೯೯.ಭಾರತೀಯ ಸಂಗೀತ - ಶತಮಾನಗಳ ಸಾಂಸ್ಕೃತಿಕ ಸಂಪತ್ತು
ಐದು ಸಾವಿರ ವರುಷಗಳ ಪರಂಪರೆ ಇರುವ ಭಾರತೀಯ ಸಂಗೀತವು ಇಲ್ಲಿನ ಭೌಗೋಲಿಕ ವಿಸ್ತಾರ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಿಂದಾಗಿ ಈ ದೇಶದ ಬೆಲೆ ಕಟ್ಟಲಾಗದ ಸಾಂಸ್ಕೃತಿಕ ಸಂಪತ್ತಾಗಿದೆ.
ಭಾರತದ ಸಂಗೀತ ಸಾಮ್ರಾಜ್ಯದ ಎರಡು ಪ್ರಧಾನ ಕವಲುಗಳು: ದಕ್ಷಿಣ ಭಾರತ ಮೂಲದ ಕರ್ನಾಟಕ ಸಂಗಿತ ಮತ್ತು ಉತ್ತರ ಭಾರತ ಮೂಲದ ಹಿಂದುಸ್ಥಾನಿ ಸಂಗೀತ.
ಭಾರತೀಯ ಸಂಗೀತದ ಶುದ್ಧ ಸ್ವರಗಳು: ಸ, ರಿ, ಗ, ಮ, ಪ, ದ, ನಿ. ಈ ಸಪ್ತಸ್ವರಗಳೇ “ರಾಗ"ಗಳ ಬುನಾದಿ. ಈ ಸ್ವರಗಳ ವಿಭಿನ್ನ ರೂಪಗಳು ಅವನ್ನು “ಕೋಮಲ" ಅಥವಾ “ತೀವ್ರ" ಸ್ವರಗಳಾಗಿ ಬದಲಾಯಿಸುತ್ತವೆ. ಆದರೆ. "ಸ" ಮತ್ತು "ಪ" ಯಾವತ್ತೂ ಶುದ್ಧ ಸ್ವರಗಳಾಗಿರುತ್ತವೆ. ಆದ್ದರಿಂದ ಅವೆರಡಕ್ಕೆ “ಅಚಲ ಸ್ವರ”ಗಳೆಂಬ ಹೆಸರು; ಉಳಿದ ಐದು ಸ್ವರಗಳಿಗೆ “ಚಲ ಸ್ವರ”ಗಳೆಂಬ ಹೆಸರು.
ಕರ್ನಾಟಕ ಸಂಗೀತ ರೂಪುಗೊಂಡದ್ದು ಕ್ರಿ.ಶ. ೧೪ - ೧೫ನೇ ಶತಮಾನಗಳಲ್ಲಿ ಎನ್ನಲಾಗಿದೆ. ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲಘಟ್ಟದಲ್ಲಿ ಇದು ಪುರಂದರ ದಾಸರು ರಚಿಸಿದ ಕೀರ್ತನೆಗಳ ಮೂಲಕ ಬೆಳೆದು ಬಂತು. ಕರ್ನಾಟಕ ಸಂಗೀತದ ರಚನೆಗಳನ್ನು ಬರೆದದ್ದೇ ಸುಶ್ರಾವ್ಯವಾಗಿ ಹಾಡಲಿಕ್ಕಾಗಿ. ಆದ್ದರಿಂದ ಇದರಲ್ಲಿ ಹಾಡುವಿಕೆಗೇ ಪ್ರಾಶಸ್ತ್ಯ. ಹಾಡುವಿಕೆಗಾಗಿ ಈಗ ಸುಮಾರು ೩೦೦ ರಾಗಗಳು ಬಳೆಕೆಯಲ್ಲಿವೆ. ಪುರಂದರ ದಾಸರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಗೌರವಿಸಲಾಗಿದೆ. ಅನಂತರ ನೂರಾರು ರಚನೆಗಳನ್ನು ಸೃಜಿಸಿದ ತ್ಯಾಗರಾಜ, ಶ್ಯಾಮಶಾಸ್ತ್ರಿ ಮತ್ತು ಮುತ್ತುಸ್ವಾಮಿ ದೀಕ್ಷಿತರಿಗೆ ಕರ್ನಾಟಕ ಸಂಗಿತದ ತ್ರಿಮೂರ್ತಿಗಳೆಂಬ ಮನ್ನಣೆ ಸಲ್ಲುತ್ತದೆ.
