೩೩.ನೀಲ್‌ಗಾಯಿ ಜಗತ್ತಿನ ಅತಿ ದೊಡ್ಡ ಏಷ್ಯಾ ಆಂಟಿಲೋಪ್
ಉತ್ತರ ಮತ್ತು ಮಧ್ಯ ಭಾರತದ ಹುಲ್ಲುಗಾವಲುಗಳಲ್ಲಿ ಮತ್ತು ಕುರುಚಲು ಗಿಡಗಳ ಕಾಡುಗಳಲ್ಲಿ ವಾಸಿಸುವ ನೀಲ್‌ಗಾಯಿ ಜಗತ್ತಿನ ಅತಿ ದೊಡ್ಡ ಏಷ್ಯಾ ಆಂಟಿಲೋಪ್. ಇದನ್ನು ನೀಲಿ ಹೋರಿ ಎಂದೂ ಕರೆಯುತ್ತಾರೆ; ನೀಲ್ ಎಂದರೆ ನೀಲಿ ಬಣ್ಣ ಮತ್ತು ಗಾಯಿ ಎಂದರೆ ದನದ ಜಾತಿಯ ಪ್ರಾಣಿ.
ಇದು ಗಂಟೆಗೆ ೪೮ ಕಿಮೀ ವೇಗದಲ್ಲಿ ಓಡಬಲ್ಲದು. ೧೯೩೦ರಲ್ಲಿ ಇದನ್ನು ಯುಎಸ್‌ಎ ದೇಶಕ್ಕೆ ರಫ್ತು ಮಾಡಲಾಯಿತು. ಹಾಗಾಗಿ ಅಮೇರಿಕದ ಹುಲ್ಲಗಾವಲುಗಳಲ್ಲಿ ಮತ್ತು ಪ್ರಾಣಿಸಂಗ್ರಹಾಲಯಗಳಲ್ಲಿ ಈಗ ಇವನ್ನು ಕಾಣಬಹುದು.
ಫೋಟೋ: ನೀಲ್‌ಗಾಯಿ; ಕೃಪೆ: ಪಿಕ್ಸಬೇ.ಕೋಮ್
೩೪.ನೀಲಗಿರಿ ಗುಡ್ಡಗಳಲ್ಲಿ ವಾಸಿಸುವ ನೀಲಗಿರಿ ಆಡು
ಪಶ್ಚಿಮ ಘಟ್ಟಗಳ ಭಾಗವಾದ ನೀಲಗಿರಿ ಗುಡ್ಡಗಳಲ್ಲಿ ಮಾತ್ರ ಕಂಡು ಬರುವ ನೀಲಗಿರಿ ಆಡನ್ನು ತಮಿಳುನಾಡು "ರಾಜ್ಯದ ಪ್ರಾಣಿ” ಎಂದು ಘೋಷಿಸಿದೆ. ಚೆನ್ನಾಗಿ ಬೆಳೆದ ನೀಲಗಿರಿ ಆಡಿನ ಭುಜದ ಎತ್ತರ ನೆಲದಿಂದ ಒಂದು ಮೀಟರ್ ಮತ್ತು ತೂಕ ೧೦೦ ಕಿಗ್ರಾ.
ವಯಸ್ಸಾದ ನೀಲಗಿರಿ ಆಡುಗಳನ್ನು “ಜೀನು ಬೆನ್ನಿನ ಆಡು" ಎಂದು ಕರೆಯುತ್ತಾರೆ. ಯಾಕೆಂದರೆ ಅವುಗಳ ನಡು-ಬೆನ್ನಿನ ರೋಮಗಳು ಬಿಳಿಬಣ್ಣಕ್ಕೆ ತಿರುಗಿ ಅದಕ್ಕೊಂದು ಜೀನು ತೊಡಿಸಿದಂತೆ ಕಾಣುತ್ತದೆ. ಒಮ್ಮೆ ಅಳಿವಿನಂಚಿನ ಪ್ರಾಣಿಗಳೆಂದು ಗುರುತಿಸಲಾಗಿದ್ದ ಇವುಗಳ ಸಂಖ್ಯೆಯಲ್ಲಿ ಈಗ ಹೆಚ್ಚಳವಾಗಿದೆ - ಎರವಿಕುಲಮ್ ರಾಷ್ಟ್ರೀಯ ಉದ್ಯಾನದಲ್ಲಿ ಇವನ್ನು ರಕ್ಷಿಸಲು ಕೈಗೊಂಡ ಕ್ರಮಗಳಿಂದಾಗಿ.