ಕಲಾಕೃತಿಗಳ ಮಾಯಾಲೋಕಕ್ಕೆ ಜನಸಮುದಾಯದ ಸೇತು: ಉತ್ಸವ್ ರಾಕ್ ಗಾರ್ಡನ್(ಭಾಗ ೧)

ಅಲ್ಲಿ ಎತ್ತಕಂಡರತ್ತ ಆಳೆತ್ತರದ ಮಣ್ಣಿನ ಶಿಲ್ಪಗಳು. ಹಳ್ಳಿ ಬದುಕಿನ ಕಾಯಕಗಳು, ಬೇಸಾಯದ ಕೆಲಸಗಳು, ವಿವಿಧ ಗುಡಿಕೈಗಾರಿಕೆಗಳು, ಹತ್ತಾರು ಜಾನಪದ ಕಲಾಭಂಗಿಗಳು - ಇವೆಲ್ಲದರಲ್ಲಿ ನಿರತರಾಗಿರುವ ವ್ಯಕ್ತಿಗಳ ಶಿಲ್ಪಗಳು. ಪ್ರತಿಯೊಂದು ಶಿಲ್ಪವೂ ಜೀವಂತ ಎನಿಸುವಂತಿದೆ!

ಅದುವೇ ಉತ್ಸವ್ ರಾಕ್ ಗಾರ್ಡನ್. ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಪುಣೆ - ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ಶೈಕ್ಷಣಿಕ ಸಾಂಸ್ಕೃತಿಕ ಪ್ರವಾಸಿ ಕೇಂದ್ರ. ಆರು ವರುಷಗಳ ಮುನ್ನ, ೧೧ ಜನವರಿ ೨೦೧೪ರಂದು ಅಲ್ಲಿನ ಅದ್ಭುತ ಕಲಾಕೃತಿಗಳನ್ನು ನೋಡುತ್ತಾ ನೋಡುತ್ತಾ ಅರ್ಧ ದಿನವೇ ಕಳೆದಿತ್ತು.

ಆರೂವರೆ ಎಕ್ರೆ ಜಮೀನಿನಲ್ಲಿ ವ್ಯಾಪಿಸಿರುವ ಉತ್ಸವ್ ರಾಕ್ ಗಾರ್ಡನ್ ಕಲಾಕಾರ ಟಿ.ಬಿ. ಸೊಲಬಕ್ಕನವರ್ ಅವರ ಕನಸಿನ ಕೂಸು. ಆ ದಿನ ನನ್ನನ್ನು ಅಲ್ಲಿಗೆ ಕರೆದೊಯ್ದವರು ಉತ್ತರಕನ್ನಡದ ಶಿರಸಿ ಹತ್ತಿರದ ಬರಹಗಾರ ಗೆಳೆಯ ಶಿವಾನಂದ ಕಳವೆ. ಅವರು ಸೊಲಬಕ್ಕನವರನ್ನು ಪರಿಚಯಿಸಿದ್ದು ಹೀಗೆ: "ಒಬ್ಬ ಕಲಾವಿದ ಏನು ಮಾಡಬಹುದು? ಎಂಬುದನ್ನು ನಾವಿಲ್ಲಿ ಕಣ್ಣಾರೆ ಕಾಣಬಹುದು. ಒಂದ್ ಕಾಲದಲ್ಲಿ ಸೊಲಬಕ್ಕನವರ್ ಬೆಂಗಳೂರಿನಲ್ಲಿ ಮೊಡರ್ನ ಆರ್ಟ್ ಮಾಡ್ತಾ ಇದ್ದರು. ಆದರೆ ಅವರ ಕಲೆ ನೋಡಲು ಬರುತ್ತಿದ್ದವರು ಬೆರಳೆಣಿಕೆಯ ಜನರು.

