(ಮೂಡಬಿದಿರೆಯ ಆಳ್ವಾಸ್ “ನುಡಿಸಿರಿ”ಯಲ್ಲಿ 2012ರಲ್ಲಿ ನೀಡಿದ ಉಪನ್ಯಾಸ)
ಇತ್ತೀಚೆಗೆ, ಅಕ್ಟೋಬರ್ ೬, ೨೦೧೨ರಂದು ಕರ್ನಾಟಕ ಬಂದ್ ಕಾರಣದಿಂದಾಗಿ ಜನಜೀವನ ಸ್ತಬ್ಧವಾಗಿತ್ತು. ಅಂದು ರಾಮನಗರದಲ್ಲಿದ್ದ ನನಗೆ ಸಂಜೆ ೭ ಗಂಟೆಯ ನಂತರವೇ ಬಸ್ಸೇರಿ ಬೆಂಗಳೂರಿಗೆ ಹೋಗಲು ಸಾಧ್ಯವಾಯಿತು. ಯಾಕೆಂದರೆ ಮುಂಜಾನೆಯಿಂದ ಯಾವೊಂದು ವಾಹನವೂ ರಾಮನಗರ-ಬೆಂಗಳೂರು ರಸ್ತೆಯಲ್ಲಿ ಓಡಾಡಲಿಲ್ಲ. ಅದು, ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ ಬಗೆ.
ಕನ್ನಡ ಭಾಷೆಯ ಆಧಾರದಿಂದ ಕನ್ನಡದ ಪ್ರದೇಶಗಳ ಏಕೀಕರಣಕ್ಕಾಗಿ ಕನ್ನಡಿಗರು ಐದಾರು ದಶಕಗಳ ಕಾಲ ಹೋರಾಡಬೇಕಾಯಿತು. ಆದರೆ ನವಂಬರ್ ೧, ೧೯೫೬ರಂದು ಕನ್ನಡನಾಡು ರೂಪುಗೊಂಡ ನಂತರವೂ ತಮ್ಮ ನೆಲವನ್ನು ಮತ್ತು ಜಲವನ್ನು ಕಾಪಾಡಿಕೊಳ್ಳಲಿಕ್ಕಾಗಿ ಕನ್ನಡಿಗರು ಹೋರಾಡುತ್ತಲೇ ಇರಬೇಕಾಗಿರುವುದು ಒಂದು ವಿಪರ್ಯಾಸ.
ಕನ್ನಡನಾಡಿನ ಜಲಹೋರಾಟಗಳ ಕಾರಣ ಹಾಗೂ ಬೆಳವಣಿಗೆಗಳನ್ನು ಗಮನಿಸೋಣ. ಕರ್ನಾಟಕದಲ್ಲಿವೆ ಅರುವತ್ತಕ್ಕೂ ಹೆಚ್ಚಿನ ನದಿಗಳು. ಇವುಗಳಲ್ಲಿ ಪ್ರಧಾನವಾಗಿ ವಿವಾದಕ್ಕೆ ಒಳಗಾಗಿರುವುದು ಕಾವೇರಿ ಮತ್ತು ಕೃಷ್ಣಾ ನದಿಗಳು.
ಒಂದು ರಾಜ್ಯದಲ್ಲಿ ಹುಟ್ಟಿದ ನದಿ ಸಮುದ್ರ ಸೇರುವ ಹಾದಿಯಲ್ಲಿ ಆ ರಾಜ್ಯದ ಗಡಿ ದಾಟುವುದು ಸಹಜ. ಹೀಗೆ ವಿವಿಧ ರಾಜ್ಯಗಳಲ್ಲಿ ಒಂದು ನದಿ ಹರಿಯುವಾಗ ಅದರ ನೀರಿನ ಬಳಕೆಗೆ ಆ ರಾಜ್ಯಗಳಲ್ಲಿ ಪೈಪೋಟಿಯೂ ಸಹಜ. ಆದರೆ ಹಲವು ರಾಜ್ಯಗಳ ನಡುವೆ ಈ ಪೈಪೋಟಿ ವಿವಾದವಾಗಿ, ಚಳವಳಿ ಸ್ವರೂಪ ಪಡೆದು ರಾಷ್ಟ್ರೀಯ ಸಮಸ್ಯೆಯಾಗಿದೆ.
ಕಾವೇರಿ ನದಿಯ ನೀರಿನ ವಿಷಯದಲ್ಲಿಯೂ ಹೀಗೆ ಆಗಿದೆ. ಈ ವಿವಾದಕ್ಕೆ ಒಂದು ಶತಮಾನಕ್ಕಿಂತ ಹೆಚ್ಚಿನ ಇತಿಹಾಸವಿದೆ. ನದಿ ನೀರಿನ ಹಂಚಿಕೆ ಮೊದಲು ವಿವಾದ ಹುಟ್ಟು ಹಾಕಿ, ಅನಂತರ ರೈತರ ಹಾಗೂ ಫಲಾನುಭವಿಗಳ ಭಾಗವಹಿಸುವಿಕೆಯಲ್ಲಿ ಹೋರಾಟವಾಗಿ ಮಾರ್ಪಟ್ಟು ಚಳವಳಿಯ ಸ್ವರೂಪ ಪಡೆದಿದೆ.
ಕಾವೇರಿ ನದಿ ಹುಟ್ಟುವುದು ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ. ಅನಂತರ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪುದುಚೇರಿಗಳ ಭೂಭಾಗಗಳಲ್ಲಿ ಹರಿದು, ಬಂಗಾಳಕೊಲ್ಲಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ ೩೮೦ ಕಿಮೀ ಉದ್ದ ಹರಿಯುವ ಕಾವೇರಿ ನದಿ, ತಮಿಳುನಾಡಿನಲ್ಲಿ ಹರಿಯುವುದು ೩೭೫ ಕಿಮೀ ಉದ್ದ. ಈ ನದಿಯ ನೀರಿಗೆ ಕರ್ನಾಟಕದ ಕೊಡುಗೆ ೩೫೫ರಿಂದ ೪೨೫ ಟಿಎಂಸಿ ಹಾಗೂ ತಮಿಳುನಾಡಿನ ಕೊಡುಗೆ ೨೦೧ ಟಿಎಂಸಿ ಎಂದು ಅಂದಾಜಿಸಲಾಗಿದೆ.
ಕಾವೇರಿ ನದಿ ನೀರಿನ ವಿವಾದ ಚೋಳ - ಪಾಂಡ್ಯರ ಕಾಲದಲ್ಲಿಯೇ ಹುಟ್ಟಿಕೊಂಡಿತ್ತು. ಕ್ರಿ.ಶ. ೧೮೮೧ರಲ್ಲಿ ಮೈಸೂರು ಸಂಸ್ಥಾನದ ಆಡಳಿತ ಬ್ರಿಟಿಷರಿಂದ ರಾಜಮನೆತನದ ಒಡೆಯರ ಕೈಗೆ ಬಂದಿತ್ತು. ಅನಂತರ ಕಾವೇರಿ ನೀರಿನ ವಿವಾದ ರಾಜಕೀಯ ಸ್ವರೂಪ ಪಡೆಯಿತು. ಕಾವೇರಿ ನೀರಿನ ಹರಿವಿಗೆ ತಡೆಯೊಡ್ಡುವ ಯಾವುದೇ ಕಾಮಗಾರಿಯನ್ನು ಮೈಸೂರು ಸಂಸ್ಥಾನ ಕೈಗೊಳ್ಳಬಾರದು ಎಂಬುದು ಮದ್ರಾಸು ಪ್ರಾಂತ್ಯದ ತಕರಾರು. ಹಾಗಾಗಿ ೧೮೯೨ರಲ್ಲಿ ಬ್ರಿಟಿಷರು ಮಧ್ಯಸ್ಥಿಕೆ ವಹಿಸಿ, ಈ ಕಾಮಗಾರಿಗಳಿಗೆ ಮದ್ರಾಸಿನ ಪೂರ್ವಾನುಮತಿ ಅಗತ್ಯ ಎಂಬ ಒಪ್ಪಂದ ಮಾಡಿಸಿದ್ದರು. ಮದ್ರಾಸಿನಲ್ಲಿ ನೆಲೆಸಿದ್ದ ಬ್ರಿಟಿಷರು, ಮದ್ರಾಸು ಪ್ರಾಂತ್ಯದ ಪರವಾಗಿ ಹೀಗೆ ಒಪ್ಪಂದ ಮಾಡಿಸಿ, ಮೈಸೂರು ಪ್ರಾಂತ್ಯಕ್ಕೆ ಅನ್ಯಾಯ ಮಾಡಿದರು. ಇದು ಇಂದಿಗೂ ಮುಂದುವರಿದುಕೊಂಡು ಬಂದಿದೆ. ಈಗ, ಬ್ರಿಟಿಷರ ಬದಲಾಗಿ, ಕೇಂದ್ರ ಸರಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ.
ಆ "ಒಪ್ಪಂದ"ವನ್ನು ಎರಡೂ ಸಂಸ್ಥಾನಗಳು ಉಲ್ಲಂಘಿಸಿದವು. ಮೈಸೂರು ಸಂಸ್ಥಾನ ಕೃಷ್ಣರಾಜಸಾಗರ ಅಣೆಕಟ್ಟು ಆರಂಭಿಸಿತು. ಹಾಗೆಯೇ ಮದ್ರಾಸು ಸಂಸ್ಥಾನ ಮೆಟ್ಟೂರು ಅಣೆಕಟ್ಟು ನಿರ್ಮಾಣಕ್ಕೆ ತೊಡಗಿತು. ಇದರಿಂದಾಗಿ, ಎರಡು ಸಂಸ್ಥಾನಗಳ ನಡುವೆ ಕಾವೇರಿ ನೀರಿನ ವಿವಾದ ತೀವ್ರವಾಯಿತು. ಯಾಕೆಂದರೆ, ಇದೀಗ ಕೇವಲ ಭಾವುಕತೆಯ ವಿವಾದವಾಗಿ ಉಳಿದಿರಲಿಲ್ಲ. ಇದರ ಮೂಲದಲ್ಲಿ ಇರುವುದು ಆರ್ಥಿಕತೆಯ ವಿಚಾರ.
