ನಗರಗಳ ಹೊರವಲಯಗಳ ಬಹುಪಾಲು ರೈತರು ತರಕಾರಿ ಬೆಳೆಯಲಿಕ್ಕಾಗಿ ಕೊಳಚೆ ನೀರನ್ನು ಬಳಸುತ್ತಾರೆ. ಆ ಪ್ರದೇಶಗಳಲ್ಲಿ ಏರೊಸೋಲಿನಂತಹ ವಾಯು ಮಾಲಿನ್ಯಕಾರಕಗಳು ಜಾಸ್ತಿ. ಈ ಎರಡು ಕಾರಣಗಳಿಂದಾಗಿ ಅವರು ಬೆಳೆಯುವ ತರಕಾರಿ ವಿಷಮಯವಾಗಿರುತ್ತದೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಿಂದ ಇದೀಗ ತಿಳಿದು ಬಂದ ವಿಷಯ: ಅಂತಹ ಸ್ಥಳದಲ್ಲಿ ಬೆಳೆದ ತರಕಾರಿಗಳಲ್ಲಿ ಭಾರಲೋಹಗಳ ಪ್ರಮಾಣ ಜಾಸ್ತಿ ಇರುತ್ತದೆ. ಇದು ಆಹಾರ ಕಲಬೆರಕೆ ನಿಷೇಧ ಕಾಯಿದೆಯಲ್ಲಿ ಸೂಚಿಸಿದ "ಸಹನೀಯ ಮಟ್ಟ"ಕ್ಕಿಂತಲೂ ಅಧಿಕ.
ರಾಡಿಷ್, ಸ್ಪಿನಾಚ್ ಮತ್ತು ಟೊಮೆಟೊಗಳನ್ನು ಮಣ್ಣಿನ ಕುಂಡಗಳಲ್ಲಿ ಸಂಶೋಧಕರು ಬೆಳೆಸಿದರು. ಅವುಗಳಿಗೆ ನೀಡಿದ್ದು ಕೊಳಚೆನೀರು ಮತ್ತು ಏರೊಸೋಲ್. ಈ ಕುಂಡಗಳನ್ನು ಇರಿಸಿದ್ದು ಮೂರು ಸ್ಥಳಗಳಲ್ಲಿ: ತಡಿಯ ಎಂಬ ಗ್ರಾಮೀಣ ಸ್ಥಳದಲ್ಲಿ, ಕಂಟೋನ್ಮೆಂಟ್ ಜಾಗದಲ್ಲಿ ಮತ್ತು ವಾರಣಾಸಿಯಲ್ಲಿ ವಿಶ್ವವಿದ್ಯಾಲಯದ ಸನಿಹದ ಹೆದ್ದಾರಿ ಹತ್ತಿರದಲ್ಲಿ. ಸಂಶೋಧನೆಯಲ್ಲಿ ಹೋಲಿಕೆಗಾಗಿ (ಕಂಟ್ರೋಲ್) ಬಳಸಿದ್ದು ವಿಶ್ವವಿದ್ಯಾಲಯದಲ್ಲಿ ಇರಿಸಿದ ಶುದ್ಧನೀರು ಎರೆದ ಕುಂಡಗಳನ್ನು.
ಸಂಶೋಧನೆಗೆ ಒಳಪಡಿಸಿದ ಸಸ್ಯಗಳಲ್ಲಿ ಅತ್ಯಧಿಕವಾಗಿ ಸಂಗ್ರಹವಾದದ್ದು ಸೀಸ. ಅನಂತರದ ಸ್ಥಾನ ಭಾರಲೋಹಗಳಾದ ತಾಮ್ರ, ನಿಕ್ಕಲ್, ಕ್ರೋಮಿಯಂ, ಮತ್ತು ಕಾಡ್ಮಿಯಂ. ಹೆದ್ದಾರಿ ಹತ್ತಿರದ ಕುಂಡಗಳ ಸಸಿಗಳಲ್ಲಿ ಅತ್ಯಧಿಕ ಸಂಗ್ರಹ ಇದ್ದದ್ದು ಏರೊಸೋಲಿನದು. ಯಾಕೆಂದರೆ ಅಲ್ಲಿ ಭಾರವಾಹನಗಳಿಂದ, ಸಣ್ಣ ಕೈಗಾರಿಕೆಗಳಿಂದ ಮತ್ತು ರೈಲುಗಳಿಂದ ಹೊರನುಗ್ಗುವ ಹೊಗೆಯಿಂದಾಗಿ ಮಾಲಿನ್ಯಕಾರಕಗಳ ಪ್ರಮಾಣವೂ ಅಧಿಕ.
