ಕೊರೊನಾ ವೈರಸ್ ಧಾಳಿಯಿಂದಾಗಿ ಮಾರ್ಚ್ ೨೦೨೦ರಿಂದ ತೊಡಗಿ ಜಗತ್ತಿನಲ್ಲೆಲ್ಲ ಅಲ್ಲೋಲಕಲ್ಲೋಲ. ಭಾರತದಲ್ಲೇ ೫೦ ಲಕ್ಷಕ್ಕಿಂತ ಅಧಿಕ ಜನರಿಗೆ ಈ ವರೆಗೆ ಇದರ ಸೋಂಕು ತಗಲಿದೆ. ಇಂತಹ ಪರಿಸ್ಥಿತಿಯಲ್ಲಿ, ನಗರಗಳಿಂದ ನೂರಾರು ಕಿಲೋಮೀಟರುಗಳ ದೂರದಲ್ಲಿ, ದಟ್ಟ ಕಾಡುಗಳ ಒಳಗೆ ಶತಮಾನಗಳಿಂದ ವಾಸ ಮಾಡುತ್ತಿರುವ ಆದಿ ಬುಡಕಟ್ಟುಗಳಿಗೆ ದೊಡ್ಡ ಅಪಾಯವಿದೆ. ಯಾಕೆಂದರೆ, ನಗರವಾಸಿಗಳನ್ನು ಬಾಧಿಸುವ ಯಾವುದೇ ರೋಗಗಳಿಂದ ಅವರು ಈ ವರೆಗೆ ಮುಕ್ತರಾಗಿದ್ದರು. ಹಾಗಾಗಿ, ಇಂತಹ ಯಾವುದೇ ರೋಗಗಳ ನಿರೋಧ ಶಕ್ತಿ ಬುಡಕಟ್ಟಿನವರಲ್ಲಿ ಇಲ್ಲವೆಂದೇ ಹೇಳಬಹುದು.
ಭಾರತದ ಆದಿ ಬುಡಕಟ್ಟುಗಳಲ್ಲೊಂದು ಚೆಂಚು. ಈ ಬುಡಕಟ್ಟಿನವರು ಬೇಟೆಯಾಡಿ, ತೊರೆ-ನದಿಗಳಲ್ಲಿ ಮೀನು ಹಿಡಿದು ಬದುಕುವವರು. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪೂರ್ವ ಘಟ್ಟ ವಲಯದ ನಲ್ಲಮಾಲ ಗುಡ್ಡಗಳಲ್ಲಿ ೯,೦೦೦ ಚದರ ಕಿಮೀ ಪ್ರದೇಶದಲ್ಲಿ ವ್ಯಾಪಿಸಿರುವ ದಟ್ಟ ಕಾಡುಗಳಲ್ಲಿ ಇವರ ವಾಸ.
ಚೆಂಚು ಬುಡಕಟ್ಟಿನ ಕೆಲವೇ ಕೆಲವು ಸದಸ್ಯರು ಪಟ್ಟಣ/ ನಗರಗಳಲ್ಲಿ ವಾಸ ಮಾಡಿದ್ದಾರೆ. ಪೆದ್ದಾಲು ಮಂಡ್ಲಿ ಅವರಲ್ಲೊಬ್ಬರು. ಪದವೀಧರರಾದ ಅವರು ಇತ್ತೀಚೆಗೆ ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾ ವೈರಸ್ ಭಾರತದ ಉದ್ದಗಲದಲ್ಲಿ ಧಾಳಿ ಮಾಡಿದಾಗ ಎಚ್ಚೆತ್ತುಕೊಂಡ ಪೆದ್ದಾಲು ಮಂಡ್ಲಿ, ಆ ವೈರಸ್ಸಿನಿಂದ ತನ್ನನ್ನು ಮತ್ತು ತನ್ನ ಬುಡಕಟ್ಟಿನವರನ್ನು ರಕ್ಷಿಸಲಿಕ್ಕಾಗಿ ತನ್ನ ಸಣ್ಣಹಳ್ಳಿ(ಕೊಪ್ಪಲು)ಗೆ ಹಿಂತಿರುಗಿ, ಪಾರಂಪರಿಕ ಜೀವನಪದ್ಧತಿಯಂತೆ ಬದುಕುತ್ತಿದ್ದಾರೆ. “ಈ ಮಹಾ ಸೋಂಕು ರೋಗದಿಂದ ಬಚಾವಾಗಬೇಕಾದರೆ ಇದೊಂದೇ ದಾರಿ. ನಮ್ಮ ಹಿರಿಯರು