ನಮ್ಮ ಹೆಮ್ಮೆಯ ಭಾರತ (ಭಾಗ 37)

AMUL Products, India

೩೭.ಅಮುಲ್: ಹಾಲು ಉತ್ಪಾದಕರ ಬೃಹತ್ ಒಕ್ಕೂಟ
ಅಮುಲ್ ಎಂದರೆ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್. ಗುಜರಾತಿನ ಆನಂದ್ ಎಂಬ ಊರಿನಲ್ಲಿ ಶುರುವಾದ ಹಾಲು ಉತ್ಪಾದಕರ ಪುಟ್ಟ ಸಂಘಟನೆ ಜಗತ್ತಿನ ಮುಂಚೂಣಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಕೈಗಾರಿಕೆಯಾಗಿ ಬೆಳೆದ ಕಥೆ. ಈ ಸಹಕಾರಿ ಸಂಘಟನೆಯ ಯಶಸ್ಸಿಗೆ ಕಾರಣರು ಡಾ. ವರ್ಗೀಸ್ ಕುರಿಯನ್. ಅವರು ಇದನ್ನು ಮೂವತ್ತು ವರುಷಗಳ ಕಾಲ ಮುನ್ನಡೆಸಿದರು. ಅವರ ಪುಸ್ತಕ "ಐ ಹ್ಯಾಡ್ ಎ ಡ್ರೀಮ್” ಈ ವಿಸ್ಮಯದ ಯಶೋಗಾಥೆಯ ಕಥನ.

“ಅಮುಲ್" ಹಲವು ಜಾಗತಿಕ ದಾಖಲೆಗಳ ಸರದಾರ. ಇದು ಜಗತ್ತಿನ ಅತಿ ದೊಡ್ಡ ಪ್ಯಾಕೆಟ್ ಹಾಲಿನ ಬ್ರಾಂಡ್ ಮತ್ತು ಅತಿ ದೊಡ್ಡ ಸಸ್ಯಾಹಾರಿ ಚೀಸ್ ಬ್ರಾಂಡ್. ಜೊತೆಗೆ, ಭಾರತದ ಅತ್ಯಂತ ದೊಡ್ಡ ಆಹಾರ ವಸ್ತುಗಳ ಬ್ರಾಂಡ್ ಅಮುಲ್.

“ಅಮುಲ್" ೨.೮ ದಶಲಕ್ಷ ಉತ್ಪಾದಕ-ಸದಸ್ಯರನ್ನು ಹೊಂದಿದ್ದು, ಸರಾಸರಿ ಹಾಲಿನ ಸಂಗ್ರಹ ದಿನಕ್ಕೆ ೧೦.೬ ದಶಲಕ್ಷ ಲೀಟರ್. ಆನಂದ್‌ನಲ್ಲಿ “ಅಮುಲ್" ಸ್ಥಾಪನೆ ಭಾರತದಂತಹ ಮಹಾನ್ ದೇಶದಲ್ಲಿ “ಹಾಲಿನ ಕ್ರಾಂತಿ”ಗೆ ನಾಂದಿಯಾಯಿತು. “ಅಮುಲ್" ಮಾದರಿಯಲ್ಲೇ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳ್ನಾಡು ಇತ್ಯಾದಿ ರಾಜ್ಯಗಳು ಹಾಲು ಉತ್ಪಾದಕರ ಒಕ್ಕೂಟಗಳನ್ನು ಸ್ಥಾಪಿಸಿ, ಅವೆಲ್ಲವೂ ಯಶಸ್ವಿಯಾಗಿವೆ. ಇದರಿಂದಾಗಿ, ಭಾರತ ಜಗತ್ತಿನಲ್ಲೇ ಅತ್ಯಂತ ಬೃಹತ್ ಹಾಲು ಮತ್ತು ಹಾಲಿನ ಉತ್ಪನ್ನಗಳ ದೇಶವಾಗಿದೆ.
ಫೋಟೋ: ಅಮುಲ್ ಉತ್ಪನ್ನಗಳು