ಕೊಲರ್-ವಾಲಿ ಹೆಣ್ಣು ಹುಲಿಯ ಕಥನ

ಮಧ್ಯಪ್ರದೇಶದ ಪೆಂಚ್ ಹುಲಿ ರಕ್ಷಿತಾರಣ್ಯದಲ್ಲಿ ಜನವರಿ 2022ರಲ್ಲಿ ತನ್ನ ಬದುಕು ಮುಗಿಸಿದ ಹೆಣ್ಣುಹುಲಿ “ಕೊಲರ್ ವಾಲಿ". ಭಾರಿ ಗಾತ್ರ ಮತ್ತು ಮನುಷ್ಯರೊಂದಿಗೆ ವೈರತ್ವವಿಲ್ಲದ ವರ್ತನೆ ಅದರ ಆಕರ್ಷಣೆಗಳು.

ಆದರೆ, ಕೊಲರ್ ವಾಲಿ ಹೆಣ್ಣುಹುಲಿ ಪ್ರಸಿದ್ಧವಾದದ್ದು ಅದು ಜನ್ಮವಿತ್ತ ಹುಲಿಮರಿಗಳ ಸಂಖ್ಯೆಗಾಗಿ - 29 ಹುಲಿಮರಿಗಳ ಮಹಾತಾಯಿ ಆಕೆ. (ಇದು 2018ರ ಗಣತಿಯ ಅನುಸಾರ ಭಾರತದಲ್ಲಿರುವ ಒಟ್ಟು ಹುಲಿಗಳ ಸಂಖ್ಯೆಯ ಶೇಕಡಾ ಒಂದು).

ಕೊಲರ್ ವಾಲಿ ಹುಲಿಯ ತಾಯಿಯನ್ನು "ಬಡಿ ಮಾತಾ” ಎಂಬ ಹೆಸರಿನಿಂದ ಗುರುತಿಸಲಾಗಿತ್ತು. ಬಡಿ ಮಾತಾ ಹುಲಿ ಬಗ್ಗೆ ಜಗದ್ವಿಖ್ಯಾತ ಪ್ರಸಾರ ವಾಹಿನಿ “ಬಿಬಿಸಿ" ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿತ್ತು. ಅದರ ಹೆಸರು "ಟೈಗರ್: ಸ್ಪೈ ಇನ್ ದ ಜಂಗಲ್”. ಅದು 2018ರಿಂದ ಬಡಿ ಮಾತಾ ಹುಲಿ ಮತ್ತು ಅದರ ನಾಲ್ಕು ಮರಿಗಳ ಬದುಕನ್ನು ದಾಖಲಿಸಿತ್ತು.

ಅದರ ಒಂದು ಮರಿ ಈ ಕೊಲರ್ ವಾಲಿ ಹುಲಿ. ಹದಿನೇಳು ವರುಷ ಬದುಕಿದ ಕಾಲರ್ ವಾಲಿ ಹುಲಿ, ಸರಾಸರಿ ಆಯುಷ್ಯವಾದ 15 ವರುಷಕ್ಕಿಂತಲೂ ಜಾಸ್ತಿ ಬದುಕಿದ್ದು ವಿಶೇಷ. 2022ರ ಜನವರಿಯಲ್ಲಿ ಇದು ಸತ್ತಾಗ ರಾಜ್ಯದ ಅರಣ್ಯ ಸಚಿವರೇ ಇದರ ಅಂತ್ಯಕ್ರಿಯೆಗೆ ಹಾಜರಾಗಿದ್ದರು. ಆಗ ಪ್ರಸಿದ್ಧ ಹಾಲಿನ ಕಂಪೆನಿ “ಅಮುಲ್" ಇದರ ಬಗ್ಗೆ “ಷಿ ಅರ್ನ್‌ಡ್ ಹರ್ ಸ್ಟ್ರೈಪ್ಸ್” ಎಂಬ ಶೀರ್ಷಿಕೆಯ ಕಾರ್ಟೂನ್ ಜಾಹೀರಾತನ್ನು ಪ್ರಕಟಿಸಿತು.

ಕೊಲರ್ ವಾಲಿ ಹುಲಿಯ ತಂದೆ ಹುಲಿ “ಚಾರ್ಜರ್ ಆಫ್ ಪೆಂಚ್” ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿತ್ತು. ಅದು, ಆನೆಗಳತ್ತ ರಭಸದಿಂದ ಮುನ್ನುಗ್ಗುತ್ತಿತ್ತು. ಈ ಹುಲಿ ಕುಟುಂಬ ರಕ್ಷಿತಾರಣ್ಯದ ಭಾಗವಾದ ಸಾಗುವಾನಿ ಕಾಡಿನಲ್ಲಿ ವಾಸವಾಗಿತ್ತು.

