ಹೌದು, ನೆಮ್ಮದಿ ಬೇಕಾದರೆ ಸಾಮಾಜಿಕ ಮಾಧ್ಯಮಗಳಿಂದ ದೂರವಿರಿ!
ಯಾರು ಹೇಳಿದ್ದು ಎಂದು ಕೇಳುತ್ತೀರಾ? ಇದು ಇತ್ತೀಚೆಗಿನ ಅಧ್ಯಯನವೊಂದರಿಂದ ಸಾಬೀತಾದ ಸತ್ಯಾಂಶ. ಅದು "ಸೈಬರ್ ಸೈಕೋಲಜಿ, ಬಿಹೇವಿಯರ್ ಆಂಡ್ ಸೋಷಿಯಲ್ ನೆಟ್ ವರ್ಕಿಂಗ್" ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ. ಅಧ್ಯಯನದಲ್ಲಿ ಭಾಗವಹಿಸಿದವರು ಸಾಮಾಜಿಕ ಮಾಧ್ಯಮಗಳನ್ನು ಒಂದು ವಾರ ಬಳಸದೆ ಇದ್ದದ್ದಕ್ಕೂ ಅವರ ಆತಂಕ ಮತ್ತು ಖಿನ್ನತೆಯ ಮಟ್ಟ ಗಣನೀಯವಾಗಿ ಕಡಿಮೆ ಆದದ್ದಕ್ಕೂ ಸಂಬಂಧ ಇದೆಯೆಂದು ಅಧ್ಯಯನ ಸ್ಪಷ್ಟವಾಗಿ ತೋರಿಸಿ ಕೊಟ್ಟಿದೆ. ಅಧ್ಯಯನದಲ್ಲಿ ಭಾಗವಹಿಸಿದವರ ಸಂಖ್ಯೆ 154. ಅವರ ಸರಾಸರಿ ವಯಸ್ಸು 29.6 ವರುಷ. ಅವರನ್ನು ಒಂದು ವಾರದ ಅವಧಿ ಫೇಸ್-ಬುಕ್, ಟ್ವಿಟರ್, ಇನ್-ಸ್ಟಾಗ್ರಾಮ್ ಮತ್ತು ಟಿಕ್-ಟೊಕ್ ಬಳಸುವವರು ಮತ್ತು ಬಳಸದವರು ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು.
ಭಾಗವಹಿಸಿದವರ “ಮಾನಸಿಕ ಆರೋಗ್ಯ"ವನ್ನು ಅಧ್ಯಯನ ಆರಂಭಿಸುವ ಮುಂಚೆ ಮತ್ತು ನಂತರ ದಾಖಲಿಸಲಾಗಿತ್ತು. ಒಂದು ವಾರ ಸಾಮಾಜಿಕ ಮಾಧ್ಯಮಗಳನ್ನು ಬಳಸದೆ ಇದ್ದವರು (ಈ ಮೇಲೆ ತಿಳಿಸಿದಂತೆ) ಸಕಾರಾತ್ಮಕ ಫಲಿತಾಂಶ ಅನುಭವಿಸಿದರು. ಅವನ್ನು ಬಳಸಿದವರು ಅಂದರೆ “ನಿಯಂತ್ರಣ ತಂಡ"ದವರು (ಕಂಟ್ರೋಲ್ ಗ್ರೂಪಿನವರು) ಅಂತಹ ಸಕಾರಾತ್ಮಕ ಫಲಿತಾಂಶ ಅನುಭವಿಸಲಿಲ್ಲ.
“ಸಾಮಾಜಿಕ ಮಾಧ್ಯಮಗಳಿಂದ ಒಂದು ವಾರ ದೂರವಿದ್ದ ಹಲವರು ತಮ್ಮ ಮೂಡ್ ಚೆನ್ನಾಗಿದೆ ಮತ್ತು ಆತಂಕ ಕಡಿಮೆಯಾಗಿದೆ ಎಂದು ನಮಗೆ ತಿಳಿಸಿದರು. ಇದರ ಅರ್ಥ ಏನೆಂದರೆ, ಅದಕ್ಕಿಂತ ಕಡಿಮೆ ಅವಧಿಯಲ್ಲಿ ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದರೂ ಉತ್ತಮ ಫಲಿತಾಂಶ ಸಿಗುತ್ತದೆ” ಎನ್ನುತ್ತಾರೆ ಜೆಫ್ರಿ ಲಾಂಬರ್ಟ್. ಅವರು ಈ ಅಧ್ಯಯನ ವರದಿಯ ಪ್ರಧಾನ ಲೇಖಕರು ಮತ್ತು ಇಗ್ಲೆಂಡಿನ ಬಾತ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು.
