ಹಿಮಾಚಲ ಪ್ರದೇಶದ ಮನಾಲಿಗೆ ಹೈದರಾಬಾದಿನ ವಿಜ್ನಾನಜ್ಯೋತಿ ಎಂಜಿನಿಯರಿಂಗ್ ಕಾಲೇಜಿನ ೫೧ ವಿದ್ಯಾರ್ಥಿಗಳ ಪ್ರವಾಸದ ಸಂದರ್ಭ. ೮ ಜೂನ್ ೨೦೧೪ರಂದು ಬಿಯಾಸ್ ನದಿ ದಡದಲ್ಲಿರುವ ಹನೋಗಿ ಮಾತಾ ದೇಗುಲದ ಹತ್ತಿರ ನೆರೆದಿದ್ದ ಅವರೆಲ್ಲ ಖುಷಿಯಿಂದ ಫೋಟೋ ತೆಗೆಸಿಕೊಳ್ಳುತ್ತಿದ್ದರು.
ಹಠಾತ್ತಾಗಿ ಬಿಯಾಸ್ ನದಿಯಲ್ಲಿ ಐದಾರು ಅಡಿಗಳೆತ್ತರಕ್ಕೆ ನೀರು ನುಗ್ಗಿ ಬಂತು. ನೋಡನೋಡುತ್ತಿದ್ದಂತೆಯೇ ಅವರಲ್ಲಿ ೨೪ ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋದರು.
ಯಾಕೆ ಹೀಗಾಯಿತು? ಯಾವುದೇ ಮುನ್ನೆಚ್ಚರಿಕೆ ನೀಡದೆ ಲಾರ್ಜಿ ಅಣೆಕಟ್ಟಿನ ಎಲ್ಲ ಗೇಟುಗಳನ್ನು ತೆರೆದ ಕಾರಣ. ಆದರೆ, ಪ್ರಕರಣದ ಮೂಲಕ್ಕೆ ಹೋದರೆ ತಿಳಿಯುತ್ತದೆ ನಿಜವಾದ ಕಾರಣ. ಅಣೆಕಟ್ಟಿನಿಂದ ನೀರು ಬಿಡುವಾಗ ನಿಧಾನವಾಗಿ ಒಂದೊಂದೇ ಗೇಟುಗಳನ್ನು ತೆರೆಯಬೇಕು. ಅದಲ್ಲದೆ, ಅಣೆಕಟ್ಟಿನ ಅಧಿಕಾರಿಗಳು ಜನರಿಗೆ ಕಡ್ಡಾಯವಾಗಿ ಮುನ್ನೆಚ್ಚರಿಕೆ ನೀಡಬೇಕು. ಅಂದರೆ, ನದಿದಡದಲ್ಲಿ ಜನ ಸೇರುವಲ್ಲೆಲ್ಲ ಅಣೆಕಟ್ಟಿನಿಂದ ನೀರು ಬಿಡುವ ಮುನ್ಸೂಚನೆ ಘೋಷಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಬೇಕು. ಮಾತ್ರವಲ್ಲ, ನದಿಯ ದಡದ ಪಕ್ಕದ ರಸ್ತೆಗಳಲ್ಲಿ ಸೈರನ್ ಬಾರಿಸುತ್ತಾ ವಾಹನಗಳಲ್ಲಿ ಹಲವು ಬಾರಿ ಸುತ್ತಾಡಿ ನೀರು ಬಿಡುವ ಬಗ್ಗೆ ಘೋಷಣೆ ಕೂಗಿ ಜನರನ್ನು ಎಚ್ಚರಿಸಬೇಕು.