1910ರಲ್ಲಿ ಭೂಮಿಯಲ್ಲಿದ್ದ ಹುಲಿಗಳ ಸಂಖ್ಯೆ ಸುಮಾರು ಒಂದು ಲಕ್ಷ. ಆದರೆ ಇದು 2020ರಲ್ಲಿ ಕೇವಲ 3,900ಕ್ಕೆ  (ಮೂರು ಸಾವಿರದ ಒಂಭೈನೂರು) ಕುಸಿದಿದೆ. ಆದ್ದರಿಂದಲೇ, ಐ.ಯು.ಸಿ.ಎನ್. (ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್-ವೇಷನ್ ಆಫ್ ನೇಚರ್) ಸಂಸ್ಥೆ, “ಅಪಾಯದ ಅಂಚಿನಲ್ಲಿರುವ ಪ್ರಾಣಿಗಳ ಕೆಂಪು ಪಟ್ಟಿ”ಗೆ ಹುಲಿಯನ್ನು ಸೇರಿಸಿದೆ. ಹುಲಿಗಳ ಸಂಖ್ಯೆ ಕುಸಿಯಲು ಕಾರಣಗಳು: ಹುಲಿಗಳ ಬೇಟಿ, ಕಳ್ಳಬೇಟೆ ಮತ್ತು ವಾಸಸ್ಥಾನಗಳ ನಾಶ. ಭೂಮಿಯ ಕೆಲವು ಪ್ರದೇಶಗಳಲ್ಲಿ ಹುಲಿಗಳು ಸಂಪೂರ್ಣ ಕಣ್ಮರೆಯಾಗಿವೆ! ಈ ಹಿನ್ನೆಲೆಯಲ್ಲಿ, 29 ಮರಿಗಳಿಗೆ ಜನ್ಮವಿತ್ತ ಕೊಲರ್ ವಾಲಿ ಹುಲಿಗಳ ಉಳಿವಿಗೆ ಅಮೂಲ್ಯ ಕೊಡುಗೆ ಇತ್ತಿದೆ.

ಕೊಲರ್ ವಾಲಿ ಎರಡು ವರುಷ ತುಂಬಿದಾಗ ತನ್ನ ತಾಯಿಯಿಂದ ಬೇರೆಯಾಗಿ ವಾಸ ಮಾಡತೊಡಗಿತು. 2008ರಲ್ಲಿ ಪೆಂಚ್ ಹುಲಿ ರಕ್ಷಿತಾರಣ್ಯದಲ್ಲಿ ಕೊಲರ್ (ಕೊರಳ ಪಟ್ಟಿ) ಹಾಕಲಾದ ಮೊದಲ ಹುಲಿ ಕೊಲರ್ ವಾಲಿ. ಅದಕ್ಕೆ ಆ ಹೆಸರಿಡಲು ಇದುವೇ ಕಾರಣ. ಹುಲಿಗಳಿಗೆ ಕೊಲರ್ ಹಾಕುವ ಉದ್ದೇಶ ಅವುಗಳ ಮೇಲೆ ನಿಗಾ ಇಟ್ಟು, ಕೊಲರ್ ಮೂಲಕ ರವಾನೆಯಾಗುವ ಸಂದೇಶಗಳನ್ನು (ಅವುಗಳ ಸಂಚಾರ ಇತ್ಯಾದಿ ಬಗ್ಗೆ) ದಾಖಲಿಸಿ ವಿಶ್ಲೇಷಿಸುವುದು.

ಅದೇ ವರುಷ, ಕೊಲರ್ ವಾಲಿ ಹುಲಿ ಮೊದಲ ಬಾರಿ ಮರಿಗಳಿಗೆ ಜನ್ಮವಿತ್ತಿತು. ಆದರೆ, ಆ ಮರಿಗಳು ನ್ಯುಮೋನಿಯಾದಿಂದ ಸತ್ತು ಹೋದವು. ಕ್ರಮೇಣ ಮರಿಗಳ ರಕ್ಷಣೆಯ ಬಗ್ಗೆ ಅನುಭವ ಗಳಿಸಿತು ಕೊಲರ್ ವಾಲಿ. ಅದರಿಂದಾಗಿ, ಅನಂತರ ಹುಟ್ಟಿದ ಮರಿಗಳು ಚೆನ್ನಾಗಿ ಬೆಳೆದವು. 2010ರಲ್ಲಿ ಕಾಲರ್ ವಾಲಿ ಐದು ಮರಿಗಳಿಗೆ ಜನ್ಮವಿತ್ತದ್ದು ವಿಶೇಷ. (ಯಾಕೆಂದರೆ ಅದು ಅಪರೂಪದ ಘಟನೆ.) ಸಾಮಾನ್ಯವಾಗಿ ಹೆಣ್ಣು ಹುಲಿಗಳು ಮೂರು ಅಥವಾ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತವೆ. ಇದರಲ್ಲಿ ಅರೆವಾಸಿ ಸಂಖ್ಯೆಯ ಮರಿಗಳು ಮೊದಲ ವರುಷದಲ್ಲಿಯೆ ಪ್ರಾಣ ಕಳೆದುಕೊಳ್ಳುತ್ತವೆ. ಹಾಗಿರುವಾಗ, ಕೊಲರ್ ವಾಲಿ ಹುಲಿ ಆ ಐದು ಮರಿಗಳನ್ನು ಜೋಪಾನವಾಗಿ ಬೆಳೆಸಿದ್ದು ಅದರ ಕಾಳಜಿಯ ಪುರಾವೆ.