ಒಮ್ಮೆ ಒಬ್ಬರು ಕೇಳಿದರು, “ನಿನ್ನ ಕಲೆಯಲ್ಲಿ ನಿಂಗೆ ಅನ್ನ ಕೊಡೋ ಜನ, ಅರಿವೆ ಕೊಡೋ ಜನ ಇದ್ದಾರೋ?” ಈ ಪ್ರಶ್ನೆ ಸೊಲಬಕ್ಕನವರನ್ನು ಆಳವಾದ ಚಿಂತನೆಗೆ ಹಚ್ಚಿತು. ಕೊನೆಗೆ, ಸೊಲಬಕ್ಕನವರ್ ತನ್ನೂರಿಗೆ ಬಂದರು. ಅಲ್ಲಿನ ದಿಬ್ಬದಲ್ಲಿ ಎತ್ತುಗಳ ಕಲಾಕೃತಿ ಮಾಡಿ ನಿಲ್ಲಿಸಿದ್ರು. ಅದನ್ನು ನೋಡಲು ಜನ ಬರಲು ಶುರು ಮಾಡಿದ್ರು. ಅನಂತರ ಅವರು “ದಾಸನೂರು ಸಂಸ್ಥೆ” ಕಟ್ಟಿದರು. ೧೯೯೦ರಿಂದ ಶುರು ಮಾಡಿ ಹಂತಹಂತವಾಗಿ ಉತ್ಸವ್ ರಾಕ್ ಗಾರ್ಡನ್ ರೂಪಿಸಿದರು. ಈಗ ಮೂರು ಸಾವಿರ ಕಲಾವಿದರು ಬೇರೆಬೇರೆ ಊರುಗಳಲ್ಲಿ ದಾಸನೂರು ಸಂಸ್ಥೆ ವತಿಯಿಂದ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಇಲ್ಲಿರುವಂತಹ ಶಿಲ್ಪಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದನ್ನೆಲ್ಲ ಕಣ್ಣಾರೆ ಕಂಡ ನಂತರವಾದರೂ ನಾವೆಲ್ಲ ಸಾಂಪ್ರದಾಯಿಕ ಶಿಕ್ಷಣವೇ ಮುಖ್ಯ ಎಂಬ ಭ್ರಾಂತಿ ಬಿಟ್ಟುಬಿಡಬೇಕು.”

ಇಂತಹ ಅಪೂರ್ವ ಸಮಕಾಲೀನ ಶಿಲ್ಪಸಂಗ್ರಹಾಲಯ ರೂಪಿಸುವ ಕಲ್ಪನೆ ಸೊಲಬಕ್ಕನವರ್ ಅವರಲ್ಲಿ ಹೇಗೆ ಮೂಡಿ ಬಂತು? ಈ ಅದ್ಭುತ ಶಿಲ್ಪಕಲಾಲೋಕ ಅವರ ಕಲ್ಪನೆಯಂತೆ ಬೆಳೆದು ಬಂದದ್ದು ಹೇಗೆ? ಇಂತಹ ಪ್ರಶ್ನೆಗಳಿಗೆ ಆ ದಿನ ಸೊಲಬಕ್ಕನವರ್ ಖುದ್ದಾಗಿ ನೀಡಿದ ಉತ್ತರಗಳನ್ನು ಈ ಬರಹದಲ್ಲಿ ದಾಖಲಿಸಿದ್ದೇನೆ.

ಮಾನ್ಯ ಸೊಲಬಕ್ಕನವರ್ ಹೀಗೆನ್ನುತ್ತಾರೆ: “ಆಧುನಿಕ ಕಲೆ ಸಮಾಜದ ಮಧ್ಯಕ್ಕೆ ಬಂದಿಲ್ಲ. ಅದೊಂದು ಕಮರ್ಷಿಯಲ್ ವಿಷಯ ಆಗಿದೆ. ಮಹಾನಗರಗಳ ಆರ್ಟ್ ಗ್ಯಾಲರಿಗಳಿಗೆ ಯಾರು ಬರ್ತಾರೆ? ಆರ್ಟ್ ಐಟಂಗಳನ್ನು ಖರೀದಿ ಮಾಡೋರು ಬರ್ತಾರೆ. ಹಾಗಾಗಿ, ಜನರಿಗೆ ಕಲಾವಿದರ ಪರಿಚಯ ಆಗಲ್ಲ. ಅಂದ್ ಮೇಲೆ ಜನರಿಗೆ ಕಲೆಯ ಪರಿಚಯ ಹೆಂಗಾಗ್ತದೆ?

