ಬದುಕನ್ನೇ ಚಿತ್ರಕಲೆಗೆ ಮುಡಿಪಾಗಿಟ್ಟವರು ಮಂಗಳೂರಿನ ಚಿತ್ರಕಲಾವಿದ ಗಣೇಶ ಸೋಮಯಾಜಿ. ಬಾಲ್ಯದಿಂದಲೇ ಅವರಿಗೆ ಚಿತ್ರಕಲೆಯಲ್ಲಿ ಆಸಕ್ತಿ. ಅವರ ಆಸಕ್ತಿಗೆ ಪ್ರೇರಣೆ ಅವರ ತಾಯಿ. ಅಮ್ಮ ರಂಗೋಲಿ ಹಾಕುತ್ತಿದ್ದಾಗ, ಮೂರು ವರುಷದ ಬಾಲಕನಾಗಿದ್ದಾಗಲೇ ಆರತಿಯ ಚಿತ್ರ ಬಿಡಿಸಿದ್ದವರು ಇವರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಭಂಡಾರಬೆಟ್ಟಿನಲ್ಲಿ ಹುಟ್ಟಿ (12 ಮಾರ್ಚ್ 1949) ಬೆಳೆದವರು ಗಣೇಶ ಸೋಮಯಾಜಿ. ಸಹಜವಾಗಿಯೇ ಹಳ್ಳಿಯ ಹಸುರು, ಗಿಡಮರಗಳು, ಗುಡ್ಡಗಳು, ಹತ್ತಿರದ ನೇತ್ರಾವತಿ ನದಿಯ ಪರಿಸರ ಬಾಲ್ಯದಿಂದಲೂ ಅವರ ಮೇಲೆ ಗಾಢ ಪ್ರಭಾವ ಬೀರಿದೆ. ಇದು ಅವರ ಚಿತ್ರಗಳಲ್ಲಿ ಎದ್ದು ಕಾಣಿಸುವ ಅಂಶ. ಇವರು ಒಂದನೇ ತರಗತಿಯಲ್ಲಿದ್ದಾಗ, ಮನೆಯ ಪಕ್ಕದಲ್ಲಿದ್ದ ಲಕ್ಷ್ಮಣ ಮಾಸ್ಟರ್ ಒಮ್ಮೆ ಹುಲಿಯೊಂದನ್ನು ಬೇಟೆಯಾಡಿ ಹೊತ್ತುಕೊಂಡು ಬಂದಿದ್ದರು. ಆ ದೃಶ್ಯವನ್ನೇ ತಾನು ಸ್ಲೇಟಿನಲ್ಲಿ ಚಿತ್ರವಾಗಿ ಬರೆದಾಗ, ಸಹಪಾಠಿಗಳು ಮೆಚ್ಚುಗೆ ಹಾಗೂ ಖುಷಿಯಿಂದ ತಮ್ಮನ್ನು ಹೊತ್ತುಕೊಂಡು ಮೆರವಣಿಗೆ ಮಾಡಿದ್ದನ್ನು ನೆನಪು ಮಾಡಿಕೊಳ್ಳುತ್ತಾರೆ ಗಣೇಶ ಸೋಮಯಾಜಿ.
ಚಿತ್ರಕಲೆಯಲ್ಲಿ ಇವರ ಆಸಕ್ತಿಗೆ ಅಮ್ಮನಿಂದ ಪ್ರೋತ್ಸಾಹ. ಆದರೆ ಅಪ್ಪನಿಂದ ವಿರೋಧ. ತನ್ನ ಮಗ ಚಿತ್ರಕಲೆಯಲ್ಲಿ ತೊಡಗಿಸಿಕೊಂಡರೆ ಶಾಲಾ ಕಲಿಕೆಗೆ ತೊಂದರೆಯಾದೀತು ಎಂಬುದು ಅಪ್ಪನ ಆತಂಕ. ಅದರಿಂದಾಗಿ ಕೆಲವೊಮ್ಮೆ ಇವರು ಬಿಡಿಸಿದ ಚಿತ್ರಗಳೆಲ್ಲವನ್ನೂ ಅಪ್ಪ ಹರಿದು ಹಾಕುತ್ತಿದ್ದರು. ಆದರೆ ಗಣೇಶ ಸೋಮಯಾಜಿಯವರು ಇದರಿಂದ ವಿಚಲಿತರಾಗದೆ, ಮನೆಯ ಅಟ್ಟದಲ್ಲಿ ಚಿಮಿಣಿ ದೀಪದ ಬೆಳಕಿನಲ್ಲಿ ಶಾಲಾ ಪಠ್ಯಪುಸ್ತಕ ಓದುವ ಹೊತ್ತಿನಲ್ಲಿ ಚಿತ್ರಗಳನ್ನು ಬಿಡಿಸುತ್ತಿದ್ದರು.
