ನಮ್ಮ ಹೆಮ್ಮೆಯ ಭಾರತ (ಭಾಗ 97)

Atal Tunnel, Himachal Pradesh, India

೯೭.ಅಟಲ್ ಸುರಂಗ ಮಾರ್ಗ
ಜಗತ್ತಿನ ಅತ್ಯಂತ ಉದ್ದದ (೧೦,೦೦೦ ಅಡಿಗಳಿಗಿಂತ ಎತ್ತರ ಪ್ರದೇಶದ) ಅಟಲ್ ಸುರಂಗ ಮಾರ್ಗವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ೩.೧೦.೨೦೨೦ರಂದು ಉದ್ಘಾಟಿಸಿದರು. ಇದರ ಉದ್ದ ೯.೦೨ ಕಿಮೀ ಮತ್ತು ನಿರ್ಮಾಣ ವೆಚ್ಚ ರೂ.೩,೨೦೦ ಕೋಟಿ.

ಭಾರತದ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿಗಾಗಿ ಇದನ್ನು ಅಟಲ್ ಸುರಂಗ ಮಾರ್ಗವೆಂದು ಹೆಸರಿಸಲಾಗಿದೆ. ಅವರು ೩.೬.೨೦೦೦ದಂದು ಈ ಬೃಹತ್ ಸುರಂಗ ಮಾರ್ಗ ನಿರ್ಮಾಣದ ಯೋಜನೆಯನ್ನು ಘೋಷಿಸಿದ್ದರು.

ಈ ಸುರಂಗ ಹಿಮಾಚಲ ಪ್ರದೇಶದ ರೊಹ್‌ಟಾಂಗ್ ಪಾಸ್‌ನಲ್ಲಿ ನೆಲದಡಿಯಲ್ಲಿದೆ. ಹಿಮಾಚಲ ಪ್ರದೇಶದ ಮನಾಲಿಯಿಂದ ಲಡಕ್‌ನ ಲೆಹ್ ಸಂಪರ್ಕಿಸುವ ಈ ಸುರಂಗದಿಂದಾಗಿ, ಪ್ರಯಾಣ ದೂರ ೪೬ ಕಿಮೀ ಮತ್ತು ಪ್ರಯಾಣ ಸಮಯ ೪-೫ ಗಂಟೆ ಕಡಿಮೆಯಾಗಿದೆ. ಮುಖ್ಯವಾಗಿ, ನಮ್ಮ ಸೈನ್ಯ ತುರ್ತು ಸಂದರ್ಭದಲ್ಲಿ ಲಡಕ್ ತಲಪಲು ಇದರಿಂದಾಗಿ ಬಹಳ ಅನುಕೂಲ. ಅಲ್ಲಿನ ಪ್ರವಾಸೋದ್ಯಮಕ್ಕೆ ಇದರಿಂದಾಗಿ ಹೊಸ ಚೈತನ್ಯ ಒದಗಿದೆ.

ಈ ಸುರಂಗ ಮಾರ್ಗದ ವಿಶೇಷತೆಗಳು: ಸಮುದ್ರ ಮಟ್ಟದಿಂದ ೩,೦೦೦ ಮೀ. ಎತ್ತರದಲ್ಲಿದೆ. ಇದು ಸಿಂಗಲ್-ಟ್ಯೂಬ್, ಡಬಲ್ ಲೇನ್ ಸುರಂಗ. ಪ್ರತಿ ೧೫೦ ಮೀಟರಿಗೆ ಒಂದರಂತೆ ಟೆಲಿಫೋನ್, ಪ್ರತಿ ೬೦ ಮೀಟರಿಗೆ ಒಂದರಂತೆ ಅಗ್ನಿಶಾಮಕ ಸಾಧನ, ಪ್ರತಿ ಕಿಲೋಮೀಟರಿಗೆ ಒಂದರಂತೆ ವಾಯು ಗುಣಮಟ್ಟ ಪರೀಕ್ಷಾ ಉಪಕರಣ ಅಳವಡಿಸಲಾಗಿದೆ. ಅದಲ್ಲದೆ, ಪ್ರತಿ ೫೦೦ ಮೀಟರಿಗೆ ಒಂದರಂತೆ ತುರ್ತು-ನಿರ್ಗಮನ ದ್ವಾರಗಳಿವೆ. ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸಿದೆ.