ಕೋರ್ಟ್ ವ್ಯಾಜ್ಯಗಳ ವೇಗ ವಿಲೇವಾರಿ ಸಾಧ್ಯವೇ?

ನಮ್ಮ ದೇಶದಲ್ಲಿ ವಿಲೇವಾರಿಯಾಗದಿರುವ ವ್ಯಾಜ್ಯಗಳ ಸಂಖ್ಯೆ ಸುಮಾರು ಮೂರು ಕೋಟಿ. ಇದರ ವಿಲೇವಾರಿಗೆ ಎರಡು ಶತಮಾನಗಳೇ ಬೇಕೆಂಬ ಮಾತು ಮತ್ತೆಮತ್ತೆ ಕೇಳಿ ಬರುತ್ತಿದೆ. ಕೋರ್ಟ್ಗಳ ಬಗ್ಗೆ ಜನರ ವಿಶ್ವಾಸಾರ್ಹತೆ ಕಡಿಮೆಯಾಗಲು ಇದುವೇ ಮುಖ್ಯ ಕಾರಣ.
ಬಾಕಿಯಿರುವ ವ್ಯಾಜ್ಯಗಳ ವಿಲೇವಾರಿಗೆ ಶತಮಾನ ಬೇಕಾದೀತೆಂಬ ಮಾತು ನಿಜವೇ? ಸುಪ್ರೀಂ ಕೋರ್ಟ್ ಪ್ರಕಟಿಸುತ್ತಿರುವ “ಕೋರ್ಟ್ ನ್ಯೂಸ್” ಎಂಬ ತ್ರೈಮಾಸಿಕದ ಅಂಕೆಸಂಖ್ಯೆಗಳನ್ನು ಜಾಲಾಡಿದರೆ ಸತ್ಯಾಸತ್ಯತೆ ತಿಳಿಯುತ್ತದೆ.


ಐದು ವರುಷಗಳ (2009 - 2013) ಅವಧಿಯ ಅಂಕೆಸಂಖ್ಯೆ ಪರಿಶೀಲಿಸೋಣ. 2009ರಲ್ಲಿ ಬಾಕಿಯಿದ್ದ ವ್ಯಾಜ್ಯಗಳ ಸಂಖ್ಯೆ 30.3 ದಶಲಕ್ಷ. 2013ರ ಅಂತ್ಯದಲ್ಲಿ ಈ ಸಂಖ್ಯೆ 31.7 ದಶಲಕ್ಷಗಳಿಗೆ ಏರಿತು. ಈ ಅವಧಿಯಲ್ಲಿ ಹಲವಾರು ನ್ಯಾಯಾಧೀಶರ ಹುದ್ದೆಗಳು ಖಾಲಿಯಾಗಿದ್ದವು. ಅವನ್ನೆಲ್ಲ ಭರ್ತಿ ಮಾಡಿದ್ದರೆ ಹಾಗೂ ಪ್ರತಿಯೊಬ್ಬ ನ್ಯಾಯಾಧೀಶರೂ ಸರಾಸರಿ ಸಂಖ್ಯೆಯಷ್ಟು ವ್ಯಾಜ್ಯಗಳನ್ನು ವಿಲೇವಾರಿ ಮಾಡುತ್ತಿದ್ದರೆ ಏನಾಗುತ್ತಿತ್ತು? ವಿಲೇವಾರಿಯಾಗುತ್ತಿದ್ದ ವ್ಯಾಜ್ಯಗಳ ಒಟ್ಟು ಸಂಖ್ಯೆ 20.48 ದಶಲಕ್ಷ ಆಗುತ್ತಿತ್ತು. ಅಂದರೆ, 2013ರ ಅಂತ್ಯದಲ್ಲಿ 11.25 ದಶಲಕ್ಷ (31.7 ದಶಲಕ್ಷಗಳ ಬದಲಾಗಿ) ವ್ಯಾಜ್ಯಗಳು ಮಾತ್ರ ಬಾಕಿ ಉಳಿಯುತ್ತಿದ್ದವು.


ಇದರಿಂದ ತಿಳಿಯಬೇಕಾದ್ದೇನು? ಖಾಲಿಯಿರುವ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡದಿರುವುದೇ ಲಕ್ಷಗಟ್ಟಲೆ ವ್ಯಾಜ್ಯಗಳು ವಿಲೇವಾರಿ ಆಗದಿರಲು ಪ್ರಧಾನ ಕಾರಣ.


