ಕೇರಳದ ಹಿನ್ನೀರಿನಲ್ಲಿ ಮತ್ತೆ ಹಾವುದೋಣಿಗಳ ನಾವಿಕರ ಹುಟ್ಟುಗಳ ಕಲರವ, "ವಂಚಿಪಟ್ಟು" ಹಾಡುಗಳ ಲಯಬದ್ಧ ಸದ್ದು ಕೇಳಿ ಬರುತ್ತಿದೆ. ಎರಡು ವರುಷಗಳಿಂದ ಕೊರೋನಾ ವೈರಸಿನ ದಾಳಿಯಿಂದಾಗಿ ಸ್ತಬ್ಧವಾಗಿದ್ದ ಹಾವುದೋಣಿ ಸ್ಪರ್ಧೆಗಳು ನವೋಲ್ಲಾಸದಿಂದ ಪುನಃ ಶುರುವಾಗಲಿವೆ.
ಸಪ್ಟಂಬರ್ 4ರಂದು ಅಳಪುಜ ಜಿಲ್ಲೆಯ ಪುನ್ನಮದ ಸರೋವರದ ನೆಹರೂ ಟ್ರೋಫಿ ಸ್ಪರ್ಧೆಯಿಂದ ತೊಡಗಿ, ನವಂಬರ್ 1ರಂದು ಅಷ್ಟಮುಡಿ ಸರೋವರದ ಸ್ಪರ್ಧೆಯ ವರೆಗೆ ಜನಪ್ರಿಯ ಹನ್ನೆರಡು ಹಾವುದೋಣಿ ಸ್ಪರ್ಧೆಗಳು ಜರಗಲಿವೆ. ಕಳೆದೆರಡು ವರುಷಗಳಲ್ಲಿ ಕೋವಿಡ್-19 ವೈರಸ್ ನಿಯಂತ್ರಣದ ನಿರ್ಬಂಧಗಳಿಂದಾಗಿ, ದೇಶದ ಮತ್ತು ವಿದೇಶಗಳ ಪ್ರವಾಸಿಗಳು ಈ ಸ್ಪರ್ಧೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಬಂದಿರಲಿಲ್ಲ.
ಹಾವುದೋಣಿಗಳದ್ದು ಶತಮಾನಗಳ ಇತಿಹಾಸ. 13ನೇ ಶತಮಾನದಲ್ಲಿ ಆಗಿನ ರಾಜಮನೆತನಗಳ “ಚುಂದನ್ ವಲ್ಲಮ್” (ಸಮರ ದೋಣಿ)ಗಳಾಗಿ ಇವುಗಳ ಬಳಕೆ. 1950ರಿಂದೀಚೆಗೆ ಇವುಗಳ ಸ್ಪರ್ಧೆ ಕೇರಳದ ಪ್ರಮುಖ ಕ್ರೀಡಾ ಸ್ಪರ್ಧೆಯಾಗಿ ಜಗತ್ಪ್ರಸಿದ್ಧವಾಗಿದೆ.
ವಿಜೇತರಿಗೆ ಕೋಟಿಗಟ್ಟಲೆ ಬಹುಮಾನದ ಮೊತ್ತ
ಈಗಂತೂ ಹಾವುದೋಣಿಗಳ ಸ್ಪರ್ಧೆ ಕೇರಳದಲ್ಲಿ ನಾಡಹಬ್ಬವಾಗಿ ಆಚರಿಸಲ್ಪಡುತ್ತಿದೆ. ಪ್ರವಾಸಿಗಳಿಗಂತೂ ಇದು ರೋಚಕ ಅನುಭವ. 2019ರಲ್ಲಿ ಕೇರಳದ ಕ್ರೀಡಾ ಇಲಾಖೆ ರಾಜ್ಯದ 12 ಪ್ರಧಾನ ಹಾವುದೋಣಿ ಸ್ಪರ್ಧೆಗಳನ್ನು ಒಳಗೊಂಡ ಚಾಂಪಿಯನ್ಸ್ ಬೋಟ್ ಲೀಗ್ ಸ್ಪರ್ಧೆ ಘೋಷಿಸಿದ ನಂತರ, ಈ ಸ್ಪರ್ಧೆಗಳಿಗೆ ದೊಡ್ಡ ಮಟ್ಟದ ಪ್ರಚಾರ ದಕ್ಕಿತು. ಅದಾದ ನಂತರ ಹಾವುದೋಣಿ ಸ್ಪರ್ಧೆಗಳಿಗೆ ಹೆಚ್ಚೆಚ್ಚು ಪ್ರವರ್ತಕರು ಪ್ರೋತ್ಸಾಹ ನೀಡುತ್ತಿದ್ದು, ವಿಜೇತ ತಂಡದ ಬಹುಮಾನದ ಮೊತ್ತ ರೂ.5.9 ಕೋಟಿಗಳಿಗೆ ಏರಿದೆ!