ಮುಂದಿನ ಸಂಶೋಧನೆಗಳು ಇನ್ನಷ್ಟು ನಿಖರವಾಗಿ ಮತ್ತು ದೀರ್ಘಾವಧಿಗೆ ದತ್ತಾಂಶಗಳನ್ನು ದಾಖಲಿಸಬೇಕು ಎಂದು ಅಧ್ಯಯನವು ಸೂಚಿಸಿದೆ. ಆ ಸಂಶೋಧನೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಮತ್ತು ನಿಯಂತ್ರಣ ತಂಡದವರ ಸಾಮಾಜಿಕ ಮಾಧ್ಯಮ ಬಳಕೆಯ ತೀವ್ರತೆ, ಅವಧಿ ಇತ್ಯಾದಿ ಅಂಶಗಳನ್ನೂ ದಾಖಲಿಸಿ ವಿಶ್ಲೇಷಿಸಬೇಕು; ಆಗ ಇನ್ನಷ್ಟು ಒಳನೋಟಗಳು ಸಿಗಲಿವೆ ಎಂಬುದು ಈ ಅಧ್ಯಯನದ ಆಶಯ. ಒಬ್ಬ ವ್ಯಕ್ತಿಯು ಸಾಮಾಜಿಕ ಮಾಧ್ಯಮದಿಂದ ದೂರವಿದ್ದಾಗ, ಆ ವ್ಯಕ್ತಿಯ ಮಾನಸಿಕ, ಸಾಮಾಜಿಕ, ವರ್ತನಾ ಸಂಬಂಧಿ ಅಂಶಗಳು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆಯೂ ಭವಿಷ್ಯದ ಸಂಶೋಧನೆಗಳು ಬೆಳಕು ಚೆಲ್ಲಬೇಕು ಎಂದು ಒತ್ತಿ ಹೇಳಿದೆ.
ಸಾಮಾಜಿಕ ಮಾಧ್ಯಮಗಳು ಸಾಮಾಜಿಕ ಸಂಬಂಧಗಳನ್ನು ಬೆಳೆಸಲು ಮತ್ತು ವ್ಯಕ್ತಿಯ ಅಭಿಪ್ರಾಯ, ಅನುಭವ, ಚಿಂತನೆ, ಪ್ರತಿಕ್ರಿಯೆಗಳನ್ನು ಅಭಿವ್ಯಕ್ತಿಸಲು ಹೊಸಹೊಸ ಅವಕಾಶಗಳನ್ನು ಒದಗಿಸುತ್ತವೆ ಎಂಬುದು ನಿಜ. ಆದರೆ, ಅದರ ಅತಿ ಬಳಕೆ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ ಎಂಬುದೂ ನಿಜ. ಉದಾಹರಣೆಗೆ:
1)ಸಾಮಾಜಿಕ ಮಾಧ್ಯಮ ಬಳಸುವ ವ್ಯಕ್ತಿಗೆ ಸಾವಿರಾರು “ಮೆಚ್ಚುಗೆಗಳು" (ಲೈಕ್ಸ್), “ಹಿಂಬಾಲಕರು" (ಫೊಲೋವರ್ಸ್) ಇರಬೇಕೆಂಬ ಒತ್ತಡವು ಅವು ಸಿಗದೆ ಇದ್ದಾಗ ವ್ಯಕ್ತಿಯ ಆತ್ಮವಿಶ್ವಾಸವನ್ನೇ ಧ್ವಂಸ ಮಾಡಬಲ್ಲದು.
2)ಸಾಮಾಜಿಕ ಮಾಧ್ಯಮದ ಪೋಸ್ಟುಗಳನ್ನು ನೋಡುತ್ತಾ ನೋಡುತ್ತಾ ನುಗ್ಗಿ ಬರುವ "ಅವರು ಹಾಗೆ ಮಾಡಿದರು, ನನಗೆ ಹಾಗೆ ಮಾಡಲಾಗಲಿಲ್ಲ”, ಹಾಗೂ "ಇವರು ಇದನ್ನು ಖರೀದಿಸಿದರು, ನನಗೆ ಸಾಧ್ಯವಾಗಲಿಲ್ಲ” ಎಂಬ ಕೀಳರಿಮೆಯಂತೂ ವ್ಯಕ್ತಿಯ ಆತ್ಮಸ್ಥೈರ್ಯವನ್ನೇ ಚಿಂದಿ ಮಾಡಬಲ್ಲದು.
3)ಆ ಮಾಧ್ಯಮದಲ್ಲಿ ಬಂದದ್ದನ್ನೆಲ್ಲ ಆಗಾಗಲೇ ನೋಡಬೇಕು ಮತ್ತು ಅದಕ್ಕೆ ಪ್ರತಿಕ್ರಿಯಿಸಬೇಕು ಎಂಬ ಒತ್ತಡವಂತೂ ಕುಟುಂಬದವರೊಡನೆ ಮಾತನಾಡಲಿಕ್ಕೂ ಅವಕಾಶ ನೀಡದೆ, ಮನೆಯೊಳಗಣ ಸೌಹಾರ್ದವನ್ನೂ ಹಾಳು ಮಾಡುತ್ತದೆ. 4)ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸುವುದೆಲ್ಲ ನಿಜವೆಂಬ ತಪ್ಪುಗ್ರಹಿಕೆ ಹಲವಾರು ಅನಾಹುತಗಳಿಗೆ ಕಾರಣವಾಗಿದೆ ಎಂಬುದಂತೂ ಎಲ್ಲರೂ ಒಪ್ಪಲೇಬೇಕಾದ ಸತ್ಯ.
ಕೊನೆಗೊಂದು ಮಾತು: ದಿನಕ್ಕೆ ಎರಡರಿಂದ ನಾಲ್ಕು ಗಂಟೆ ಸಾಮಾಜಿಕ ಮಾಧ್ಯಗಳಲ್ಲಿ ಮುಳುಗಿರುವ ಬದಲಾಗಿ ಕೇವಲ ಹತ್ತರಿಂದ ಮೂವತ್ತು ನಿಮಿಷ ಮಾತ್ರ ಅದಕ್ಕಾಗಿ ಮೀಸಲಾಗಿಟ್ಟರೆ, ಅದರಿಂದಾಗಿ ಎಷ್ಟು ನೆಮ್ಮದಿ, ಅಲ್ಲವೇ?