ಕೆಲವು ಚಿಟ್ಟೆಗಳು ಒಣಎಲೆಯಂತೆ ಕಾಣುವಂತಾದದ್ದು ಹೇಗೆ? ಈ ಪ್ರಶ್ನೆಗೆ ಉತ್ತರ ನೀಡಬಲ್ಲ ಸಂಶೋಧನಾ ಫಲಿತಾಂಶ ವರದಿಯಾಗಿದೆ.
ಕಲ್ಲಿಮಾ ವರ್ಗಕ್ಕೆ ಸೇರಿದ ಚಿಟ್ಟೆಗಳ ಮುಚ್ಚಿದ ರೆಕ್ಕೆಗಳು ಥೇಟ್ ಒಣಎಲೆಯಂತಿವೆ – ರೆಕ್ಕೆಗಳ ಮೇಲಣ ನರ ಹಾಗೂ ಪುಟ್ಟಪುಟ್ಟ ಬೂಷ್ಟು ಬಿಂದುಗಳ ಸಹಿತ. ಈ ವಿಸ್ಮಯ ಹೇಗಾಯಿತು ಎಂಬುದು ಪರಿಣತರನ್ನು ಕಾಡುತ್ತಿರುವ ಪ್ರಶ್ನೆ.
ವಿಜ್ನಾನಿ ಆಲ್ಫ್ರೆಡ್ ರಸೆಲ್ ವಾಲ್ಲೇಸ್ ಆಗ್ನೇಯ ಏಷ್ಯಾದಿಂದ ಕಲ್ಲಿಮಾ ಚಿಟ್ಟೆಗಳನ್ನು ಸಂಗ್ರಹಿಸಿದ್ದು ಸುಮಾರು ೨೦೦ ವರುಷಗಳ ಮುಂಚೆ. ಹಸಿದ ಹಕ್ಕಿಗಳಿಂದ ಪಾರಾಗಲಿಕ್ಕಾಗಿ ಕಾಲಕ್ರಮೇಣ ಈ ಚಿಟ್ಟೆಗಳು ತಮ್ಮ ಮುಚ್ಚಿದ ರೆಕ್ಕೆಗಳ ಸ್ವರೂಪವನ್ನು ಒಣಎಲೆಯಂತೆ ಬದಲಾಯಿಸಿಕೊಂಡವು ಎಂಬ ವಾದ ಮಂಡಿಸಿದವರು ಅವರು. ಆ ಮೂಲಕ ಡಾರ್ವಿನ್ನರ ಪ್ರಾಕೃತಿಕ ಆಯ್ಕೆಯ ಸಿದ್ಧಾಂತವನ್ನು ಬಲಪಡಿಸಿದರು.
ಆದರೆ ಇತರ ಕೆಲವು ವಿಜ್ನಾನಿಗಳು ಈ ವಿಕಾಸಕ್ಕೆ ಬೇರೆ ವಿವರಣೆ ನೀಡಿದರು. ಉದಾಹರಣೆಗೆ ಯುಎಸ್ಎ ದೇಶದ ವಿಜ್ನಾನಿ ರಿಚರ್ಡ್ ಗೋಲ್ಡ್ ಸ್ಮಿತ್ ೧೯೪೦ರಲ್ಲಿ ನೀಡಿದ ವಿವರಣೆ. ಅವರ ಪ್ರಕಾರ, ಆ ಚಿಟ್ಟೆಗಳ ರೆಕ್ಕೆಗಳು ಹಂತಹಂತವಾಗಿ ಬದಲಾಗಿ ಒಣಎಲೆಯಂತೆ ಆಗಲಿಲ್ಲ. ಬದಲಾಗಿ ಒಂದೇಟಿಗೆ ಒಣಎಲೆಯಂತೆ ಬದಲಾದವು.
ಈಗ ಜಪಾನಿನ ಕೆಲವು ವಿಜ್ನಾನಿಗಳು ಪತ್ತೆ ಮಾಡಿರುವ ವಿಷಯ: ಅಂತಿಮವಾಗಿ ಒಣಎಲೆಯಂತೆ ಕಾಣಿಸುವ ಮುಂಚೆ ತಮ್ಮ ರೆಕ್ಕೆಗಳ ಸ್ವರೂಪವನ್ನು ಕಲ್ಲಿಮಾ ಚಿಟ್ಟೆಗಳು ಕನಿಷ್ಠ ನಾಲ್ಕು ಸಲ ಬದಲಾಯಿಸಿಕೊಂಡಿವೆ.