ಬ್ರಿಟಿಷ್ ಆಡಳಿತವು ಇವೆರಡೂ ಸಂಸ್ಥಾನಗಳ ಸರಕಾರಗಳನ್ನು ಸಂಧಾನಕ್ಕೆ ಕರೆಯಿತು. ಇದರ ಪರಿಣಾಮವಾಗಿ ೧೯೨೪ರಲ್ಲಿ ಮೈಸೂರು ಮತ್ತು ಮದ್ರಾಸು ಸಂಸ್ಥಾನಗಳ ನಡುವೆ ಒಪ್ಪಂದವಾಯಿತು. ಆಗ ಮೈಸೂರಿನ ಮುಖ್ಯ ಇಂಜಿನಿಯರ್ ಆಗಿದ್ದವರು ಡಾ. ಎಂ. ವಿಶ್ವೇಶ್ವರಯ್ಯ. ಅವರ ಮುಂದಾಳುತನದಲ್ಲಿ ೧೨೪ ಅಡಿ ಎತ್ತರದ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣವಾಯಿತು. ಅದರಲ್ಲಿ ಸಂಗ್ರಹವಾಗುವ ನೀರಿನ ಪರಿಮಾಣ ೪೦ ಟಿಎಂಸಿ. ಇದರ ಉದ್ದೇಶ ೧.೫ ಲಕ್ಷ ಎಕರೆ ಜಮೀನಿಗೆ ನೀರು ಒದಗಿಸುವುದು ಮತ್ತು ವಿದ್ಯುತ್ ಉತ್ಪಾದಿಸುವುದು.
೧೯೨೪ರ ಒಪ್ಪಂದದ ಅವಧಿ ಐವತ್ತು ವರುಷ. ಅದು, ೧೯೭೪ಕ್ಕೆ ಮುಗಿದಾಗ ಕರ್ನಾಟಕ ಸರಕಾರವು, ಇನ್ನು ತಾನು ಅದಕ್ಕೆ ಬದ್ಧವಾಗುವುದಿಲ್ಲ ಎಂದು ಘೋಷಿಸಿತು. ಯಾಕೆಂದರೆ, ನಮ್ಮ ದೇಶ ಸ್ವತಂತ್ರವಾದ ಬಳಿಕ, ೧೯೭೧ರ ಹೊತ್ತಿಗೆ ತಮಿಳುನಾಡಿನಲ್ಲಿ ಕಾವೇರಿ ನೀರು ೨೮ ಲಕ್ಷ ಎಕರೆಗಳಿಗೆ ನೀರಾವರಿ ಒದಗಿಸುತ್ತಿದ್ದರೆ, ಕರ್ನಾಟಕದಲ್ಲಿ ಕೇವಲ ೬.೮ ಲಕ್ಷ ಎಕರೆಗಳಿಗೆ ನೀರುಣಿಸುತ್ತಿದೆ. ಈ ತಾರತಮ್ಯವೇ ಕರ್ನಾಟಕದ ಘೋಷಣೆಗೆ ಕಾರಣ. ಇದರಿಂದಾಗಿ ಆತಂಕಪಟ್ಟ ತಮಿಳ್ನಾಡು ಸರಕಾರವು ಕೇಂದ್ರ ಸರಕಾರಕ್ಕೆ ಮೊರೆಯಿಟ್ಟಿತು.
ಅನಂತರ ಎರಡು ಸರಕಾರಗಳ ನಡುವೆ ಹಲವು ಸುತ್ತಿನ ಮಾತುಕತೆ ಜರಗಿದವು. ಆದರೆ ಯಾವುದೇ ಒಪ್ಪಂದ ಏರ್ಪಡಲಿಲ್ಲ. ಈ ನಡುವೆ, ೧೯೮೬ರಲ್ಲಿ ತಂಜಾವೂರಿನ ರೈತ ಸಂಘಟನೆ ಸುಪ್ರೀಂ ಕೋರ್ಟಿನ ಮೆಟ್ಟಲೇರಿತು. ಸುಪ್ರೀಂ ಕೋರ್ಟಿನ ಆದೇಶದ ಅನುಸಾರ ೧೯೯೦ರಲ್ಲಿ ಕೇಂದ್ರ ಸರಕಾರವು ಕಾವೇರಿ ನ್ಯಾಯಮಂಡಳಿ ರಚಿಸಿತು. ಇದು ಜೂನ್ ೨೫, ೧೯೯೧ರಂದು ಮಧ್ಯಂತರ ಆದೇಶ ನೀಡಿತು. ೧೯೮೦ರಿಂದ ೧೯೯೦ರ ವರೆಗೆ ಮೆಟ್ಟೂರು ಜಲಾಶಯಕ್ಕೆ ಹರಿದ ನೀರಿನ ಪ್ರಮಾಣದ ಆಧಾರದಿಂದ, ಕರ್ನಾಟಕವು ೨೦೫ ಟಿಎಂಸಿ ನೀರನ್ನು ತಮಿಳ್ನಾಡಿಗೆ ಹರಿಸಬೇಕೆಂಬುದೇ ಆದೇಶ.
ಕರ್ನಾಟಕವು ಪ್ರತಿ ತಿಂಗಳು ತಮಿಳ್ನಾಡಿಗೆ ಬಿಡಬೇಕಾದ ನೀರಿನ ಪ್ರಮಾಣವನ್ನೂ ಕಾವೇರಿ ನ್ಯಾಯಮಂಡಳಿ ನಿಗದಿಪಡಿಸಿತು. ಕರ್ನಾಟಕವು ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಾವರಿ ಜಮೀನನ್ನು ೧೧.೨ ಲಕ್ಷ ಎಕರೆಗಳಿಗಿಂತ ಹೆಚ್ಚಿಸಿಕೊಳ್ಳಬಾರದೆಂದು ನಿರ್ಬಂಧಿಸಿತು. ಕರ್ನಾಟಕದ "ಡಿಸ್ಟ್ರೆಸ್ ಪ್ಲೀ"ಯನ್ನೂ ಕಾವೇರಿ ನ್ಯಾಯಮಂಡಳಿ ತಿರಸ್ಕರಿಸಿತು.
ಇದು ಕರ್ನಾಟಕದ ರೈತರ ಹಿತಕ್ಕೆ ಧಕ್ಕೆ ತರುವ ಆದೇಶವಾಗಿತ್ತು. ಆದ್ದರಿಂದ ಕರ್ನಾಟಕದ ಸರಕಾರ ಇದನ್ನು ಖಂಡತುಂಡ ವಿರೋಧಿಸಿತು. ಈ ವಿರೋಧ ಲೆಕ್ಕಿಸದೆ, ಪ್ರಧಾನಮಂತ್ರಿ ಪಿ. ವಿ. ನರಸಿಂಹರಾಯರ ಕೇಂದ್ರ ಸರಕಾರವು ಆದೇಶವನ್ನು ಗೆಜೆಟಿನಲ್ಲಿ ಪ್ರಕಟಿಸಿತು. ಆಗ ಕಾವೇರಿ ಕಣಿವೆಯ ಜನಸಮುದಾಯದ ಆಕ್ರೋಶ ಸ್ಫೋಟವಾಯಿತು. ಅಲ್ಲೆಲ್ಲ ಹಿಂಸಾಚಾರ ಭುಗಿಲೆದ್ದಿತು. ದಕ್ಷಿಣ ಕರ್ನಾಟಕ ಪ್ರತಿಭಟನೆಯ ಬೆಂಕಿಯಲ್ಲಿ ಉರಿಯಿತು. ಕರ್ನಾಟಕದ ತಮಿಳರು ಗುಳೆ ಹೋಗಬೇಕಾಯಿತು. ಕರ್ನಾಟಕ ಮತ್ತು ತಮಿಳುನಾಡು ನಡುವೆ ಸಂಚಾರ ಸ್ತಬ್ಧವಾಯಿತು. ಅವು ಕರ್ನಾಟಕದ ಚರಿತ್ರೆಯಲ್ಲಿಯೇ ಕರಾಳ ದಿನಗಳು.
ಕರ್ನಾಟಕದ ವಿಧಾನಸಭೆಯು ಸರ್ವಪಕ್ಷಗಳ ಒಮ್ಮತದಿಂದ ಮಧ್ಯಂತರ ಆದೇಶವನ್ನು ತಿರಸ್ಕರಿಸುವ ನಿರ್ಣಯ ಕೈಗೊಂಡಿತು. ಕರ್ನಾಟಕದಲ್ಲಿ ಆಗ ಇದ್ದದ್ದು ಮುಖ್ಯಮಂತ್ರಿ ಬಂಗಾರಪ್ಪ ಅವರ ಕಾಂಗ್ರೆಸ್ ಸರಕಾರ. ಕೇಂದ್ರದಲ್ಲಿ ಇದ್ದದ್ದೂ ಕಾಂಗ್ರೆಸ್ ಸರಕಾರ. ಆದರೂ ಕರ್ನಾಟಕ ಸರಕಾರ ಕನ್ನಡಿಗರ ಹಿತವನ್ನು ಬಲಿಗೊಡಲಿಲ್ಲ. "ಕಾವೇರಿ ಜಲಾನಯನ ಪ್ರದೇಶದ ನೀರಾವರಿ ಸಂರಕ್ಷಣಾ ಸುಗ್ರೀವಾಜ್ನೆ"ಯನ್ನು ಜುಲಾಯಿ ೨೫, ೧೯೯೧ರಂದು ಹೊರಡಿಸಿತು. ಆ ಮೂಲಕ ಕನ್ನಡನಾಡಿನ ಹಿತಾಸಕ್ತಿಗೆ ತನ್ನ ಬದ್ಧತೆಯನ್ನು ಪ್ರಕಟಿಸಿತು. ಅನಂತರ, ಆ ಸುಗ್ರೀವಾಜ್ನೆ ಅಸಿಂಧು ಎಂದು ರಾಷ್ಟ್ರಪತಿಗಳಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿತೆಂಬುದು ಬೇರೆ ಮಾತು.
