಿಂದಾಗಿಯೇ ನಿಧನಾ ನಂತರವೂ ಮಹಾತ್ಮಾ ಗಾಂಧಿ ಜಗತ್ತಿನಲ್ಲಿ ಸಾವಿರಾರು ಜನರಿಗೆ ಭರವಸೆ ಮತ್ತು ಪ್ರೇರಣೆಯಾಗಿ ಮುಂದುವರಿಯುತ್ತಿದ್ದಾರೆ. ಅವರ ಬದುಕು, ಅವರು ನಂಬಿದ ತತ್ವಗಳು ಮತ್ತು ನುಡಿದಂತೆ ಬದುಕಿದ ಬಗ್ಗೆ ಹೊಸಹೊಸ ಪುಸ್ತಕಗಳು ಹಲವಾರು ಭಾಷೆಗಳಲ್ಲಿ ಪ್ರಕಟವಾಗುತ್ತಲೇ ಇವೆ.