(ಪಕ್ಕದಲ್ಲಿದ್ದ ಕಲಾಕೃತಿಯೊಂದನ್ನು ತೋರಿಸುತ್ತಾ) “ನೋಡಿ, ಇದೊಂದು ಕಟ್ಟಿಗೆ ತುಂಡ್ ಆಗಿತ್ತು. ಕಲಾವಿದ ಅದ್ರಲ್ಲೊಂದು ಕಲಾಕೃತಿ ಸೃಷ್ಟಿ ಮಾಡಿದ್ದಾನೆ. ಅದು ಅವನ ದೃಷ್ಠಿ. ನಮ್ಮ ಮನೆ ಹ್ಯಾಗಿದೆ ನೋಡಿ. ಇದನ್ನು ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಕಟ್ಟಿದ್ದೇವೆ - ಕಟ್ಟಿಗೆ ಮತ್ತು ಇಟ್ಟಿಗೆ ವೇಸ್ಟಿನಿಂದ (waste). ಇದರಲ್ಲಿ ಕ್ರಿಯೇಟಿವಿಟಿ ಇದೆ. ಇದು ನಮ್ಮ ಸೃಷ್ಠಿ.

ದಾವಣಗೆರೆ ಸರಕಾರಿ ಕಲಾ ಕಾಲೇಜಿನಲ್ಲಿ ನಾನು ಶಿಕ್ಷಕನಾಗಿದ್ದೆ. ಅಲ್ಲಿ ಕಾಲೇಜಿನ ೨೨ ಎಕ್ರೆ ಜಮೀನಿನಲ್ಲಿ ಇದ್ದವರು ೨೦೦ ಕಲಾವಿದರು ಮತ್ತು ೩೦ ಸಿಬ್ಬಂದಿ. ಅಲ್ಲಿ ನಾನು ೨೦ ವರುಷ ಇದ್ದೆ; ಆದರೆ ಆ ೨೦ ವರುಷದಲ್ಲಿ ಒಂದೇ ಒಂದು ಕಲಾಕೃತಿ ಮಾಡಲು ನನಗೆ ಸಾಧ್ಯ ಆಗಲಿಲ್ಲ. ಯಾಕೆಂದರೆ, ಸರಕಾರಿ ವ್ಯವಸ್ಥೆಯೇ ವಿಚಿತ್ರ. ಏನಾದರೂ ಕಲಾಕೃತಿ ಮಾಡಬೇಕಾದರೆ, ನಾನು ಮೇಲಧಿಕಾರಿಗೆ ಒಂದು ಅರ್ಜಿ ಕಳಿಸಬೇಕು. ಆರು ತಿಂಗಳ ನಂತರ ಆ ಅರ್ಜಿ ವಾಪಾಸು ಬರುತ್ತದೆ. ಪುನಃ ಅರ್ಜಿ ಕಳಿಸಿದರೆ ಮತ್‌ಮತ್ತೆ ಅರ್ಜಿ ವಾಪಾಸು ಬರುತ್ತದೆ! ಹತ್ತು ವರುಷ ದಾಟಿದರೂ ಆ ಅರ್ಜಿಯ ಫೈಲ್ ಹೀಗೆ ಅಡ್ಡಾಡುತ್ತಾ ಇರುತ್ತದೆ. ಯಾಕಂತೀರಾ? ಆ ಅರ್ಜಿ ಬಗ್ಗೆ ನೂರಾರು ಪ್ರಶ್ನೆ ಕೇಳುತ್ತಲೇ ಇರುತ್ತಾರೆ ಮೇಲಧಿಕಾರಿ. ಉದಾಹರಣೆಗೆ, ಕಲಾಕೃತಿ ರಚಿಸುವ ಉದ್ದೇಶ ಏನು? ಅದರ ಹಣಕಾಸಿನ ವ್ಯವಸ್ಥೆ ಏನು? ಇದಕ್ಕಾಗಿ ಚಿತ್ರಕಲಾ ಅಕಾಡೆಮಿಯ ಸಲಹೆ ಪಡೆದಿದ್ದೀರಾ? ಇದರೆ ಮೌಲ್ಯಮಾಪನ ಹೇಗೆ? ಇದನ್ನು ಪೂರ್ತಿ ಮಾಡಲಿಕ್ಕೆ ಎಷ್ಟು ಸಮಯ ಬೇಕಾದೀತು? ಮುಂದೆ ಇದನ್ನು ರಕ್ಷಿಸುವ ವ್ಯವಸ್ಥೆ ಹೇಗೆ? ಅದಕ್ಕೆ ಯಾರು ಜವಾಬ್ದಾರರು?

ಎಂ.ಎಲ್.ಎ. ಫಂಡ್ ಇದೆ, ಎಂ.ಪಿ. ಫಂಡ್ ಇದೆ. ಅದರಲ್ಲಿ ಗಟಾರ ಮಾಡಲಿಕ್ಕೂ ಹಣವಿದೆ. ಆದರೆ ಕಲೆಗೆ ಯಾವುದೇ ಗ್ರಾಂಟ್ ಇಲ್ಲ. ಯಾಕಂದ್ರೆ, ಕಲೆಗೆ ಬೆಲೆ ಇಲ್ಲ, ಕಿಮ್ಮತ್ತಿಲ್ಲ.

