ಅಸ್ಸಾಂನ ಕೆನ್ನೀಲಿ ಚಹಾ - ಭವಿಷ್ಯದ ಚಹಾ

ಕೆನ್ನೀಲಿ ಚಹಾ ಉತ್ಪಾದನೆಯಲ್ಲಿ ಅಸ್ಸಾಂ ಜಗತ್ತಿನಲ್ಲಿ ಎರಡನೇ ಸ್ಥಾನ ಪಡೆಯಲಿದೆ (ಮೊದಲನೇ ಸ್ಥಾನ ಕೆನ್ಯಾ ದೇಶಕ್ಕೆ).
ಚಹಾ ಪರಿಣತರ ಪ್ರಕಾರ, ಕೆನ್ನೀಲಿ ಚಹಾದ ಆರೋಗ್ಯ ಲಾಭಗಳು ಹಲವು. ಇದು ಕಣ್ಣಿನ ದೃಷ್ಟಿ, ದೇಹದ ಕೊಲೆಸ್ಟರಾಲ್ ಮಟ್ಟ, ರಕ್ತದ ಸಕ್ಕರೆಯಂಶ – ಇವನ್ನು ಸುಧಾರಿಸುತ್ತದೆ. ಇದರಲ್ಲಿರುವ ಆಂಟಿ-ಆಕ್ಸಿಡೆಂಟುಗಳಿಂದಾಗಿ ಕ್ಯಾನ್ಸರ್ ನಿರೋಧ ಪರಿಣಾಮ ಬೀರುತ್ತದೆ. ಆದ್ದರಿಂದಲೇ ಇದಕ್ಕೆ “ಭವಿಷ್ಯದ ಚಹಾ” ಎಂಬ ಹೆಸರು ಬಂದಿದೆ.
“ಕೆನ್ನೀಲಿ ಚಹಾದಲ್ಲಿ ಅಂತೋಸಯಾನಿನುಗಳು ಸಮೃದ್ಧವಾಗಿವೆ. ಈ ಚಹಾ ಗಿಡದ ಎಲೆಗಳ ಕೆನ್ನೀಲಿ ಬಣ್ಣಕ್ಕೆ ಇವು ಕಾರಣ. ಕಪ್ಪು ಚಹಾ ಮತ್ತು ಹಸುರು ಚಹಾದ ಕೆಫೇನ್ ಪ್ರಮಾಣಕ್ಕೆ ಹೋಲಿಸಿದಾಗ ಕೆನ್ನೀಲಿ ಚಹಾದಲ್ಲಿ ಕೆಫೇನ್ ಕಡಿಮೆ” ಎನ್ನುತ್ತಾರೆ ಪ್ರದೀಪ್ ಬರುವಾ, ಹಿರಿಯ ಸಲಹಾಧಿಕಾರಿ, ಟೊಕ್ಲೈ ಚಹಾ ಸಂಶೋಧನಾ ಸಂಸ್ಥೆ (ದೇಶದ ಅತ್ಯಂತ ಹಳೆಯ ಚಹಾ ಸಂಶೋಧನಾ ಸಂಸ್ಥೆ).
ಜಗತ್ತಿನ ಲಕ್ಷಾಂತರ ಚಹಾಪ್ರಿಯರಿಗೆ ನೂತನ ಪೇಯ ಈ ಕೆನ್ನೀಲಿ ಚಹಾ. ಇದರಿಂದ ಕಪ್ಪು ಚಹಾ ಮತ್ತು ಹಸುರು ಚಹಾ ತಯಾರಿಸಬಹುದು. ಅವಲ್ಲದೆ, ಕಟೆಚಿನುಗಳು, ಅಂತೋಸಯಾನಿನುಗಳು, ಅಂತೋಸಯಾನಿಡಿನಿನ್ಗಳ ಭಟ್ಟಿ ಇಳಿಸಬಹುದು (ಪೂರಕ ಔಷಧಿಗಳಾಗಿ ಅಥವಾ ಆಹಾರರಕ್ಷಕಗಳಾಗಿ ಇವುಗಳ ಬಳಕೆ.) ಇದರಿಂದ ಪಡೆಯಬಹುದಾದ ಪೊಲಿಫಿನೊಲಿಗೆ ಔಷಧಿ ತಯಾರಿಕೆ ಮತ್ತು ಕೈಗಾರಿಕೆಗಳಲ್ಲಿ ಬೇಡಿಕೆ.
