೪೧.ಸಕ್ಕರೆ ಬಳಕೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಮೊದಲ ಸ್ಥಾನ
ಕಬ್ಬು ಮತ್ತು ಸಕ್ಕರೆಯ ತವರು ಭಾರತ ಎಂದು ಪರಿಗಣಿಸಲಾಗಿದೆ. ಪ್ರಾಚೀನ ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಕಬ್ಬು ಕೃಷಿಯ ಬಗ್ಗೆ ಉಲ್ಲೇಖಗಳಿವೆ. ಚಕ್ರವರ್ತಿ ಅಲೆಗ್ಸಾಂಡರನ ಜೊತೆಗಿದ್ದ ಲೇಖಕರು, ಜೇನ್ನೊಣಗಳ ಸಹಾಯವಿಲ್ಲದೆ ಜೇನು ಉತ್ಪಾದಿಸುವ ಅದ್ಭುತ ಹುಲ್ಲು ಎಂದು ಕಬ್ಬನ್ನು ವರ್ಣಿಸಿದ್ದಾರೆ!
ಭಾರತದಲ್ಲಿ ಸಕ್ಕರೆ ಉದ್ಯಮ ಫ್ರೆಂಚರಿಂದ ೧೯ನೇ ಶತಮಾನದಲ್ಲಿ ಆರಂಭವಾಯಿತು. ಭಾರತ ೧೯೪೭ರಲ್ಲಿ ಸ್ವಾತಂತ್ರ್ಯ ಗಳಿಸಿದ ನಂತರ ವ್ಯವಸ್ಥಿತವಾದ ರೀತಿಯಲ್ಲಿ ಸಕ್ಕರೆ ಉದ್ಯಮದ ಅಭಿವೃದ್ಧಿ ಶುರುವಾಯಿತು. ಈಗ ಭಾರತದ ಆರ್ಥಿಕರಂಗದಲ್ಲಿ ಸಕ್ಕರೆ ಉದ್ಯಮಕ್ಕೆ ಪ್ರಧಾನ ಸ್ಥಾನ. ಅದಲ್ಲದೆ, ಸಕ್ಕರೆ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ೨ನೇ ಸ್ಥಾನ ಪಡೆದಿರುವ ಭಾರತಕ್ಕೆ ಸಕ್ಕರೆ ಬಳಕೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನ.
೪೨.ಮೈಕಾ ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಪ್ರಥಮ ಸ್ಥಾನ
ಮೈಕಾ ನೋಡಿದ್ದೀರಾ? ಇದು ಹಾಳೆ-ರಚನೆಯ ವಿಶೇಷ ಖನಿಜ. ಇದರಿಂದ ಸುಲಭವಾಗಿ ಬಹಳ ತೆಳುವಾದ ಹಾಳೆಗಳನ್ನು ಒಡೆದು ತೆಗೆಯಬಹುದು ಎಂಬುದೇ ಇದರ ವಿಶೇಷತೆ.
ಮೈಕಾ ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಪ್ರಥಮ ಸ್ಥಾನ. ಒಟ್ಟು ಜಾಗತಿಕ ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡಾ ೬೦. ಜಾರ್ಖಂಡ್, ಆಂಧ್ರಪ್ರದೇಶ ಮತ್ತು ರಾಜಸ್ಥಾನ - ಈ ಮೂರು ರಾಜ್ಯಗಳು ಭಾರತದ ಒಟ್ಟು ಮೈಕಾ ಉತ್ಪಾದನೆಯ ಶೇಕಡಾ ೯೫ ಉತ್ಪಾದಿಸುತ್ತಿವೆ. ಒಟ್ಟು ಮೈಕಾ ಉತ್ಪಾದನೆಗೆ ಜಾರ್ಖಂಡದ ಕೊಡುಗೆ ಶೇ.೬೦. ಪೈಂಟ್ ಮತ್ತು ವಾಲ್-ಬೋರ್ಡ್ ಉತ್ಪಾದನೆ ಹಾಗೂ ಇನ್‌ಸುಲೇಷನಿಗೆ ಮೈಕಾದ ಬಳಕೆ. ಇಲೆಕ್ಟ್ರಾನಿಕ್ ಉದ್ಯಮ ಮತ್ತು ಡ್ರಿಲ್ಲಿಂಗ್ ಉದ್ಯಮದಲ್ಲಿಯೂ ಮೈಕಾ ಬಳಕೆಯಾಗುತ್ತದೆ.