ಪ್ರಾಥಮಿಕ ಶಿಕ್ಷಣದ ಬಳಿಕ ಹೈಸ್ಕೂಲ್ ಶಿಕ್ಷಣ ಮುಂದುವರಿಸುತ್ತಿದ್ದಾಗ, ಶಿಕ್ಷಕ ಸುರೇಂದ್ರ ಶೆಣೈ ಸೋಮಯಾಜಿಯವರಿಗೆ ಚಿತ್ರಕಲೆಯಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ನೀಡಿದರು. ಆಗ, ಶಾಲೆಯ ನೋಟೀಸ್ ಬೋರ್ಡಿನಲ್ಲಿ ತಾನು ಬರೆದ ಚಿತ್ರಗಳು ವಾರಕ್ಕೊಂದರಂತೆ ಪ್ರದರ್ಶನವಾಗುತ್ತಿತ್ತು ಎಂದು ಅಭಿಮಾನದಿಂದ ಈಗಲೂ ನೆನೆಯುತ್ತಾರೆ ಗಣೇಶ ಸೋಮಯಾಜಿ.
ಇವರು ಚಿತ್ರಕಲೆಯಲ್ಲಿ ಆರಂಭದ ತರಬೇತಿ ಪಡೆದದ್ದು ಮಂಗಳೂರಿನ ಅಲೋಸಿಯಸ್ (ಕಾಲೇಜ್) ಹೈಸ್ಕೂಲಿನ ಡ್ರಾಯಿಂಗ್ ಮಾಸ್ಟರ್ ಪೀಟರ್ ಡಿಸೋಜ ಅವರಿಂದ. ಅದಕ್ಕಾಗಿ ಬಂಟ್ವಾಳದಿಂದ 28 ಕಿಮೀ ದೂರದ ಮಂಗಳೂರಿಗೆ ಸೈಕಲಿನಲ್ಲಿಯೇ ಬಂದು ಹೋಗುತ್ತಿದ್ದರು. ತಂದೆಯವರಿಗೆ ಗೊತ್ತಾಗದಂತೆ, ಬೆಳಗ್ಗೆ ಬೇಗನೇ ಹೊರಟು ಬಂದು, ಪಾಠ ಮುಗಿಸಿ, ರಾತ್ರಿ ಮನೆಗೆ ಮರಳುತ್ತಿದ್ದರು. ಹತ್ತನೇ ತರಗತಿಯ ನಂತರ, ಇವರಿಗೆ ಪಿಯುಸಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಬದಲಾಗಿ, ಚಿತ್ರಕಲಾ ಶಿಕ್ಷಣ ಪಡೆದು, ಡ್ರಾಯಿಂಗ್ ಮಾಸ್ಟರ್ ಆದರು.
ಗಣೇಶ ಸೋಮಯಾಜಿಯವರು ಚಿತ್ರಕಲೆಯಲ್ಲಿ ನಾಲ್ಕು ವರುಷ ತರಬೇತಿ ಪಡೆದದ್ದು ಮಂಗಳೂರಿನ ಪ್ರಸಿದ್ಧ ಚಿತ್ರಕಲಾಶಾಲೆ ಬಿ.ಜಿ. ಮಹಮ್ಮದ್ ಅವರ ಬಿಜಿಎಮ್ ಫೈನ್ ಆರ್ಟ್‌ನಲ್ಲಿ. ಚಿತ್ರಕಲೆಯ ಕಲಿಕೆಯಲ್ಲಿ ಇವರ ಸಾಧನೆ ಹೇಗಿತ್ತೆಂದರೆ, ನಂತರ ಮೈಸೂರಿನಲ್ಲಿ ನಡೆದ ಪರೀಕ್ಷೆಯಲ್ಲಿ ಇವರಿಗೆ ಪ್ರಥಮ ರಾಂಕ್(Rank).