ಈಗ ಹಾವುದೋಣಿಗಳ ಸ್ಪರ್ಧೆಗಳು ಟ್ರೋಫಿ ಮತ್ತು ಬಹುಮಾನದ ಮೊತ್ತ ಗೆಲ್ಲುವ ಸ್ಪರ್ಧೆಗಳಾಗಿ ಉಳಿದಿಲ್ಲ. ಅವೀಗ ಅಳಪುಜದ ಕುಟ್ಟನಾಡು ಪ್ರದೇಶದ ವಿವಿಧ ಬೋಟ್ ಕ್ಲಬ್‌ಗಳ ಪ್ರತಿಷ್ಠೆಯ ಸ್ಪರ್ಧೆಗಳಾಗಿವೆ.
ಹಾವುದೋಣಿಗಳು 140 ಅಡಿ ವರೆಗೂ ಉದ್ದವಿರುತ್ತವೆ. ಕುಟ್ಟನಾಡಿನ ವಿವಿಧ ಪ್ರದೇಶಗಳಾದ ಕರಿಚಾಲ್, ನೆಡುಂಭಾಗೋಮ್, ಪಯಿಪ್ಪದಮ್ ಇತ್ಯಾದಿ ಹೆಸರುಗಳಿಂದ ಅವು ಗುರುತಿಸಲ್ಪಡುತ್ತವೆ. ಪ್ರತಿಯೊಂದು ಹಾವುದೋಣಿಯಲ್ಲಿ 80ರಿಂದ 100 ಹುಟ್ಟು ಹಾಕುವವರೂ 5ರಿಂದ 10 ಹಾಡು ಹಾಡುವವರೂ ಇರುತ್ತಾರೆ. ಆದ್ದರಿಂದ ಇದು ಜಗತ್ತಿನಲ್ಲೇ ಅತ್ಯಂತ ಜಾಸ್ತಿ ಸದಸ್ಯರಿರುವ ತಂಡಗಳ ಕ್ರೀಡಾ ಸ್ಪರ್ಧೆ.
ಐದು ನಿಮಿಷದ ಸ್ಪರ್ಧೆಗೆ ವರುಷದ ತಯಾರಿ
ಕೇವಲ ಐದೇ ನಿಮಿಷಗಳಲ್ಲಿ 1,000 - 1,400 ಮೀಟರ್ ಉದ್ದದ ಸ್ಪರ್ಧಾ ಪಥವನ್ನು ಹಾವುದೋಣಿಗಳು ಕ್ರಮಿಸುತ್ತವೆ. ಆದರೆ, ಸ್ಪರ್ಧೆಗಳ ತಯಾರಿ ವರುಷವಿಡೀ ನಡೆಯುವ ಪ್ರಕ್ರಿಯೆ. ಬೋಟ್ ಕ್ಲಬ್‌ಗಳ ತಯಾರಿ ಅತ್ಯುತ್ತಮ ಹಾವುದೋಣಿ ಮತ್ತು ಹುಟ್ಟು ಹಾಕುವವರ ಆಯ್ಕೆಯಿಂದ ಶುರು. ನಂತರ, ಸ್ಪರ್ಧೆಯ ಮುಂಚೆ ಒಂದು ತಿಂಗಳ ಅವಧಿಯ ತೀವ್ರ ತರಬೇತಿ. ಆ ಅವಧಿಯಲ್ಲಿ, ಬೋಟ್ ಕ್ಲಬ್ ನಿಯೋಜಿಸಿದ ವಸತಿಗೃಹದಲ್ಲೇ ಸ್ಪರ್ಧಾಳುಗಳ ವಾಸ. ಅವರು ತಮ್ಮ ಕುಟುಂಬಗಳಿಂದ ಹಾಗೂ ಎಲ್ಲ ಅನಾರೋಗ್ಯಕರ ಹವ್ಯಾಸಗಳಿಂದ ದೂರವಿರಬೇಕಾಗುತ್ತದೆ. ಈ ತಯಾರಿಗಾಗಿ ಪ್ರತಿಯೊಂದು ಬೋಟ್ ಕ್ಲಬ್ ರೂ.50 ಲಕ್ಷಕ್ಕಿಂತ ಅಧಿಕ ಹಣ ವೆಚ್ಚ ಮಾಡುತ್ತದೆ. ಇದನ್ನು ಪ್ರವರ್ತಕರಿಂದ ಮತ್ತು ದೇಣಿಗೆಗಳಿಂದ ಸಂಗ್ರಹಿಸಲಾಗುತ್ತದೆ.