ಈ ಮಧ್ಯಂತರ ಆದೇಶ ಮತ್ತು ತರುವಾಯದ ಆದೇಶಗಳನ್ನು ಕಾರ್ಯರೂಪಕ್ಕಿಳಿಸಲು ಕೇಂದ್ರ ಸರಕಾರವು ಆಗಸ್ಟ್ ೧೯೯೮ರಲ್ಲಿ ಕಾವೇರಿ ನದಿ ಪ್ರಾಧಿಕಾರ ಸ್ಥಾಪಿಸಿದೆ. ಅದಾಗಿ ಫೆಬ್ರವರಿ ೫, ೨೦೦೭ರಂದು ಕಾವೇರಿ ನ್ಯಾಯ ಮಂಡಳಿಯು ಅಂತಿಮ ಆದೇಶ ನೀಡಿತು. ಅದರ ಪ್ರಕಾರ ಕರ್ನಾಟಕವು ಪ್ರತೀ ವರುಷ ತಮಿಳ್ನಾಡಿಗೆ ೧೯೨ ಟಿಎಂಸಿ ನೀರು ಬಿಡಬೇಕು.
ಕಾವೇರಿ ನ್ಯಾಯಮಂಡಳಿಯ ಆದೇಶವನ್ನು ಪ್ರಶ್ನಿಸಿ, ಎಪ್ರಿಲ್ ೨೩, ೨೦೦೭ರಂದು ಕರ್ನಾಟಕವು ಸುಪ್ರೀಂ ಕೋರ್ಟಿನಲ್ಲಿ ಸ್ಪೆಷಲ್ ಲೀವ್ ಪಿಟಿಷನ್ ಸಲ್ಲಿಸಿದೆ. ಕೇರಳ ಮತ್ತು ತಮಿಳ್ನಾಡು ಸರಕಾರಗಳೂ ಎಸ್ಎಲ್ಪಿ ಸಲ್ಲಿಸಿವೆ. ಇದರ ಪ್ರಧಾನ ವಿಷಯಗಳನ್ನು ಸುಪ್ರೀಂ ಕೋರ್ಟ್ ಇನ್ನಷ್ಟೇ ಪರಿಗಣಿಸ ಬೇಕಾಗಿದೆ.
ಕರ್ನಾಟಕವು ಕಾವೇರಿ ನ್ಯಾಯಮಂಡಳಿಯಲ್ಲಿ ೪೬೫ ಟಿಎಂಸಿ ಕಾವೇರಿ ನೀರು ತನ್ನ ಹಕ್ಕು ಎಂದು ಪ್ರತಿಪಾದಿಸಿತ್ತು. ಆದರೆ, ನ್ಯಾಯಮಂಡಳಿ ಮಂಜೂರು ಮಾಡಿದ್ದು ಕೇವಲ ೨೭೦ ಟಿಎಂಸಿ. ಇದನ್ನೂ, ಕರ್ನಾಟಕದ ರೈತರ ಹಿತಾಸಕ್ತಿಗೆ ಧಕ್ಕೆ ಮಾಡುವ ನ್ಯಾಯಮಂಡಳಿಯ ಇನ್ನಿತರ ತೀರ್ಮಾನಗಳನ್ನೂ ಕರ್ನಾಟಕವು ಎಸ್ಎಲ್ಪಿಯಲ್ಲಿ ಪಶ್ನಿಸಿದೆ.
ಅದಾದ ನಂತರವೂ ಕಾವೇರಿ ನದಿ ನೀರಿನ ಮೇಲಿನ ಕರ್ನಾಟಕದ ನ್ಯಾಯಬದ್ಧ ಹಕ್ಕಿಗೆ ತಮಿಳುನಾಡು ನಿರಂತರವಾಗಿ ತಡೆಯೊಡ್ಡುತ್ತಿದೆ. ಇದಕ್ಕಾಗಿ ಸುಪ್ರೀಂ ಕೋರ್ಟಿಗೆ ಪದೇಪದೇ ಮನವಿ ಸಲ್ಲಿಸುತ್ತಿದೆ. ಶಿವನಸಮುದ್ರ ಮತ್ತು ಮೇಕೆದಾಟು ಜಲವಿದ್ಯುತ್ ಯೋಜನೆಗಳನ್ನು ತಡೆಯಬೇಕೆಂದು ೨೦೦೮ರಲ್ಲಿ ಮನವಿ ಸಲ್ಲಿಸಿದೆ. ಹೊಸ ಚೆಕ್ ಡ್ಯಾಂ ನಿರ್ಮಿಸದಂತೆ, ಹೂಳೆತ್ತುವಿಕೆ ಸಹಿತ ಯಾವುದೇ ನೀರಾವರಿ ಕಾಮಗಾರಿ ನಡೆಸದಂತೆ ಕರ್ನಾಟಕವನ್ನು ತಡೆಯಬೇಕೆಂದು ಆಗಸ್ಟ್ ೬, ೨೦೧೦ರಂದು ತಮಿಳ್ನಾಡು ಕೋರಿದೆ. ಕರ್ನಾಟಕದ ಮೇಲೆ ಕಾವೇರಿ ನದಿ ನೀರಿನ ಬಳಕೆ ಬಗ್ಗೆ ಇನ್ನಷ್ಟು ನಿರ್ಬಂಧಗಳನ್ನು ಹೇರುವಂತೆ ಮಾರ್ಚ್ ೨೧, ೨೦೧೨ರಂದು ಮನವಿ ಮಾಡಿದೆ.
ತಮಿಳ್ನಾಡು ಶತಮಾನದಿಂದ ತಕರಾರು ಎತ್ತುತ್ತಿದ್ದರೂ, ತಮಿಳ್ನಾಡಿಗೆ ಕಾವೇರಿ ನೀರು ಬಿಡುವ ವಿಷಯದಲ್ಲಿ ಕರ್ನಾಟಕದ ನಡವಳಿಕೆ ನ್ಯಾಯಸಮ್ಮತವಾಗಿದೆ. ೨೦೦೭ರಿಂದೇಚೆಗೆ ಎರಡೂ ರಾಜ್ಯಗಳ ರೈತರು ನೀರಾವರಿ ಲಭ್ಯತೆಯಲ್ಲಿ ಯಾವುದೇ ತೊಂದರೆ ಅನುಭವಿಸಿಲ್ಲ ಎಂಬುದು ಕರ್ನಾಟಕದ ನ್ಯಾಯಬದ್ಧ ನಿಲುವಿಗೆ ನಿದರ್ಶನ.
ಈ ವರುಷ, ೨೦೧೨ರಲ್ಲಿ ಮಳೆಯ ಕೊರತೆಯಿಂದಾಗಿ ಕಾವೇರಿ ಕಣಿವೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಕರ್ನಾಟಕದ ಜಲಾಶಯಗಳಿಗೆ ಹರಿದು ಬಂದ ನೀರಿನ ಪ್ರಮಾಣ ಶೇಕಡಾ ೫೦ಕ್ಕಿಂತಲೂ ಕಡಿಮೆ. ಇದರ ಪರಿಣಾಮವಾಗಿ, ತಮಿಳುನಾಡಿಗೆ ಅದರ ಪಾಲಿನ ಕಾವೇರಿ ನದಿ ನೀರನ್ನು ಬಿಡುವ ಭರವಸೆ ನೀಡಲು ಕರ್ನಾಟಕಕ್ಕೆ ಸಾಧ್ಯವಿಲ್ಲವಾಗಿದೆ.
ಈ ಸನ್ನಿವೇಶದಲ್ಲಿ ಇನ್ನೊಂದಷ್ಟು ಸತ್ಯಾಂಶಗಳನ್ನು ಗಮನಿಸೋಣ. ತಮಿಳ್ನಾಡಿನಲ್ಲಿ ಗಣನೀಯ ಪ್ರಮಾಣದ ಅಂತರ್ಜಲ ಮೂಲಗಳಿದ್ದು ಅವು ಕೃಷಿಗಾಗಿ ೩೦ ಟಿಎಂಸಿಯಷ್ಟು ನೀರು ಒದಗಿಸಬಲ್ಲವು. ಅದಲ್ಲದೆ, ಈಶಾನ್ಯ ಮಳೆಮಾರುತದಿಂದ ತಮಿಳ್ನಾಡಿಗೆ ಉತ್ತಮವಾಗಿ ಮಳೆಯಾಗುತ್ತದೆ; ಆದರೆ ಕರ್ನಾಟಕಕ್ಕೆ ಇದು ಲಭ್ಯವಿಲ್ಲ. ಕರ್ನಾಟಕದ ಜಲಾಶಯಗಳಲ್ಲಿ ಸಪ್ಟಂಬರ್ ೨೦೧೨ರಲ್ಲಿದ್ದ ನೀರಿನ ಪರಿಮಾಣ ಕೇವಲ ೬೯ ಟಿಎಂಸಿ. ಇದು ಮುಂದಿನ (೨೦೧೩ರ) ಬೇಸಗೆಯ ವರೆಗೆ ಕುಡಿಯುವ ನೀರು ಮತ್ತು ಕೃಷಿಕರ ಬೆಳೆಗಳಿಗೆ ನೀರಾವರಿ ಒದಗಿಸಲಿಕ್ಕೂ ಸಾಲದು.
