ನಮ್ಮ ಹೆಮ್ಮೆಯ ಭಾರತ (ಭಾಗ 35)

Cow Herd

ಕೃಷಿ ಮತ್ತು ವಾಣಿಜ್ಯ
೩೫.ಭಾರತದ ಹೈನಪಶುಗಳ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ
ಭಾರತದಲ್ಲಿ ದನಗಳನ್ನು "ಗೋಮಾತೆ" ಎಂದು ಪೂಜಿಸಲಾಗುತ್ತದೆ. ಸಂಕ್ರಾಂತಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಗೋವುಗಳನ್ನು ಅಲಂಕರಿಸಿ ಪೂಜಿಸಲಾಗುತ್ತದೆ. ಹಳ್ಳಿಗಳಲ್ಲಿ ಗೋಮಾಳಕ್ಕೆ ಮತ್ತು ನಗರಗಳಲ್ಲಿ ಬೀದಿಗಳಲ್ಲಿ ದನಗಳನ್ನು ಅಡ್ಡಾಡಲು ಬಿಡುತ್ತಾರೆ. ದನಗಳು ದೇವರ ಕೊಡುಗೆ ಎಂದು ಹಿಂದೂಗಳು ನಂಬುತ್ತಾರೆ. ಆದ್ದರಿಂದ ದನದ ಮಾಂಸವನ್ನು ಹಿಂದೂಗಳು ತಿನ್ನುವುದಿಲ್ಲ. ಗೋಮಾಂಸ ಮಾರಾಟವನ್ನು ಹಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ.

ಭಾರತದ ಹೈನಪಶುಗಳ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ. ಜಗತ್ತಿನ ಹೈನಪಶುಗಳ ಸಂಖ್ಯೆ ೧.೩ ಬಿಲಿಯನ್ ಎಂದು ಅಂದಾಜಿಸಲಾಗಿದ್ದು, ಅದರಲ್ಲಿ ೪೦೦ ಮಿಲಿಯನ್ ಭಾರತದಲ್ಲಿವೆ; ಬ್ರೆಜಿಲ್ ಎರಡನೇ ಸ್ಥಾನದಲ್ಲಿಯೂ ಚೀನಾ ಮೂರನೆಯ ಸ್ಥಾನದಲ್ಲಿಯೂ ಇವೆ.

ಭಾರತದಲ್ಲಿರುವ ಇತರ ಹೈನಪಶುಗಳ ಪ್ರಮಾಣ: ಜಗತ್ತಿನ ಒಟ್ಟು ಎಮ್ಮೆಗಳ ಸಂಖ್ಯೆಯ ಶೇ.೫೫, ಒಟ್ಟು ಆಡುಗಳ ಸಂಖ್ಯೆಯ ಶೇ.೨೦ ಮತ್ತು ದನಗಳ ಸಂಖ್ಯೆಯ ಶೇ.೧೬.

೧೯೯೦ನೆಯ ದಶಕದಿಂದ ಭಾರತದಲ್ಲಿ ಹಲವಾರು ಸುಸಜ್ಜಿತ ಡೈರಿಗಳು ತಲೆಯೆತ್ತಿವೆ. ಇಲ್ಲಿ ಹಾಲು ಕರೆಯುವುದರಿಂದ ತೊಡಗಿ ಹಾಲನ್ನು ಸಂಸ್ಕರಿಸುವ ವರೆಗೆ ಸುಸಜ್ಜಿತ ವ್ಯವಸ್ಥೆ ಇದೆ. ಪ್ರತಿಯೊಂದು ದನದ ಆರೋಗ್ಯ, ಹಾಲಿನ ಉತ್ಪಾದನೆ ಮತ್ತು ಆಹಾರ-ಪೋಷಕಾಂಶ ಇತ್ಯಾದಿ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವನ್ನು ವೈಜ್ನಾನಿಕ ರೀತಿಯಲ್ಲಿ ಸಾಕಲಾಗುತ್ತಿದೆ.     
ಫೋಟೋ ಕೃಪೆ: ಫ್ರೀಪಿಕ್.ಕೋಮ್