ನಮ್ಮ ಹೆಮ್ಮೆಯ ಭಾರತ (14)

Deepas - Symbol of Deepavali Festival

೧೪.”ಹಬ್ಬಗಳ ದೇಶ” ಭಾರತ
ಹಲವಾರು ಧರ್ಮಗಳ ಮತ್ತು ಸಮುದಾಯಗಳ ದೇಶ ಭಾರತ. ಪ್ರತಿಯೊಂದು ಧರ್ಮ ಮತ್ತು ಸಮುದಾಯಕ್ಕೆ ಅದರದೇ ಹಬ್ಬಗಳು ಇರುತ್ತವೆ. ಇದರಿಂದಾಗಿ, ಪ್ರತೀ ವಾರ, ಭಾರತದಲ್ಲಿ ಎಲ್ಲಾದರೂ ಒಂದಲ್ಲ ಒಂದು ಹಬ್ಬ ಆಚರಿಸಲ್ಪಡುತ್ತದೆ. ಹಾಗಾಗಿ ಭಾರತ “ಹಬ್ಬಗಳ ದೇಶ” ಎನಿಸಿಕೊಂಡಿದೆ.

ಬಹುಪಾಲು ಹಬ್ಬಗಳು ಧಾರ್ಮಿಕ ಆಚರಣೆಗೆ ಸಂಬಂಧಿಸಿವೆ. ಉದಾಹರಣೆಗೆ, ದಸರಾ, ಹೋಳಿ, ಗಣೇಶ ಚತುರ್ಥಿ, ಜನ್ಮಾಷ್ಟಮಿ, ದೀಪಾವಳಿ, ಶಿವರಾತ್ರಿ, ಮಹಾವೀರ ಜಯಂತಿ, ಬುದ್ಧ ಜಯಂತಿ, ಗುರು ನಾನಕ್ ಜಯಂತಿ, ಕ್ರಿಸ್ಮಸ್, ಈದ್. ಇನ್ನು ಕೆಲವು ಹಬ್ಬಗಳು ಆಯಾ ಪ್ರದೇಶದ ಬಿತ್ತನೆ, ಬೆಳೆ-ಕೊಯ್ಲಿಗೆ ಸಂಬಂಧಿಸಿವೆ. ಉದಾಹರಣೆಗೆ, ಮಕರ ಸಂಕ್ರಾಂತಿ, ಹುತ್ತರಿ ಹಬ್ಬ. ಸ್ವಾತಂತ್ರ್ಯ ದಿನ, ಪ್ರಜಾಪ್ರಭುತ್ವ ದಿನ ಮತ್ತು ಮಹಾತ್ಮಗಾಂಧಿ ಜಯಂತಿ - ಇವು ರಾಷ್ಟ್ರೀಯ ಹಬ್ಬಗಳಾಗಿವೆ.

ಭಾರತದ ದಿನಸೂಚಿ (ಕೆಲೆಂಡರ್) ಒಂದು ರೀತಿಯಲ್ಲಿ ವಿವಿಧ ಹಬ್ಬಗಳ ಮೆರವಣಿಗೆಯ ದಾಖಲಾತಿ. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಆಚರಣೆಗಳು, ಕಟ್ಟುಕಟ್ಟಲೆಗಳು, ಸಂಪ್ರದಾಯಗಳು, ನಂಬಿಕೆಗಳು ಥಳಕು ಹಾಕಿಕೊಂಡಿವೆ. ಮನೆಮಂದಿಗೆಲ್ಲ ಹಬ್ಬವೆಂದರೆ, ಬಹುದಿನಗಳ ತಯಾರಿ, ಸಂಭ್ರಮ, ಬಂಧುಬಳಗದ ಜೊತೆ ಸಮ್ಮಿಳನ. ಆಯಾ ಹಬ್ಬಗಳ ಆಹಾರವಂತೂ ಹೊಟ್ಟೆಗೂ ತಂಪು, ಮನಕ್ಕೂ ಮುದ.

ಭಾರತದ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳ ಸಂಖ್ಯೆ ೬೦. ಈ ಸಂದರ್ಭಗಳಲ್ಲಿ ಜರಗುವ ಒಟ್ಟು ವ್ಯಾಪಾರ - ವಹಿವಾಟಿನ ಮೌಲ್ಯ ರೂಪಾಯಿ ಹತ್ತು ಲಕ್ಷ ಕೋಟಿಗಳೆಂದು ಒಂದು ಅಂದಾಜು. ಇದರಿಂದಾಗಿ ಸುಮಾರು ೧೫ ಕೋಟಿ ಜನರಿಗೆ ಉದ್ಯೋಗ ಲಭಿಸುತ್ತಿದೆ ಎನ್ನಲಾಗಿದೆ. ಅಂದರೆ, ಭಾರತದ ಆರ್ಥಿಕತೆಗೆ ಹಬ್ಬಗಳ ಕೊಡುಗೆ ಅಗಾಧ.

ಅದಲ್ಲದೆ, ಪ್ರತಿಯೊಂದು ಹಬ್ಬವೂ ಜನಸಮುದಾಯದಲ್ಲಿ ಐಕ್ಯತೆ ಮತ್ತು ಸಮಭಾವ ಮೂಡಿಸುವ ಸಾಧನ. ಒಂದು ಧರ್ಮದವರ ಹಬ್ಬದ ಸಂದರ್ಭದಲ್ಲಿ ಇತರ ಧರ್ಮದವರು ಅವರಿಗೆ ಶುಭ ಹಾರೈಸುವುದು ಮತ್ತು ಅವರ ಆಚರಣೆಗಳನ್ನು ಗೌರವಿಸುವುದು ಭಾರತದ ವಿಶೇಷತೆ.