ಇದ್ಯಾವುದನ್ನೂ ಪರಿಗಣಿಸದೆ, ತಮಿಳ್ನಾಡು ಸರಕಾರದ ಒತ್ತಡ ತಂತ್ರಕ್ಕೆ ಮಣಿದು, "ಕರ್ನಾಟಕದ ಕಾವೇರಿ ನದಿ ಜಲಾಶಯಗಳಿಂದ ತಮಿಳ್ನಾಡಿಗೆ ನೀರು ಬಿಡಬೇಕೆಂದು" ಪ್ರಧಾನಮಂತ್ರಿ ಮನಮೋಹನಸಿಂಗ್ ಸಪ್ಟಂಬರ್ ೨೦೧೨ರಲ್ಲಿ ಆದೇಶಿಸಿದರು. ಪುನಃ ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಇದರ ವಿರುದ್ಧ ಹೋರಾಟದ ಹುಯಿಲೆದ್ದಿತು. ರೈತಸಂಘಟನೆಗಳ ಮುಖಂಡರೂ, ರಾಜಕೀಯ ಮುಂದಾಳುಗಳೂ, ರೈತರೂ ಸೇರಿದಂತೆ ಜನರೆಲ್ಲ ಒಂದಾಗಿ ಪ್ರತಿಭಟನೆಗೆ ಎದ್ದು ನಿಂತರು. "ಕರ್ನಾಟಕ ಸರಕಾರ ರಾತ್ರೋರಾತ್ರಿ ನೀರು ಬಿಡುತ್ತದೆ. ಅದಕ್ಕಾಗಿ ನಮ್ಮ ಜಲಾಶಯದ ನೀರನ್ನು ನಾವೇ ಕಾಯುತ್ತೇವೆ" ಎಂದು ಜನಸಮುದಾಯ ಕೃಷ್ಣರಾಜಸಾಗರ ಅಣೆಕಟ್ಟಿನ ಪ್ರವೇಶದ್ವಾರದಲ್ಲಿ ರಾತ್ರಿಯ ಹೊತ್ತಿನಲ್ಲಿ ಜಮಾಯಿಸಿತು. ಮಾದೇಗೌಡರಂತಹ ಮುಂದಾಳುಗಳು ಉಪವಾಸ ಸತ್ಯಾಗ್ರಹ ಆರಂಭಿಸಿದರು. ನೂರಾರು ರೈತರು ನದಿಯ ಪಾತ್ರಕ್ಕೆ ಧುಮುಕಿ, "ಅಣೆಕಟ್ಟಿನಿಂದ ನೀರು ಬಿಟ್ಟರೆ ಬಲಿದಾನ ಮಾಡುವುದಾಗಿ" ಸಡ್ಡು ಹೊಡೆದರು. ಆ ಪ್ರತಿಭಟನಾಕಾರರ ಆಕ್ರೋಶದ ಫೋಟೋಗಳು ಈಗಲೂ ಕಣ್ಣಿಗೆ ಕಟ್ಟಿದಂತಿವೆ. "ತಡರಾತ್ರಿ ಕೆಆರ್ಎಸ್, ಕಬಿನಿಯಿಂದ ತಮಿಳುನಾಡಿಗೆ ನೀರು, ಕಾವೇರಿ ಕಣ್ಣೀರು", ಮತ್ತು "ಕಟ್ಟೆ ಒಡೆದ ಕಾವೇರಿ ರೈತರ ಸಿಟ್ಟು" ಎಂಬ ಅಕ್ಟೋಬರ್ ೨೦೧೨ರ ಮೊದಲ ವಾರದ ವಾರ್ತಾಪತ್ರಿಕೆಗಳ ಮುಖಪುಟದ ಸುದ್ದಿಗಳು ಸಮಸ್ತ ಕನ್ನಡಿಗರನ್ನು ಬಡಿದೆಬ್ಬಿಸುವಂತಿವೆ.
"ಸ್ಯಾಂಡಿ" ಚಂಡಮಾರುತದ ಪರಿಣಾಮದಿಂದಾಗಿ ನವಂಬರ್ ೨೦೧೨ರ ಮೊದಲವಾರಗಳಲ್ಲಿ ತಮಿಳ್ನಾಡಿನಲ್ಲಿ ಧಾರಾಕಾರ ಮಳೆಯಾಗಿದೆ. ಆದರೂ "ಕಾವೇರಿ ಉಸ್ತುವಾರಿ ಸಮಿತಿ"ಯು ನವಂಬರ್ ೧೫, ೨೦೧೨ರ ಮುನ್ನ ತಮಿಳ್ನಾಡಿಗೆ ೫.೯೩ ಟಿಎಂಸಿ ನೀರು ಬಿಡಬೇಕೆಂದು ಕರ್ನಾಟಕಕ್ಕೆ ಸೂಚಿಸಿದೆ!
ಕರ್ನಾಟಕದ ನದಿನೀರಿನ ಸಮಸ್ಯೆ ಸಂಕೀರ್ಣವಾದದ್ದು. ಕಾವೇರಿ ಮತ್ತು ಕೃಷ್ಣಾ ನದಿಗಳು ನಮ್ಮ ಕರ್ನಾಟಕದಲ್ಲಿ ಹುಟ್ಟಿ ಪಕ್ಕ ರಾಜ್ಯಗಳಿಗೆ ಹರಿಯುತ್ತಿರುವ ಕಾರಣ, ಅವುಗಳ ನೀರಿನ ಹಂಚಿಕೆಯ ವಿವಾದ ಮತ್ತೆಮತ್ತೆ ತಲೆಯೆತ್ತುತ್ತಲೇ ಇರುತ್ತದೆ. ರಾಜಕಾರಣಿಗಳಿಗಂತೂ ಇಂತಹ ವಿವಾದಗಳು ಯಾವಾಗಲೂ ಇರಬೇಕು. ತಮ್ಮ ರಾಜ್ಯದ ಜನರಿಗಾಗಿ ತಾವು "ಹೋರಾಡುತ್ತಿದ್ದೇವೆ" ಎಂದು ತೋರಿಸಿಕೊಳ್ಳಲಿಕ್ಕಾಗಿ ಇಂತಹ ವಿವಾದಗಳನ್ನು ಅವರು ಜೀವಂತವಾಗಿ ಇಡಲು ಬಯಸುತ್ತಾರೆ. ಜನರ ಭಾವನೆಗಳನ್ನು ಕೆರಳಿಸುವ ಇಂತಹ ಸಮಸ್ಯೆಗಳು ಎಲ್ಲ ರಾಜಕೀಯ ಪಕ್ಷಗಳಿಗೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಬೇಕು. ಅದೇ ರೀತಿಯಲ್ಲಿ, ಕೇಂದ್ರ ಸರಕಾರಕ್ಕೆ ತಮಿಳುನಾಡಿನ ಹಾಗೂ ಆಂಧ್ರಪ್ರದೇಶದ ರಾಜಕೀಯ ಪಕ್ಷಗಳ ಬೆಂಬಲ ಅಗತ್ಯ. ಅದಕ್ಕಾಗಿ, ಕರ್ನಾಟಕಕ್ಕೆ ನದಿ ನೀರಿನ ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲು ಕೇಂದ್ರ ಸರಕಾರವು ಮುಂದಾಗುವುದಿಲ್ಲ. ಯಾಕೆಂದರೆ, ಅದನ್ನು ಸರಿಪಡಿಸಿದರೆ ಆ ಎರಡು ರಾಜ್ಯ ಸರಕಾರಗಳ ಬೆಂಬಲವನ್ನು ಕೇಂದ್ರ ಸರಕಾರದಲ್ಲಿ ಅಧಿಕಾರ ಹಿಡಿದಿರುವ ರಾಜಕೀಯ ಪಕ್ಷವು ಕಳೆದುಕೊಳ್ಳುತ್ತದೆ. ಹಾಗಾಗಿ, ಬ್ರಿಟಿಷರು ಮಾಡಿದಂತೆ, ಕೇಂದ್ರ ಸರಕಾರವೂ ನದಿನೀರಿನ ಹಂಚಿಕೆಯಲ್ಲಿ ಕರ್ನಾಟಕದ ನ್ಯಾಯಸಮ್ಮತ ಹಕ್ಕನ್ನು ಮಾನ್ಯ ಮಾಡುವುದಿಲ್ಲ.
ಸರಕಾರಗಳ ಇಂತಹ ಆಟಗಳನ್ನು ಮಾನ್ಯ ಡಿ. ವಿ. ಗುಂಡಪ್ಪನವರು ತಮ್ಮ ಒಂದು ಮುಕ್ತಕದಲ್ಲಿ ಮನಮುಟ್ಟುವಂತೆ ಬಿಂಬಿಸಿದ್ದಾರೆ:
ಸರಕಾರ ಹರಿಗೋಲು, ತೆರೆಸುಳಿಗಳತ್ತಿತ್ತ
ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು
ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು
ಉರುಳದಿಹುದಚ್ಚರಿಯೊ! - ಮಂಕುತಿಮ್ಮ
ಕನ್ನಡನಾಡಿನ ಏಕೀಕರಣ ಹೋರಾಟ
ನಮ್ಮ ಕನ್ನಡನಾಡು ಉದಯವಾದದ್ದು ನವಂಬರ್ ೧, ೧೯೫೬ರಂದು. ಅ ದಿನವನ್ನು ರಾಜ್ಯೋತ್ಸವ ದಿನವೆಂದು ಕನ್ನಡಿಗರಲ್ಲ ಉತ್ಸಾಹದಿಂದ ಆಚರಿಸುತ್ತಿದ್ದೇವೆ.
ಕನ್ನಡನಾಡು ಉದಯವಾಗಲು ಕಾರಣವಾದ ಘಟನೆಗಳೇನು? ಜನಪರ ಹೋರಾಟಗಳೇನು? ಎಂಬುದನ್ನೆಲ್ಲ ಡಾ. ಎಚ್. ಎಸ್. ಗೋಪಾಲ ರಾವ್ "ಕರ್ನಾಟಕ ಏಕೀಕರಣ ಇತಿಹಾಸ" ಎಂಬ ೧೯೯೮ರಲ್ಲಿ ಪ್ರಕಟವಾದ ಪುಸ್ತಕದಲ್ಲಿ ವಿವರವಾಗಿ ದಾಖಲಿಸಿದ್ದಾರೆ.