ಕೆನ್ಯಾ ದೇಶ ಉತ್ಪಾದಿಸುತ್ತಿರುವ ಕೆನ್ನೀಲಿ ಚಹಾದ ಮೂಲ ಅಸ್ಸಾಂ. ೧೯೦೩ರಲ್ಲಿ ಜಿ.ಡಬ್ಲ್ಯು.ಎಲ್. ಕೇಯ್ನೆ ಎಂಬ ಬ್ರಿಟಿಷ್ ವ್ಯಕ್ತಿ ಚಹಾ ಗಿಡಗಳನ್ನು ಮೊದಲ ಬಾರಿ ಕೆನ್ಯಾಕ್ಕೆ ತಂದ. ಕೆಲವು ಗಿಡಗಳನ್ನು ಅಲ್ಲಿನ ಲಿವುರು ಗುಡ್ಡದಲ್ಲಿ ನೆಟ್ಟ. ಅವು ಬೆಳೆದು ಈಗ ದೊಡ್ಡ ಮರಗಳಾಗಿವೆ. ಆ ಚಹಾ ತೋಟ ಈಗ ಯುನಿಲಿವರಿನ ಮಬ್ರವ್ಕೆ ಟೀ ಎಸ್ಟೇಟ್ ಆಗಿದೆ.
ಟೀ ರೀಸರ್ಚ್ ಫೌಂಡೇಷನ್ ಆಫ್ ಕೆನ್ಯಾ ೨೫ ವರುಷ ಅವಧಿಯಲ್ಲಿ ಕೆನ್ನೀಲಿ ಚಹಾದ ತಳಿಯನ್ನು ಶುದ್ಧೀಕರಿಸಿತು. ಅಂತಿಮವಾಗಿ ೨೦೧೧ರಲ್ಲಿ ಟಿಆರ್ಎಫ್ಕೆ – ೩೦೬ ಹೆಸರಿನಲ್ಲಿ ಕೆನ್ನೀಲಿ ಚಹಾದ ತಳಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಿಡುಗಡೆ ಮಾಡಿತು. ಕೆನ್ಯಾ ಸರಕಾರದ ೨೦೩೦ರ ಮಹಾಯೋಜನೆ ಅನುಸಾರ, ಕೆನ್ನೀಲಿ ಚಹಾದ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಯಿತು; ಹೊಸ ಚಹಾ ಉತ್ಪನ್ನಗಳ ಸಂಶೋಧನೆ ಮತ್ತು ಮೌಲ್ಯವರ್ಧನೆಗೆ ಒತ್ತು ನೀಡಲಾಯಿತು. ಇವೆಲ್ಲದರ ಉದ್ದೇಶ ಕೃಷಿರಂಗದ ಅಭಿವೃದ್ಧಿ.
“ಕೆನ್ಯಾದಲ್ಲಿ ಬಿಡುಗಡೆ ಮಾಡಲಾದ ೫೧ ಚಹಾ ತಳಿಗಳಲ್ಲಿ ೪೧ ಅಸ್ಸಾಂ ಮೂಲದವು ಹಾಗೂ ೬ ತಳಿಗಳು ಅಸ್ಸಾಂ-ಚೀನಾ ಸಂಕರ ತಳಿಗಳು. ಇದೇ ಜಾಡು ಹಿಡಿದು ಹುಡುಕಾಡಿದಾಗ ಅಸ್ಸಾಂನ ಕಾರ್ಬಿ ಅನ್-ಗ್ಲೊಂಗ್ ಜಿಲ್ಲೆಯಲ್ಲಿ ಮತ್ತು ಬರಕ್ ಕಣಿವೆಯ ಕಚಾರಿನ ಲೊಂಗೈ ಪ್ರದೇಶದಲ್ಲಿ ಕೆನ್ನೀಲಿ ಚಹಾದ ಕಾಡುತಳಿಗಳು ಪತ್ತೆಯಾದವು” ಎಂದು ತಿಳಿಸುತ್ತಾರೆ ಬರುವಾ.