ಇವರು ಡ್ರಾಯಿಂಗ್ ಮಾಸ್ಟರ್ ಆಗಿ ಉದ್ಯೋಗಕ್ಕೆ ಸೇರಿಕೊಂಡದ್ದು ಮಂಗಳೂರಿನ ಪ್ರಧಾನ ಅಂಚೆಕಚೇರಿ ಹತ್ತಿರದ ರೋಜಾರಿಯೋ ಶಾಲೆಯಲ್ಲಿ. ಆಗ ಇವರ ವೇತನ ತಿಂಗಳಿಗೆ ರೂಪಾಯಿ152. ಅಲ್ಲಿ ಇವರು 10ನೇ ತರಗತಿಯ ವಿದ್ಯಾರ್ಥಿಗಳಿಗೂ ಪಾಠ ಮಾಡ ಬೇಕಾಗಿತ್ತು. ಹಾಗಾಗಿ ಅಳುಕು ಇದ್ದರೂ, ತನ್ನ ಪಾಠದ ಶೈಲಿ ಹಾಗೂ ಚಿತ್ರಕಲೆಯಲ್ಲಿನ ತನ್ನ ಶ್ರದ್ಧೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಇವರಿಗೆ ಸಾಧ್ಯವಾಯಿತು. ಅಲ್ಲಿಯೇ 39 ವರುಷ ಕಲಾಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾದರು.
ಚಿತ್ರಕಲೆ, ಶಿಲ್ಪಕಲೆ, ಸಂಗೀತ, ನೃತ್ಯ ಯಾವುದೇ ಇರಲಿ, ಶಿಕ್ಷಕರು ನಿರಂತರವಾಗಿ ಕಲಿಯುತ್ತಿದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಕಲಿಸಲು ಸಾಧ್ಯ ಎನ್ನುತ್ತಾರೆ ಗಣೇಶ ಸೋಮಯಾಜಿ. ಉದ್ಯೋಗ ಸಿಕ್ಕಿತೆಂದು ಕಲೆಯಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಕಳೆದುಕೊಂಡರೆ ಕಲಾಕಾರನಾಗಿ ಬೆಳೆಯಲು ಸಾಧ್ಯವಿಲ್ಲ. ನಿರಂತರ ಸಾಧನೆಯಿಂದ ಮಾತ್ರ ಉತ್ತಮ ಚಿತ್ರಗಳನ್ನು ಚಿತ್ರಿಸಲು ಸಾಧ್ಯ; ಪ್ರತಿದಿನದ ಅಭ್ಯಾಸಕ್ಕೆ ಬದಲಿ ಯಾವುದೂ ಇಲ್ಲ ಎಂಬುದವರ ಅನುಭವದ ಮಾತು.
ಸರಳವಾದ ಹಾಗೂ ನೈಜ ಚಿತ್ರಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭ; ಜನಸಾಮಾನ್ಯರೂ ಅವನ್ನು ಕಾಣುತ್ತಾ ಖುಷಿ ಪಡಬಹುದು. ಆದರೆ ಕೆಲವು ಸಮಕಾಲೀನ ಚಿತ್ರಗಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಇದು ಎಂತಹ ಫಜೀತಿಗೆ ಕಾರಣವಾಗುತ್ತದೆ ಎಂದರೆ, ಚಿತ್ರಕಲಾ ಪ್ರದರ್ನನಕ್ಕೆ ಬಂದಿದ್ದ ಕೆಲವು ಚಿತ್ರಗಳನ್ನು ಚಿತ್ರಕಲಾವಿದರೇ ತಲೆಕೆಳಗಾಗಿ ಪ್ರದರ್ಶಿಸಿದ ಉದಾಹರಣೆಗಳಿವೆ ಎಂದು ತಿಳಿಸುತ್ತಾರೆ ಗಣೇಶ ಸೋಮಯಾಜಿ.
ಚಿತ್ರಕಲೆಯ ಮೂಲಕ ಜನಸಾಮಾನ್ಯರಲ್ಲಿಯೂ ಸೌಂದರ್ಯಪ್ರಜ್ನೆ ಬೆಳೆಸಬಹುದು ಎಂದು ನಂಬಿದವರು ಅವರು. “ಆದರೆ, ಸಮಾಜದ ರೀತಿನೀತಿಗಳನ್ನು ಚಿತ್ರಕಲಾವಿದ ಯಾವತ್ತೂ ಗೌರವಿಸಬೇಕು. ತನಗೆ ಚಿತ್ರ ಬರೆಯಲು ಗೊತ್ತಿದೆ ಎಂದು, ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ, ಖುಷಿ ಬಂದಂತೆ ಚಿತ್ರ ಬರೆದು, ಅದನ್ನು ಸಮಾಜ ಒಪ್ಪಿಕೊಳ್ಳಬೇಕು ಎಂಬ ಧೋರಣೆ ಸರಿಯಲ್ಲ” ಎಂಬುದು ಗಣೇಶ ಸೋಮಯಾಜಿಯವರ ಖಚಿತ ಅಭಿಪ್ರಾಯ.