ಕನ್ನಡನಾಡಿನ ಕನಸು ಕಂಡವರು ಹಲವರು. ಇದಕ್ಕಾಗಿ ಶ್ರಮಿಸಿದವರು ದೂರದರ್ಶಿ ಚಿಂತನೆಗಳಿದ್ದ ನೂರಾರು ಚಿಂತಕರು, ಸಾಹಿತಿಗಳು, ಕಲಾವಿದರು. ಹುಯಿಲಗೋಳ ನಾರಾಯಣರಾಯರು "ಉದಯವಾಗಲಿ ಚೆಲುವ ಕನ್ನಡನಾಡು" ಹಾಡಿನ ಮೂಲಕ ಜನಮಾನಸದಲ್ಲಿ ಕನ್ನಡನಾಡಿನ ಕನಸಿನ ಕಿಚ್ಚು ಹಚ್ಚಿದರು. ಹಲವು ಸಂಘಸಂಸ್ಥೆಗಳು ಕನ್ನಡಿಗರಿಗೆ ಪ್ರತ್ಯೇಕ ಕನ್ನಡನಾಡು ಬೇಕೆಂಬ ಚಳವಳವನ್ನು ಮುನ್ನಡೆಸಿದವು.
ಒಂದಾನೊಂದು ಕಾಲದಲ್ಲಿ ಅಂದರೆ ಕ್ರಿ.ಶ. ೯ನೇ ಶತಮಾನದಲ್ಲಿ ಕನ್ನಡನಾಡಿನ ಗಡಿ ಯಾವುದಾಗಿತ್ತು? ಈ ವಿಷಯ ನಮಗೆ "ಕವಿರಾಜಮಾರ್ಗ" ಕೃತಿಯ ಮೂಲಕ ತಿಳಿದು ಬರುತ್ತದೆ. ಅದರ ಪ್ರಕಾರ "ಕಾವೇರಿಯಿಂದಮಾ ಗೋದಾವರಿಮಿರ್ದ ನಾಡು" ಕನ್ನಡನಾಡು. ಅಂದರೆ ಕರ್ನಾಟಕದ ದಕ್ಷಿಣದ ಗಡಿ ಕಾವೇರಿ ನದಿ ಹಾಗೂ ಉತ್ತರದ ಗಡಿ ಗೋದಾವರಿ ನದಿ.
ಇಂತಹ ವಿಶಾಲ ಪ್ರದೇಶದಲ್ಲಿ ನೆಲೆಸಿದ್ದರು ಕನ್ನಡ ಮಾತನಾಡುವ ಜನ. ಈ ಪ್ರದೇಶವು ಹಲವಾರು ಕಾರಣಗಳಿಂದಾಗಿ ಸಣ್ಣಸಣ್ಣ ಭೌಗೋಳಿಕ ಭಾಗಗಳಾಗಿ ಒಡೆಯುತ್ತಾ, ವಿವಿಧ ಆಡಳಿತಗಾರರ ವಶವಾಯಿತು. ೧೯ನೇ ಶತಮಾನದ ಅಂತ್ಯದಲ್ಲಿ ಈ ಕನ್ನಡನಾಡು ವಿವಿಧ ಆಡಳಿತಕ್ಕೊಳಪಟ್ಟ ೨೦ ಭೂಘಟಕಗಳಾಗಿ ಹಂಚಿಹೋಗಿತ್ತು.
ಇವನ್ನೆಲ್ಲ ಒಂದುಗೂಡಿಸುವ ಕೆಲಸವೇ ಕರ್ನಾಟಕ ಏಕೀಕರಣ. ಈ ಒಂದುಗೂಡಿಸುವ ಕಾಯಕಕ್ಕಾಗಿ ನಡೆದ ಒತ್ತಾಯ, ಪ್ರತಿಭಟನೆ, ಸತ್ಯಾಗ್ರಹ, ಆಂದೋಲನಗಳನ್ನು ಕನ್ನಡ ನೆಲದ ಏಕೀಕರಣ ಹೋರಾಟ ಎನ್ನಬಹುದು.
ಕನ್ನಡನಾಡಿನ ಏಕೀಕರಣದ ಬಗ್ಗೆ ಮೊದಲಾಗಿ ಯೋಚನೆ ಮಾಡಿದ್ದು, ಬಳ್ಳಾರಿ ಜಿಲ್ಲೆಯ ಕಲೆಕ್ಟರ್ ಆಗಿದ್ದ ಸರ್ ಥಾಮಸ್ ಮನ್ರೋ. ದಕ್ಷ ಆಡಳಿತಗಾರನೆಂದು ಹೆಸರಾಗಿದ್ದ ಆತ, ಕನ್ನಡ ಮಾತನಾಡುವ ಜನರಿದ್ದ ಪ್ರದೇಶವನ್ನೆಲ್ಲ ಒಂದುಗೂಡಿಸಬೇಕೆಂದು ೧೮೨೬ರಲ್ಲೇ ಪ್ರಸ್ತಾಪಿಸಿದ. ಆದರೆ ಬ್ರಿಟಿಷ್ ಕಂಪೆನಿ ಸರಕಾರವು ಆತನ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿತು.
ಅನಂತರ ಕರ್ನಾಟಕದ ಏಕೀಕರಣಕ್ಕೆ ಪ್ರೇರಣೆ ದೊರೆತದ್ದು ಬಂಗಾಳ ವಿಭಜನೆ ಹಾಗೂ ಒಂದಾಗುವಿಕೆಯಿಂದ. ಬ್ರಿಟಿಷ್ ಕಂಪೆನಿ ಸರಕಾರವು ತನ್ನ ಆಡಳಿತಾತ್ಮಕ ಅನುಕೂಲಕ್ಕಾಗಿ ಸಂಸ್ಥಾನಗಳನ್ನು ವಿಭಜನೆ ಮಾಡುತ್ತಲೇ ಇತ್ತು. ಇದರಿಂದಾಗಿ ಒಂದೇ ಭಾಷೆಯನ್ನಾಡುತ್ತಾ, ಒಂದೇ ಸಂಸ್ಕೃತಿ ಅನುಸರಿಸುತ್ತಿದ್ದ ಜನರು ವಿವಿಧ ಭೌಗೋಳಿಕ ಘಟಕಗಳಲ್ಲಿ ಹಂಚಿ ಹೋಗುತ್ತಿದ್ದರು. ಆಗಸ್ಟ್ ೧೬, ೧೯೦೫ರಂದು ಬ್ರಿಟಿಷ್ ಸರಕಾರ ಬಂಗಾಳವನ್ನು ಪೂರ್ವ - ಪಶ್ಚಿಮವೆಂದು ಹೋಳು ಮಾಡಿತು. ಅಲ್ಲಿನ ಜನ ಇದರ ವಿರುದ್ಧ ಸಿಡಿದೆದ್ದರು. ಜಿದ್ದಿಗೆ ಬಿದ್ದು ಚಳವಳಿ ನಡೆಸಿದರು. ಇದರ ಪರಿಣಾಮವಾಗಿ, ೧೯೧೨ರಲ್ಲಿ ಬ್ರಿಟಿಷ್ ಸರಕಾರ ಬಂಗಾಳ ವಿಭಜನೆಯನ್ನು ರದ್ದು ಮಾಡಿತು.
ಆಗ, ಕನ್ನಡ ಮಾತನಾಡುವ ಜನರಿಗೆ ತಾವು ಒಂದಾಗಲು ಸಾಧ್ಯ ಎಂದು ಮನದಟ್ಟಾಯಿತು. ಈ ಯೋಚನೆಗೆ ಚಾಲನೆ ನೀಡಲಿಕ್ಕಾಗಿ ಸ್ಥಾಪನೆಯಾಯಿತು - ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ.
ಕನ್ನಡ ಪುಸ್ತಕಗಳ ಭಾಷೆ ಏಕರೂಪವಾಗಿರಬೇಕು ಎಂಬ ಉದ್ದೇಶ ಸಾಧನೆಗಾಗಿ, ಕರ್ನಾಟಕ ವಿದ್ಯಾವರ್ಧಕ ಸಂಘವು ಮೊದಲ ಬಾರಿ ೧೯೦೭ರಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ಧಾರವಾಡದಲ್ಲಿ ಸಂಘಟಿಸಿತು. ಎರಡನೇ ಸಮ್ಮೇಳನವೂ ಅಲ್ಲೇ ನಡೆಯಿತು. ಮೂರನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆಸಲಿಕ್ಕಾಗಿ ಸ್ಥಾಪನೆಯಾದದ್ದೇ ಕನ್ನಡ ಸಾಹಿತ್ಯ ಪರಿಷತ್ತು.
ಈ ಎರಡು ಸಂಸ್ಥೆಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಾ ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕನ್ನಡಿಗರನ್ನು ಒಂದುಗೂಡಿಸುವ ಬೃಹತ್ ಕಾರ್ಯಕ್ಕೆ ಚಾಲನೆ ನೀಡಿದವು. ಇವು ಸಾಹಿತ್ಯ ಸಮ್ಮೇಳನಗಳಲ್ಲಿಯೂ ಕರ್ನಾಟಕ ಏಕೀಕರಣದ ಬಗ್ಗೆ ಆಗ್ರಹಪೂರ್ವಕವಾಗಿ ಚರ್ಚೆ ನಡೆಸಿದವು.
ಕರ್ನಾಟಕ ಏಕೀಕರಣದಲ್ಲಿ ಆಲೂರು ವೆಂಕಟರಾಯರ ಪಾತ್ರವನ್ನು ಮರೆಯುವಂತಿಲ್ಲ. ಏಕೀಕರಣದ ಕನಸನ್ನು ನನಸುಗೊಳಿಸಲು ಅಲೂರರು ದೀಕ್ಷೆ ತೊಟ್ಟಿದ್ದರು. ಕರ್ನಾಟಕದ ಇತಿಹಾಸವನ್ನು ಅಧ್ಯಯನ ಮಾಡಿ ಅವರು ಬರೆದ "ಕರ್ನಾಟಕ ಗತವೈಭವ" ಎಂಬ ಪುಸ್ತಕ ಆ ಕಾಲಘಟ್ಟದಲ್ಲಿ ಕನ್ನಡಿಗರನ್ನು ಬಡಿದೆಬ್ಬಿಸಿತು. ಆಲೂರರಿಗೆ ಬಾಲಗಂಗಾಧರ ತಿಲಕರ ಸಂಪರ್ಕವಿತ್ತು. "ಮರಾಠಿ, ತೆಲುಗು ಮತ್ತು ಕನ್ನಡಗಳಿಗೆ ಪ್ರತ್ಯೇಕ ಪ್ರಾಂತ್ಯಗಳನ್ನು ರಚಿಸಿ" ಎಂದು ತಿಲಕರು ಬ್ರಿಟಿಷರನ್ನು ಒತ್ತಾಯಿಸುತ್ತಿದ್ದರು. "ಈ ಇಂಗ್ಲಿಷರು ತಮ್ಮ ಜನರಿಗೆ ಫ್ರೆಂಚ್ ಭಾಷೆಯಲ್ಲಿ ಶಿಕ್ಷಣ ನೀಡುತ್ತಾರೆಯೇ?" ಎಂಬ ತಿಲಕರ ಪ್ರಶ್ನೆ ಕನ್ನಡದ ಬಗ್ಗೆ ಆಲೂರರ ಅಭಿಪ್ರಾಯ ರೂಪಿಸಿತ್ತು.
