ನಮ್ಮ ಹೆಮ್ಮೆಯ ಭಾರತ (ಭಾಗ 89)

Gommateshwara at Shravanabelagola, Hassan District, India

೮೯.ಶ್ರವಣಬೆಳಗೊಳದ ಜಗತ್ಪ್ರಸಿದ್ಧ ಗೊಮ್ಮಟೇಶ್ವರ
ಕರ್ನಾಟಕದ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಜೈನರ ಪ್ರಖ್ಯಾತ ಯಾತ್ರಾಸ್ಥಳ. ಇಲ್ಲಿನ ೩,೫೦೦ ಅಡಿ ಎತ್ತರದ ವಿಂಧ್ಯಾಗಿರಿ ಬೆಟ್ಟದ ಮೇಲಿದೆ ಏಕಶಿಲೆಯ ಬೃಹತ್ ಗೊಮ್ಮಟೇಶ್ವರ ವಿಗ್ರಹ (ಎತ್ತರ ೫೭ ಅಡಿ; ೧೭ ಮೀ.). ಈ ಹಸನ್ಮುಖಿ, ಸ್ಥಿತಪ್ರಜ್ನ ಬಾಹುಬಲಿಯ ಭವ್ಯ ವಿಗ್ರಹವನ್ನು ನೋಡುವುದೇ ಒಂದು ದಿವ್ಯ ಅನುಭವ. ಇದು ಶಾಂತಿ, ಅಹಿಂಸೆ ಮತ್ತು ತ್ಯಾಗವನ್ನು ಜಗತ್ತಿಗೆ ಸಾರುವ ವಿಗ್ರಹ. (ಫೋಟೋ)

ಇದನ್ನು ಗಂಗ ರಾಜವಂಶದ ಚಾವುಂಡರಾಯ ಕ್ರಿ.ಶ.೯೮೩ರಲ್ಲಿ ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪಿಸಿದ. ಇದಕ್ಕೆ ೧೨ ವರುಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಜರಗುತ್ತದೆ. ಗೊಮ್ಮಟೇಶ್ವರ ವಿಗ್ರಹ ಮೂವತ್ತು ಕಿಮೀ ದೂರದಿಂದಲೂ ಕಾಣಿಸುತ್ತದೆ. ವಿಂಧ್ಯಾಗಿರಿ ಹತ್ತಲು ೭೦೦ ಮೆಟ್ಟಲುಗಳಿವೆ. ಶ್ರವಣಬೆಳಗೊಳ ಬೆಂಗಳೂರಿನಿಂದ ೧೫೮ ಕಿಮೀ ದೂರದಲ್ಲಿದೆ.

ಜೈನ ಧರ್ಮದ ಅನುಸಾರ, ಬಾಹುಬಲಿ ಮತ್ತು ಸೋದರ ಭರತ ರಾಜ್ಯಕ್ಕಾಗಿ ಯುದ್ಧ ಮಾಡುತ್ತಾರೆ. ಈ ಯುದ್ಧದಲ್ಲಿ ಭರತನನ್ನು ಸೋಲಿಸುತ್ತಾನೆ ಬಾಹುಬಲಿ. ಯುದ್ಧದಲ್ಲಿ ಗೆದ್ದರೂ ಬಾಹುಬಲಿಯಲ್ಲಿ ವೈರಾಗ್ಯ ಮೂಡುತ್ತದೆ. ಆತ ರಾಜ್ಯವನ್ನು ಭರತನಿಗೆ ಒಪ್ಪಿಸಿ, ಕಾಡಿಗೆ ಹೋಗುತ್ತಾನೆ. ಅಲ್ಲಿ ತಪಸ್ಸು ಮಾಡಿ ಮೋಕ್ಷ ಪಡೆಯುತ್ತಾನೆ. ಆತನು ತಪಸ್ಸು ಮಾಡುವ ಭಂಗಿಯೇ ಈ ಭವ್ಯ ವಿಗ್ರಹ.

ವಿಂಧ್ಯಾಗಿರಿಯ ಎದುರಿನ ಚಂದ್ರಗಿರಿಯಲ್ಲಿಯೂ ಜೈನ ಮಂದಿರಗಳು, ಗುಹೆಗಳು, ಕೋಟೆ ಹಾಗೂ ಶಿಲಾಶಾಸನಗಳಿವೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ (೩೯ ಅಡಿ ಎತ್ತರದ), ವೇಣೂರಿನಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿಯೂ ಗೊಮ್ಮಟೇಶ್ವರ ವಿಗ್ರಹಗಳಿವೆ.