ಗಣೇಶ ಸೋಮಯಾಜಿಯವರು ಉತ್ತಮ ಸಂಘಟಕರೂ ಹೌದು. 1971ರಲ್ಲಿ ಬಿಜಿಎಮ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಸ್ಥಾಪಿಸಿದ್ದರು. ಇದರ ವತಿಯಿಂದ ಹಲವು ಚಿತ್ರಕಲಾ ಶಿಬಿರಗಳ ಮತ್ತು ಕಾರ್ಯಾಗಾರಗಳ ಆಯೋಜನೆ. ಅನಂತರ, 1986ರಲ್ಲಿ ಮಂಗಳೂರು ಆರ್ಟಿಸ್ಟ್ ಕಂಬೈನ್ಸ್ ಎಂಬ ಸಂಘಟನೆಯನ್ನು ಆರಂಭಿಸಿ, ಅದರ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಹತ್ತು ವರುಷಗಳಿಂದೀಚೆಗೆ, ಯುವ ಚಿತ್ರಕಲಾವಿದರನ್ನು ಒಗ್ಗೂಡಿಸಿ ಇವರು ಸ್ಥಾಪಿಸಿದ್ದು “ಕರಾವಳಿ ಚಿತ್ರಕಲಾ ಚಾವಡಿ”. ಇದರ ಆಶ್ರಯದಲ್ಲಿಯೂ ಚಿತ್ರಕಲಾ ಪ್ರದರ್ಶನ ಹಾಗೂ ಶಿಬಿರಗಳ ಆಯೋಜನೆ. ಮಂಗಳೂರಿನ ಬಲ್ಲಾಳ್‌ಬಾಗಿನ ಪ್ರಸಾದ ಆರ್ಟ್ ಗ್ಯಾಲರಿ ಮತ್ತು ಪ್ರಸಾದ್ ಕಲಾಶಾಲೆಯ ಸ್ಥಾಪಕ ಸದಸ್ಯರಾಗಿ ಚಿತ್ರಕಲೆಯ ಶಿಕ್ಷಣ ಮತ್ತು ಪ್ರಚಾರಕ್ಕಾಗಿ ಇವರ ಸೇವೆ ಅಮೂಲ್ಯ. ಮೂಡಬಿದ್ರೆಯ ಆಳ್ವಾಸ್ ಪ್ರತಿಷ್ಠಾನ ವರುಷಕ್ಕೊಮ್ಮೆ ಅದ್ದೂರಿಯಿಂದ ಜರಗಿಸುವ "ನುಡಿಸಿರಿ"ಯ ಸಂದರ್ಭದಲ್ಲಿ "ಚಿತ್ರಸಿರಿ" ಏರ್ಪಡಿಸುವುದರಲ್ಲಿ ಗಣೇಶ ಸೋಮಯಾಜಿ ಅವರದು ಸಕ್ರಿಯ ಪಾತ್ರ. “ಚಿತ್ರಸಿರಿ"ಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಚಿತ್ರಕಲಾವಿದರು ಭಾಗವಹಿಸುತ್ತಿರುವುದು ವಿಶೇಷ.
ಅತ್ಯುತ್ತಮ ಕಲಾ ಶಿಕ್ಷಕ ಪ್ರಶಸ್ತಿ, ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಮೈಸೂರು ದಸರಾ ಕಲಾಪ್ರದರ್ಶನ ಪ್ರಶಸ್ತಿ, ಕರ್ನಾಟಕ ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿ, ಇತ್ಯಾದಿ ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾ ಪ್ರಶಸ್ತಿಗಳನ್ನು ಗಳಿಸಿರುವುದು ಗಣೇಶ ಸೋಮಯಾಜಿ ಅವರ ಚಿತ್ರಕಲಾ ಸೇವೆಗೆ ಸಂದ ಗೌರವ. ಜೊತೆಗೆ, ಕರ್ನಾಟಕ ಸರಕಾರದ ಲಲಿತ ಕಲಾ ಅಕಾಡೆಮಿಯ ಸದಸ್ಯರಾಗಿಯೂ ರಾಜ್ಯದಲ್ಲಿ ಕಲೆಗಳ ಅಭಿವೃದ್ಧಿಗೆ ಶ್ರಮಿಸಿದವರು ಇವರು. ಮಂಗಳೂರು, ಬೆಂಗಳೂರು, ಮುಂಬೈಯ ಜಗತ್ಪ್ರಸಿದ್ಧ ಜಹಾಂಗೀರ್ ಆರ್ಟ್ ಗ್ಯಾಲರಿ ಸಹಿತ ಹಲವಾರು ಸ್ಥಳಗಳಲ್ಲಿ ಇವರ ಚಿತ್ರಕಲಾಪ್ರದರ್ಶನಗಳು ಜರಗಿವೆ.