ಕರ್ನಾಟಕದ ಏಕೀಕರಣಕ್ಕಾಗಿ ತಮ್ಮ ಆಪ್ತರೊಂದಿಗೆ ಆಲೂರರು ೧೯೧೬ರಲ್ಲಿ ಸ್ಥಾಪಿಸಿದ ಸಂಸ್ಥೆಯೇ "ಕರ್ನಾಟಕ ಸಭಾ". ತಿಲಕರು ಮಹಾರಾಷ್ಟ್ರದಲ್ಲಿ ಗಣೇಶ ಉತ್ಸವ ಮತ್ತು ಶಿವಾಜಿ ಮಹೋತ್ಸವ ಜರಗಿಸಿ ಜನಜಾಗೃತಿ ಮೂಡಿಸುತ್ತಿದ್ದರು. ಅದೇ ರೀತಿಯಲ್ಲಿ ಆಲೂರರು ಕರ್ನಾಟಕದಲ್ಲಿ ಉತ್ಸವಗಳನ್ನು ನಡೆಸ ತೊಡಗಿದರು - ವಿದ್ಯಾರಣ್ಯ ಉತ್ಸವ, ವಿಜಯನಗರ ಉತ್ಸವ, ನಾಡಹಬ್ಬ ಇತ್ಯಾದಿ.
೧೯೧೮ರಲ್ಲಿ ಪ್ರಕಟವಾದ ಮಾಂಟ್ - ಫೋರ್ಡ್ ವರದಿಯು ಕರ್ನಾಟಕ ಏಕೀಕರಣಕ್ಕೆ ಹೊಸ ಚಾಲನೆ ನೀಡಿತು. ಯಾಕೆಂದರೆ, ಭಾರತವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಭಾಗಿಸುವುದು ಸೂಕ್ತವೆಂದು ಅದು ಪ್ರತಿಪಾದಿಸಿತ್ತು. ಅನಂತರ ೧೯೨೪ರಲ್ಲಿ ಜರಗಿದ ಬೆಳಗಾವಿ ಕಾಂಗ್ರೆಸ್ ಮಾಹಾಧಿವೇಶನವು ಕರ್ನಾಟಕ ಏಕೀಕರಣದ ಆಂದೋಲನಕ್ಕೆ ಬಲ ನೀಡಿತು. ಮಹಾತ್ಮಾ ಗಾಂಧಿ ಅಧ್ಯಕ್ಷರಾಗಿದ್ದ ಆ ಮಹಾಧಿವೇಶನದಲ್ಲಿ ಎಲ್ಲ ಕನ್ನಡ ಭಾಷಿಕ ಪ್ರದೇಶಗಳ ಪ್ರಾತಿನಿಧ್ಯವಿತ್ತು. ಆಗಲೇ, ಪ್ರಥಮ ಕರ್ನಾಟಕ ಏಕೀಕರಣ ಪರಿಷತ್ತಿನ ಸಭೆಯೂ ನಡೆಯಿತು. ಇದು, "ಕರ್ನಾಟಕ ಸಭಾ" ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜೊತೆ ಸೇರಿ ಸ್ಥಾಪಿಸಿದ ಸಂಸ್ಥೆ.
ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಏಕೀಕರಣ ಪರಿಷತ್ತಿನಂತಹ ಸಂಸ್ಥೆಗಳ ಸತತ ಪ್ರಯತ್ನಗಳಿಂದಾಗಿ ಏಕೀಕರಣದ ಬೇಡಿಕೆಯು ಚಳವಳದ ಸ್ವರೂಪ ಪಡೆಯಿತು.
ಆದರೆ ಶಾಸನಸಭೆಗಳಲ್ಲಿ ಕನ್ನಡನಾಡಿನ ಏಕೀಕರಣದ ಬೇಡಿಕೆ ಕೇಳಿ ಬರುತ್ತಿದ್ದುದ್ದು ಅಪರೂಪ. ಯಾಕೆಂದರೆ, ಮುಂಬಯಿ ವಿಧಾನಸಭೆಯ ೧೧೧ ಸದಸ್ಯರಲ್ಲಿ ಕನ್ನಡದ ಸದಸ್ಯರು ಕೇವಲ ಇಬ್ಬರು. ಹಾಗೆಯೇ ಮದ್ರಾಸಿನ ವಿಧಾನಸಭೆಯ ೧೨೩ ಸದಸ್ಯರಲ್ಲಿ ಕನ್ನಡದ ಸದಸ್ಯರು ಕೇವಲ ಐವರು. ಇದರಿಂದ ಆಗ ಕನ್ನಡಿಗರ ಪರಿಸ್ಥಿತಿ ಎಷ್ಟು ಅಸಹಾಯಕವಾಗಿತ್ತೆಂದು ತಿಳಿಯಬಹುದು.
ಆಗಸ್ಟ್ ೧೫, ೧೯೪೭ರಂದು ಭಾರತವು ಸ್ವತಂತ್ರ ದೇಶವಾಯಿತು. ಆಗ, ಕರ್ನಾಟಕ ಏಕೀಕರಣದ ದಿನಗಳು ಹತ್ತಿರ ಬಂದವೆಂಬ ಭಾವನೆ ಕನ್ನಡಿಗರಲ್ಲಿ ಬೆಳೆಯಿತು. ಆದರೆ ಕೇಂದ್ರ ಸರಕಾರವು ಭಾಷಾವಾರು ಪ್ರಾಂತ್ಯ ವಿಭಜನೆಯನ್ನು ವಿಳಂಬ ಮಾಡಿತು.
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕದ ಜನತೆ ನಿಜಾಮನ ವಿರುದ್ಧ ಉಗ್ರವಾಗಿ ಹೋರಾಡಿದ್ದನ್ನು ಸ್ಮರಿಸಲೇ ಬೇಕು. ನಿಜಾಮನ ಆಳ್ವಿಕೆಯಿಂದ ಬಿಡುಗಡೆ ಹೊಂದಿ, ರಜಾಕಾರರ ಹಾವಳಿಯಿಂದ ಪಾರಾಗಿ, ಸ್ವತಂತ್ರ ಭಾರತದಲ್ಲಿ ಸೇರಿಕೊಂಡು , ಕರ್ನಾಟಕದಲ್ಲಿ ತಮ್ಮ ನೆಲೆ ಕಾಣಬೇಕೆಂಬುದು ಅವರ ಕನಸಾಗಿತ್ತು.
ಅನಂತರ, ಮುಂಬಯಿ ಹಾಗೂ ಮದ್ರಾಸ್ ಶಾಸನಸಭೆಗಳಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಆಗ್ರಹಿಸುವ ಗೊತ್ತುವಳಿಗಳನ್ನು ಮಂಡಿಸಲಾಯಿತು. ಕರ್ನಾಟಕ ಏಕೀಕರಣದ ಪರವಾಗಿ, ಮೈಸೂರು, ಮುಂಬಯಿ ಮತ್ತು ಮದ್ರಾಸ್ ಆಡಳಿತಕ್ಕೊಳಪಟ್ಟ ಕನ್ನಡ ಪ್ರದೇಶಗಳಲ್ಲಿ ಅನೇಕ ಸಾರ್ವಜನಿಕ ಕಾರ್ಯಕ್ರಮಗಳು ಜರಗಿದವು. ಕರ್ನಾಟಕ ಏಕೀಕರಣದ ಬೇಡಿಕೆ ತೀವ್ರ ಸ್ವರೂಪ ಪಡೆಯಿತು.
ಆಗ, ೧೯೫೧ರಲ್ಲಿ, ಭಾಷಾವಾರು ಪ್ರಾಂತ್ಯ ರಚನೆಗೆ ಹೊಸ ತಿರುವು ನೀಡುವ ಘಟನೆಯೊಂದು ನಡೆಯಿತು. ಆಗಸ್ಟ್ ೧೫, ೧೯೫೧ರಂದು ಆಂಧ್ರ ಪ್ರಾಂತ್ಯ ರಚನೆಗೆ ಆಗ್ರಹಿಸಿ ಸ್ವಾಮಿ ಸೀತಾರಾಮ ತಿರುಪತಿಯಲ್ಲಿ ಆಮರಣಾಂತ ಉಪವಾಸ ಆರಂಭಿಸಿದರು. ಒಂದು ತಿಂಗಳು ದಾಟಿದರೂ ಅವರು ಉಪವಾಸ ನಿಲ್ಲಿಸಲಿಲ್ಲ. ಕೊನೆಗೆ, ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಆಶ್ವಾಸನೆ ನೀಡಿದ್ದರಿಂದಾಗಿ ಅವರು ೩೭ ದಿನಗಳ ಉಪನ್ಯಾಸ ನಿಲ್ಲಿಸಿದರು.