ಕೆನ್ನೀಲಿ ಚಹಾದ ಔಷಧೀಯ ಗುಣಗಳ ಬಗ್ಗೆ ಬರುವಾ ನೀಡುವ ಮಾಹಿತಿ: ಸಂಶೋಧನೆ ಮತ್ತು ಮಾನವರ ವೈದ್ಯಕೀಯ ಪ್ರಯೋಗಗಳ ಫಲಿತಾಂಶಗಳ ಪ್ರಕಾರ ಕೆನ್ನೀಲಿ ಚಹಾಕ್ಕೆ ಊತ-ನಿರೋಧಿ, ಕ್ಯಾನ್ಸರ್-ನಿರೋಧಿ ಮತ್ತು ಆಂಟಿ-ಆಕ್ಸಿಡೆಂಟ್ ಗುಣಗಳಿವೆ. ಇದರಿಂದಾಗಿ ಕಾರ್ಡಿಯೋ ವಾಸ್ಕುಲಾರ್, ಸ್ಥೂಲಕಾಯ ಮತ್ತು ಸಕ್ಕರೆಕಾಯಿಲೆ ನಿರೋಧಿ ಪರಿಣಾಮಗಳು ಉಂಟಾಗುತ್ತವೆ. ಕೆನ್ಯಾ ಮತ್ತು ಉಗಾಂಡ ದೇಶದಲ್ಲಿ ನಡೆಸಿದ ಸಂಶೋಧನೆಗಳ ಅನುಸಾರ ಕೆನ್ನೀಲಿ ಚಹಾದ ಫ್ಲೇವವೊಯಿಡುಗಳು ರಕ್ತ-ಮೆದುಳು ತಡೆಗಳನ್ನು ದಾಟಿ ನರರಕ್ಷಣಾ ಏಜೆಂಟುಗಳಂತೆ ಕೆಲಸ ಮಾಡುತ್ತವೆ. ಜೊತೆಗೆ, ಇತರ ಪಾರಂಪರಿಕ ಚಹಾಗಳ ಪರಿಮಳಕ್ಕಿಂತ ಕೆನ್ನೀಲಿ ಚಹಾದ ಪರಿಮಳ ಪ್ರಬಲ.
ಆದ್ದರಿಂದಲೇ ಪಾರಂಪರಿಕ ಕಪ್ಪುಚಹಾದ ಬೆಲೆಗಿಂತ ಕೆನ್ನೀಲಿ ಚಹಾದ ಬೆಲೆ ಮೂರರಿಂದ ನಾಲ್ಕುಪಟ್ಟು ಅಧಿಕ. ಇದುವೇ ಈಶಾನ್ಯ ಭಾರತದ ಚಹಾ ಬೆಳೆಗಾರರಲ್ಲಿ ಕೆನ್ನೀಲಿ ಚಹಾದ ಬಗ್ಗೆ ಭಾರೀ ಕುತೂಹಲ ಹಾಗೂ ಭರವಸೆ ಮೂಡಿಸಿದೆ.
“ಕೆನ್ನೀಲಿ ಚಹಾದ ಆರೋಗ್ಯ ಲಾಭಗಳಿಗೆ ಪ್ರಚಾರ ನೀಡಿದರೆ ಭಾರತದ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇದು ಜನಪ್ರಿಯವಾಗುತ್ತದೆ” ಎನ್ನುತ್ತಾರೆ, ಅಸ್ಸಾಂನ ಶಿಬ್ಸಾಗರ್ ಜಿಲ್ಲೆಯ ಖುವಾ ಟೀ ಗಾರ್ಡನಿನ ಪಂಕಜ್ ಗೊಗೊಯಿ. “ಟೀ ಕುಡಿಯುವ ಗ್ರಾಹಕರ ಸರ್ವೆ ನಡೆಸಿದಾಗ, ಯುವಜನರು ಟೀಯಲ್ಲಿ ಏನಾದರೂ ಹೊಸತು ಬೇಕೆಂದರು; ಜೊತೆಗೆ ಅವರಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯಿದೆ” ಎಂದು ತಿಳಿಸುತ್ತಾರೆ ಗೊಗೊಯಿ.
“ಕೆನ್ನೀಲಿ ಚಹಾದ ಆರೋಗ್ಯ ಲಾಭಗಳಿಗೆ ಭರ್ಜರಿ ಪ್ರಚಾರ ನೀಡಿದರೆ, ಜನರು ಈ ಹೊಸ ತಳಿಗೆ ಮುಗಿಬೀಳುತ್ತಾರೆ” ಎಂಬುದು ಸೊನಿತ್ಪುರದ (ಪ್ರಧಾನ ಚಹಾ ಉತ್ಪಾದನಾ ಕೇಂದ್ರ) ಪುಟ್ಟ ಕೆಫೆಯೊಂದರ ಮಾಲೀಕ ರಾಜಿಬ್ ದಾಸ್ ಅವರ ಅಭಿಪ್ರಾಯ.
ಅಂತೂ ಕೆನ್ನೀಲಿ ಚಹಾದ ಆರೋಗ್ಯಪೂರಕ ಗುಣಗಳು ಹಾಗೂ ಘಮಘಮ ಪರಿಮಳದಿಂದಾಗಿ ಹಳೆಯ ಚಹಾಕ್ಕೆ ಹೊಸ ಬೇಡಿಕೆ ಬರಲಿದೆ.