“ಶಿಕ್ಷಕರ ದಿನ”ವಾದ ಇಂದು ಸಮಾಜಮುಖಿ ಶಿಕ್ಷಕರೊಬ್ಬರ ಜೀವಮಾನದ ನಿಸ್ವಾರ್ಥ ಕಾಯಕ ನೆನಪಾಗುತ್ತಿದೆ.
ತನ್ನ ಶಾಲೆಯ ಆವರಣದಲ್ಲಿ ಆಲದ ಸಸಿಯೊಂದನ್ನು ನೆಟ್ಟಾಗ ಅಂತರ್ಯಾಮಿ ಸಾಹೂ ಅವರಿಗೆ ೧೧ ವರುಷ ವಯಸ್ಸು. ಆ ವಯಸ್ಸಿನಿಂದಲೇ ಗಿಡಮರಗಳೆಂದರೆ ಅವರಿಗೆ ಬಹಳ ಕಾಳಜಿ.
ಅಂದಿನಿಂದ ಪ್ರತಿ ವರುಷವೂ ಹಲವಾರು ಸಸಿಗಳನ್ನು ತನ್ನ ಹಳ್ಳಿಯ ಸುತ್ತಮುತ್ತಲು ನೆಡುತ್ತಾ ಬಂದರು ಅಂತರ್ಯಾಮಿ ಸಾಹೂ. ಮುಂದೆ ಸೈಲೆತ್‌ಪಾದ ಶಾಲೆಗೆ ಅವರು ಶಿಕ್ಷಕರಾಗಿ ನೇಮಕವಾದರು. ಆಗಿನಿಂದ ತನ್ನ ಕಾಯಕದಲ್ಲಿ ಶಾಲಾ ವಿದ್ಯಾರ್ಥಿಗಳನ್ನೂ ತೊಡಗಿಸಿಕೊಳ್ಳಲು ಶುರು ಮಾಡಿದರು.
ಇದೀಗ ಅವರಿಗೆ ೭೫ ವರುಷ ವಯಸ್ಸು. ಶಿಕ್ಷಕ ವೃತ್ತಿಯಿಂದ ನಿವೃತ್ತರಾದರೂ ಸಸಿ ನೆಡುವ ಅವರ ಉತ್ಸಾಹ ಕಿಂಚಿತ್ತೂ ಕುಂದಿಲ್ಲ. ಈಗಲೂ ಸೈಕಲಿನಲ್ಲಿ ಸಸಿಗಳನ್ನೂ, ಸಸಿ ನೆಡಲು ಬೇಕಾದ ಸಾಧನ-ಸಲಕರಣೆಗಳನ್ನು ಹೊತ್ತು ಅವರು ಸಸಿ ನೆಡುವ ಆಂದೋಲನವನ್ನು ಮುಂದುವರಿಸುವುದನ್ನು ನೋಡಿಯೇ ನಂಬಬೇಕು!
ತಾನು ಶಿಕ್ಷಕನಾಗಿ ಕೆಲಸ ಮಾಡಿದ ಬೌಧ್ ಜಿಲ್ಲೆಯ ಹಳ್ಳಿಗಳ ಶಾಲೆಗಳ ಆವರಣದಲ್ಲಿ, ರಸ್ತೆಗಳ ಪಕ್ಕದಲ್ಲಿ, ಖಾಲಿ ಜಮೀನಿನಲ್ಲಿ ಈ ವರೆಗೆ ೩೦,೦೦೦ ಸಸಿಗಳನ್ನು ಸ್ವತಃ ನೆಟ್ಟಿದ್ದಾರೆ. ತನ್ನ ವಿದ್ಯಾರ್ಥಿಗಳಿಂದಲೂ ಸಾವಿರಾರು ಸಸಿಗಳನ್ನು ನೆಡಿಸಿದ್ದಾರೆ. ಒಬ್ಬ ಶಿಕ್ಷಕನಾಗಿ ಅವರ ಬದುಕಿನ ಬೆಲೆಕಟ್ಟಲಾಗದ ಸಾಧನೆ ಇದು! ಅದರಿಂದಾಗಿಯೇ ಅವರನ್ನು "ಗಚ್ಚಾ ಸರ್” ಎಂದು ಜನರು ಪ್ರೀತಿ-ಆದರಗಳಿಂದ ಕರೆಯುತ್ತಾರೆ (ಒರಿಯಾ ಭಾಷೆಯಲ್ಲಿ ಗಚ್ಚಾ ಎಂದರೆ ಮರ.)
