ಮಧ್ಯಪ್ರದೇಶದ ಪೊಲೀಸರು ಆಯುರ್ವೇದ ವೈದ್ಯರೂ ಸಾಮಾಜಿಕ ಕಾರ್ಯಕರ್ತರೂ ಆದ ಮೆಹಮೂದ್ ನಯ್ಯಾರ್ ಅಜಂರನ್ನು ೧೯೯೨ರಲ್ಲಿ ಬಂಧಿಸಿದರು. ವಿದ್ಯುತ್ ಕದ್ದಿದ್ದಾರೆ ಎಂಬುದು ಅವರ ಮೇಲಿನ ಆಪಾದನೆ.
ಅನಂತರ ಇಪ್ಪತ್ತು ವರುಷಗಳ ಉದ್ದಕ್ಕೂ ಪೊಲೀಸರಿಂದ ಅಜಂರಿಗೆ ಮಾನಸಿಕ ಹಿಂಸೆ, ಕಿರುಕುಳ ಹಾಗೂ ಸಾರ್ವಜನಿಕ ಅವಮಾನ. ಕಲ್ಲಿದ್ದಲು ಮಾಫಿಯಾ ಮತ್ತು ಭ್ರಷ್ಟ ಪೊಲೀಸರಿಂದ ಶೋಷಣೆಗೊಳಗಾದ ಜನರ ಪರವಾಗಿ ಮೆಹಮೂದ್ ಅಜಂ ಹೋರಡುತ್ತಿದ್ದುದೇ ಇದಕ್ಕೆಲ್ಲ ಕಾರಣ.
ನ್ಯಾಯಕ್ಕಾಗಿ ಹಾಗೂ ಆತ್ಮಗೌರವಕ್ಕಾಗಿ ಪಣ ತೊಟ್ಟಿದ್ದ ಮೆಹಮೂದ ಅಜಂ ಅಂತಿಮವಾಗಿ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ದೇಶದ ಅತ್ಯುನ್ನತ ಕೋರ್ಟ್ ೩ ಆಗಸ್ಟ್ ೨೦೧೨ರಲ್ಲಿ ಚಾರಿತ್ರಿಕ ತೀರ್ಪು ನೀಡಿದೆ. ಈ ತೀರ್ಪಿನಲ್ಲಿ, (ಈಗಿನ) ಚತ್ತಿಸಘರ್ ರಾಜ್ಯವು ಅಜಂರಿಗೆ ರೂಪಾಯಿ ೫ ಲಕ್ಷ ಪರಿಹಾರ ಪಾವತಿಸಬೇಕೆಂದೂ, ಈ ಮೊತ್ತವನ್ನು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳಿಂದ ಸಮಾನ ಅನುಪಾತದಲ್ಲಿ ಸರಕಾರವು ವಸೂಲಿ ಮಾಡಬೇಕೆಂದೂ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮೆಹಮೂದ್ ಅಜಂರಿಗೆ ಪೊಲೀಸರು ಮಾಡಿದ ಅಮಾನವೀಯ ಹಿಂಸೆ ಮತ್ತು ಸಾರ್ವಜನಿಕ ಅವಮಾನಕ್ಕೆ ಪರಿಹಾರವಾಗಿ ಈ ಮೊತ್ತ ಎಂಬುದು ಸುಪ್ರೀಂ ಕೋರ್ಟಿನ ಅಭಿಮತ. ಅಜಂರನ್ನು ಬಂಧಿಸಿದ ಬಳಿಕ "ಕಳ್ಳ ಮತ್ತು ಮೋಸಗಾರ" ಎಂಬ ಫಲಕವನ್ನು ಅವರ ಕೈಯಲ್ಲಿರಿಸಿ, ಅವರ ಫೋಟೋ ತೆಗೆಸಿದ್ದರು ಪೊಲೀಸರು. ಅನಂತರ, ಆ ಫೋಟೋ ಸಹಿತವಾದ ಬ್ಯಾನರುಗಳನ್ನು ನಗರದಲ್ಲಿ ಹಲವಾರು ಜಾಗಗಳಲ್ಲಿ ಪ್ರದರ್ಶಿಸಿದ್ದರು ಪೊಲೀಸರು. ಅಜಂರ ಸಾಮಾಜಿಕ ಮತ್ತು ಕೌಟುಂಬಿಕ ಜೀವನವನ್ನು ನಾಶ ಮಾಡುವುದೇ ಈ ಕೃತ್ಯದ ಉದ್ದೇಶವಾಗಿತ್ತು.
ಮೆಹಮೂದ್ ಅಜಂ ವಿದ್ಯುತ್ ಕದ್ದಿದ್ದಾರೆ ಎಂಬುದೇ ಅಪ್ಪಟ ಸುಳ್ಳು ಆಪಾದನೆ. ಹಾಗಿರುವಾಗ, ಅಜಂರ ಕೈಯಲ್ಲಿ ಅವಮಾನಕಾರಿ ಫಲಕ ಇರಿಸಿ ಫೋಟೋ ತೆಗೆಸಿದ ಪೊಲೀಸ್ ಅಧಿಕಾರಿಗಳನ್ನು ನ್ಯಾಯಾಧೀಶರಾದ ಕೆ. ಎಸ್. ರಾಧಾಕೃಷ್ಣನ್ ಮತ್ತು ದೀಪಕ್ ಮಿಶ್ರಾ ತೀವ್ರವಾಗಿ ಖಂಡಿಸಿದರು. ಕೆಲವು ದುರಹಂಕಾರಿ ಪೊಲೀಸ್ ಅಧಿಕಾರಿಗಳು ತಾವು ಕಾನೂನಿನ ರಕ್ಷಕರು ಎಂಬುದನ್ನು ಮರೆತು ತಾವೇ ಕಾನೂನು ಎಂಬಂತೆ ವರ್ತಿಸಿರುವುದನ್ನು ನ್ಯಾಯಾಧೀಶರು ತೀರ್ಪಿನಲ್ಲಿ ಎತ್ತಿ ತೋರಿಸಿದ್ದಾರೆ.