ತಿನ್ನುತ್ತಿದ್ದ ಧಾನ್ಯಗಳ ಬೆಳೆಗಳನ್ನೇ ನಾನಿನ್ನು ಬೆಳೆಸಬೇಕೆಂದಿದ್ದೇನೆ; ನಾವು ಆರೋಗ್ಯವಂತರಾಗಲು ಮತ್ತು ರೋಗನಿರೋಧಕ ಶಕ್ತಿ ಹೊಂದಲು ಅವು ಅಗತ್ಯ" ಎನ್ನುತ್ತಾರೆ ಪೆದ್ದಾಲು ಮಂಡ್ಲಿ. ಚೆಂಚು ಬುಡಕಟ್ಟಿನ ಎಲ್ಲ ವಯಸ್ಕರೂ ಕಾಡಿನ ಮರಗಳಲ್ಲಿ ಜೇನುಕುಟುಂಬ ಪತ್ತೆ ಮಾಡಿ, ಅದರಿಂದ ಜೇನು ಸಂಗ್ರಹಿಸುವ ಕೌಶಲ್ಯದಲ್ಲಿ ಪಳಗಿದವರು. ಪೆದ್ದಾಲು ಮಂಡ್ಲಿ (೨೭ ವರುಷ ವಯಸ್ಸು) ಅದನ್ನು ಹಿರಿಯರಿಂದ ಈಗಷ್ಟೇ ಕಲಿಯುತ್ತಿದ್ದಾರೆ.
ಪೆಟ್ರಲಚೆನು ಎಂಬ ಆ ಕೊಪ್ಪಲಿನಲ್ಲಿ ವಾಸವಾಗಿರುವ ಚೆಂಚು ಬುಡಕಟ್ಟಿನ ೨೦೦ ಜನರು ಈಗ ಹೊರಜಗತ್ತಿನೊಂದಿಗೆ ತಮ್ಮ ಎಲ್ಲ ಸಂಪರ್ಕಗಳನ್ನು ಕಡಿದುಕೊಂಡಿದ್ದಾರೆ. ಚೆಂಚು ಕೊಪ್ಪಲನ್ನು ಪೆಂಟಾ ಎಂದು ಕರೆಯುತ್ತಾರೆ. ಈ ಪೆಂಟಾಗಳಲ್ಲಿ ಸುಮಾರು ೪೮,೦೦೦ ಚೆಂಚು ಬುಡಕಟ್ಟಿನವರು ವಾಸ ಮಾಡುತ್ತಿದ್ದಾರೆ. ನಾಗಾರ್ಜುನಸಾಗರ - ಶ್ರೀಶೈಲಮ್ ಹುಲಿ ರಕ್ಷಿತಾರಣ್ಯದೊಳಗೆ ಬಹುಪಾಲು ಪೆಂಟಾಗಳಿವೆ. ಇದು ಭಾರತದ ಅತ್ಯಂತ ವಿಸ್ತಾರವಾದ ಹುಲಿ ರಕ್ಷಿತಾರಣ್ಯ.
ಸರಕಾರಿ ವೈದ್ಯರಾದ ಧರ್ಮಕಾರಿ ರಾಂಕಿಶನ್ ಚೆಂಚು ಬುಡಕಟ್ಟಿನವರ ಬಗ್ಗೆ ಆಳವಾದ ಅಧ್ಯಯನ ಮಾಡಿದವರು. ಕೊರೊನಾ ವೈರಸ್ (ಕೋವಿಡ್-೧೯) ಈ ಬುಡಕಟ್ಟನ್ನು ನಿರ್ನಾಮ ಮಾಡಬಹುದು ಎಂಬುದು ಅವರ ಆತಂಕ. “ಚೆಂಚು ಬುಡಕಟ್ಟಿಗೆ ಅಪಾಯಸಾಧ್ಯತೆ ಜಾಸ್ತಿ ಎಂದು ಅಧಿಕೃತವಾಗಿ ಗುರುತಿಸಲಾಗಿದೆ” ಎನ್ನುತ್ತಾರೆ ಅವರು. “ತಮ್ಮ ಜೀವಮಾನವಿಡೀ ಚೆಂಚು ಬುಡಕಟ್ಟಿನವರು ದಟ್ಟ ಕಾಡುಗಳಲ್ಲಿ ಜೀವಿಸಿರುವ ಕಾರಣ ಅವರು ದೊಡ್ಡ ಸೋಂಕುಗಳಿಗೆ ಒಳಗಾಗಿಲ್ಲ. ಆದ್ದರಿಂದ ಇತರ ಸಮುದಾಯಗಳ ಜನರಿಗೆ ಹೋಲಿಸಿದಾಗ ಚೆಂಚು ಬುಡಕಟ್ಟಿನ ಜನರ ರೋಗನಿರೋಧ ಶಕ್ತಿ ಬಹಳ ಕಡಿಮೆ" ಎಂದು ಅವರು ವಿವರಿಸುತ್ತಾರೆ.
