ದಕ್ಷಿಣ ಕನ್ನಡದ ಕೊಲ್ನಾಡ್ - ಮುಲ್ಕಿಯಲ್ಲಿ ಬೃಹತ್ ಕೃಷಿಮೇಳ

ಮಂಗಳೂರು - ಉಡುಪಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ, ಮುಲ್ಕಿ ಹತ್ತಿರದ ಕೊಲ್ನಾಡಿನಲ್ಲಿ 11ರಿಂದ 13 ಮಾರ್ಚ್ 2022  ವರೆಗೆ (ಮೂರು ದಿನಗಳ) ರಾಜ್ಯ ಮಟ್ಟದ ಬೃಹತ್ ಕೃಷಿ ಮೇಳ ಜರಗಲಿದೆ.

ಕೊಲ್ನಾಡು - ಮುಲ್ಕಿಯ ವಿನಯ ಕೃಷಿ ಬೆಳೆಗಾರರ ಸಂಘ (ರಿ.) ಮತ್ತು ಮಂಗಳೂರಿನ ಪ್ರಣವ ಸೌಹಾರ್ದ ಸಹಕಾರಿ ನಿಯಮಿತ ಜಂಟಿಯಾಗಿ ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ, ಲಯನ್ಸ್ ಕ್ಲಬ್ - ಕದ್ರಿ ಹಿಲ್ಸ್ ಹಾಗೂ ಇತರ ಹಲವು ಸಂಸ್ಥೆಗಳ ಸಹಕಾರದಿಂದ ಈ ಕೃಷಿ ಮೇಳವನ್ನು ಸಂಘಟಿಸಿವೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ ೧೨ ಎಕ್ರೆ ವಿಶಾಲ ಮೈದಾನದಲ್ಲಿ ಕೃಷಿ ಮೇಳಕ್ಕೆ ಸರ್ವ ಸಿದ್ಧತೆ ಮಾಡಲಾಗಿದೆ. ಸುಮಾರು ೨೦೦ ಮಳಿಗೆಗಳೂ ಸಾಂಪ್ರದಾಯಿಕ ಶೈಲಿಯ ಭಾರೀ ವೇದಿಕೆಯೂ ಸಜ್ಜಾಗಿವೆ.

ಈ ಕೃಷಿ ಮೇಳದಲ್ಲಿ ಏನೇನಿರುತ್ತವೆ?
ಫಲಪುಷ್ಪ ಪ್ರದರ್ಶನ, ಜಾನುವಾರು ಜಾತ್ರೆ, ಕುಕ್ಕುಟ ಮೇಳ, ಹಲವಾರು ಕುಲ ಕಸುಬಿನ ಮತ್ತು ಗುಡಿ ಕೈಗಾರಿಕೆಗಳ ಪ್ರದರ್ಶನ ಹಾಗೂ ಸಿದ್ಧವಸ್ತುಗಳ ಮಾರಾಟ, ಔಷಧೀಯ ಗಿಡಗಳ ವನಸಿರಿ, ಹಣ್ಣು-ತರಕಾರಿ-ಧಾನ್ಯಗಳ ಮಾರಾಟ, ವಿಷಮುಕ್ತ ಆಹಾರವಸ್ತುಗಳ ಮಾಹಿತಿ ಮತ್ತು ಮಾರಾಟ, ಕೃಷಿ ಉಪಕರಣಗಳ ಹಾಗೂ ಯಂತ್ರಗಳ ಪ್ರಾತ್ಯಕ್ಷಿಕೆ ಮತ್ತು ಮಾರಾಟ.

ಕೃಷಿ ಮೇಳದ ವಿಶೇಷತೆಗಳು:
-ಮಂಗಳೂರು ವಿಶ್ವವಿದ್ಯಾಲಯ ಪ್ರಾಯೋಜಿತ “ಪಾರಂಪರಿಕ ಗ್ರಾಮ". ಕರಾವಳಿ ಕರ್ನಾಟಕದ ಪಾರಂಪರಿಕ ಬದುಕಿಗೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಕಾರರಾದ ಸುಧಾಕರ ಶೆಟ್ಟಿ, ನೆಲ್ಲಿಕಟ್ಟೆ, ಹಿರ್ಗಾನ ಮತ್ತು ಶ್ರೀಮತಿ ಆಶಿತಾ ಎಸ್., ಕಡಂಬ, ಹಿರ್ಗಾನ, ಕಾರ್ಕಳ ತಾಲೂಕು ಅವರು ಇಲ್ಲಿನ ಕರ್ಮಾರ್ ಹಾಡಿಯಲ್ಲಿ ಪ್ರದರ್ಶಿಸಲಿದ್ದಾರೆ.