"ಕಾನೂನಿನ ಆಡಳಿತ ಇರುವ ಮತ್ತು ಸಂವಿಧಾನದ ೨೧ನೇ ಪರಿಚ್ಚೇದವು ಪವಿತ್ರವೆಂದು ಪರಿಗಣಿಸಿರುವ ಈ ದೇಶದಲ್ಲಿ ಒಬ್ಬ ಪ್ರಜೆಯ ಗೌರವ ಮತ್ತು ಸಾಮಾಜಿಕ ಸ್ಥಾನಮಾನಕ್ಕೆ ಹಾನಿಯಾದದ್ದರಿಂದ ನಮಗೆ ನಿಜಕ್ಕೂ ಆತಂಕವಾಗಿದೆ", ಎಂದು ತೀರ್ಪಿನಲ್ಲಿ ನ್ಯಾಯಾಧೀಶರು ದಾಖಲಿಸಿದ್ದಾರೆ. "ಪೊಲೀಸ್ ಕಸ್ಟಡಿಯಲ್ಲಿದ್ದ ಮೇಲ್ಮನವಿದಾರರು (ಅಜಂ) ಬಿಡುಗಡೆಯಾಗಿ ಹೊರಬಂದಾಗ, ತನ್ನ ಪೋಟೋ ಮತ್ತು ಅವಮಾನಕಾರಿ ಶಬ್ದಗಳಿದ್ದ ಬ್ಯಾನರುಗಳು ನಗರದಲ್ಲಿ ಎಲ್ಲೆಡೆ ಹಾರಾಡುವುದನ್ನು ಕಂಡಾಗ, ಅವರಿಗಾದ ಅಮಾನವೀಯ ಮಾನಸಿಕ ಹಿಂಸೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಇದು, ಸಂವಿಧಾನದ ಪರಿಚ್ಚೇದ ೨೧ರ ಅನುಸಾರ ಪ್ರಜೆಗಳಿಗಿರುವ ಗೌರವದಿಂದ ಬದುಕುವ ಹಕ್ಕನ್ನೇ ಕಿತ್ತುಹಾಕುತ್ತದೆ" ಎಂದು ಈ ಚಾರಿತ್ರಿಕ ತೀರ್ಪಿನಲ್ಲಿ ನ್ಯಾಯಾಧೀಶರಿಬ್ಬರೂ ಘೋಷಿಸಿದ್ದಾರೆ.
ಪಶ್ಚಿಮ ಚಿರ್ಮಿರಿ ಕೊಲ್ಲೇರಿಯ ಪೊಂಡಿ ಪೊಲೀಸ್ ಠಾಣೆಯಲ್ಲಿ ೨೪ ಸಪ್ಟಂಬರ್ ೧೯೯೨ರಲ್ಲಿ ಅಜಂರಿಗೆ ಚಿತ್ರಹಿಂಸೆ ನೀಡಿದ್ದರು ಪೊಲೀಸರು - ಪ್ರಬಲ ಕಲ್ಲಿದ್ದಲು ಮಾಫಿಯಾ ಮತ್ತು ಕಾರ್ಮಿಕ ಯೂನಿಯನಿನ ಮುಖಂಡರ ಕುಮ್ಮಕ್ಕಿನಿಂದಾಗಿ. ಅನಂತರ ಚತ್ತಿಸಘರ್ ಹೈಕೋರ್ಟಿನಲ್ಲಿ ಪೊಲೀಸ್ ಹಿಂಸಕರ ವಿರುದ್ಧ ಮೆಹಮೂದ ಅಜಂ ದಾವೆ ಹೂಡಿದರು. ಅಜಂರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗಿದೆಯೆಂದು ಹೈಕೋರ್ಟ್ ಮಹತ್ತರ ತೀರ್ಪು ನೀಡಿತು. ಇದರ ಆಧಾರದಿಂದ, ಚತ್ತಿಸಘರ್ ಸರಕಾರ ತನಗೆ ಪರಿಹಾರ ಕೊಡಬೇಕೆಂದು ಅಜಂ ಅರ್ಜಿ ಸಲ್ಲಿಸಿದರು. ಇದನ್ನು ಆ ಸರಕಾರ ತಿರಸ್ಕರಿಸಿತು. ಆದ್ದರಿಂದ, ಅಜಂ ಸುಪ್ರೀಂ ಕೋರ್ಟಿನ ಮೆಟ್ಟಲೇರಿದರು. ತನ್ನ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಅಜಂ ಎದೆಗುಂದದೆ ನಡೆಸಿದ ದೀರ್ಘ ಹೋರಾಟವೇ ಈ ಚಾರಿತ್ರಿಕ ತೀರ್ಪಿಗೆ ಕಾರಣವಾಯಿತು.