ಸರಕಾರಿ ಸಂಸ್ಥೆಗಳ ಹೊರತಾಗಿ, ಬೇರೆ ಸಂಸ್ಥೆಯವರು ಕಲೆಗೆ ಪ್ರೋತ್ಸಾಹ ಕೊಡೋದಿಲ್ಲ. ಯಾಕಂದ್ರೆ, ಅವರದೊಂದು ಪ್ರಶ್ನೆ ಇದೆ: ಅದ್ರಿಂದ ರೊಕ್ಕ ಎಷ್ಟು ಬರ್ತದೆ ಅಂತ ಕೇಳ್ತಾರೆ.

ಈ ರೀತಿಯಲ್ಲಿ, ನಾವೆಲ್ಲ ಒಂದು ವ್ಯವಸ್ಥೆಯಲ್ಲಿ ಸಿಕ್ಕಿ ಹಾಕ್ಕಂಡಿದೀವಿ. ಇದನ್ನು ಬಿಟ್ ಹೊರಗೆ ಬರೋದು ಫೈನಾನ್ಸಿಯಲಿ (ಆರ್ಥಿಕವಾಗಿ) ಸುಲಭ ಇಲ್ಲ. ನಾನು ೧೯೯೦ರಲ್ಲಿ ಆ ವ್ಯವಸ್ಥೆಯನ್ನು ಬಿಟ್ಟು ಹೊರಗೆ ಬಂದೆ. ಹಾಗೆ ಹೊರಗೆ ಬಂದ ನಂತರ ನನಗೆ ತಿಳೀತು - ಬೇರೆಯವರು ವ್ಯವಸ್ಥೆಯನ್ನು ಬಿಟ್ಟು ಯಾಕೆ ಹೊರಗೆ ಬರೋದಿಲ್ಲ ಅನ್ನೋದು.

ಈ ರಾಕ್ ಗಾರ್ಡನ್ ನೋಡ್ತಾ ಇದ್ದೀರಲ್ಲ; ಇದೆಲ್ಲವೂ ಒಂದು ಆಕಸ್ಮಿಕ. ಇಲ್ಲಿ ಡೆಫಿನೆಟ್ ಆಗಿ ಪ್ಲಾನ್ ಮಾಡಿದ್ದು ಏನೂ ಇಲ್ಲ. ಇಲ್ಲಿರೋದನ್ನೆಲ್ಲ ನಾವು ಅನಿವಾರ್ಯವಾಗಿ ಮಾಡಬೇಕಾಯಿತು. ನಮಗೆ ಅವಕಾಶಗಳು ಬಂದವು - ಅವನ್ನು ನಾವು ಬಳಸಿಕೊಂಡ್ವಿ, ಅಷ್ಟೇ. ಬಹಳ ಜನ ಕೇಳ್ತಾರೆ: ನಿಮಗೆ ಈ ಐಡಿಯಾ ಹೆಂಗ್ ಬಂತು? ಅವರಿಗೆ ನನ್ನ ಉತ್ತರ: ನಾವು ಒಂದ್ ಕೆಲಸ ಮಾಡಿ ತೋರಿಸಿದ್ರೆ ಅದೊಂದು ಮೊಡೆಲ್ (ಮಾದರಿ) ಆಗ್ತದೆ.

ಇವತ್ತು ನಮ್ಮ ಸಂಸ್ಥೆಗೆ ಒಂದು ಸಾವಿರ ಜನ ಬಂದರೂ ಅವ್ರಿಗೆ ಉದ್ಯೋಗ ಇದೆ. ಯಾಕಂದ್ರೆ, ಕಲೆ ಆದಾಯಮೂಲ ಆದಾಗ ಹಿಂಗಾಗ್ತದೆ.