ಕರ್ನಾಟಕ ಸಂಗೀತ ಸಾಮ್ರಾಜ್ನಿ ಎಂ.ಎಸ್. ಸುಬ್ಬುಲಕ್ಷ್ಮಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಹಾಡಿದ್ದು ಕರ್ನಾಟಕ ಸಂಗೀತ ವಿಶ್ವಮಾನ್ಯತೆ ಗಳಿಸಿದ ಸಂದರ್ಭವೆಂದು ದಾಖಲಾಗಿದೆ.
ಹಿಂದುಸ್ಥಾನಿ ಸಂಗೀತ ಸಾಮವೇದದ ಕಾಲದಿಂದಲೇ ಮೂಡಿ ಬಂದಿದೆ ಎನ್ನಲಾಗಿದೆ. ಕ್ರಿ.ಶ. ೧೩ - ೧೪ನೇ ಶತಮಾನದಲ್ಲಿ ಇದು ಕರ್ನಾಟಕ ಸಂಗೀತದಿಂದ ಬೇರೆಯಾದ ಶೈಲಿಯೆಂದು ಗುರುತಿಸಲಾಯಿತು. ಕ್ರಮೇಣ ಇದರಲ್ಲಿ ಹಲವಾರು ಉಪ-ಕವಲುಗಳು ಬೆಳೆದು ಬಂದವು.
ಭಾರತದ ಜಾನಪದ ಸಂಗೀತವೂ ಒಂದು ಅಗಾಧ ಜಗತ್ತು. ಇದರ ಪ್ರಧಾನ ಕವಲುಗಳು: ತಮಂಗ್ ಸೆಲೊ, ಬಾಂಗ್ರಾ, ಬಿಹು, ದಾಂಡಿಯಾ, ಗಾನ, ಹರ್ಯಾನ್ವಿ, ಹಿಮಾಚಲಿ, ಜುಮೇರ್ ಮತ್ತು ದೊಮ್‌ಕಚ್, ಲಾವಣಿ, ಮಣಿಪುರಿ, ಮರ್ಫಾ, ಮಿಜೊ, ಒಡಿಸ್ಸಿ, ರಬೀಂದ್ರ ಸಂಗೀತ (ಬಂಗಾಳಿ), ರಾಜಸ್ಥಾನಿ, ಸುಫಿ, ಉತ್ತರಖಂಡಿ.
ನೃತ್ಯ ಸಂಗೀತ, ಚಲನಚಿತ್ರ ಸಂಗೀತ, ಪಾಪ್ ಸಂಗೀತ, ದೇಶಭಕ್ತಿ ಗೀತೆಗಳು, ಪಾಶ್ಚಾತ್ಯ ಸಂಗೀತದ ಭಾರತೀಯ ಶೈಲಿ - ಇವನ್ನು ಭಾರತದ ಜನಪ್ರಿಯ ಸಂಗೀತ ಪ್ರಕಾರಗಳೆಂದು ಗುರುತಿಸಲಾಗಿದೆ.
ಭಾರತದ ಹಲವೆಡೆಗಳಲ್ಲಿ ಸಂಗೀತ ಕಚೇರಿಗಳೂ ಉತ್ಸವಗಳೂ ಜರಗುತ್ತಲೇ ಇರುತ್ತವೆ. ಪ್ರತೀ ವರ್ಷಾಂತ್ಯದಲ್ಲಿ ಚೆನ್ನೈಯಲ್ಲಿ ನಡೆಯುವ ಎಂಟು ವಾರಗಳ ಸಂಗೀತ ಕಾರ್ಯಕ್ರಮ ಜಗತ್ತಿನಲ್ಲೇ ಅತ್ಯಂತ ದೀರ್ಘ ಸಾಂಸ್ಕೃತಿಕ ಕಾರ್ಯಕ್ರಮ. ಹಾಗೆಯೇ ಪುರಂದರ ಆರಾಧನಾ ಮತ್ತು ತ್ಯಾಗರಾಜ ಆರಾಧನಾ ಮಹೋತ್ಸವಗಳೂ ಜನಪ್ರಿಯ. ಭಾರತ ಸರಕಾರ ೧೯೫೨ರಲ್ಲಿ ಸ್ಥಾಪಿಸಿದ ಸಂಗೀತ ನಾಟಕ ಅಕಾಡೆಮಿ ಸಹಿತ ಹಲವಾರು ಸಂಘಟನೆಗಳು ಭಾರತೀಯ ಸಂಗೀತದ ಸೇವೆಯಲ್ಲಿ ತೊಡಗಿವೆ.
ಫೋಟೋ: ಕರ್ನಾಟಕ ಸಂಗೀತದ ಸಾಮ್ರಾಜ್ನಿ ಎಂ. ಎಸ್. ಸುಬ್ಬುಲಕ್ಷ್ಮಿ