ಈಗ ಕಾಲರ್ ವಾಲಿ ಹುಲಿ ಇಲ್ಲವಾದರೂ, ಮಧ್ಯಪ್ರದೇಶದ ಹುಲಿ ರಕ್ಷಿತಾರಣ್ಯದಲ್ಲಿ ಅದರ ಮರಿಗಳ ಗರ್ಜನೆ ಇನ್ನೂ ಹಲವಾರು ವರುಷಗಳು ಕೇಳಿಸುತ್ತಿರುತ್ತದೆ.
ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ. ಇವುಗಳ ಕುಸಿಯುತ್ತಿರುವ ಸಂಖ್ಯೆಯನ್ನು ಪರಿಗಣಿಸಿ, ಭಾರತ ಸರಕಾರ “ಪ್ರಾಜೆಕ್ಟ್ ಟೈಗರ್" ಯೋಜನೆಯನ್ನು ಜ್ಯಾರಿಗೊಳಿಸಿ, ಹುಲಿಗಳ ರಕ್ಷಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿತು. ಆದರೆ, ಹುಲಿ ಮತ್ತು ಮನುಷ್ಯರ ಸಂಘರ್ಷ ಮುಂದುವರಿದಿದೆ. ಮಧ್ಯಪ್ರದೇಶದಲ್ಲಿ, ಕೊಲರ್ ವಾಲಿಯ ತಂಗಿ ಹುಲಿ ಮತ್ತು ಅದರ ಎರಡು ಮರಿಗಳು ವಿಷದ ನೀರು ಕುಡಿದು ಸತ್ತವು. ಈ ಸಂಬಂಧ, ಒಬ್ಬ ಫಾರೆಸ್ಟ್ ಗಾರ್ಡ್ ಮತ್ತು ನಾಲ್ವರನ್ನು ನೀರಿಗೆ ವಿಷ ಹಾಕಿದ್ದಕ್ಕಾಗಿ ಬಂಧಿಸಲಾಯಿತು. ಕೆಲವು ಪ್ರದೇಶಗಳಲ್ಲಿ ಹುಲಿಗಳ ದಾಳಿಗೆ ಮನುಷ್ಯರು ಬಲಿಯಾಗುತ್ತಿರುವುದು ನಿಜ.

ಹುಲಿಗಳ ಕೊಲೆ ಮಾಡಲು ಪ್ರಬಲ ಕಾರಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವುಗಳ ಉಗುರು, ಹಲ್ಲು, ಎಲುಬು ಮತ್ತು ಚರ್ಮಕ್ಕಿರುವ ಲಕ್ಷಗಟ್ಟಲೆ ರೂಪಾಯಿ ಬೆಲೆ. ಕಳ್ಳ ಬೇಟೆಗಾರರ ದೊಡ್ಡ ಜಾಲವೇ ಸಕ್ರಿಯವಾಗಿದೆ. ಸತ್ತ ಹುಲಿಯ ಉಗುರು ಅಥವಾ ಹಲ್ಲುಗಳ ಬಗೆಗಿರುವ ಮೂಢನಂಬಿಕೆಗಳು ಅಳಿದು ಹೋಗುವ ತನಕ ಹುಲಿಗಳಿಗೆ ಉಳಿಗಾಲವಿಲ್ಲ, ಅಲ್ಲವೇ?  

ಫೋಟೋ: ಮರಿಗಳೊಂದಿಗೆ ಕೊಲರ್ ವಾಲಿ ತಾಯಿ ಹುಲಿ
ಫೋಟೋ ಕೃಪೆ: ಸ್ಯಾಂಕ್ಚುವರಿ ಇಂಡಿಯಾ ಫೌಂಡೇಷನ್ ಜಾಲತಾಣ