ನೈಜ ಚಿತ್ರಕಲೆ ಗಣೇಶ ಸೋಮಯಾಜಿಯವರ ಆಸಕ್ತಿ ಮತ್ತು ಸಾಧನೆಯ ಕ್ಷೇತ್ರ. ವಿವಿಧ ಸ್ಥಳಗಳಿಗೆ ಭೇಟಿ ನೀಡುವುದು, ಅಲ್ಲಿಯ ವಿಶೇಷತೆಗಳನ್ನೂ ಸೊಬಗನ್ನೂ ಗಮನಿಸುವುದು, ಆಗ ಮನದಲ್ಲಿ ಮೂಡುವ ಭಾವನೆಗಳನ್ನು ಚಿತ್ರದಲ್ಲಿ ಚಿತ್ರಿಸುವುದು ಇವರ ಹವ್ಯಾಸ. ಜಲವರ್ಣದಲ್ಲಿ ಅದ್ಭುತ ಕಲಾಕೃತಿಗಳನ್ನು ರಚಿಸಿರುವ ಗಣೇಶ ಸೋಮಯಾಜಿಯವರು ಚಿತ್ರಕಲೆ ಮತ್ತು ಇತರ ಲಲಿತ ಕಲೆಗಳಿಗೆ ಇರುವ ವ್ಯತ್ಯಾಸ ಏನೆಂಬುದನ್ನು ಸರಳವಾಗಿ ತಿಳಿಸುವುದು ಹೀಗೆ: “ಸಾಹಿತಿಗಳು ಬರೆದ ಸಾಹಿತ್ಯಕೃತಿಗಳನ್ನು ಓದಲು ಸಮಯ ಬೇಕು. ಹಾಗೆಯೇ ಸಂಗೀತ ಕೇಳಲು ಮತ್ತು ನಾಟಕ, ನೃತ್ಯ ನೋಡಲಿಕ್ಕೂ ಸಮಯ ಬೇಕು. ಆದರೆ ಒಂದು ಚಿತ್ರ ನೋಡಲು ಕೆಲವೇ ಸೆಕೆಂಡುಗಳು ಸಾಕು. ಕೆಲವೇ ಕ್ಷಣ ನೋಡಿದ ಚಿತ್ರವೂ ದೀರ್ಘ ಕಾಲ ನಮ್ಮ ಮನಸ್ಸಿನಲ್ಲಿ ಉಳಿದು, ನಮಗೆ ಮತ್ತೆಮತ್ತೆ ಅದನ್ನು ನೆನಪು ಮಾಡಿಕೊಂಡು ಅದರ ಚಂದವನ್ನು ಅನುಭವಿಸಲು ಸಾಧ್ಯ.”
ಇವರು ಅತ್ಯುತ್ತಮ ಸಂಗೀತ ಸಾಧಕರೂ ಹೌದು. ಕೀ ಬೋರ್ಡಿನಲ್ಲಿ ಸುಶ್ರಾವ್ಯವಾಗಿ ಸಂಗೀತ ನುಡಿಸುತ್ತಾರೆ.
ಇಷ್ಟೆಲ್ಲ ಸಾಧನೆ ಮಾಡಿರುವ ಗಣೇಶ ಸೋಮಯಾಜಿಯವರು ಸರಳ, ಸಜ್ಜನ ವ್ಯಕ್ತಿ. ಅವರನ್ನೊಮ್ಮೆ ಭೇಟಿಯಾದರೆ, ಅವರು ತೋರುವ ಸಜ್ಜನಿಕೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದೊಂದು ಶ್ರೇಷ್ಠ ಕಲಾಕೃತಿಯಂತೆ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಅವರ ಕಲಾಸೇವೆಗೊಂದು ದೊಡ್ಡ ಸಲಾಮ್.