"ನಾನು ೧೯೭೩ರಲ್ಲಿ ಪ್ರೈಮರಿ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದೆ. ಅನಂತರ ಆರು ಶಾಲೆಗಳಲ್ಲಿ ಕೆಲಸ ಮಾಡಿದ್ದೇನೆ. ಆ ಎಲ್ಲ ಹಳ್ಳಿಗಳಲ್ಲಿ ಸಾವಿರಾರು ಸಸಿಗಳನ್ನು ನೆಟ್ಟಿದ್ದೇನೆ. ಅದಕ್ಕಾಗಿ ಬೀಜಗಳಿಂದ ಸಸಿಗಳನ್ನು ಮಾಡುತ್ತಿದ್ದೆ ಮತ್ತು ಅರಣ್ಯ ಇಲಾಖೆಯಿಂದಲೂ ಕೆಲವು ಸಸಿಗಳನ್ನು ತರುತ್ತಿದ್ದೆ” ಎನ್ನುತ್ತಾರೆ ಸಾಹೂ.
ತಾನು ನೆಟ್ಟ ಮತ್ತು ನೆಡಿಸಿದ ಸಸಿಗಳ ಲೆಕ್ಕ ಇಟ್ಟಿದ್ದಾರೆ ಅಂತರ್ಯಾಮಿ ಸಾಹೂ. ಅದರ ಅನುಸಾರ ೨೦೦೪ರ ಹೊತ್ತಿಗೆ ಅವರು ಸ್ವತಃ ೧೦,೦೦೦ ಸಸಿಗಳನ್ನು ನೆಟ್ಟಿದ್ದರು ಮತ್ತು ೨೦,೦೦೦ ಸಸಿಗಳನ್ನು ವಿದ್ಯಾರ್ಥಿಗಳಿಂದ ನೆಡಿಸಿದ್ದರು. ಅನಂತರವೂ ನಿರಂತರವಾಗಿ ಸಸಿ ನೆಡುವುದನ್ನು ತಪಸ್ಸಿನಂತೆ ಮುಂದುವರಿಸಿದ ಸಾಹೂ ಈಗಾಗಲೇ ಸ್ವತಃ ೩೦,೦೦೦ಕ್ಕಿಂತ ಅಧಿಕ ಸಸಿಗಳನ್ನು ನೆಟ್ಟಿದ್ದಾರೆ.
ಸಾಗುವಾನಿ, ಆಲ, ಬೇಲ, ಮಾವು, ಅತ್ತಿ, ಸಾಲ್ ಇತ್ಯಾದಿ ಸ್ಥಳೀಯ ಜಾತಿಯ ಸಸಿಗಳನ್ನೇ ನೆಡುತ್ತಾರೆ ಅಂತರ್ಯಾಮಿ ಸಾಹೂ. ಅದಲ್ಲದೆ, ಆ ಜಾತಿಯ ಮರಗಳಿಂದ ಬೀಜ ಸಂಗ್ರಹಿಸಿ, ಅದನ್ನು ಆಸಕ್ತರಿಗೆ ಹಂಚುತ್ತಾರೆ.
ಸಸಿಗಳನ್ನು ನೆಟ್ಟರೆ ಸಾಲದು. ಈಗ ಉಳಿದಿರುವ ಅರಣ್ಯಗಳನ್ನೂ ರಕ್ಷಿಸಬೇಕು ಎಂಬ ಅರಿವಿದೆ ಅವರಿಗೆ. ಬೆಂಕಿಯಿಂದಾಗಿ ಎಕರೆಗಟ್ಟಲೆ ಅರಣ್ಯ ನಾಶವಾಗುತ್ತಿರುವುದು ಮತ್ತು ಅದಕ್ಕೆ ಕಾಡುಗಳ್ಳರು ಬೆಂಕಿಯಿಡುವುದೇ ಕಾರಣವೆಂಬುದೂ ಅವರಿಗೆ ಚೆನ್ನಾಗಿ ತಿಳಿದಿದೆ. ಇದಕ್ಕೆ ಒಂದು ಪರಿಹಾರ - ಅರಣ್ಯ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದು ಎಂಬುದವರ ನಂಬಿಕೆ.