ಹಾವುದೋಣಿ ಸ್ಪರ್ಧೆಗಳು ಜರಗುವಾಗ ಬೋಟ್ ಕ್ಲಬ್‌ಗಳ ಪದಾಧಿಕಾರಿಗಳು ಪ್ರತಿಯೊಂದು ಹಾವುದೋಣಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ; ಮುಂದಿನ ವರುಷದ ಸ್ಪರ್ಧೆಗೆ ಯಾವ ಹಾವುದೋಣಿ ಸೂಕ್ತ ಎಂದು ಆಗಲೇ ನಿರ್ಧರಿಸುತ್ತಾರೆ. ಅತ್ಯುತ್ತಮ ಹಾವುದೋಣಿಗೆ ಒಂದು ಹಂಗಾಮಿಗೆ ರೂ.40 ಲಕ್ಷದ ವರೆಗೆ ಬಾಡಿಗೆ ಪಾವತಿಸಬೇಕಾಗುತ್ತದೆ. ಹಲಸಿನ ಮರದ ಮೋಪಿನಿಂದ ತಯಾರಿಸುವ ಹಾವುದೋಣಿಯ ನಿರ್ಮಾಣ ವೆಚ್ಚ ರೂ.75 ಲಕ್ಷ ಮೀರುತ್ತದೆ.
ಹಾವುದೋಣಿಗಳಂತೆ, ಈ ವರುಷದ ಸ್ಪರ್ಧೆಗಳಲ್ಲಿ ಅತ್ಯುತ್ತಮ ನಿರ್ವಹಣೆ ತೋರುವ ಹುಟ್ಟು ಹಾಕುವವರಿಗೂ ಮುಂದಿನ ವರುಷ ಇತರ ಬೋಟ್ ಕ್ಲಬ್‌ಗಳಿಂದ ಹೆಚ್ಚಿನ ಸಂಭಾವನೆಯ ಅವಕಾಶ ಸಿಗುತ್ತದೆ. ಬಹುಪಾಲು ಹುಟ್ಟು ಹಾಕುವವರು ಸ್ಥಳೀಯರೇ ಆಗಿರುತ್ತಾರೆ. ಇತರ ರಾಜ್ಯಗಳ ಕೆಲವು ಹುಟ್ಟು ಹಾಕುವವರನ್ನೂ, ಭಾರತೀಯ ಸೈನ್ಯ ಮತ್ತು ನೌಕಾದಳದ ಪಳಗಿದ ಹುಟ್ಟು ಹಾಕುವವರನ್ನೂ ಕೆಲವು ಬೋಟ್ ಕ್ಲಬ್‌ಗಳು ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತವೆ.
ಕಠಿಣ ತರಬೇತಿ
ಹುಟ್ಟು ಹಾಕುವವರ ಒಂದು-ತಿಂಗಳ ತರಬೇತಿ ಪ್ರತಿ ದಿನ ಮುಂಜಾನೆ ಐದು ಗಂಟೆಗೆ ಶುರುವಾದರೆ ರಾತ್ರಿ ಹತ್ತು ಗಂಟೆಗೆ ಮುಕ್ತಾಯ. ರಾತ್ರಿ ಹತ್ತು ಗಂಟೆಯ ನಂತರ ಅವರು ಮೊಬೈಲ್ ಫೋನಿನಲ್ಲಿಯೂ ಮಾತಾಡುವಂತಿಲ್ಲ. ಅವರಿಗೆ ಸಾಕಷ್ಟು ವಿಶ್ರಾಂತಿ ಸಿಗಬೇಕೆಂಬುದೇ ಈ ಕಠಿಣ ನಿಯಮದ ಉದ್ದೇಶ.
ತರಬೇತಿಯ ಜಾಗಕ್ಕೆ ಹೊರಗಿನ ಯಾವುದೇ ವ್ಯಕ್ತಿಗೆ ಪ್ರವೇಶವಿಲ್ಲ. ಬೇರೆ ಬೋಟ್ ಕ್ಲಬ್‌ನಿಂದ ಯಾರಾದರೂ ಬಂದು ತಮ್ಮ ಕ್ಲಬ್‌ನ ಹುಟ್ಟು ಹಾಕುವವರಿಗೆ ಆಮಿಷವೊಡ್ಡಿ ಪಿತೂರಿ ಮಾಡಬಹುದೆಂಬ ಆತಂಕ ಎಲ್ಲ ಬೋಟ್ ಕ್ಲಬ್‌ನವರಿಗೂ ಇದೆ.