ಚೆಂಚು ಲೋಕಮ್ ಎಂಬ ಸರಕಾರೇತರ ಸಂಸ್ಥೆಯನ್ನು ನಡೆಸುತ್ತಿದ್ದಾರೆ ರಾಂಕಿಶನ್. ಚೆಂಚು ಬುಡಕಟ್ಟಿನವರ ಮರಣಪ್ರಮಾಣ ರಾಷ್ಟ್ರೀಯ ಮರಣಪ್ರಮಾಣದ ಮೂರು ಪಟ್ಟು ಜಾಸ್ತಿ ಎಂದು ಮಾಹಿತಿ ನೀಡುತ್ತಾರೆ ಅವರು. "ರಾಜ್ಯ ಸರಕಾರಗಳು ತಕ್ಷಣವೇ ಚೆಂಚು ಸಂರಕ್ಷಣಾ ಯೋಜನೆ ಘೋಷಿಸಿ, ಚೆಂಚು ಜನರ ರೋಗನಿರೋಧ ಶಕ್ತಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು" ಎಂಬುದು ಅವರ ಆಗ್ರಹ.
ಇಲ್ಲಿಯ ವರೆಗೆ ಯಾವುದೇ ಪೆಂಟಾದಲ್ಲಿ ಕೋವಿಡ್-೧೯ ಪ್ರಕರಣ ದಾಖಲಾಗಿಲ್ಲ. ಯಾಕೆಂದರೆ, ಎಲ್ಲ ಪೆಂಟಾಗಳು ಇತರ ಸಮುದಾಯಗಳ ಜನವಸತಿಗಳಿಂದ ಬಹಳ ದೂರದಲ್ಲಿ ದಟ್ಟ ಕಾಡುಗಳಲ್ಲಿವೆ. ಉದಾಹರಣೆಗೆ, ಅಪ್ಪಾಪುರ ಗುಡೆಮ್ ಪ್ರದೇಶದ ಚೆಂಚು ಕೊಪ್ಪಲುಗಳು, ವಾಹನ-ಸಂಚಾರದ ರಸ್ತೆಯಿಂದ ೩೫ ಕಿಮೀ ದೂರದಲ್ಲಿವೆ.
"ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಮ್ಮ ಪ್ರದೇಶಕ್ಕೆ ಪ್ರವೇಶಿಸಬಾರದೆಂದು ಎಚ್ಚರಿಸಿದ್ದೇವೆ. ಯಾಕೆಂದರೆ, ಸೋಂಕು ತಗಲಬಹುದಾದ ಎಲ್ಲ ಸಾಧ್ಯತೆಗಳನ್ನು ಇಲ್ಲವಾಗಿಸುವುದು ನಮ್ಮ ಉದ್ದೇಶ" ಎನ್ನುತ್ತಾರೆ, ಅಪ್ಪಾಪುರ ಕ್ಲಸ್ಟರಿನ ಸರಪಂಚ ಟಿ. ಬಾಲಗುರುವಯ್ಯ. “ಸರಕಾರಿ ಅಧಿಕಾರಿಗಳು ಮತ್ತು ನಮಗೆ ಆಹಾರಧಾನ್ಯಗಳನ್ನು ಒದಗಿಸಬೇಕೆಂದಿದ್ದ ಹೊರಗಿನ ಜನರಿಗೆ ಇಲ್ಲಿಗೆ ಬರಬೇಡಿ; ನಮ್ಮನ್ನು ಮತ್ತು ಕಾಡುಗಳನ್ನು ನಾವೇ ರಕ್ಷಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದೇವೆ. ಯಾಕೆಂದರೆ, ನನ್ನ ಬುಡಕಟ್ಟು ನಿರ್ವಂಶವಾಗದಂತೆ ತಡೆಯುವುದೇ ಈಗ ನನ್ನ ಮೊದಲ ಆದ್ಯತೆ” ಎನ್ನುತ್ತಾರೆ ಅವರು.