ಕಲ್ಲಿಮಾ ಚಿಟ್ಟೆಗಳ ರೆಕ್ಕೆಗಳ ಕೆಳಮೈಯಲ್ಲಿ ವಿಶಿಷ್ಠ ಗುರುತುಗಳಿವೆ. ಇವನ್ನು ಜಪಾನಿ ವಿಜ್ನಾನಿಗಳ ತಂಡ ಹಂತಹಂತವಾದ ವಿನ್ಯಾಸ ಬದಲಾವಣೆಗಳಿಗೆ ಹೋಲಿಕೆ ಮಾಡಿತು. “ಇದರಿಂದಾಗಿ ಚಿಟ್ಟೆಗಳ ರೆಕ್ಕೆಗಳ ಒಣಎಲೆ ಅನುಕರಣೆಯ ಹಂತಹಂತ ವಿಕಾಸವಾದಕ್ಕೆ ಮೊದಲ ಪುರಾವೆ ಸಿಕ್ಕಿತು” ಎನ್ನುತ್ತಾರೆ ಸಂಶೋಧನಾ ವರದಿಯ ಸಹ-ಬರಹಗಾರ ತಕಾವೊ ಸುಜುಕಿ. ಅವರು ಇಬರಕಿಯ ರಾಷ್ಟ್ರೀಯ ಕೃಷಿಜೈವಿಕ ವಿಜ್ನಾನಗಳ ಸಂಸ್ಥೆಯ ವಿಜ್ನಾನಿ.
ಡಾರ್ವಿನರ ವಿಕಾಸವಾದದ ಆಧಾರದಿಂದ “ಚಿಟ್ಟೆ ರೆಕ್ಕೆಗಳ ಒಣಎಲೆ ಅನುಕರಣೆ ವಾದ” ವಿವರಿಸುವ ವಿಜ್ನಾನಿಗಳಿಗೆ ನಮ್ಮ ಸಂಶೋಧನೆಯಿಂದ ಸಹಾಯವಾಗಿದೆ ಎನ್ನುತ್ತಾರೆ ತಕಾವೊ ಸುಜುಕಿ. ಈ ಅಧ್ಯಯನದ ವರದಿ “ಬಿಎಂಸಿ ಎವುಲುಷ್ಯನರಿ ಥಿಯರಿ” ಎಂಬ ವಿಜ್ನಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಆದರೆ ಜಪಾನಿ ವಿಜ್ನಾನಿಗಳ ತಂಡ ಡಾರ್ವಿನರ ವಿಕಾಸವಾದವನ್ನು ಅಂತಿಮವಾಗಿ ಸಾಬೀತು ಮಾಡಿದೆಯೇ? ಎಂಬ ಪ್ರಶ್ನೆಗೆ ಉತ್ತರ ನೀಡಲು ಸಾಕಷ್ಟು ಸಮಯ ಬೇಕು ಎನ್ನುತ್ತಾರೆ ಬ್ರಿಟನಿನ ವಿಜ್ನಾನಿ ಮೈಕ್ ಸ್ಪೀಡ್. ಯಾಕೆಂದರ ಅಧ್ಯಯನಕ್ಕಾಗಿ ಅತ್ಯಂತ ತಾಂತ್ರಿಕ ವಿಧಾನಗಳನ್ನು ಬಳಸಲಾಗಿದೆ; ಅವುಗಳ ಫಲಿತಾಂಶ ಖಚಿತ ಪಡಿಸಿಕೊಳ್ಳಲು ಸಮಯ ತಗಲುತ್ತದೆ.