ದಶಕಗಳ ಹಿಂದೆ ಯಾವುದೇ ಸಾಮಾಜಿಕ ಮಾಧ್ಯಮಗಳು ಬಳಕೆಯಲ್ಲಿ ಇರಲಿಲ್ಲ. ಅಂತಹ ಕಾಲಘಟ್ಟದಲ್ಲಿ ಜನರಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಅಂತರ್ಯಾಮಿ ಸಾಹೂ ಅನುಸರಿಸಿದ ವಿಧಾನ ಭಿತ್ತಿಪತ್ರಗಳ ಬಳಕೆ. ಪ್ರಾಣಿಪಕ್ಷಿಗಳು ಮತ್ತು ಮರಗಳ ಚಿತ್ರಗಳೂ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಗಮನ ಸೆಳೆಯುವ ಘೋಷಣೆಗಳೂ ಇರುವ ನೂರಾರು ಭಿತ್ತಿಪತ್ರಗಳನ್ನು ಅವರು ರಚಿಸಿದ್ದಾರೆ. ಜೇನ್ನೊಣ, ಜಿಂಕೆ, ಆನೆ, ಹಲ್ಲಿ , ಬಾವಲಿ, ಗೂಬೆ, ಮಿಡತೆ, ಕೊಡತಿ ಕೀಟ (ಡ್ರಾಗನ್ ನೊಣ), ಲೇಡಿಬಗ್, ಹಕ್ಕಿಗಳು - ಇವೆಲ್ಲವೂ ಸೂಕ್ತ ಮಾಹಿತಿಯೊಂದಿಗೆ ಅವರ ಭಿತ್ತಿಪತ್ರಗಳಲ್ಲಿ ಮನಸೆಳೆಯುತ್ತವೆ.
ಪರಿಸರ ಸಂರಕ್ಷಣೆ ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಅವರು ಜರಗಿಸಿದ್ದಾರೆ. ಅದಲ್ಲದೆ, ಅರಣ್ಯ ಇಲಾಖೆ ಸಂಘಟಿಸಿದ ಅನೇಕ ಜಾಗೃತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಆ ಎಲ್ಲ ಕಾರ್ಯಕ್ರಮಗಳಲ್ಲಿ, ಭೂಮಿಯ ಎಲ್ಲ ಜೀವಿಗಳೂ ಒಂದನ್ನೊಂದು ಅವಲಂಬಿಸಿವೆ ಎಂಬುದನ್ನು ಭಿತ್ತಿಪತ್ರಗಳ ಮೂಲಕ ವಿವರಿಸುತ್ತಾರೆ. ಈಗಲೂ ಕಾನ್‌ಟಿಲೋ ನೀಲಮಾಧಬ್ ದೇವಸ್ಥಾನದಲ್ಲಿ ಅವರ ಹಲವು ಭಿತ್ತಿಪತ್ರಗಳು ಪ್ರದರ್ಶಿತವಾಗಿವೆ.
ಕಳೆದ ಐದಾರು ವರುಷಗಳಲ್ಲಿ, ಅರಣ್ಯ ಇಲಾಖೆಯ ಸಹಕಾರದಿಂದ ಅಂತರ್ಯಾಮಿ ಸಾಹೂ ನಾಲ್ಕು ಜೀವವೈವಿಧ್ಯ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಅವುಗಳಲ್ಲಿ ಮೊದಲನೆಯದು ಲುಂಬಿನಿ ಉದ್ಯಾನ; ಅದರಲ್ಲಿ ೩೦೦ ವಿವಿಧ ಜಾತಿಯ ಹಣ್ಣಿನ ಗಿಡಗಳು ಬೆಳೆಯುತ್ತಿವೆ. ಬಿಶ್ವಬಸು ಉದ್ಯಾನ, ಲಲಿತಾದೇವಿ ಉದ್ಯಾನ ಮತ್ತು ಮಾಧಬ್ ಉದ್ಯಾನ - ಇವು ಅನಂತರ ಅವರು ಅಭಿವೃದ್ಧಿ ಪಡಿಸಿದ ಜೀವವೈವಿಧ್ಯ ಉದ್ಯಾನಗಳು.