ಇದರ ಪರಿಣಾಮಗಳೇನು? ನಮ್ಮ ದೇಶದ ಜೈಲುಗಳಲ್ಲಿ ಇರುವವರಲ್ಲಿ ಮೂರನೆಯ ಒಂದು ಭಾಗ ಶಿಕ್ಷೆಗೊಳಗಾದ ಅಪರಾಧಿಗಳಾದರೆ, ಉಳಿದ ಮೂರನೆಯ ಎರಡು ಭಾಗ ವಿಚಾರಣಾಧೀನ ಖೈದಿಗಳು. ಅಪರಾಧ ಸಾಬೀತಾಗುವ ವರೆಗೆ ಆಪಾದಿತನೊಬ್ಬ ನಿರಪರಾಧಿ ಎನ್ನುತ್ತದೆ ನಮ್ಮ ನ್ಯಾಯದಾನ ವ್ಯವಸ್ಥೆ. ಅದೇ ವ್ಯವಸ್ಥೆ ಲಕ್ಷಗಟ್ಟಲೆ ವಿಚಾರಣಾಧೀನ ಖೈದಿಗಳನ್ನು ವಿಚಾರಣೆಯ ಹೆಸರಿನಲ್ಲಿ ನಿರ್ದಯವಾಗಿ ವರುಷಗಟ್ಟಲೆ ಜೈಲುಗಳಲ್ಲಿಡುತ್ತದೆ.


ಇನ್ನೊಂದು ವಿಚಾರ ಗಮನಿಸಿ: ಶ್ರೀಮಂತರು ಹಾಗೂ ಪಟ್ಟಭದ್ರರು, ತಮ್ಮ ಹಣದ ಬಲದಿಂದ ದುಬಾರಿ ಶುಲ್ಕ ತೆತ್ತು. ಚಾಣಾಕ್ಷ ವಕೀಲರ ಸಹಾಯ ಪಡೆದು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಾರೆ. ಅಂಥವರಿಗೆ ಶಿಕ್ಷೆಯಾಗುವುದು ತೀರಾ ಅಪರೂಪ.
ನಿದರ್ಶನ 1: ಚಿತ್ರನಟ ಸಲ್ಮಾನ್ ಖಾನ್ ವಿರುದ್ಧ ಪಾನಮತ್ತನಾಗಿ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ರಸ್ತೆಬದಿಯಲ್ಲಿ ಮಲಗಿದ್ದವರನ್ನು ಕೊಂದ ಆಪಾದನೆ. ಸುಮಾರು ಹದಿಮೂರು ವರುಷ ವಿಚಾರಣೆ ನಡೆದು, ಕೋರ್ಟಿನಿಂದ ಶಿಕ್ಷೆಯ ತೀರ್ಪು. ಆದರೆ ಆತನ ಚಾಣಾಕ್ಷ ವಕೀಲರು ಆಗಲೇ ಮೇಲ್ಮನವಿ ಸಿದ್ಧವಾಗಿಟ್ಟಿದ್ದರು; “ತೀರ್ಪಿನ ಪ್ರತಿ ನೀಡಿಲ್ಲ” ಎಂಬ ಕಾರಣ ಮುಂದೊಡ್ಡಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದರು. ಅಂತೂ ಆತನಿಗೆ ಜಾಮೀನು ಸಿಕ್ಕಿತು. ಆತ ಒಂದು ದಿನವೂ ಸೆರೆಮನೆವಾಸ ಅನುಭವಿಸಲಿಲ್ಲ!