ಅಲ್ಲಿ ಇದ್ಯಾವ ಮುನ್ನೆಚ್ಚರಿಕೆ ಕ್ರಮವನ್ನೂ ಅನುಸರಿಸದೆ, ಒಂದೇ ಸಲ ಅಣೆಕಟ್ಟಿನ ಎಲ್ಲ ಗೇಟುಗಳನ್ನೂ ತೆರೆದು, ನೀರು ಬಿಟ್ಟದ್ದು ಯಾಕೆ? ಸ್ಥಳೀಯರು ಹೇಳುವ ಪ್ರಕಾರ, ಮರಳು ಮಾಫಿಯಾ ಜೊತೆ ಲಾರ್ಜಿ ಅಣೆಕಟ್ಟಿನ ಅಧಿಕಾರಿಗಳು ಕೈಜೋಡಿಸಿದ್ದೇ ಇದಕೆ ಕಾರಣ. ರಾಷ್ಟ್ರೀಯ ಹೆದ್ದಾರಿಯಿಂದ ಬಿಯಾಸ್ ನದಿದಡಕ್ಕೆ ಹೋಗಲಿಕ್ಕಾಗಿ ಅಲ್ಲಲ್ಲಿ ಮರಳು ಮಾಫಿಯಾ ನಿರ್ಮಿಸಿರುವ ಅಕ್ರಮ ರಸ್ತೆಗಳೇ ಇದಕ್ಕೆ ಪುರಾವೆ. ಅಗಾಧ ಪ್ರಮಾಣದ ನೀರನ್ನು ಒಂದೇ ಬಾರಿ ಅಣೆಕಟ್ಟಿನಿಂದ ಕೆಳಕ್ಕೆ ನುಗ್ಗಿಸಿದರೆ ಭಾರೀ ಪರಿಮಾಣದ ಮರಳು ನೀರಿನೊಂದಿಗೆ ನದಿಬುಡಕ್ಕೆ ಇಳಿದು ಬಂದು ಶೇಖರವಾಗುತ್ತದೆ. ಈ ಮರಳನ್ನು ಕಳ್ಳಸಾಗಣೆದಾರರು ಅಕ್ರಮವಾಗಿ ರಾತ್ರಿ ಹೊತ್ತಿನಲ್ಲಿ ಟ್ರಾಕ್ಟರಿನಲ್ಲಿ ಸಾಗಿಸಿ, ಅನಂತರ ಮಾರಿ, ಲಕ್ಷಗಟ್ಟಲೆ ರೂಪಾಯಿ ಲಾಭ ಗಳಿಸುತ್ತಾರೆ.
ಇಂತಹದೇ ಇನ್ನೊಂದು ಪ್ರಕರಣ ಮುಂಬೈಯಲ್ಲಿ ಜರಗಿದೆ. ಅಲ್ಲಿ ವೊರ್ಲಿಯ ಕಂಪಾ ಕೋಲಾ ಕಂಪೌಂಡಿನ ೯೧ ಅಕ್ರಮ ಫ್ಲಾಟುಗಳಲ್ಲಿರುವ ನಿವಾಸಿಗಳನ್ನು ಎಬ್ಬಿಸಿ, ಅವನ್ನು ಕೆಡವಬೇಕೆಂದು ಕೋರ್ಟ್ ಆದೇಶ!