ಅಲ್ಲಿನ ಚೆಂಚು ಬುಡಕಟ್ಟು ಕುಟುಂಬಗಳಿಗೆ ಅಕ್ಕಿ ಮತ್ತು ಇತರ ಜೀವನಾವಶ್ಯಕ ವಸ್ತುಗಳನ್ನು ಒದಗಿಸುವ ಗಿರಿಜನ ಸಹಕಾರಿ ಕಾರ್ಪೊರೇಷನಿನ ಮಳಿಗೆಯಿದೆ. ಆ ಮಳಿಗೆ ನಿರ್ವಹಣೆಗೆ ತಮ್ಮ ಬುಡಕಟ್ಟಿನ ಒಬ್ಬಾತನನ್ನೇ ಚೆಂಚು ಬುಡಕಟ್ಟಿನವರು ನೇಮಿಸಿದ್ದಾರೆ.
ತೆಲಂಗಾಣ ಸರಕಾರದ ಸಮಗ್ರ ಬುಡಕಟ್ಟು ಅಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಅಖಿಲೇಶ್ ರೆಡ್ಡಿ ಹೀಗೆನ್ನುತ್ತಾರೆ, “ಚೆಂಚು ಬುಡಕಟ್ಟಿನವರು ವಾಸವಾಗಿರುವ ಸ್ಥಳಗಳಿಗೆ ಯಾರೂ ಹೋಗದಂತೆ ನಿರ್ಬಂಧ ಹೇರಿದ್ದೇವೆ. ಆದರೂ ಕೆಲವರು ಚೆಂಚು ಜನರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಚೆಂಚು ಜನರಿಗೆ ದೀರ್ಘಾವಧಿಗೆ ಬೇಕಾಗುವಷ್ಟು ಪಡಿತರ ಒದಗಿಸಿದ್ದೇವೆ.”
ತಮ್ಮಲ್ಲಿ ಯಾರಿಗಾದರೂ ಕೋವಿಡ್-೧೯ ವೈರಸ್ ಸೋಂಕು ತಗಲಿದರೆ, ಅದಕ್ಕೆ ಯಾವ ರೀತಿಯ ಚಿಕಿತ್ಸೆ ನೀಡಬೇಕೆಂದು ಚೆಂಚು ಬುಡಕಟ್ಟಿನ ಹಿರಿಯರು ಈಗಾಗಲೇ ಕಾರ್ಯತಂತ್ರ ರೂಪಿಸಿದ್ದಾರೆ. “ಇಲ್ಲಿನ ಕಾಡುಗಳಲ್ಲಿ ಮಾತ್ರ ಬೆಳೆಯುವ ನಲೇನಿ ಎಂಬ ಗಿಡಮೂಲಿಕೆಯ ಕಷಾಯ ಮಾಡಿ ಕುಡಿಯುತ್ತೇವೆ. ಅದು ವೈರಸನ್ನು ನಿಯಂತ್ರಿಸುತ್ತದೆ ಎಂಬುದು ನಮ್ಮ ನಂಬಿಕೆ" ಎನ್ನುತ್ತಾರೆ ಬಾಲಗುರುವಯ್ಯ. "ಮಲೇರಿಯಾದಿಂದ ರಕ್ಷಿಸಿಕೊಳ್ಳಲು ನಮ್ಮ ಹಿರಿಯರು ಈ ಔಷಧಿಯನ್ನೇ ಕುಡಿಯುತ್ತಿದ್ದರು. ಇದಲ್ಲದೆ, ಬೇರೆ ಔಷಧೀಯ ಗಿಡಮೂಲಿಕೆಗಳನ್ನೂ ಪರಿಶೀಲಿಸುತ್ತಿದ್ದೇವೆ. ಒಳ್ಳೆಯ ಆಸ್ಪತ್ರೆಗಳು ಬಹಳ ದೂರದಲ್ಲಿರುವ ಕಾರಣ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ತಯಾರಾಗಿ ಇರಬೇಕಾಗಿದೆ” ಎಂದು ಅವರು ವಿವರಿಸುತ್ತಾರೆ.
ಫೋಟೋ: ಬಿಲ್ಲು-ಬಾಣ ಹಿಡಿದಿರುವ ಚೆಂಚು ಹಿರಿಯ, ಚಿತ್ರ ಕೃಪೆ: "ದ ವೀಕ್” ವಾರಪತ್ರಿಕೆ