ಯಾವುದೇ ಜೀವಿಯಲ್ಲಿ ಅನುಕರಣೆ ವಿಕಾಸ ಆಗಬೇಕಾದರೆ, ಆ ಜೀವಿಯ ಡಿಎನ್ಎಯಲ್ಲಿ ಬದಲಾವಣೆ ಅಥವಾ ಮ್ಯುಟೇಷನ್ ಅಗತ್ಯ ಎಂಬುದು ಸಾಮಾನ್ಯ ನಂಬಿಕೆ. ಹಾಗಾಗಿ ಚಿಟ್ಟೆಗಳ ಮೂಲಸ್ಥಾನಕ್ಕೆ ಹೋಗಿ ಮರುಪರಿಶೀಲನೆ ಮಾಡಬೇಕಾಗುತ್ತದೆ ಎನ್ನುತ್ತಾರೆ ಮೈಕ್ ಸ್ಪೀಡ್. ಈ ಚಿಟ್ಟೆಗಳ ಪೂರ್ವಿಕರು ಸ್ವಲ್ಪ ಮಟ್ತಿಗೆ ಒಣಎಲೆಗಳನ್ನು ಹೋಲುವ ರೆಕ್ಕೆಗಳನ್ನು ಹೊಂದಿದ್ದರೆ, ಅನಂತರ ಆ ರೆಕ್ಕೆಗಳ ಆಕಾರ, ಬಣ್ಣ, ಸ್ವರೂಪ ಹಂತಹಂತವಾಗಿ ಬದಲಾಗಿ ಥೇಟ್ ಒಣಎಲೆಯಂತಾಗಲು ಸಾಧ್ಯ. ಆಗ, ಈ ಚಿಟ್ಟೆಗಳು ಅವನ್ನು ತಿನ್ನುವ ಪಕ್ಷಿಗಳ ಗಮನಕ್ಕೆ ಬಾರದೆ, ಪಕ್ಷಿಗಳಿಂದ ಪಾರಾಗಲು ಸಾಧ್ಯ ಎಂಬುದು ಸ್ಪೀಡ್ ಅವರ ಅಭಿಪ್ರಾಯ.
ಇತರ ಕೆಲವು ಚಿಟ್ಟೆಗಳೂ ಪ್ರಕೃತಿಯ ಇತರ ವಸ್ತುಗಳನ್ನು ಅನುಕರಣೆ ಮಾಡಿವೆ; ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ಚಿಟ್ಟೆ ರೆಕ್ಕೆ ವಿನ್ಯಾಸ ಹೋಲಿಕೆ ವಿಧಾನದಿಂದ ಪತ್ತೆ ಮಾಡಬಹುದು ಎನ್ನುತ್ತಾರೆ ಅಧ್ಯಯನ ವರದಿಯ ಸಹಬರಹಗಾರ ಸುಜುಕಿ. ಮರಗಳ ತೊಗಟೆಯ ಸ್ವರೂಪ ಅನುಕರಣೆ ಮಾಡಿರುವ ಪತಂಗ ಮತ್ತು ಚಿಟ್ಟೆಗಳ ವಿಕಾಸದ ಬಗ್ಗೆ ಅಧ್ಯಯನಕ್ಕಾಗಿ ಇದೇ ವಿಧಾನವನ್ನು ಈಗಾಗಲೇ ತಾನು ಬಳಸಿರುವುದನ್ನು ತಿಳಿಸಿದ್ದಾರೆ ಅವರು.
ಈ ಭೂಮಿಯಲ್ಲಿ ತನ್ನ ಸಂತಾನ ಉಳಿಸಿ ಬೆಳೆಸುವುದು ಪ್ರತಿಯೊಂದು ಜೀವಿಯ ಏಕೈಕ ಉದ್ದೇಶ. ಈ ಉದ್ದೇಶಕ್ಕಾಗಿ ಅವು ಬಳಸುವ ವಿಧಾನಗಳು ವಿಸ್ಮಯಕಾರಿ. ಈ ವಿಸ್ಮಯಗಳನ್ನು ಗಮನಿಸಿ, ದಾಖಲಿಸಿ, ಅಧ್ಯಯನ ಮಾಡಿ, ಸಾವಿರಾರು ವರುಷಗಳ ಅವಧಿಯಲ್ಲಿ ನಡೆದಿರುವ ಬದಲಾವಣೆಯ ಹಂತಗಳನ್ನು ಒರೆಗೆ ಹಚ್ಚಿ ಖಚಿತ ಪಡಿಸುವ ಕೆಲಸ ಸುಲಭವಲ್ಲ. ಆದರೆ ಪ್ರಕೃತಿಯ ವಿಸ್ಮಯಗಳ ಗುಟ್ಟುಗಳನ್ನು ತಿಳಿದುಕೊಳ್ಳಲು ಇದೊಂದೇ ದಾರಿ.