ಕಟ್ಟಡಗಳನ್ನು ಕಟ್ಟುವಾಗ ಎಲ್ಲ ನಗರಗಳಲ್ಲಿಯೂ ನಿಯಮಗಳನ್ನು ಅನುಸರಿಸಲೇ ಬೇಕು. ಮೊದಲಾಗಿ, ಜಾಗದ ಮಾಲೀಕ ಕಟ್ಟಡ ಕಟ್ಟಲಿಕ್ಕಾಗಿ ಅರ್ಜಿ ಸಲ್ಲಿಸಿ, ಕಟ್ಟಡದ ನಕ್ಷೆ ಮಂಜೂರು ಮಾಡಿಸಿಕೊಂಡು ಪರವಾನಗಿ ಪಡೆದು ಕೊಳ್ಳಬೇಕು. ಇದನ್ನು ನೀಡುವವರು ಸ್ಥಳೀಯ ಆಡಳಿತದ (ನಗರಾಭಿವೃದ್ಧಿ ಪ್ರಾಧಿಕಾರ, ಮುನಿಸಿಪಾಲಿಟಿ, ಮಹಾನಗರ ಪಾಲಿಕೆ) ಅಧಿಕಾರಿಗಳು. ಕಟ್ಟಡ ಪೂರ್ತಿಯಾದ ನಂತರ ಪರಿಶೀಲನೆ ನಡೆಸುವುದು ಕಡ್ಡಾಯ: ಪರವಾನಗಿಯ ಷರತ್ತುಗಳನ್ನು ಹಾಗೂ ಮಂಜೂರಾದ ನಕ್ಷೆಯನ್ನು ಚಾಚೂ ತಪ್ಪದೆ ಅನುಸರಿಸಿದ ಬಗ್ಗೆ. ಹಾಗಿದ್ದರೆ ಮಾತ್ರ ಕಟ್ಟಡ ಪ್ರವೇಶಕ್ಕೆ ಅನುಮತಿ ಕೊಡಬೇಕಾದದ್ದು ಅಧಿಕಾರಿಗಳ ಕರ್ತವ್ಯ.
ಹಲವು ವರುಷಗಳ ನಂತರ, ಕಟ್ಟಡ ಕಟ್ಟುವಾಗ ನಿಯಮಗಳನ್ನು, ಷರತ್ತುಗಳನ್ನು ಹಾಗೂ ನಕ್ಷೆಯನ್ನು ಉಲ್ಲಂಘಿಸಲಾಗಿದೆ ಎಂದರೆ, ಪ್ರವೇಶಕ್ಕೆ ಮಂಜೂರಾತಿ / ಪರವಾನಗಿ ನೀಡಿದ ಅಧಿಕಾರಿಗಳೇ ಅದಕ್ಕೆ ನೇರ ಹೊಣೆಗಾರರು.
ಈ ಎರಡು ಇತ್ತೀಚೆಗಿನ ಪ್ರಕರಣಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ, ಷಾಮೀಲು ಮತ್ತು ಕರ್ತವ್ಯಭ್ರಷ್ಟತೆ ಎದ್ದು ಕಾಣುತ್ತದೆ. ಆದರೆ ಸರಕಾರ ಅಥವಾ ನ್ಯಾಯಾಲಯಗಳು ಇದರ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ?
ಇಂತಹ ಪ್ರಕರಣಗಳಲ್ಲಿ ಸರಕಾರಗಳು ಸತ್ತವರ ಕುಟುಂಬಗಳಿಗೆ / ವಾರೀಸುದಾರರಿಗೆ ಪರಿಹಾರ ಘೋಷಿಸಿ ಕೈತೊಳೆದುಕೊಳ್ಳುತ್ತವೆ. ನ್ಯಾಯಾಲಯಗಳ ಎದುರು ಇಂತಹ ಪ್ರಕರಣಗಳು ಬಂದಾಗ, “ನಿಯಮ ಪಾಲನೆ ಮಾಡಿಲ್ಲ. ಆದ್ದರಿಂದ ನಿಯಮಗಳ ಅನುಸಾರ ಕ್ರಮ ಕೈಗೊಳ್ಳಿ” ಎಂದು ಆದೇಶ ನೀಡಿ, ಪ್ರಕರಣಗಳ ವಿಲೇವಾರಿ ಮಾಡಲಾಗುತ್ತದೆ.
ಎಲ್ಲಿಯ ವರೆಗೆ ನಿರ್ಲಕ್ಷ್ಯದ ಮತ್ತು ಕರ್ತವ್ಯಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ಆಗುವುದಿಲ್ಲವೋ, ಅಲ್ಲಿಯ ತನಕ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ, ಅಲ್ಲವೇ?
ಸೂಚನೆ: ಈ ಲೇಖನದಲ್ಲಿ ಪ್ರಕಟಿಸಿರುವುದು ನೆರೆಯ ಸಾಂದರ್ಭಿಕ ಫೋಟೋ