ಅಂತರ್ಯಾಮಿ ಸಾಹೂ ಅವರ ಪರಿಸರ ಸಂರಕ್ಷಣಾ ಕಾಯಕ ಕಂಡು, ಈ ನಿಟ್ಟಿನಲ್ಲಿ ಪ್ರೇರಣೆ ಪಡೆದವರು ಸಾವಿರಾರು ಜನರು.
ಪಕ್ಷಿಗಳನ್ನು ಹಿಡಿದು ಮಾರಾಟ ಮಾಡುವುದರ ವಿರುದ್ಧ “ಪಂಜರದಲ್ಲಿ ಬಂಧಿಸಬೇಡಿ” ಎಂಬ ಅಭಿಯಾನವನ್ನೂ ನಡೆಸಿದ ಹೆಗ್ಗಳಿಕೆ ಅವರದು. ಸದ್ದುಗದ್ದಲವಿಲ್ಲದೆ ಐದು ದಶಕಗಳಿಂದ ಪರಿಸರ ಸಂರಕ್ಷಣೆಯ ಆಂದೋಲನ ನಡೆಸುತ್ತಿರುವ ಅಂತರ್ಯಾಮಿ ಸಾಹೂ ಅವರು “ಪ್ರಕೃತಿ ಬಂಧು”, "ಅಶೋಕ ಸ್ಮೃತಿ”, "ಪ್ರಕೃತಿ ಮಿತ್ರ” ಪ್ರಶಸ್ತಿಗಳ ಪುರಸ್ಕೃತರು.
ಇತ್ತೀಚೆಗೆ ಫೇಸ್-ಬುಕ್ ಮೂಲಕ ತನ್ನ ಪರಿಸರ ಜಾಗೃತಿ ಆಂದೋಲನದ ಬಗ್ಗೆ ಮಾಹಿತಿ ಹರಡುತ್ತಿದ್ದಾರೆ ಅಂತರ್ಯಾಮಿ ಸಾಹೂ. ಅವರ ಮಾಹಿತಿಯುಕ್ತ ಹಾಗೂ ಆಕರ್ಷಕ ಭಿತ್ತಿಪತ್ರಗಳು ಫೇಸ್-ಬುಕ್ಕಿನಲ್ಲಿ ಸುದ್ದಿಯಾಗಿರುವುದು ಅಚ್ಚರಿಯೇನಲ್ಲ.
“ಸಸಿಗಳನ್ನು ನೆಡುವುದು ಸಮಾಜಕ್ಕಾಗಿ ನಾವು ಮಾಡಬೇಕಾದ ಕೆಲಸ. ಅದು ನಿಜವಾದ ಮಾನವಸೇವೆ. ನಾನೇ ಸಾವಿರಾರು ಸಸಿಗಳನ್ನು ನೆಟ್ಟಿರುವಾಗ, ನನ್ನೊಂದಿಗೆ ಇನ್ನೂ ಹಲವರು ಕೈಜೋಡಿಸಿದರೆ ಇನ್ನಷ್ಟು ಸಾವಿರ ಸಸಿಗಳನ್ನು ನೆಡಲು ಸಾಧ್ಯ” ಎಂಬುದು ಅಂತರ್ಯಾಮಿ ಸಾಹೂ ಅವರ ಸಂದೇಶ.
ಸಮಾಜಮುಖಿ ಶಿಕ್ಷಕನೊಬ್ಬ ಸಮಾಜಕ್ಕಾಗಿ ಏನೆಲ್ಲ ಮಾಡಲು ಸಾಧ್ಯ ಮತ್ತು ಹೇಗೆ ಮಾಡಲು ಸಾಧ್ಯ ಎಂಬುದಕ್ಕೆ ಅಂತರ್ಯಾಮಿ ಸಾಹೂ ಅವರ ಬದುಕು ಮತ್ತು ಇಲ್ಲಿರುವ ಫೋಟೋವೇ ಪುರಾವೆ, ಅಲ್ಲವೇ?
ಫೋಟೋ: ಅಂತರ್ಯಾಮಿ ಸಾಹೂ ಸಸಿ ನೆಡುತ್ತಿರುವುದು