ಇಷ್ಟಾದರೂ ಆಂಧ್ರ ಪ್ರಾಂತ್ಯ ರಚನೆಯಲ್ಲಿ ವಿಳಂಬವಾಯಿತು. ತೆಲುಗು ಮಾತನಾಡುವ ಜನರ ಸಿಟ್ಟು ಸ್ಫೋಟವಾಗ ತೊಡಗಿತು. ಪೊಟ್ಟಿ ಶ್ರೀರಾಮುಲು ಆಂಧ್ರ ರಾಜ್ಯ ಬೇಕೇಬೇಕೆಂದು ಆಮರಣಾಂತ ಉಪವಾಸ ತೊಡಗಿದರು. ೫೮ ದಿನ ಉಪವಾಸ ಮಾಡಿದ ಅವರು ಡಿಸೆಂಬರ್ ೧೫, ೧೯೫೨ರಂದು ನಿಧನರಾದಾಗ ಆಂಧ್ರದಲ್ಲಿ ಅಲ್ಲೋಲಕಲ್ಲೋಲ. ಅದಾಗಿ ನಾಲ್ಕು ದಿನಗಳಲ್ಲಿ, ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿ, ಆಂಧ್ರದ ಗಡಿ ಬಗ್ಗೆ ವರದಿ ನೀಡಲು ವಾಂಚೂ ಸಮಿತಿ ನೇಮಿಸುವ ನಿರ್ಣಯ ಅಂಗೀಕಾರ. ಆ ಸಮಿತಿ ಬಳ್ಳಾರಿ ಜಿಲ್ಲೆ ಬಗ್ಗೆ ಸ್ಪಷ್ಟ ಅಭಿಪ್ರಾಯ ನೀಡಲಿಲ್ಲ. ಆದ್ದರಿಂದ, ಮಿಶ್ರಾ ಸಮಿತಿಯ ನೇಮಕ.
ಅಷ್ಟರಲ್ಲಿ, ಕರ್ನಾಟಕ ಏಕೀಕರಣ ಆಗಲೇ ಬೇಕೆಂದು ಒತ್ತಾಯಿಸಿ, ಕಾಂಗ್ರೆಸ್ನ ಕಾರ್ಯಕರ್ತ ಶಂಕರಗೌಡ ಪಾಟೀಲರು ಹುಬ್ಬಳ್ಳಿ ಹತ್ತಿರದ ಸ್ವಗ್ರಾಮ ಅದರಗುಂಚಿಯಲ್ಲಿ ಅಮರಣಾಂತ ಉಪವಾಸ ಆರಂಭಿಸಿದರು - ಫೆಬ್ರವರಿ ೧೯೫೩ರ ಕೊನೆಯಲ್ಲಿ. ಆ ಮುನ್ನ ಇದೇ ರೀತಿ ಇಬ್ಬರು ಕಾರ್ಯಕರ್ತರು ಮಾಡಿದ್ದ ಉಪವಾಸ ಸುದ್ದಿ ಆಗಿರಲಿಲ್ಲ. ಆದರೆ ಅದರಗುಂಚಿ ಪಾಟೀಲರ ಉಪವಾಸ ದೊಡ್ಡ ಸುದ್ದಿಯಾಯಿತು. ಉಪವಾಸದ ೨೩ನೇ ದಿನ, ಹುಬ್ಬಳ್ಳಿಯ ಪುರಸಭೆಗೆ ಜನರ ಮುತ್ತಿಗೆ. ಅಲ್ಲಿ ೨೫,೦೦೦ ಜನ ಜಮಾಯಿಸಿದ್ದರು - ಕಾಂಗ್ರೆಸ್ ನಾಯಕರ ರಾಜೀನಾಮೆ ಕೇಳಲಿಕ್ಕಾಗಿ. ಜನರ ಆಕ್ರೋಶ ಎಲ್ಲೆ ಮೀರಿತ್ತು. ರೊಚ್ಚಿಗೆದ್ದ ಜನ ದೊಂಬಿಯೆದ್ದಾಗ ಅಲ್ಲಿ ಪೊಲೀಸರಿಂದ ಗೋಲೀಬಾರ್.
ಆ ದಿನ ಅದರಗುಂಚಿ ಶಂಕರಗೌಡ ಪಾಟೀಲರು ೨೩ ದಿನಗಳ ಉಪವಾಸ ನಿಲ್ಲಿಸಿದರು. ಆ ಸನ್ನಿವೇಶದಲ್ಲಿ, ಕಮ್ಯುನಿಸ್ಟ್ ಮತ್ತು ಸೋಷಿಯಲಿಸ್ಟ್ ಪಕ್ಷಗಳ ಮುಂದಾಳುತನದಲ್ಲಿ "ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು" ರಚನೆಯಾಯಿತು. ಕರ್ನಾಟಕ ಪ್ರಾಂತ್ಯ ನಿರ್ಮಾಣವೇ ಅದರ ಪ್ರಧಾನ ಗುರಿಯಾಗಿತ್ತು.
ಅದಾದ ನಂತರ, ಅಕ್ಟೋಬರ್ ೧, ೧೯೫೩ರಂದು ಆಂಧ್ರಪ್ರದೇಶ ರಾಜ್ಯ ರಚನೆ ಆಯಿತು. ಅದೇ ದಿನ ಮೈಸೂರು ಸಂಸ್ಥಾನಕ್ಕೆ ಬಳ್ಳಾರಿ ಜಿಲ್ಲೆಯ ಸೇರ್ಪಡೆ. ಆ ದಿನ ಒಂದು ದುರ್ಘಟನೆ ನಡೆಯಿತು: ಕರ್ನಾಟಕ ಕ್ರಿಯಾ ಸಮಿತಿಯ ಸದಸ್ಯರಾಗಿದ್ದ ರಂಜಾನ ಸಾಹೇಬರ ಕೊಲೆ. ಆ ಕನ್ನಡಪ್ರೇಮಿ, ಬಳ್ಳಾರಿ - ಮೈಸೂರು ವಿಲಯನ ಸಮಾರಂಭದ ಸಭಾಮಂಟಪದ ನಿರ್ಮಾಣದ ಜವಾಬ್ದಾರಿ ವಹಿಸಿದ್ದರು. ಸಮಾಜಘಾತಕ ವ್ಯಕ್ತಿಗಳು ಸಭಾಮಂಟಪ ಸುಡಲು ಸಂಚು ನಡೆಸಿದ ಸುದ್ದಿ ಬಂದದ್ದರಿಂದ, ಅದರ ಕಾವಲಿಗಾಗಿ ಅಲ್ಲೇ ಮಲಗಿದ್ದರು. ಅವರ ಮುಖಕ್ಕೆ ಆಸಿಡ್ ಬಲ್ಬ್ ಎಸೆಯಲಾಯಿತು. ಮರುದಿನ, ರಂಜಾನ್ ಸಾಹೇಬ್ ತೀರಿಕೊಂಡರು.
ಹೀಗೆ ಕರ್ನಾಟಕ ಏಕೀಕರಣಕ್ಕೆ ಹಂಬಲಿಸಿದ ಕಾರ್ಯಕರ್ತನ ಬಲಿಯಾದ ಬಳಿಕ ಕನ್ನಡಿಗರ ಸಹನೆಯ ಕಟ್ಟೆಯೊಡೆಯಿತು. ಬೇಡಿಕೆಯ ಈಡೇರಿಕೆಗಾಗಿ ಒತ್ತಾಯಿಸುವ ಕಾರ್ಯಕ್ರಮಗಳು ಬಿರುಸಿನಿಂದ ನಡೆಯತೊಡಗಿದವು.
ಅಂತೂ, ಭಾರತದ ರಾಜ್ಯಗಳ ಪುನರ್ ವಿಂಗಡಣೆ ಬಗ್ಗೆ ವರದಿ ನೀಡಲು ಕೇಂದ್ರ ಸರಕಾರವು ಡಿಸೆಂಬರ್ ೨೯, ೧೯೫೩ರಂದು ಫಜಲ್ ಅಲಿ ಆಯೋಗ ನೇಮಿಸಿತು. ಅದು ಸಾರ್ವಜನಿಕರಿಂದ ಹಾಗು ಸಂಸ್ಥೆಗಳಿಂದ ಹೇಳಿಕೆ, ಲೇಖನ, ಟಿಪ್ಪಣೆ, ನಕ್ಷೆ ಸಂಗ್ರಹಿಸಿತು. ಅದು ಸ್ವೀಕರಿಸಿದ ಲೇಖನಗಳು ೧,೫೨,೨೫೦ ಮತ್ತು ಪ್ರಬಂಧಗಳು ೨,೦೦೦. ಸುಮಾರು ೩೮,೦೦೦ ಮೈಲು ಪ್ರಯಾಣಿಸಿ, ೯,೦೦೦ ಜನರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ, ೨೧ ತಿಂಗಳ ನಂತರ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿತು. ಭಾರತವನ್ನು ೧೯ ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಾಗಿ ಪುನರ್ ವಿಂಗಡಿಸಬೇಕೆಂಬುದು ಆಯೋಗದ ಶಿಫಾರಸ್. ಕರ್ನಾಟಕ ರಾಜ್ಯದ ಭೂಪ್ರದೇಶವನ್ನೂ ಆಯೋಗ ಸೂಚಿಸಿತು. ನೂತನ ರಾಜ್ಯಗಳ ರಚನೆಯ ಮಸೂದೆ ಲೋಕಸಭೆಯಲ್ಲಿ ಮಂಡಿಸಲ್ಪಟ್ಟಿತು.
ಅನಂತರ, ಆಯೋಗದ ಶಿಫಾರಸುಗಳಲ್ಲಿ ಕೆಲವು ಬದಲಾವಣೆಗಳನ್ನು ಅಂಗೀಕರಿಸಲಾಯಿತು. ಆಂಧ್ರಕ್ಕೆ ನೀಡಿದ್ದ ಬಳ್ಳಾರಿ ಜಿಲ್ಲೆ ಮೈಸೂರು ಸಂಸ್ಥಾನಕ್ಕೆ ಸೇರಿತು. ರಾಯಚೂರು ಜಿಲ್ಲೆಯ ಗದ್ವಾಲ್ ಮತ್ತು ಆಲಂಪುರ ಆಂಧ್ರಕ್ಕೆ ಹೋಯಿತು. ಆದರೆ, ಕಾಸರಗೋಡು ಕೇರಳದ ಪಾಲಾಯಿತು. ಮೈಸೂರು ಸಂಸ್ಥಾನಕ್ಕೆ ಆಗ ಸೇರಿಸಲಾದ ಬೆಳಗಾವಿ ತನಗೆ ಸೇರಬೇಕೆಂದು ಮಹಾರಾಷ್ಟ್ರ ಈಗಲೂ ಗದ್ದಲ ಮಾಡುತ್ತಿದೆ.