ನಿದರ್ಶನ 2: ಮದನ ಮಿತ್ರ ಪಶ್ಚಿಮ ಬಂಗಾಳ ಸರಕಾರದ ಸಾರಿಗೆ ಸಚಿವ. ರೂ.2,500 ಕೋಟಿ ಶರದಾ ಚಿಟ್ ಫಂಡ್ ಹಗರಣದ ಆಪಾದಿತರು. 12 ಡಿಸೆಂಬರ್ 2014ರಂದು ಸಿಬಿಐನಿಂದ ಅವರ ಬಂಧನ. ಹತ್ತು ತಿಂಗಳ (324 ದಿನಗಳ) ನಂತರ ಅವರಿಗೆ 31 ಅಕ್ಟೋಬರ್ 2015ರಂದು ಕೋರ್ಟ್ ಜಾಮೀನು ನೀಡಿತು; ಅವರ ಬಿಡುಗಡೆಯೂ ಆಯಿತು. ಆದರೆ, ಬಂಧನವಾದ ಕೆಲವೇ ದಿನಗಳಲ್ಲಿ ಅನಾರೋಗ್ಯದ ನೆವನದಲ್ಲಿ ಆಸ್ಪತ್ರೆ ಸೇರಿದ ಮದನ ಮಿತ್ರ, ಜಾಮೀನು ಸಿಗುವ ವರೆಗೂ ಆಸ್ಪತ್ರೆಯಲ್ಲೇ ಇದ್ದರು! ಈಗ ಜಾಮೀನಿನಿಂದ ಬಿಡುಗಡೆಯಾದ ಕೂಡಲೇ ಅವರು ಆರೋಗ್ಯವಂತರಾಗಿದ್ದಾರೆ!


ಜೈಲಿನಲ್ಲಿರುವ ಬಡ ವಿಚಾರಣಾಧೀನ ಖೈದಿಗಳಿಗೆ ನ್ಯಾಯವ್ಯವಸ್ಥೆಯ ಇಂತಹ “ಸವಲತ್ತುಗಳು” ಲಭ್ಯವಿಲ್ಲ. ಬಡವರೆಂಬ ಏಕೈಕ ಕಾರಣದಿಂದ ಅವರು ವರುಷಗಟ್ಟಲೆ ಜಾಮೀನು ಸಿಗದೆ ಜೈಲಿನಲ್ಲೇ ಶೋಷಣೆಗೆ ಒಳಗಾಗುತ್ತಾರೆ. ಪ್ರಾಣಿ- ಸಂಗ್ರಹಾಲಯದಲ್ಲಿರುವ ಪ್ರಾಣಿಗಳನ್ನೂ ಇವರಿಗಿಂತ ಜಾಸ್ತಿ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ.


ವಿಚಾರಣಾಧೀನ ಖೈದಿಗಳ ವಿಷಯದಲ್ಲಂತೂ “ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನ”ರೆಂಬ ನಮ್ಮ ಸಂವಿಧಾನದ ಪರಿಚ್ಛೇದ 14ರ ತತ್ವ ಮತ್ತೆಮತ್ತೆ ಉಲ್ಲಂಘನೆ ಆಗುತ್ತಿದೆ.
ಸುಪ್ರೀಂ ಕೋರ್ಟ್ “ಕ್ಷಿಪ್ರ ವಿಚಾರಣೆ” ಪ್ರಜೆಗಳ ಮೂಲಭೂತ ಹಕ್ಕು ಎಂದು ಘೋಷಿಸಿದೆ. ಆದರೆ ಅದು ಘೋಷಣೆಯಾಗಿಯೇ ಉಳಿದಿದೆ.


ಖಾಲಿ ಬಿದ್ದಿರುವ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಿದರೆ, ಈ ಮೂಲಭೂತ ಹಕ್ಕನ್ನು ಗೌರವಿಸುವತ್ತ ಒಂದು ಹೆಜ್ಜೆ ಮುಂದಿಟ್ಟಂತೆ ಆಗುತ್ತದೆ. ಇದನ್ನು ಮಾಡಲು ಬೇಕಾದ ಸಂವಿಧಾನದತ್ತ ಅಧಿಕಾರ ಸುಪ್ರೀಂ ಕೋರ್ಟಿನ ಕೈಯಲ್ಲೇ ಇದೆ. ಲಕ್ಷಗಟ್ಟಲೆ ವಿಚಾರಣಾಧೀನ ಖೈದಿಗಳಿಗೆ ನ್ಯಾಯ ಒದಗಿಸಲಿಕ್ಕಾಗಿ, ಸುಪ್ರೀಂ ಕೋರ್ಟ್ ಆ ಅಧಿಕಾರ ಚಲಾಯಿಸಲೆಂದು ಹಾರೈಸೋಣ.