೯೧.ಜಗತ್ತಿನ ಶ್ರೇಷ್ಠ ಶಿಲ್ಪಕಲೆಯ ಬೀಡು: ಬೇಲೂರು - ಹಳೆಬೀಡು
ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನ ಶ್ರೀ ಚೆನ್ನಕೇಶವ ದೇವಾಲಯವು ಜಗತ್ತಿನಲ್ಲೇ ಶ್ರೇಷ್ಠ ಶಿಲ್ಪಕಲೆಯ ನೆಲೆ ಎಂಬುದು ಎಲ್ಲರೂ ತಲೆದೂಗಬೇಕಾದ ಸಂಗತಿ. ೧೨ನೆಯ ಶತಮಾನದ ಈ ಹಿಂದೂ ದೇವಾಲಯವನ್ನು ಕ್ರಿ.ಶ. ೧೧೧೭ರಲ್ಲಿ ಯಗಚಿ ನದಿ ದಡದಲ್ಲಿ ನಿರ್ಮಿಸಲು ಆರಂಭಿಸಿದವನು ಹೊಯ್ಸಳ ರಾಜ ವಿಷ್ಣುವರ್ಧನ. ಆಗ ವೇಲಾಪುರವೆಂದು ಕರೆಯಲಾಗುತ್ತಿದ್ದ ಇದು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
ಈ ಅತ್ಯದ್ಭುತ ಶಿಲಾಸೌಂದರ್ಯದ ದೇವಾಲಯದ ನಿರ್ಮಾಣವನ್ನು ೧೦೩ ವರುಷಗಳ ಅವಧಿಯಲ್ಲಿ ರಾಜಮನೆತನದ ಮೂರು ತಲೆಮಾರುಗಳು ಪೂರೈಸಿದವು. ಇದಕ್ಕೆ ಮುಸ್ಲಿಂ ವೈರಿಸೈನ್ಯಗಳು ಯುದ್ಧದ ಸಂದರ್ಭಗಳಲ್ಲಿ ಮತ್ತೆಮತ್ತೆ ಹಾನಿ ಮಾಡಿದವು. ಆದರೆ, ಹೊಯ್ಸಳ ರಾಜರು ಛಲದಿಂದ ಪುನರ್ ನಿರ್ಮಾಣ ಮಾಡಿದರು. (ಫೋಟೋ)
ಬೆಂಗಳೂರಿನಿಂದ ೨೦೦ ಕಿಮೀ ಮತ್ತು ಹಾಸನದಿಂದ ೩೫ ಕಿಮೀ ದೂರದಲ್ಲಿರುವ ಬೇಲೂರು ವೈಷ್ಣವರ ಯಾತ್ರಾಸ್ಥಳ. ಮಹಾಭಾರತ, ರಾಮಾಯಣ ಮತ್ತು ಪುರಾಣಗಳ ಹಲವು ಸಂಗತಿಗಳನ್ನು ಇಲ್ಲಿನ ಅನೇಕ ಕೆತ್ತನೆಗಳು ಬಿಂಬಿಸುತ್ತವೆ.
ಇಲ್ಲಿನ ದೇವಸ್ಥಾನದ ಇಂಚಿಂಚೂ ೧೨ನೆಯ ಶತಮಾನದ ದಕ್ಷಿಣ ಭಾರತದ ಹೊಯ್ಸಳರ ಕಾಲದ ಶಿಲ್ಪಕಲೆಯ ಸೂಕ್ಷ್ಮತೆ ಮತ್ತು ಉತ್ತುಂಗತೆಯನ್ನು ಜಗತ್ತಿಗೆ ಸಾರಿ ಹೇಳುತ್ತಿದೆ. ದೇವಸ್ಥಾನದಲ್ಲಿದ್ದ ೪೦ ಶಿಲಾಬಾಲಿಕೆ ಶಿಲ್ಪಗಳಲ್ಲಿ ಈಗ ೩೮ ಉಳಿದಿವೆ. ಅಬ್ಬಬ್ಬ, ಒಂದೊಂದು ಶಿಲಾಬಾಲಿಕೆಯ ರಚನೆಯಲ್ಲಿಯೂ ಅದೇನು ನವಿರುತನ, ಅದೇನು ಹಾವಭಾವ, ಅದೇನು ಕಲ್ಪನೆ! ಒಳಾಂಗಣದಲ್ಲಿ ಚಾವಣಿಗೆ ಆನಿಸಿರುವ ನಾಲ್ಕು ಮದನಿಕೆಯರ ಶಿಲ್ಪಗಳಂತೂ ನೋಡುಗರನ್ನು ನಿಬ್ಬೆರಗಾಗಿಸುತ್ತವೆ. ದೇವಸ್ಥಾನದಲ್ಲಿರುವ ವಿಷ್ಣುವಿನ ರೂಪವಾದ ಮೋಹಿನಿಯ ವಿಗ್ರಹವಂತೂ ತನ್ನ ಸೂಕ್ಷ್ಮಾತಿಸೂಕ್ಷ್ಮ ಕುಸುರಿ ಕೆಲಸದಿಂದ ನಮ್ಮನ್ನು ದಂಗುಬಡಿಸುತ್ತದೆ. ಶ್ರೀ ಚೆನ್ನಕೇಶವನ ಮೂರ್ತಿಯನ್ನು ಬಣ್ಣಿಸಲು ಶಬ್ದಗಳು ಸೋಲುತ್ತವೆ.
ಬೇಲೂರಿನಿಂದ ೧೬ ಕಿಮೀ ದೂರದಲ್ಲಿದೆ ಹಳೆಬೀಡು. ರಾಜ ವಿಷ್ಣುವರ್ಧನ ತನ್ನ ರಾಜಧಾನಿಯನ್ನು ಬೇಲೂರಿನಿಂದ ದ್ವಾರಸಮುದ್ರಕ್ಕೆ (ಈಗಿನ ಹಳೆಬೀಡು) ಸ್ಥಳಾಂತರಿಸಿದ. ಆತ ಅಲ್ಲಿ ಶಿವನಿಗೆ ಸಮರ್ಪಿತವಾದ ಹೊಯ್ಸಳೇಶ್ವರ ದೇವಾಲಯ ನಿರ್ಮಿಸಲು ಆರಂಭಿಸಿದ. ಈ ನಿರ್ಮಾಣವನ್ನು ಆತನ ರಾಜವಂಶವದವರು ಕ್ರಿ.ಶ. ೧೧೫೦ರಲ್ಲಿ ಮುಗಿಸಿದರು. ಹೊಯ್ಸಳರು ಈ ದೇವಾಲಯಗಳ ನಿರ್ಮಾಣಕ್ಕಾಗಿ ಹೆಸರಾಂತ ಶಿಲ್ಪಿಗಳನ್ನು ನಿಯೋಜಿಸಿದ್ದರು. ಇಲ್ಲಿನ ಅಪೂರ್ವ ಶಿಲ್ಪಶೈಲಿಯನ್ನು ಕರ್ನಾಟ ದ್ರಾವಿಡ ಶೈಲಿ ಎಂದು ಹೆಸರಿಸಲಾಗಿದೆ.