ಅಂತಿಮವಾಗಿ, ನವಂಬರ್ ೧, ೧೯೫೬ರಂದು ಕನ್ನಡನಾಡು ಅಸ್ತಿತ್ವಕ್ಕೆ ಬಂತು. ಆದರೆ, ಮೈಸೂರಿನ ಪ್ರಭುತ್ವದ ಒತ್ತಾಯದಿಂದಾಗಿ ರಾಜ್ಯದ ಹೆಸರು ಮೈಸೂರು ಎಂದಾಯಿತು. ಅನಂತರ, ರಾಜ್ಯದ ಹೆಸರನ್ನು ಬದಲಾಯಿಸಲಿಕ್ಕಾಗಿ ಆಂದೋಲನ ಶುರುವಾಯಿತು. ಕೊನೆಗೆ, ಜನವರಿ ೧, ೧೯೭೩ರಂದು ನಮ್ಮ ರಾಜ್ಯದ ಹೆಸರು "ಕರ್ನಾಟಕ" ಎಂದು ಬದಲಾಯಿತು.
ಮುಂದೇನು?
ಕರ್ನಾಟಕ ರಾಜ್ಯದ ಭೂಪ್ರದೇಶ ವಿಸ್ತಾರವಾಗಿದೆ. ಜನಸಂಖ್ಯೆ, ಅದರ ಜೊತೆಗೆ ಆಡಳಿತಾತ್ಮಕ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಜನರ ಏರುತ್ತಿರುವ ಆಶೋತ್ತರಗಳಿಗೆ ಸ್ಪಂದಿಸುವುದು ಮತ್ತು ದಕ್ಷ ಆಡಳಿತ ಒದಗಿಸುವುದು ಯಾವುದೇ ಸರಕಾರಕ್ಕೂ ದೊಡ್ಡ ಸವಾಲು.
ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕಾದರೆ, ನಿಸ್ವಾರ್ಥ ಹಾಗೂ ಪ್ರಬುದ್ಧ ಜನನಾಯಕರ ದೊಡ್ಡ ಸಮೂಹವೇ ಬೇಕಾಗುತ್ತದೆ. ಅದಲ್ಲದೆ, ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳ ದೊಡ್ಡ ತಂಡವೂ ಅಗತ್ಯ. ಅಂಥವರು ಈಗೆಲ್ಲಿದ್ದಾರೆ? ಸಿದ್ಧವನಹಳ್ಳಿ ನಿಜಲಿಂಗಪ್ಪ ಅವರಂತಹ ನಾಯಕರು ಹುಡುಕಿದರೂ ಸಿಗಲೊಲ್ಲರು. ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರಂತಹ ಆಡಳಿತಗಾರರು ತೀರಾ ವಿರಳ.
ಹಾಗಿರುವಾಗ, ಜನರ ಆಶೋತ್ತರಗಳಿಗೆ ಸ್ಪಂದಿಸುವುದು ಹಾಗೂ ದಕ್ಷ ಆಡಳಿತ ಒದಗಿಸುವುದು ಕಷ್ಟಸಾಧ್ಯವಾಗುತ್ತದೆ. ಈಗ ನಾವು ಕರ್ನಾಟಕದಲ್ಲಿ ಅದನ್ನೇ ಕಾಣುತ್ತಿದ್ದೇವೆ. ಇದರಿಂದಾಗಿ, ಜನರ ಅಸಮಾಧಾನ ಭುಗಿಲೇಳುತ್ತದೆ; ಆಕ್ರೋಶ ಮುಗಿಲು ಮುಟ್ಟುತ್ತದೆ. ಇದನ್ನು ಬಲಪ್ರಯೋಗದಿಂದ ತುಳಿದು ಹಾಕಲು ಯಾವ ಸರಕಾರಕ್ಕೂ ಸಾಧ್ಯವಿಲ್ಲ. ಇಂದಿನ ತಂತ್ರಜ್ನಾನ ಆಧಾರಿತ ಮಿಂಚಿನ ವೇಗದ ಸಂವಹನದ ಕಾಲದಲ್ಲಿ, ಕ್ಷಣಕ್ಷಣದ ಸುದ್ದಿ ತಕ್ಷಣವೇ ಲೋಕಪ್ರಸಾರವಾಗುವ ಬಹುಮಾಧ್ಯಮದ ಸನ್ನಿವೇಶದಲ್ಲಿ ಜನಪರ ಚಳವಳಿಗಳು ಬಲಗೊಳ್ಳುತ್ತಾ ಸಾಗುತ್ತವೆ.
ಅಂತಿಮವಾಗಿ, ಕರ್ನಾಟಕವನ್ನು ಈಗಿರುವಂತೆಯೇ ಉಳಿಸಿಕೊಳ್ಳಲು ಕಷ್ಟವಾದೀತು. ಗಮನಿಸಿ, ಹಿಂದಿ ಮಾತಾಡುವ ಜನಪ್ರದೇಶವನ್ನು ಎಷ್ಟೆಲ್ಲ ರಾಜ್ಯಗಳಾಗಿ ವಿಂಗಡಿಸಬೇಕಾಯಿತು.ಇತ್ತೀಚೆಗಿನ ಸೇರ್ಪಡೆ, ಸಣ್ಣ ರಾಜ್ಯಗಳಾದ ಜಾರ್ಖಂಡ, ಉತ್ತರಾಂಚಲ ಹಾಗೂ ಚತ್ತಿಸ್ಘರ್. ಹಿಂದಿ ಭಾಷಿಕರಿಗಾಗಿ ಅಷ್ಟೆಲ್ಲ ರಾಜ್ಯಗಳಿರುವಾಗ ತೆಲುಗು ಭಾಷಿಕರಿಗಾಗಿ ಆಂಧ್ರ ಮತ್ತು ತೆಲಂಗಾಣ ಎಂಬ ಎರಡು ರಾಜ್ಯಗಳಾದರೂ ಬೇಕೆಂದು ತೆಲಂಗಾಣದವರು ಪ್ರಬಲವಾಗಿ ಪ್ರತಿಪಾದಿಸುತ್ತಲೇ ಇದ್ದಾರೆ. ಹಾಗೆಯೇ, ಕರ್ನಾಟಕವೂ ಉತ್ತರ - ದಕ್ಷಿಣವಾಗಿ ವಿಭಜನೆಯಾಗಲಿ ಎಂಬ ಬೇಡಿಕೆ ಬಲವಾಗುವ ಲಕ್ಷಣಗಳು ಕಾಣಿಸುತ್ತಿವೆ. ಒಂದು ತಿಂಗಳ ಮುಂಚೆ ಈ ಕೂಗು ಪುನಃ ಎದ್ದಿದೆ. ಕೊಡಗಿನಲ್ಲಿ ಮತ್ತು ತುಳುನಾಡಿನಲ್ಲಿಯೂ ಪ್ರತ್ಯೇಕತೆಯ ಕೂಗು ಆಗಾಗ ಕೇಳಿ ಬರುತ್ತಿದೆ. ಇವೆಲ್ಲದರ ಸದ್ದಡಗಿಸುವುದು ಸುಲಭವಲ್ಲ.
ಇಂತಹ ಸನ್ನಿವೇಶದಲ್ಲಿ, ರಾಜ್ಯಗಳ ಗಡಿ ಸಮಸ್ಯೆಗೆ ಪರಿಹಾರ ನ್ಯಾಯಾಲಯದಿಂದ ಸಿಗುವುದಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಯಾಕೆಂದರೆ, ಇದು ಸುಪ್ರೀಂ ಕೋರ್ಟಿನ ವ್ಯಾಪ್ತಿ ಮೀರಿದ ವಿಷಯ. ಗಡಿ ಸಮಸ್ಯೆಯ ವಿಷಯದಲ್ಲಿ ಪರಮಾಧಿಕಾರ ಇರುವುದು ಸಂಸತ್ತಿಗೆ ಮಾತ್ರ. ರಾಜ್ಯಗಳ ಗಡಿರೇಖೆ ಬದಲಾವಣೆ, ಪ್ರದೇಶಗಳ ಪುನರ್ ವಿಂಗಡಣೆ ಇವೆಲ್ಲ ಅಧಿಕಾರಗಳು ಸಂಸತ್ತಿಗೆ ಸೇರಿದ್ದು ಎಂದು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಅದೇನಿದ್ದರೂ, ಪ್ರತ್ಯೇಕತೆಯ ಬೇಡಿಕೆ ಇರುವಲ್ಲಿಯೂ ಅಲ್ಲಿನ ಜನಸಾಮಾನ್ಯರು ಮೆಚ್ಚುವಂತೆ ಆಡಳಿತ ನಡೆಸಿದರೆ, ಕ್ರಮೇಣ ಪ್ರತ್ಯೇಕತೆಯ ಭಾವನೆ ಅವರಲ್ಲಿ ಕಡಿಮೆಯಾದೀತು. ಅದರಿಂದಾಗಿ ಆ ಭೂಪ್ರದೇಶಗಳು ಕರ್ನಾಟಕದಲ್ಲಿಯೇ ಉಳಿಯಲು ಸಹಾಯವಾದೀತು.
- ಅಡ್ಡೂರು ಕೃಷ್ಣ ರಾವ್
ವಿಳಾಸ: "ಸುಮ", ೫ನೇ ಅಡ್ಡ ರಸ್ತೆ, ಬಿಜೈ ಹೊಸ ರಸ್ತೆ, ಮಂಗಳೂರು ೫೭೫ ೦೦೪
ಇ-ಮೆಯಿಲ್: addoor@gmail.com