“ರಂಗಾಯಣ" ನೋಡ್ರೀ, ಅಂತಹ ಯಾವುದೇ ಸಂಸ್ಥೆ ನೋಡ್ರೀ. ಎಲ್ಲವೂ ನಗರ ಕೇಂದ್ರೀಕೃತ ಆಗಿದೆ. ಅಲ್ಲಿರೋರು (ನಮ್ಮ ಹಾಗೆ) ಹಳ್ಳೀ ಕಡೆ ಬರ್ತಾನೇ ಇಲ್ಲ. ನಾಟಕ ರಂಗದಲ್ಲಿ ಏನಾಗ್ತಿದೆ ನೋಡ್ರೀ. ಒಂದು ನಾಟಕ ತಂಡದ ನಾಟಕಗಳನ್ನು ಅದರ ಅಭಿಮಾನಿಗಳು ನೋಡ್ತಾರೆ; ಇನ್ನೊಂದು ನಾಟಕ ತಂಡದ ನಾಟಕಗಳನ್ನು ಇದರ ಅಭಿಮಾನಿಗಳು ನೋಡ್ತಾರೆ; ಬೇರೆ ಯಾರೂ ನೋಡಲ್ಲ. ಎಷ್ಟು ಕೋಟಿ ರೂಪಾಯಿ ಖರ್ಚು ಮಾಡಿದ್ರೂ ಈ ಪರಿಸ್ಥಿತಿ ಬದಲಾಗಲ್ಲ. ಅಲ್ಲಿರೋರು ಆ ವ್ಯವಸ್ಥೆಯಿಂದ ಹೊರಗೆ ಬರುತ್ತಾ ಇಲ್ಲ. ಬ್ರೆಕ್ಟ್‌ (ರಚಿಸಿದ) ನಾಟಕ ಆಡ್ತಾರೆ; ನಾನು ಬಹಳ ಶಾಣ್ಯಾ ಅಂದ್ಕೋತಾರೆ.

ಇಂತಹ ಪರಿಸ್ಥಿತಿಯಲ್ಲಿ, ಸಮಗ್ರತೆ ಹೆಂಗ್ ತರೋದು? ಅದೇ ನಮ್ಮ ಮುಂದಿರೋ ಸವಾಲು. ನಾವು ಒಮ್ಮೆ ದೊಡ್ಡಾಟ ಮಾಡ್ಲಿಕ್ಕೆ ಹೋಗಿ ಅಟ್ಟರ್ ಫೈಲೂರು (ಅಪ್ಪಟ ಸೋಲು) ಆತು. ಹಾಗಂತ, ಜನಗಳು ಸೇರ್ಕಂಡು ದೊಡ್ಡಾಟ ಮಾಡಿದ್ರೆ ಚೆನ್ನಾಗಿ ಆಗ್ತದೆ; ಯಾಕಂದ್ರೆ, ಅದಕ್ಕೆ ಎಲ್ಲರೂ ಸೇರ್ಕಂತಾರೆ.

ಇದನ್ನ ತಿಳ್ಕೋಬೇಕು ನಾವು; ಇಲ್ಲಾಂದ್ರೆ ಎಲ್ಲ ವೇಸ್ಟ್ (ವ್ಯರ್ಥ) ಆಗ್ತದೆ. ಸರಕಾರಿ ಕಲಾ ಕಾಲೇಜಿನಲ್ಲಿದ್ದಾಗ ನನ್ನ ಇಪ್ಪತ್ತು ವರ್ಷಗಳ ಶ್ರಮದಿಂದ ಏನೂ ಆಗ್ಲಿಲ್ಲ. ಅದನ್ನ ಬಿಟ್ಟು ಇಲ್ಲಿಗೆ ಬಂದ್ ಮೇಲೆ ಆಗಿರೋದನ್ನ ನೀವೇ ನೋಡ್ರೀ. ಇದನ್ನ ನೋಡ್ಲಿಕ್ಕೆ ಈಗ ಪ್ರತಿ ದಿನ ಸಾವಿರಾರು ಜನ ಬರ್ತಿದ್ದಾರೆ. ಆದ್ದರಿಂದ ನಾವು ತಿಳ್ಕೋಬೇಕು, ಸೋಲಿಗೆ ನಾವೇ ಕಾರಣ, ಜನರಲ್ಲ ಅನ್ನೋದನ್ನ."


(ಗಮನಿಸಿ: ಉತ್ಸವ್ ರಾಕ್ ಗಾರ್ಡನಿನ ಸ್ಥಾಪಕ ಟಿ.ಬಿ. ಸೊಲಬಕ್ಕನವರ್ ೧೯-೧೧-೨೦೨೦ರಂದು ವಿಧಿವಶರಾದರು.)
ಫೋಟೋ: ಟಿ.ಬಿ. ಸೊಲಬಕ್ಕನವರು ಮತ್ತು ಲೇಖಕರು