ಸಂಶೋಧಕರ ತಂಡವು ಪತ್ತೆ ಮಾಡಿದ ವಿಷಯ: ಏರೊಸೋಲ್ ಮತ್ತು ಕೊಳಚೆನೀರು ಬಳಸಿ ಬೆಳೆಸಿದ ತರಕಾರಿ ಸಸಿಗಳ "ತಿನ್ನುವ ಭಾಗ"ಗಳಾದ ಎಲೆ, ಹಣ್ಣು ಮತ್ತು ಬೇರುಗಳಲ್ಲಿ ಭಾರಲೋಹಗಳ ಪ್ರಮಾಣ ಶೇಕಡಾ ೧೦ರಿಂದ ಶೇಕಡಾ ೩೦ ಅಧಿಕ.
ಕೊಳಚೆನೀರು ಹಾಯಿಸಿದ ಕಾರಣ ಬೇರುತರಕಾರಿಗಳಲ್ಲಿ ಭಾರಲೋಹಗಳ ಸಂಗ್ರಹಣೆ ಅಧಿಕವಾಯಿತು. ಹಾಗೆಯೇ ವಾಯು ಮಾಲಿನ್ಯದಿಂದಾಗಿ ಸಸ್ಯಗಳ ಎಲೆತರಕಾರಿಗಳಲ್ಲಿ ಭಾರಲೋಹಗಳ ಪ್ರಮಾಣ ಅಧಿಕವಾಯಿತು.
ಕಾಡ್ಮಿಯಂನಿಂದಾಗಿ ಕ್ಯಾನ್ಸರ್ ಉಂಟಾದೀತು. ಸೀಸವು ವರ್ತನೆಯ ಸಮಸ್ಯೆಗಳಿಗೆ, ಕಲಿಕೆಯ ನ್ಯೂನತೆಗಳಿಗೆ ಮಾತ್ರವಲ್ಲ ಸಾವಿಗೂ ಕಾರಣವಾದೀತು. ನಿಕ್ಕಲಿನಿಂದಾಗಿ ಎಲರ್ಜಿ ಉಂಟಾದೀತು. ತಾಮ್ರವನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಡಿಎನ್ಎಗೆ ಹಾನಿ ಆದೀತು.
ಸಂಶೋಧನೆಯ ಫಲಿತಾಂಶಗಳನ್ನು ಆಧರಿಸಿ, ಸಂಶೋಧನ ತಂಡದ ಸದಸ್ಯರಾದ ಕುಮಾರ ಸುಭಾಷಿಸ್ ಹೀಗೆನ್ನುತ್ತಾರೆ: ಇಂತಹ ತರಕಾರಿಗಳನ್ನು ಸೇವಿಸುವವರಿಗೆ ಭಾರಲೊಹದ ವಿಷದಿಂದಾಗಿ ಅಪಾಯವಾದೀತು. ಮಾತ್ರವಲ್ಲ, ಈ ಭಾರಲೋಹಗಳಿಂದಾಗಿ ಮಣ್ಣಿನ ಸೂಕ್ಷ್ಮಜೀವಿಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಇದರಿಂದಾಗಿ ಮಣ್ಣಿನ ಪೋಷಕಾಂಶಗಳಿಗೂ ಧಕ್ಕೆ. ಆದ್ದರಿಂದ, ಇಂತಹ ಪ್ರದೇಶಗಳಲ್ಲಿ ಬೆಳೆದ ತರಕಾರಿಗಳನ್ನು ಖರೀದಿಸುವಾಗ ಎಚ್ಚರವಿರಲಿ.