ಹುಟ್ಟು ಹಾಕುವವರಿಗೆ ಬೆಳಗ್ಗೆ ಮತ್ತು ಅಪರಾಹ್ನ - ಎರಡು ಹೊತ್ತಿನ ತರಬೇತಿ. ಪ್ರಾರ್ಥನೆ, ದೈಹಿಕ ವ್ಯಾಯಾಮ, ಹುಟ್ಟು ಹಾಕುವ ಅಭ್ಯಾಸ, ದಿನನಿತ್ಯದ ಸಭೆಗಳು, ಪರಿಶೀಲನಾ ಗೋಷ್ಠಿಗಳು ಮತ್ತು ಹುರಿದುಂಬಿಸುವ ಕಾರ್ಯಕ್ರಮಗಳು - ಇವು ತರಬೇತಿಯ ಮುಖ್ಯ ಅಂಗಗಳು.
ಎಲ್ಲ ತರಬೇತಿ ಶಿಬಿರಗಳಲ್ಲಿಯೂ ಅಡುಗೆಮನೆ ಇದ್ದೇ ಇರುತ್ತದೆ. ತರಕಾರಿಗಳು, ಕೋಳಿಮಾಂಸ ಮತ್ತು ಮೀನು ಸಹಿತವಾದ ಆರೋಗ್ಯಕರ ಆಹಾರವನ್ನು ಹುಟ್ಟು ಹಾಕುವವರಿಗೆ ನೀಡಲಾಗುತ್ತದೆ. ಶಿಬಿರದಲ್ಲಿ ಸ್ಪರ್ಧಾಳುಗಳ ಆರೋಗ್ಯ ತಪಾಸಣೆಗಾಗಿ ವೈದ್ಯರೂ ಇರುತ್ತಾರೆ. ಧೂಮಪಾನ, ಮದ್ಯ ಸೇವನೆ ಮತ್ತು ಇತರ ಅನಾರೋಗ್ಯಕರ ಚಟಗಳಿಗೆ ಶಿಬಿರದಲ್ಲಿ ಅವಕಾಶವೇ ಇಲ್ಲ. ಇದರಿಂದಾಗಿ, ಮುಂಚೆ ಇಂತಹ ಕೆಟ್ಟ ಚಟಗಳಿಗೆ ದಾಸರಾಗಿದ್ದವರು, ತರಬೇತಿ ಶಿಬಿರದ ನಂತರ ಅವನ್ನು ಶಾಶ್ವತವಾಗಿ ತೊರೆದ ಉದಾಹರಣೆಗಳಿವೆ.
ಹಾವುದೋಣಿ ಸ್ಪರ್ಧೆಗಳು ಹಲವರನ್ನು ಇಂತಹ ಸ್ಪರ್ಧೆಗಳತ್ತ ಆಕರ್ಷಿಸುತ್ತಿವೆ ಎಂಬುದಂತೂ ಸತ್ಯ. ಈ ಸ್ಪರ್ಧೆಗಳು ಕೇರಳದ ನಾಡಹಬ್ಬ ಓಣಂ ಆಚರಣೆಯೊಂದಿಗೆ ಶುರುವಾಗುತ್ತವೆ ಎಂಬುದು ವಿಶೇಷ. ಅದ್ಭುತ ಪ್ರಕೃತಿ ಸೌಂದರ್ಯದ ನಾಡಾದ ಕೇರಳದಲ್ಲಿ ಪ್ರಕೃತಿ ಪ್ರೀತಿಯ ಹಾವುದೋಣಿ ಸ್ಪರ್ಧೆ ಎಲ್ಲ ಕೇರಳಿಗರಿಗೂ ಅಭಿಮಾನದ ಸಂಗತಿ. ಹಸುರು ಆವರಿಸಿದ ಸರೋವರಗಳ ನೀರಿನಲ್ಲಿ, ಹುಟ್ಟು ಹಾಕುವವರ ಹುಮ್ಮಸ್ಸಿನ ಕೈಚಳಕದಲ್ಲಿ, ಹಾಡುಗಾರರ ಹುಚ್ಚೆಬ್ಬಿಸುವ ಹಾಡಿನ ಲಯದಲ್ಲಿ, ಬಿಲ್ಲಿನಿಂದ ಸಿಡಿಯುವ ಬಾಣಗಳಂತೆ ಹಾವುದೋಣಿಗಳು ನೀರನ್ನು ಸೀಳುತ್ತಾ ಮುನ್ನುಗ್ಗುವಾಗ ದಡದಲ್ಲಿ ನಿಂತು ನೋಡುವವರ ನರನಾಡಿಗಳಲ್ಲಿಯೂ ವಿದ್ಯುತ್ ಸಂಚಾರ!