-ರೈತರಿಗೆ ಮಾಹಿತಿ ಒದಗಿಸಲಿಕ್ಕಾಗಿ ಪ್ರತಿ ದಿನವೂ ಮೂರು ವಿಚಾರಗೋಷ್ಠಿಗಳು. ವಿಷಮುಕ್ತ ಆಹಾರ; ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳು; ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ; ಕಾಲಮಾನ ಆಧಾರಿತ ಕೃಷಿ; ಪಶಿಮ ಘಟ್ಟಗಳ ಜೀವವೈವಿಧ್ಯ; ಜಲ ಸಂರಕ್ಷಣೆ; ಮನೆಯಲ್ಲಿಯೇ ಕೈತೋಟ ಮತ್ತು ಸಾವಯವ ಗೊಬ್ಬರ ತಯಾರಿ; ಕೃಷಿ ಮತ್ತು ಆರೋಗ್ಯ - ಈ ವಿಷಯಗಳ ಬಗ್ಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಮಂಡನೆ ಹಾಗೂ ರೈತರೊಂದಿಗೆ ಸಂವಾದ.
-ವಿದ್ಯಾರ್ಥಿಗಳಿಗಾಗಿ ಕೃಷಿ ಬಗ್ಗೆ ವಿಚಾರಗೋಷ್ಠಿ ಮತ್ತು ಕೃಷಿ ಪರಿಣತರೊಂದಿಗೆ ಸಂವಾದ.

-ರೈತರು ಆರ್.ಟಿ.ಸಿ., ಆಧಾರ್ ಕಾರ್ಡ್, ಭಾವಚಿತ್ರ, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರ ತಂದರೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸ್ಥಳದಲ್ಲಿಯೇ ಎಫ್.ಐ.ಡಿ.ಯಲ್ಲಿ ದಾಖಲಾತಿ.
-"ಸೇವಾ ಸಿಂಧು”ವಿನ ಮೂಲಕ ಸರಕಾರದಿಂದ ಸಿಗುವ ಸೇವೆಗಳ ಡಿಜಿಟಲ್ ದಾಖಲಾತಿ ಮಾಡಿಸಲಿಕ್ಕೂ ಅವಕಾಶ.
-ತಮ್ಮ ಜಮೀನಿನ ಮಣ್ಣಿನ ಸ್ಯಾಂಪಲ್ ತರುವ ರೈತರಿಗೆ ಮಣ್ಣು ಪರೀಕ್ಷೆಗೂ ವ್ಯವಸ್ಥೆ.
-ಕೃಷಿ ಇಲಾಖೆಯಿಂದ ಹತ್ತು ಲಕ್ಷ ರೂಪಾಯಿ ಮೌಲ್ಯದ ಕೃಷಿ ಯಂತ್ರೋಪಕರಣಗಳ ಹಸ್ತಾಂತರ.
-ಕೃಷಿ ತಜ್ನರು, ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರ ಭಾಗವಹಿಸುವಿಕೆ.
-ಕರ್ನಾಟಕದ ವಿವಿಧ ಜಿಲ್ಲೆಗಳ ಹದಿನಾರು ಕೃಷಿ ಸಾಧಕರಿಗೆ ಸನ್ಮಾನ.
-ಅಡ್ಡೂರು ಕೃಷ್ಣ ರಾವ್ ನೇತೃತ್ವದ ಸಂಪಾದಕೀಯ ಸಮಿತಿ ಹೊರ ತಂದಿರುವ ಕೃಷಿ ಮಾಹಿತಿ ಕೈಪಿಡಿ ಬಿಡುಗಡೆ.

ಇದು ಮೂರುದಿನಗಳ ಕೃಷಿಕೇಂದ್ರಿತ ಹಬ್ಬ. ಕೃಷಿಕರಿಗೆ ಕೃಷಿಯ ಹೊಸ ಬೆಳವಣಿಗೆಗಳ, ವಿಧಾನಗಳ, ಸಾಧನಗಳ ಹಾಗೂ ತಂತ್ರಜ್ನಾನಗಳ ಬಗ್ಗೆ ತಿಳಿಯಲು ಇದೊಂದು ಒಳ್ಳೆಯ ಅವಕಾಶ.
ಇತರರಿಗೂ ಇದೊಂದು ಸುವರ್ಣಾವಕಾಶ:
ಭೂಮಿ ತಾಯಿ ಬಂಜೆಯಾಗುವ ಮುನ್ನ,
ನಮ್ಮ ಮಕ್ಕಳು-ಮೊಮ್ಮಕ್ಕಳಿಗೆ
ಅನ್ನ ದೇವರು ಸಿಗದಂತಾಗುವ ಮುನ್ನ,
ಸಾವಯವ ಸಾಕ್ಷರರಾಗಲು.